ಮಾಲ್ಗುಡಿ ದಿನಗಳು
ಹೀಗೆ ಒಂದೆರಡು ವರ್ಷಗಳ ಹಿಂದೆ ಗೆಳೆಯರೊಬ್ಬರು ಮಾಲ್ಗುಡಿ ಡೇಸ್ ನ ಕಥೆಯೊಂದನ್ನು ಹೇಳಿದರು.ಒಂದು ಬೆಳದಿಂಗಳ ರಾತ್ರಿಯಲ್ಲಿ ಹಬ್ಬದೂಟವಾದ ನಂತರ ಅಂಗಳದಲ್ಲಿ ಕುಳಿತು ಸುಮಾರು ಎರಡು ಗಂಟೆಗಳ ಕಾಲ ಅದ್ಬುತವಾಗಿ,ಅಭಿನಯದೊಂದಿಗೆ,ಶಬ್ದಗಳ ಏರಿಳಿತಗಳ ಮೂಲಕ ಅದ್ಬುತವಾದ ಕಥೆಯನ್ನು ಅತ್ಯಾದ್ಬುತವಾಗಿ ಹೇಳಿದರು.ಆ ಕಥೆಯನ್ನು ಕೇಳಿದ ನಂತರ ಮಾಲ್ಗುಡಿ ಡೇಸ್ ಪುಸ್ತಕ ಓದಲೇಬೇಕು ಎನಿಸಿತ್ತು.ಆದರೆ ಆ ಕೃತಿ ಇಂಗ್ಲಿಷ್ ನಲ್ಲಿದಿತ್ತು.ಇಂಗ್ಲಿಷ್ ಓದಿ ಅರ್ಥಮಾಡಿಕೊಳುವಷ್ಟು ಸಾಮರ್ಥ್ಯ ನನಗಿರಲಿಲ್ಲ.ಆದರೂ ಹೇಗಾದರೂ ಮಾಡಿ ಕಥೆಗಳನೆಲ್ಲಾ ಓದಬೇಕೆಂಬ ಹಂಬಲ ಹೆಚ್ಚಾಯಿತು.ಹೀಗಿರುವಾದ ದೂರದರ್ಶನದಲ್ಲಿ ಹಿಂದೆ ಮಾಲ್ಗುಡಿ ಡೇಸ್ ಧಾರಾವಾಹಿಯಾಗಿ ಮೂಡಿಬರುತ್ತಿದ್ದದ್ದು,ಈಗ ಅಡಕಮುದ್ರಿಕೆಯ ರೂಪದಲ್ಲಿ ದೊರೆಯುತ್ತದೆ ಎಂಬ ವಿಷಯ ತಿಳಿಯಿತು.ಆದರೆ ಯಾವುದೋ ಕಾರಣದಿಂದಾಗಿ ಅಡಕಮುದ್ರಿಕೆಯನ್ನು ಕೊಳ್ಳಲು ಸಾದ್ಯವಾಗಲಿಲ್ಲ.ಒಂದೆರಡು ತಿಂಗಳ ಹಿಂದೆ ಪುಸ್ತಕ ಪ್ರದರ್ಶನವೊಂದರಲ್ಲಿ,ಸುಮ್ಮನೆ ನೋಡಿಕೊಂಡು ಬರೋಣವೆಂದು(ಅಪರೂಪದ ಪುಸ್ತಕ ಕಂಡರೇ ಖರೀದಿಸೋಣವೆಂದು)ಹೋದಾಗ,ಪುಸ್ತಕದ ರಾಶಿಯ ಮದ್ಯೆ ಒಂದು ಹೆಸರು ಗಮನ ಸೆಳೆಯಿತ್ತು.ಜೊತೆಗೆ ಮೈಮನ ಜುಂ ಎಂದಿತ್ತು.'ಮಾಲ್ಗುಡಿ ದಿನಗಳು'ಎನ್ನುವ ಕನ್ನಡ ಅನುವಾದದ ಕೃತಿ ಅದು.ತೆಗೆದುಕೊಂಡು ಅಲ್ಲೇ ಪುಟಗಳನ್ನು ತಿರುವಿ ಹಾಕಿದೆ.ಅನ್ಯಭಾಷೆಯ ಕಥೆಗಾರನ ಕಥೆಗಳನ್ನು ಕನ್ನಡದ ಮೂಲಕ ಸವಿಯುವ ಸೊಗಸಿಗೆ ಸಾಕ್ಷಿಯಾಗಲು ಪುಸ್ತಕವನ್ನು ಖರೀದಿಸಿ ಮನೆಯ ಕಡೆಗೆ ನಡೆದೆ.