ಮಿಂಚಿ ಹೋದ ಕಾಲ - ಕಥೆ

ಮಿಂಚಿ ಹೋದ ಕಾಲ - ಕಥೆ


ದೃಶ್ಯ - ೬


ಮಾಧ್ಯಮದವರು ಕೆಲವರನ್ನು ಮಾತನಾಡಿಸುತ್ತಿದ್ದಾರೆ. ಅವರ ಹೇಳಿಕೆ ಹೀಗಿದೆ. ಅವರು ಹೀಗೆ ಮಾಡಿಕೊಳ್ಳುತ್ತಾರೆಂದು ನಾವು ಕನಸಲ್ಲೂ ನೆನೆಸಿರಲಿಲ್ಲ. ಅದೂ ಅಲ್ಲದೆ ಅವರ ಪ್ರೀತಿಗೆ ಅನುಮತಿ ಕೊಟ್ಟ ಮೇಲೂ ಏಕೆ ಹೀಗೆ ಮಾಡಿದರೋ ಎಂದು ಶೋಕಸಾಗರದಲ್ಲಿ ಮುಳುಗಿದರು. ಅವರು ಅಲ್ಲಿ ಸತ್ತು ಬಿದ್ದಿದ್ದ ರೂಪ  ಅಪ್ಪ. ಇನ್ನೊಂದು ಬದಿಯಲ್ಲಿ ಸತ್ತು ಬಿದ್ದಿದ್ದ ಶ್ರೀಧರನ ಪಕ್ಕದಲ್ಲಿ ಅವರ ತಾಯಿ ಮುಗಿಲು ಮುಟ್ಟುವಂತೆ ರೋಧಿಸುತ್ತಿದ್ದರು. ಅದು ಯಶವಂತಪುರದ ರೈಲ್ವೆ ಗೇಟ್ ಬಳಿ ಸತ್ತು ಬಿದ್ದಿದ್ದ ಪ್ರೇಮಿಗಳ ಚಿತ್ರಣ. ಪಕ್ಕದಲ್ಲಿ ನಿಂತಿದ್ದ ಪೋಲಿಸ್ ಅಧಿಕಾರಿ ಮಾಧ್ಯಮದವರಿಗೆ ವಿವರಿಸುತ್ತಿದ್ದರು. ಶವದ ಬಳಿ ಒಂದು ಕಾಗದ ಸಿಕ್ಕಿದೆ ಅದರಲ್ಲಿ "ನಮ್ಮಿಬ್ಬರ ಸಾವಿಗೆ ನಮ್ಮ ನಮ್ಮ ಹಿರಿಯರೇ ಕಾರಣ. ನಮ್ಮ ಪ್ರೀತಿಗೆ ಅಂಗೀಕರಿಸದ ಅವರಿಗೆ ನಾವು ಕೊಡುತ್ತಿರುವ ಶಿಕ್ಷೆ ನಮ್ಮ ಸಾವು. ಅವರವರ ಸ್ವಾರ್ಥಕ್ಕೆ ನಮ್ಮ ಪ್ರೀತಿಯನ್ನು ಬಲಿ ಕೊಡಲು ನಾವು ಸಿದ್ಧರಿಲ್ಲ. ಜೀವನದಲ್ಲಿ ಒಟ್ಟಿಗಿರಲು ಸಾಧ್ಯವಿಲ್ಲ ಹಾಗಾಗಿ ಸಾವಿನಲ್ಲಿ ಒಂದಾಗಿದ್ದೇವೆ. ನಾವು ಯಾರಿಗೂ ಕ್ಷಮೆ ಕೇಳುವುದಿಲ್ಲ"  ಎಂದು ಬರೆದಿತ್ತು. ಇತ್ತ ಪೊಲೀಸರು ಹಿರಿಯರ ಬಳಿ ವಿಚಾರಣೆ ಮುಂದುವರೆಸಿದ್ದರು. ಶ್ರೀಧರನ ಅಪ್ಪ ಹೇಳುತ್ತಿದ್ದರು. ಮೊದಲು ಅವರ ಪ್ರೀತಿಗೆ ನಾವು ನಿರಾಕರಿಸಿದ್ದು ನಿಜ, ಆದರೆ ಅವರು ನಿರ್ಧಾರ ತೆಗೆದುಕೊಂಡಿದ್ದಾರೆಂದು ತಿಳಿದು ಅವರ ಪ್ರೀತಿಗೆ ಒಪ್ಪಿಗೆ ನೀಡಿದ್ದೆವು. ಆದರೂ ಹೀಗೇಕೆ ಮಾಡಿದ್ದರೆಂದು ಅರ್ಥವಾಗುತ್ತಿಲ್ಲ ಎಂದರು. ಅವರ ಬಳಿ ಹೇಳಿಕೆ ತೆಗೆದುಕೊಂಡು ಅವರನ್ನು ಬೀಳ್ಕೊಟ್ಟರು ಪೊಲೀಸರು.


 


ದೃಶ್ಯ - ೫


ರೂಪ, ನಮ್ಮಪ್ಪ ಫೋನ್ ಮಾಡಿದ್ದರೆ ಎಂದ ಶ್ರೀಧರ್ " ಹಲೋ ಅಪ್ಪ ಹೇಳಿ, ಶ್ರೀಧರ್ ನಾನು ನಿಮ್ಮಮ್ಮ ಇಬ್ಬರೂ ನಿನ್ನ ಪ್ರೀತಿಗೆ ಒಪ್ಪಿದ್ದೇವೆ ಕಣೋ..ದಯವಿಟ್ಟು ಮನೆಗೆ ಬನ್ನಿ ಮದುವೆ ಮಾಡುತ್ತೇನೆ. ಸರಿ ಅಪ್ಪ ಬರುತ್ತೇನೆ" ಎಂದು ಹೇಳಿ ಕಟ್ ಮಾಡಿದ. ಕೂಡಲೇ ರೂಪ ಮೊಬೈಲ್ ರಿಂಗಣಿಸಲು "ಹಲೋ ಹೇಳಿ ಅಪ್ಪ, ರೂಪ ದಯವಿಟ್ಟು ಮನೆಗೆ ಬಾಮ್ಮ ನಿನ್ನ ಶ್ರೀದರ್ ಮದುವೆಗೆ ಎಲ್ಲರೂ ಒಪ್ಪಿದ್ದಾರೆ ಎಂದಾಗ, ಥ್ಯಾಂಕ್ಸ್ ಅಪ್ಪ ಬರುತ್ತೇವೆ" ಎಂದು ಕಟ್ ಮಾಡಿದಳು. ಶ್ರೀಧರ್, ನಮ್ಮ ಮದುವೆಗೆ ಎಲ್ಲರೂ ಒಪ್ಪಿದ್ದಾರೆ ಇನ್ನೇನು ಆತಂಕವಿಲ್ಲ ನಡೀ ಮನೆಗೆ ಹೋಗೋಣ, ಕೊನೆಗೂ ನಮ್ಮ ಪ್ರೀತಿಯೇ ಗೆದ್ದಿತು ಎಂದಾಗ ಇಬ್ಬರೂ ಒಮ್ಮೆ ಗಟ್ಟಿಯಾಗಿ ಅಪ್ಪಿಕೊಂಡು ಶ್ರೀಧರ್ ರೂಪ ಕೆನ್ನೆಗೆ ಒಂದು ಮುತ್ತು ನೀಡಲು ಹೋದಾಗ ರೂಪ ಅವನನ್ನು ಆಟವಾಡಿಸಲು ಅವನಿಂದ ಬಿಡಿಸಿಕೊಂಡು ಹಳಿಯ ಪಕ್ಕದಲ್ಲಿ ಓಡುತ್ತಿದ್ದಳು. ಹಿಂದುಗಡೆಯಿಂದ ಶ್ರೀಧರ್ ರೂಪ ತಮಾಷೆ ಸಾಕು ನಡೀ ಹೋಗೋಣ ಎನ್ನುತ್ತಿದ್ದಾಗ ರೂಪ ಎಡವಿ ಹಳಿಯ ಮೇಲೆ ಬಿದ್ದುಬಿಟ್ಟಳು. ಕೂಡಲೇ ಶ್ರೀಧರ್ ಓಡಿ ಹೋಗಿ ಅವಳನ್ನು ಎತ್ತುವಷ್ಟರಲ್ಲಿ ಬಂದ ರೈಲು ಕ್ಷಣ ಮಾತ್ರದಲ್ಲಿ ಜೀವಂತವಾಗಿದ್ದ ಶ್ರೀಧರ್ ಹಾಗೂ ರೂಪ ರನ್ನು ಮಾಂಸದ ಮುದ್ದೆಯನ್ನಾಗಿ ಮಾಡಿ ತನ್ನ ಪಾಡಿಗೆ ಹೊರಟು ಹೋಗಿತ್ತು.


 


ದೃಶ್ಯ - ೪


ಶ್ರೀಧರ್ ಹಿರಿಯರ ಸ್ವಾರ್ಥಕ್ಕೆ ನಮ್ಮ ಪ್ರೀತಿ ಬಲಿಯಾಗುವುದು ಬೇಡ. ನಿನ್ನ ಮಾತು ನಿಜ ರೂಪ. ಮಾತೆತ್ತಿದರೆ ಆಸ್ತಿ ಹಣ ಐಶ್ವರ್ಯ ಎಂದು ಹಲುಬುವ ನಮ್ಮ ತಂದೆಗೆ ನಮ್ಮ ಸಾವಿನಿಂದಾದರೂ ಬುದ್ಧಿ ಬರುವುದೋ ಏನೋ ಗೊತ್ತಿಲ್ಲ. ತಮ್ಮ ಹತ್ತಿರ ಇರುವ ಹಣದಿಂದ ಮಗನ ಪ್ರಾಣ ಕೊಳ್ಳಲು ಸಾಧ್ಯವಿಲ್ಲ ಎಂದು ಅವರಿಗೆ ಅರಿವಾಗಬೇಕು ಎಂದು ಒಂದು ಹಾಳೆಯನ್ನು ಕೈಗೆತ್ತಿಕೊಂಡು ಅದರಲ್ಲಿ ""ನಮ್ಮಿಬ್ಬರ ಸಾವಿಗೆ ನಮ್ಮ ನಮ್ಮ ಹಿರಿಯರೇ ಕಾರಣ. ನಮ್ಮ ಪ್ರೀತಿಗೆ ಅಂಗೀಕರಿಸದ ಅವರಿಗೆ ನಾವು ಕೊಡುತ್ತಿರುವ ಶಿಕ್ಷೆ ನಮ್ಮ ಸಾವು. ಅವರವರ ಸ್ವಾರ್ಥಕ್ಕೆ ನಮ್ಮ ಪ್ರೀತಿಯನ್ನು ಬಲಿ ಕೊಡಲು ನಾವು ಸಿದ್ಧರಿಲ್ಲ. ಜೀವನದಲ್ಲಿ ಒಟ್ಟಿಗಿರಲು ಸಾಧ್ಯವಿಲ್ಲ ಹಾಗಾಗಿ ಸಾವಿನಲ್ಲಿ ಒಂದಾಗಿದ್ದೇವೆ. ನಾವು ಯಾರಿಗೂ ಕ್ಷಮೆ ಕೇಳುವುದಿಲ್ಲಎಂದು ಬರೆದು ಇಬ್ಬರೂ ಒಬ್ಬರೊನ್ನಬ್ಬರು ಆಲಿಂಗಿಸಿಕೊಂಡು ಕಡೆಯ ಬಾರಿ ಶ್ರೀಧರನು ರೂಪಳ ಹಣೆಗೆ ಚುಂಬಿಸಿ ಇಬ್ಬರೂ ಆಟೋ ಏರಿ ಯಶವಂತಪುರ ರೈಲ್ವೆ ಗೇಟ್ ಬಳಿ ಬಂದರು.


 


ದೃಶ್ಯ - ೩


ಶ್ರೀಧರನ ಮನೆ - ಶ್ರೀಧರನ ತಂದೆ ಕೆಂಡಾಮಂಡಲವಾಗಿದ್ದಾರೆ,  ನಮ್ಮ ಅಂತಸ್ತೇನು ಅವರ ಅಂತಸ್ತೇನು, ನಮ್ಮ ಕಂಪನಿಯಲ್ಲಿ ಗುಮಾಸ್ತನಾಗಿರುವವನಿಗೆ ನನ್ನ ಮಗನನ್ನು ಕೊಟ್ಟು ಮದುವೆ ಮಾಡಬೇಕೆ. ಇದು ಎಂದಿಗೂ ಸಾಧ್ಯವಿಲ್ಲ. ಅಪ್ಪ, ಪ್ರೀತಿಗೆ ಆಸ್ತಿಯ ನೆಪ ಒಡ್ಡಿ ನಮ್ಮನ್ನು ಬೇರೆ ಮಾಡಬೇಡಿ. ನಿಮಗೆ ನಿಮ್ಮ ಮಗನ ಸಂತೋಷಕ್ಕಿಂತ ಆಸ್ತಿಯೇ ಹೆಚ್ಚಾದರೆ ನನಗೆ ನಿಮ್ಮ ಆಸ್ತಿಯಲ್ಲಿ ಒಂದು ಕಿಲುಬು ಕಾಸು ಕೂಡ ಬೇಡ, ದೇವರು ಶಕ್ತಿ ಕೊಟ್ಟಿದ್ದಾನೆ ದುಡಿದು ಸಂಪಾದಿಸುತ್ತೇನೆ. ಶ್ರೀಧರ್ ನೀನು ಮನೆ ಬಿಟ್ಟು ಹೋದರೆ ನನ್ನ ಮರ್ಯಾದೆ ಏನಾಗಬೇಕು, ಯಾವುದೇ ಕಾರಣಕ್ಕೂ ನೀನು ಆ ಹುಡುಗಿಯನ್ನು ಮದುವೆ ಆಗಬಾರದು, ಆಗಲು ನಾನು ಬಿಡುವುದಿಲ್ಲ. ನಿನ್ನಿಂದ ಜನ ನನ್ನನ್ನು ಆಡಿಕೊಳ್ಳಲು ನಾನು ಬಿಡುವುದಿಲ್ಲ. ನಿನಗಾಗಿ ಒಂದು ಹುಡುಗಿಯನ್ನು ಹುಡುಕಿದ್ದೇನೆ. ನೀನು ಆಕೆಯನ್ನೇ ಮದುವೆ ಆಗಬೇಕು.


ರೂಪ ಮನೆ - ನೋಡಮ್ಮ ರೂಪ ನೀನು ಯಾಕೆ ಹೀಗೆ ಮಾಡಿದೆ ಎಂದು ಅರ್ಥವಾಗುತ್ತಿಲ್ಲ. ನಾನು ಕೇವಲ ಅವರ ಕಂಪನಿ ಯಲ್ಲಿ ಕೆಲಸ ಮಾಡುವ ಗುಮಾಸ್ತ. ನನಗೆ ನಿಮ್ಮಿಬ್ಬರನ್ನು ಬೇರೆ ಮಾಡುವ ಉದ್ದೇಶವಿಲ್ಲ. ಶ್ರೀಧರ್ ಒಳ್ಳೆ ಹುಡುಗನೇ ಇರಬಹುದು ಆದರೆ ಅವರ ಅಪ್ಪ ಒಳ್ಳೆಯವನಲ್ಲ. ಅವನಿಗೆ ಹಣವೇ ಮುಖ್ಯ, ಹಣಕ್ಕೋಸ್ಕರ ಏನು ಬೇಕಾದರೂ ಮಾಡುವ ಮನುಷ್ಯ ಅವರಪ್ಪ. ಅಂಥಹ ಕಟುಕ ನಿನ್ನನ್ನು ಸುಮ್ಮನೆ ಬಿಡುತ್ತಾನೆಯೇ, ದಯವಿಟ್ಟು ನಿಮ್ಮ ಪ್ರೀತಿಯನ್ನು ಮರೆತು ಬಿಡಮ್ಮ..


ದೃಶ್ಯ - ೨


ಶ್ರೀಧರ್, ನಾನು ನಮ್ಮ ಮನೆಯಲ್ಲಿ ನಮ್ಮ ಪ್ರೀತಿಯ ಬಗ್ಗೆ ಹೇಳಿದ್ದೀನಿ ಕಣೋ. ಅವರಿಗೆ ಯಾವುದೇ ರೀತಿಯ ಅಭ್ಯಂತರವಿಲ್ಲ. ಇನ್ನು ನೀನು ನಿಮ್ಮ ಮನೆಯಲ್ಲಿ ಹೇಳುವುದೊಂದೇ ಬಾಕಿ ಕಣೋ. ರೂಪ ನಾನು ಆದಷ್ಟು ಬೇಗ ಮನೆಯಲ್ಲಿ ಹೇಳುತ್ತೀನಿ. ನಮ್ಮಪ್ಪ ಕಳೆದ ವಾರವಷ್ಟೇ ವಿದೇಶದಿಂದ ಮರಳಿದ್ದಾರೆ.  ಅವರ ಮೂಡ್ ನೋಡಿಕೊಂಡು ಹೇಳುತ್ತೇನೆ. ನೀನೇನು ಚಿಂತೆ ಮಾಡಬೇಡ. ಅವರಿಬ್ಬರೂ ಅಲ್ಲಿ ಮಾತನಾಡುವುದನ್ನು ಕಂಡ ಶ್ರೀಧರ್ ಅಪ್ಪ ಮನೆಗೆ ಹೋಗಿ ತನ್ನ ಕಾರ್ಯದರ್ಶಿಗೆ ಕೂಡಲೇ ಆ ಹುಡುಗಿಯ ಎಲ್ಲ ವಿವರಗಳನ್ನು ಕಲೆ ಹಾಕುವುದಕ್ಕೆ ಹೇಳಿದರು. ಕೇವಲ ಎರಡು ಘಂಟೆಗಳಲ್ಲಿ ಆ ಹುಡುಗಿಯ ಸಂಪೂರ್ಣ ವಿವರಗಳು ಶ್ರೀಧರ್ ಅಪ್ಪನ ಮೇಜಿನ ಮೇಲಿತ್ತು. ಅದರಲ್ಲಿ ರೂಪ ಳ ಅಪ್ಪ ಕೆಲಸ ನಿರ್ವಹಿಸುವ ಕಂಪನಿ ಯ ಹೆಸರು ನೋಡಿ ಆಶ್ಚರ್ಯ ಹಾಗೂ ಕೋಪಗೊಂಡರು. ಯಾಕೆಂದರೆ ಅದು ಅವರದೇ ಸ್ವಂತ ಕಂಪನಿ. ಆ ಕಂಪನಿ ಯಲ್ಲಿ ಗುಮಾಸ್ತನ ಹುದ್ದೆ ನಿರ್ವಹಿಸುತ್ತಿದ್ದರು ರೂಪ ಳ ಅಪ್ಪ.


 


ದೃಶ್ಯ - ೧


ಅಂದು ಶ್ರೀಧರ್ ಹಾಗೂ ರೂಪಳ ಪ್ರೀತಿಗೆ ಒಂದು ವಸಂತ ತುಂಬಿತ್ತು. ಇಬ್ಬರೂ ಕುಳಿತು ಹಳೆಯದನ್ನು ನೆನಪಿಸಿಕೊಳ್ಳುತ್ತಿದ್ದರು. ಒಂದು ವರ್ಷದ ಹಿಂದೆ ಕಾಲೇಜ್ ನ ಫಲಿತಾಂಶದ ದಿನ ರೂಪ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ಗೆಳತಿಯರೊಡನೆ ಸಂಭಾಷಣೆಯಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ಶ್ರೀಧರ್ ರೂಪ ನಿನ್ನ ಹತ್ತಿರ ಸ್ವಲ್ಪ ಮಾತಾಡಬೇಕು ಎಂದ. ಹೇಳು ಶ್ರೀಧರ್ ಏನದು ಎಂದಾಗ, ನೋಡು ರೂಪ ಕಳೆದ ಮೂರು ವರ್ಷದಿಂದ ಇಬ್ಬರೂ ಒಂದೇ ತರಗತಿಯಲ್ಲಿ ಓದುತ್ತಿದ್ದೇವೆ, ನಾನು ನೀನು ಒಳ್ಳೆಯ ಗೆಳೆಯರು ಕೂಡ ಆದರೆ ನಿನ್ನ ಹತ್ತಿರ ಒಂದು ವಿಷಯ ಮುಚ್ಚಿಟ್ಟಿದ್ದೆ. ಇಂದು ಆ ವಿಷಯ ಹೇಳದೆ ಹೋದರೆ ಇನ್ನೆಂದು ಹೇಳಲಾರೆನೋ ಎನಿಸುತ್ತಿದೆ ಅದಕ್ಕೆ ಧೈರ್ಯ ಮಾಡಿ ಹೇಳುತ್ತಿದ್ದೇನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ರೂಪ. ನನಗೆ ಗೊತ್ತು ಶ್ರೀಧರ್ ನೀನು ನನ್ನನ್ನು ಪ್ರೀತಿಸುತ್ತಿದ್ದೀಯ ಎಂದು, ಅದು ನಿನ್ನ ಬಾಯಿಂದಲೇ ಬರಲಿ ಎಂದು ಕಾಯುತ್ತಿದ್ದೆ. ನಾನು ಕೂಡ ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದಾಗ ಶ್ರೀಧರನ ಸಂತೋಷಕ್ಕೆ ಪಾರವೇ ಇರಲಿಲ್ಲ.


 


ದೃಶ್ಯ - ೭


ರೂಪ ಸತ್ತ ಮಾರನೆ ದಿನ ರೂಪ ಮನೆಗೆ ಲಾಯರ್ ಬಂದು ರೂಪಳ ಅಪ್ಪನಿಗೆ ನೋಡಿ ರಾಯರೇ ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿದ್ದ ಕೇಸ್ ನೆನ್ನೆ ತೀರ್ಪು ಬಂದಿತು. ಕೇಸ್ ನಮ್ಮ ಪರವಾಗಿ ಆಗಿದೆ. ನಿಮ್ಮಿಂದ ಕಸಿದುಕೊಂಡಿದ್ದ ಆ ನಗರ ಮಧ್ಯಬಾಗದ ಜಾಗ ನಿಮಗೆ ದೊರೆತಿದೆ. ಈಗ ನೀವು ಮುನ್ನೂರು ಕೋಟಿ ಆಸ್ತಿಗೆ ಒಡೆಯ ಎಂದಾಗ, ರೂಪಳ ಅಪ್ಪ ಏನು ಮಾತಾಡದೆ ಕಣ್ಣೀರಿಟ್ಟು ಅಲ್ಲೇ ಕುಸಿದುಬಿಟ್ಟರು..

Comments