ಮಾವಿನ ಹಣ್ಣಿನ ಗೊಜ್ಜು
ಯಾವುದೇ ರಸಭರಿತ ಮಾವಿನ ಹಣ್ಣು, ಬೆಲ್ಲದ ಹುಡಿ ೧ ಕಪ್, ತುಪ್ಪ ಎರಡು ಚಮಚ, ಸ್ವಲ್ಪ ಉಪ್ಪು, ಹಸಿ ಮೆಣಸು, ಬೆಳ್ಳುಳ್ಳಿ, ಇಂಗು
ಬೇಸಿಗೆ ಕಾಲದಲ್ಲಿ ಧಾರಾಳವಾಗಿ ಮಾವಿನಹಣ್ಣುಗಳು ಸಿಗುತ್ತದೆ. ಮಾವಿನ ಹಣ್ಣುಗಳನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತಿರುಳನ್ನು ಒಂದು ಕುಕ್ಕರಿಗೆ ಹಾಕಬೇಕು. ವಿಸಲ್ ಹಾಕದೆ ಸಣ್ಣ ಉರಿಯಲ್ಲಿ ಅರ್ಧಗಂಟೆ ಬೇಯಿಸಬೇಕು. ಅನಂತರ ಒಂದು ಬಾಣಲೆಗೆ ಹಾಕಿ ಪುನ: ಹತ್ತು ನಿಮಿಷ ಸಣ್ಣ ಉರಿಯಲ್ಲಿಡಬೇಕು. ಸ್ವಲ್ಪ ಉಪ್ಪು, ಬೆಲ್ಲದ ಹುಡಿ, ತುಪ್ಪ ಸೇರಿಸಿ ಸೌಟಿನಲ್ಲಿ ಮಗುಚುತ್ತಿರಬೇಕು. ಸಾಧಾರಣ ಗಟ್ಟಿಯಾದಾಗ ಕೆಳಗಿಳಿಸಿ, ತಣಿದಾಗ ಬಾಟಲಿಯಲ್ಲಿ ತುಂಬಿಸಿ ಫ್ರೀಜರಿನಲ್ಲಿಡಬೇಕು.
ಮನೆಯ ಸದಸ್ಯರ ಸಂಖ್ಯೆಗನುಗುಣವಾಗಿ ಮೊದಲೇ ತಯಾರಿಸಿಟ್ಟ ಮಾವಿನಹಣ್ಣಿನ ತಿರುಳನ್ನು ನೀರಿನಲ್ಲಿ ಕಿವುಚಿ ಬೆಲ್ಲ, ಉಪ್ಪು ಸೇರಿಸಿ. ಹಸಿ ಮೆಣಸಿನಕಾಯಿಯನ್ನು (ಗಾಂಧಾರಿ ಮೆಣಸಾದರೆ ಬಹಳ ರುಚಿ) ಜಜ್ಜಿ ಸೇರಿಸಿ. ಚೆನ್ನಾಗಿ ಕುದಿ ಬಂದರೆ ಸಾಕು. ಬೆಳ್ಳುಳ್ಳಿ, ಇಂಗು ಒಗ್ಗರಣೆ ನೀಡಿದ ಗೊಜ್ಜು ಊಟಕ್ಕೆ, ಚಪಾತಿ, ರೊಟ್ಟಿ, ದೋಸೆಯೊಂದಿಗೆ ತಿನ್ನಲು ಬಹಳ ರುಚಿ.
ವಿ.ಸೂ: ಕಾಟು (ಕಾಡು) ಮಾವು, ಮುಂಡಪ್ಪ, ನೆಕ್ಕರೆ, ತೋತಾಪುರಿ ಮುಂತಾದ ಯಾವುದೇ ಸ್ಥಳೀಯ ಮಾವುಗಳನ್ನು ಉಪಯೋಗಿಸಬಹುದು.
ಚಿತ್ರ: ಲಕ್ಷ್ಮೀ ವಿ.ಭಟ್, ಮಂಜೇಶ್ವರ
ಬರಹ: ರತ್ನಾ ಭಟ್, ತಲಂಜೇರಿ