ಮಾವಿನ ಶುಂಠಿ ವಿಶೇಷತೆಗಳು
ಈ ಜಗತ್ತು ವಿಶೇಷತೆಗಳ ಆಗರ. ಇಲ್ಲಿರುವ ವಸ್ತುಗಳು ಒಂದಕ್ಕಿಂತ ಒಂದು ವಿಭಿನ್ನ. ಇದೇ ವಿಭಿನ್ನತೆಯಿಂದ ಗಮನ ಸೆಳೆಯುವುದು ಮಾವಿನ ಶುಂಠಿ ಎಂಬ ಸಸ್ಯ. ಏನಿದರ ವಿಶೇಷತೆ ಅಂತೀರಾ? ಮಾವಿನ ಕಾಯಿಯ ಪರಿಮಳವನ್ನೇ ಹೊಂದಿರುವ ಶುಂಠಿಯ ತಳಿ ಇದು. ಅರಶಿನ ಅಥವಾ ಶುಂಠಿಯಂತೆಯೇ ಗಡ್ಡೆಗಳನ್ನು ಹೊಂದಿರುವ ಈ ಶುಂಠಿಯ ಪರಿಮಳ ಮಾವಿನ ಕಾಯಿಯಂತೆಯೇ ಇರೋದು ಬಹಳ ವಿಶೇಷ. ಇದರಲ್ಲಿ ಬಹಳ ಔಷಧೀಯ ಸತ್ವಗಳಿವೆ. ಉಪ್ಪಿನ ಕಾಯಿ ತಯಾರಿಕೆಗೆ ನಂ.೧ ಶುಂಠಿ ಇದು. ಇದನ್ನು ಮ್ಯಾಂಗೊ ಜಿಂಜರ್, ಮಾಂಗನಾರಿ, ಅಂಬೆ ಅರಶಿನ, ತುಳುವಿನಲ್ಲಿ ಕುಕ್ಕು (ಮಾವು) ಶುಂಠಿ, ಕೊಂಕಣಿಯಲ್ಲಿ ಅಂಬೆ (ಮಾವು) ಕೊಂಬು ಅಥವಾ ಅಂಬೆ ಅಲ್ಲೆ ಎಂದು ಕರೆಯುತ್ತಾರೆ.
ಅರಶಿನ ಸಸ್ಯವನ್ನು ಹೋಲುವ ಅರಶಿನವನ್ನೇ ಹೋಲುವ ಗಡ್ಡೆ ಹೊಂದಿರುವ ಒಂದು ಅಪರೂಪದ ಸಸ್ಯ ಮಾವಿನ ಶುಂಠಿ. ಇದು ಜಿಂಜಿಬರೇಸೀ ಕುಟುಂಬಕ್ಕೆ ಸೇರಿದ ಮೂಲಿಕೆ. ಕರ್ಕ್ಯೂಮಾ ಅಮಾಡ (Curcuma Amada) ಇದರ ವೈಜ್ಞಾನಿಕ ಹೆಸರು. ಹಳದಿ ಬಣ್ಣ, ತಿರುಳಿಗೆ ಮಾವಿನ ಕಾಯಿಯ ಸುವಾಸನೆ ಇರುತ್ತದೆ. ಆದ ಕಾರಣ ಮಾವಿನ ಶುಂಠಿ ಎನ್ನುತ್ತಾರೆ. ಇದನ್ನು ಉಪ್ಪಿನಕಾಯಿ, ಅಡುಗೆ, ತಂಬುಳಿಗೆ ಬಳಕೆ ಮಾಡುತ್ತಾರೆ. ಮಿಕ್ಸೆಡ್ ಉಪ್ಪಿನಕಾಯಿ ತಯಾರಕರು ಇದನ್ನು ಹೆಚ್ಚಾಗಿ ಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ಮತ್ತು ಕೇರಳದ ಕೆಲವು ಕಡೆ ಮಾವಿನ ಶುಂಠಿಯ ಉಪ್ಪಿನಕಾಯಿ ಪ್ರಚಲಿತದಲ್ಲಿದೆ. ನಮ್ಮ ಹಳ್ಳಿಯಲ್ಲಿ ಹೆಚ್ಚಿನವರು ಇದರ ಉಪ್ಪಿನಕಾಯಿ, ತಂಬುಳಿ ಮಾಡುತ್ತಾರೆ.
ಬರೇ ಮಾವಿನ ಸುವಾಸನೆಗಾಗಿ ಮಾತ್ರ ಇದನ್ನು ಬಳಕೆ ಮಾಡುವುದಲ್ಲ. ಇದರಲ್ಲಿ ಹೇರಳ ಔಷಧೀಯ ಗುಣವೂ ಇದೆ. ಈ ಶುಂಠಿಯೂ ಸೇರಿದಂತೆ ಅರಶಿನದ ಒಂದೆರಡು ಜಾತಿಗೆ ಮೆದುಳು ಕ್ಯಾನ್ಸರ್ ತಡೆಗಟ್ಟುವ ಗುಣ (Anti Cancer Properties) ಇದೆಯಂತೆ. ಮಾವಿನ ಶುಂಠಿಯ ರಸಕ್ಕೆ ಅರಶಿನಕ್ಕಿಂತಲೂ ಹೆಚ್ಚಿನ ಕ್ಯಾನ್ಸರ್ ಉಪಶಮನ ಗುಣ (Cytotoxic Effects) ಇದೆ ಎಂಬುದಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನಗಳು ಹೇಳುತ್ತವೆ. ಆದ ಕಾರಣ ಈ ಶುಂಠಿಯ ಗಿಡ ಇದ್ದರೆ ಅದನ್ನು ಸುಮ್ಮನೇ ವ್ಯರ್ಥ ಮಾಡಬೇಡಿ. ಉಪ್ಪಿನಕಾಯಿ ಅಥವಾ ತಂಬುಳಿ ಮಾಡಿ ವರ್ಷದಲ್ಲಿ ಆವಾಗಾವಾಗ ಸೇವನೆ ಮಾಡಿ ಶರೀರದ ರೋಗ ನಿರೋಧಕ ಶಕ್ತಿಯನ್ನು (Antioxidant) ಹೆಚ್ಚಿಸಿಕೊಳ್ಳಿ. ಇದರ ರಸವನ್ನು ಕುಡಿಯುವ ಕ್ರಮವೂ ವಿದೇಶಗಳಲ್ಲಿ ಪ್ರಚಲಿತದಲ್ಲಿದೆ.
ಮಾವಿನ ಶುಂಠಿಯ ವಿಶೇಷತೆ ಏನೆಂದರೆ ಮಳೆಗಾಲದಲ್ಲಿ ಒಂದು ಗಡ್ಡೆಯನ್ನು ನಾಟಿ ಮಾಡಿದರೆ ಸಾಕು. ಅದು ಕ್ರಮೇಣ ಬೆಳೆದು ಮೊಳಕೆ ಒಡೆದು ಹಲವಾರು ಸಣ್ಣ ಕಂದುಗಳು ಹುಟ್ಟಿಕೊಂಡು ಬಿಡುತ್ತದೆ. ಈ ಸಣ್ಣ ಸಣ್ಣ ಕಂದುಗಳನ್ನೂ ಪ್ರತ್ಯೇಕ ಮಾಡಿ ನಾಟಿ ಮಾಡಬಹುದು. ಗಡ್ಡೆಗಳು ಬೆಳೆದ ಬಳಿಕ ಅದನ್ನು ಮಣ್ಣಿನಲ್ಲಿ ಎಷ್ಟು ದಿನ ಬಿಟ್ಟರೂ ಹಾಳಾಗುವುದಿಲ್ಲ. ಅಗತ್ಯ ಬಿದ್ದಾಗ ನೆಲ ಅಗೆದು ಗಡ್ಡೆಗಳನ್ನು ಕಿತ್ತರಾಯಿತು. ಬೇಸಿಗೆಯಲ್ಲಿ ಗಿಡಗಳು ಒಣಗಿದಂತೆ ಕಂಡರೂ ನೆಲದ ಅಡಿಯಲ್ಲಿ ಗಡ್ಡೆಗಳು ಹಸಿಯಾಗಿಯೇ ಇರುತ್ತದೆ. ಮಾವಿನ ಶುಂಠಿ ಬೆಳೆಗೆ ರೋಗ, ಕೀಟಗಳ ಹಾವಳಿ ಕಡಿಮೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.
ಮಾವಿನ ಶುಂಠಿ ಅಜೀರ್ಣವನ್ನು ನಿವಾರಿಸುವಲ್ಲಿ ಸಹಕಾರಿ. ಬಾಯಿಯ ರುಚಿ ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಉಪಯೋಗಿ. ಚರ್ಮದ ತುರಿಕೆಯನ್ನು ನಿವಾರಿಸಲು ಇದರ ಗಡ್ಡೆಯನ್ನು ಅರೆದು ಲೇಪಿಸಬೇಕು. ಇಷ್ಟೊಂದು ಉಪಕಾರಿಯಾದ ಮಾವಿನ ಶುಂಠಿ ಗಿಡ ನಿಮ್ಮ ಮನೆಯ ಹಿತ್ತಲಿನಲ್ಲೂ ಇದ್ದರೆ ಚೆನ್ನ ಅಲ್ಲವೇ?
ಚಿತ್ರ: ರಾಧಾಕೃಷ್ಣ ಹೊಳ್ಳ