ಮಿಲಿಂದ ಪ್ರಶ್ನೆ

ಮಿಲಿಂದ ಪ್ರಶ್ನೆ

ಪುಸ್ತಕದ ಲೇಖಕ/ಕವಿಯ ಹೆಸರು
ಅನುವಾದ: ಜಿ.ಪಿ.ರಾಜರತ್ನಂ
ಪ್ರಕಾಶಕರು
ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಜೆ ಸಿ ರಸ್ತೆ, ಬೆಂಗಳೂರು ೫೬೦೦೦೨
ಪುಸ್ತಕದ ಬೆಲೆ
ರೂ. ೩೦.೦೦, ಮುದ್ರಣ: ೨೦೦೭

ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಹೊರ ತಂದ ‘ಮಿಲಿಂದ ಪ್ರಶ್ನೆ' ಎಂಬ ಕೃತಿ ಮೂಲತಃ ಪಾಲಿ ಭಾಷೆಯಲ್ಲಿ ಬರೆಯಲ್ಪಟ್ಟಿದೆ ಎಂದು ಕೃತಿಯ ಅನುವಾದಕರಾದ ಖ್ಯಾತ ಸಾಹಿತಿ ಜಿ ಪಿ ರಾಜರತ್ನಂ ಅವರು ತಮ್ಮ ಮುನ್ನುಡಿಯಲ್ಲಿ ತಿಳಿಸುತ್ತಾರೆ. ಜಿ ಪಿ ರಾಜರತ್ನಂ ಅವರು 'ಪ್ರವೇಶ' ಎಂಬ ಮುನ್ನುಡಿ ಬರಹದಲ್ಲಿ ಈ ಕೃತಿಯ ಬಗ್ಗೆ ಬಹಳಷ್ಟು ಮಾಹಿತಿಗಳನ್ನು ತಿಳಿಸುತ್ತಾ ಹೋಗಿದ್ದಾರೆ. ಅದರ ಆಯ್ದ ಭಾಗಗಳು ನಿಮ್ಮ ಓದಿಗಾಗಿ…

“ ಪಾಲಿ ಭಾಷೆಯಲ್ಲಿರುವ ಸಾಹಿತ್ಯವು ಎರಡು ವಿಧವಾದುದೆಂದು ಸ್ಥೂಲವಾಗಿ ಹೇಳಬಹುದು. ಒಂದು ಪಿಟಕ ಸಾಹಿತ್ಯ ಮತ್ತೊಂದು ಪಿಟಕೇತರ ಸಾಹಿತ್ಯ. ವಿನಯ ಪಿಟಕ, ಸುತ್ತ ಪಿಟಕ, ಅಭಿಧಮ್ಮ ಪಿಟಕ ಎಂಬ ಮೂರು ಪಿಟಕಗಳು, ಸಿಂಹಳ ಬರ್ಮಾ ಸಯಾಂ ದೇಶಗಳ ಬೌದ್ಧರ ಪ್ರಮಾಣ ಗ್ರಂಥಗಳು ಪಿಟಕ ಸಾಹಿತ್ಯವೆನ್ನಿಸಿಕೊಳ್ಳುವುವು. ಇವು ಹೊರತಾಗಿ ಉಳಿದ ಇತರ ಎಲ್ಲಾ ಪಾಲಿಗ್ರಂಥಗಳು ಕೂಡಿ ಪಿಟಕೇತರ ಸಾಹಿತ್ಯವಾಗುವುದು.

ಪಿಟಕೇತರ ಪಾಲಿ ಸಾಹಿತ್ಯವನ್ನು ನಾಲ್ಕು ತೆರನಾಗಿ ವಿಂಗಡಿಸಬಹುದು. ೧. ಅಟ್ಟಕಥೆ ಬುದ್ಧದತ್ತ, ಬುದ್ಧ ಘೋಷ, ಧರ್ಮಪಾಲ ಎಂಬವರು ತಿಪಿಟ ಕಕ್ಕೆ ಬರೆದ ವ್ಯಾಖ್ಯಾನಗಳು. ೨. ಟೀಕಾ ೩. ಪಕರಣ ೪. ಕ್ರಿ.ಶ. ಎರಡು ಮೂರನೆಯ ಶತಮಾನದಿಂದ ಇಂದಿನವರೆಗೂ ಬರೆದಿರುವ, ಇಂದೂ ಕೆಲವರು ಬರೆಯುತ್ತಿರುವ ಇತಿಹಾಸ, ವೈದ್ಯ, ಕಾವ್ಯ, ವ್ಯಾಕರಣ ಇತ್ಯಾದಿ ಗ್ರಂಥಗಳು. ಪಾಲಿಯಲ್ಲಿ ಉಳಿದಿರುವ ಮುಖ್ಯವಾದ ಮೂರು : ‘ನೇತ್ತಿಪಕರಣ', ‘ಪೇಟಕೋಪದೇಸ' ಮತ್ತು ಮಿಲಿಂದ ಪ್ರಶ್ನಂ’ ಈ ಮೂರೂ ಬೌದ್ಧ ಧರ್ಮವನ್ನು ಕುರಿತ ಶಾಸ್ತ್ರೀಯ ಗ್ರಂಥಗಳು. ‘ನೇತ್ತಿ'ಯು ಸದ್ಧರ್ಮದ ಜ್ಞಾನಕ್ಕೆ ಶ್ರಾವಕನನ್ನು ನಡೆಸಿಕೊಂಡು ಹೋಗುವುದು.

ಈ ‘ಮಿಲಿಂದ ಪ್ರಶ್ನೆ' ಗ್ರಂಥದ ಇತಿವೃತ್ತ ಏನೇನೂ ಸ್ಪಷ್ಟವಾಗಿಲ್ಲ. ಅದನ್ನು ಕುರಿತ ಪಂಡಿತರ ಮತಗಳನ್ನೆಲ್ಲ ಇಲ್ಲಿ ತಿಳಿಸುವುದು ಸಾಧ್ಯವಾದುದಲ್ಲವಾದುದರಿಂದ ಅವರು ಕಂಡ ವಿಷಯಗಳ ಸಾರವನ್ನು ಮಾತ್ರ ಕೆಳಗೆ ತಿಳಿಸಲಾಗುವುದು.

ಈ ಪ್ರಶ್ನೆಗಳಲ್ಲಿ ಮೈದೋರುವ ಮಹಾಪುರುಷರು ಇಬ್ಬರು : ಒಬ್ಬನು ಮಿಲಿಂದನೆಂಬ ದೊರೆ, ಇನ್ನೊಬ್ಬನು ನಾಗಸೇನನೆಂಬ ಭಿಕ್ಷು. ಇವರಲ್ಲಿ ನಾಗಸೇನನು ಯಾರೆಂದು ತಿಳಿದುಬಂದಿಲ್ಲ. ಕ್ರಿ.ಪೂ. ಒಂದನೆಯ ಶತಮಾನದಲ್ಲಿ ಹಿಂದೂದೇಶದ ವಾಯುವ್ಯ ಭಾಗದಲ್ಲಿ ರಾಜ್ಯವಾಳುತ್ತಿದ್ದ ಮಿನಾಂದರನೆಂಬ ಗ್ರೀಕೋ-ಬ್ಯಾಕ್ಟಿಯಾದ ದೊರೆಯೇ ಈ ಪ್ರಶ್ನೆಗಳ ಮಿಲಿಂದರಾನನೆಂದು ಪಂಡಿತರು ತಿಳಿಸುವರು. ಈ ದೊರೆಯು ಬೌದ್ಧ ಭಿಕ್ಷುವೊಬ್ಬನೊಡನೆ ವಾದಮಾಡಿದ ಐತಿಹಾಸಿಕ ಘಟನೆಯನ್ನು ಈ ಗ್ರಂಥವು ನಿರೂಪಿಸುವುದೋ ಅಥವಾ ಸಂವಾದಗಳೆಲ್ಲ ಮಿಲಿಂದನ ಹೆಸರನ್ನು ಹಿಂದೆ ಇಟ್ಟುಕೊಂಡು ಕಲ್ಪಿತವಾದುವೋ ತಿಳಿದು ಬರುತ್ತಿಲ್ಲ.

ಈ ‘ಮಿಲಿಂದ ಪ್ರಶ್ನೆ'ಯನ್ನು ಬರೆದವನ ವಿಷಯವೇನೂ ಗೊತ್ತಿಲ್ಲ. ಇದು ಒಬ್ಬನೇ ಗ್ರಂಥಕರ್ತವಿನ ಕೆಲಸವೆಂದೂ, ಕೆಲವು ಪಂಡಿತರೂ, ಇದರಲ್ಲಿನ ಹಲವು ಭಾಗಗಳನ್ನು ಹಲವರು ಬರೆದರೆಂದು ಇತರರೂ, ಒಬ್ಬನೇ ಬರೆದ ‘ಮಿಲಿಂದ ಪ್ರಶ್ನೆ'ಯನ್ನು ಈಚೆಗೆ ಅನೇಕರು ತಿದ್ದಿ ಸಂಪಾದಿಸಿದರೆಂದು ಬೇರೆ ಕೆಲವರೂ ಅಭಿಪ್ರಾಯಪಡುವರು. ಅಂತೂ, “ಮಿಲಿಂದ ಪ್ರಶ್ನೆ”ಯ ಏಳು ಭಾಗಗಳಲ್ಲಿ ‘ಲಕ್ಷಣ ಪ್ರಶ್ನೆ' ಮತ್ತು ‘ವಿಮಚ್ಚೇದನ ಪ್ರಶ್ನೆ' ಮಾತ್ರ ಸಹಜವಾದ ‘ಮೂಲ ಮಿಲಿಂದ ಪ್ರಶ್ನೆ'; ಮಿಕ್ಕ ಐದು ಭಾಗಗಳು ಪ್ರಕ್ಷಿಪ್ತವಾದುವು.ಎಂದು ಎಲ್ಲ ಪಂಡಿತರೂ ಒಪ್ಪಿರುವರು."

ಪುಸ್ತಕದ ಪರಿವಿಡಿಯಲ್ಲಿ ಬಾಹಿರ ಕಥೆ, ಲಕ್ಷಣ ಪ್ರಶ್ನೆ ಮತ್ತು ವಿಮತಿಚ್ಚೇದನ ಪ್ರಶ್ನೆಗಳನ್ನು ವಿವರಿಸಲಾಗಿದೆ. ಪುಸ್ತಕದ ಕೊನೆಯಲ್ಲಿ ನಾಮಪದ ಸೂಚಿ ಹಾಗೂಪದ ವಿಷಯ ಸೂಚಿಯನ್ನು ನೀಡಲಾಗಿದೆ. ೯೫ ಪುಟಗಳ ಈ ಪುಸ್ತಕವನ್ನು ಲೇಖಕರು ಅವರ ಶಾಕ್ಯ ಸಾಹಿತ್ಯ ಪ್ರವೇಶಕ್ಕೆ ಆದಿಕಾರಣರಾದ ಪೂಜನೀಯ ಮಾಸ್ತಿ ವೆಂಕಟೇಶ ಐಯಂಗಾರ್ಯ ಇವರಿಗೆ ಅರ್ಪಣೆ ಮಾಡಿದ್ದಾರೆ.