ಮಾವು-ಬೇವಿನ ಸಮ್ಮಿಲನ
ಕವನ
ಮೂರು ಮಂದಿ ಅಕ್ಕ ತಂಗಿ
ಬೇವು ಬೆಲ್ಲ ತಂದಿವಿ
ನೂರು ಬಾರಿ ಶುಭವ ಕೋರಿ
ನಮ್ಮ ಹರಸಿ ಎಂದಿವಿ||
ಸುತ್ತಮುತ್ತ ಹಚ್ಚ ಹಸಿರು
ಹೊಸತು ಚಿಗುರು ಬಿಟ್ಟಿದೆ
ತುತ್ತತುದಿಯ ಮೇಲೆ ಕುಳಿತ
ಕುಕಿಲ ಕುಹೂ ಎಂದಿದೆ||
ಮನೆಯ ತುಂಬ ಮಾವು ಬೇವು
ತಳಿರು ತೋರಣ ಕಟ್ಟಿದೆ
ಮನದ ತುಂಬ ನೋವು ಮರೆಸೊ
ಹರ್ಷಧಾರೆ ಉಕ್ಕಿದೆ||
ಪ್ರತಿ ಯುಗವು ಉರುಳಿ ಮರಳಿ
ಹೊಸತು ಯುಗವು ಬರವುದು
ಕಷ್ಟ ನಷ್ಟ ಬೆರೆತ ಮಿಳಿತ
ಈ ಯುಗಾದಿ ಹಬ್ಬವು||
ಕಹಿಯ ಮರೆತು ಸಿಹಿಯ ನೆನೆದು
ಬೇವು ಬೆಲ್ಲ ಸವಿಯಿರಿ
ಮಾವು ಬೇವು ಕೊಡುವ ಸೃಷ್ಠಿ
ನಮಗೆ ಗುರುವು ಅರಿಯಿರಿ||
ಧರಣಿ ತರುಣಿ ಹೊಸತು ಉಡುಗೆ
ಧರಿಸೊ ಮಾಸ ಚೈತ್ರವು
ಜನನ ಮರಣ ಬಂಧ ಬಿಡಿಸೊ
ಇಳೆಯ ಮೇಲೆ ಸ್ವರ್ಗವು
*ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು*
-*ಶ್ರೀ ಈರಪ್ಪ ಬಿಜಲಿ*
ಚಿತ್ರ್
