ಮಿಲಿಯಾಧಿಪತಿಯಾದ ನಿರುದ್ಯೋಗಿ

ಎಷ್ಟೋ ಜನರಿಗೆ ಯಶಸ್ಸು ಸುಲಭದಲ್ಲಿ ಸಿಕ್ಕಿಲ್ಲ. ಕಷ್ಟದ ಹಾದಿಯನ್ನು ಕ್ರಮಿಸಿ, ನಂಬಿಕೆ ಕಳೆದುಕೊಳ್ಳದೇ ಪ್ರಯತ್ನ ಮುಂದುವರೆಸಿದಾಗ ಮಾತ್ರ ಗುರಿ ತಲುಪಿದವರು ಹಲವರು. ಕೆಲವರಂತೂ, ತಮ್ಮ ಜೀವನದಲ್ಲಿ ಎದುರಿಸಿದ ಸನ್ನಿವೇಶ, ಸಂಕಷ್ಟಗಳ ನಡುವೆ ನಲುಗಿ, ಯಾವುದೇ ಪ್ರಯತ್ನವನ್ನು ಮಾಡದೇ ಇರುವಂತಹ ಸ್ಥಿತಿಯನ್ನೂ ತಲುಪಿದ್ದರು. ಆದರೂ ಪ್ರಯತ್ನ ಮುಂದುವರೆಸಿ ಯಶ ಗಳಿಸಿದರು.
ಈ ಮಹಿಳೆಯ ಕಥೆ ಕೇಳಿದರೆ, ಕಷ್ಟದಲ್ಲಿರುವವರೂ, ತಾಳ್ಮೆಯಿಂದ ಮುಂದುವರಿದರೆ ಸಂತಸದ ದಿನಗಳನ್ನು ಕಾಣಲು ಸಾಧ್ಯ ಎಂಬ ಭರವಸೆ ಇಟ್ಟುಕೊಳ್ಳಬಹುದು. ಆಕೆಯ ಜನನ ಸಾಕಷ್ಟು ಸ್ಥಿತಿವಂತ ಕುಟುಂಬದಲ್ಲಿ ೧೯೬೫ರಲ್ಲಿ ಆಯಿತು. ತಂದೆ, ತಾಯಿಯರು ಕಷ್ಟ ಪಟ್ಟು ದುಡಿದು, ಮಗಳಿಗೆ ಉತ್ತಮ ವಿಧ್ಯಾಭ್ಯಾಸವನ್ನು ಕೊಡಿಸಿದ್ದರು. ಮನೆಯನ್ನೂ ಕೊಂಡುಕೊಂಡಿದ್ದರು. ೧೯೮೭ರಲ್ಲಿ ಪದವಿ ಮುಗಿಸಿ, ೧೯೯೦ರಲ್ಲಿ ವೃತ್ತಿ ಆರಂಭಿಸಿದಳು. ಆದರೆ ಕೆಲಸವು ಹಂಗಾಮಿ. ಆಗಿನ ದಿನಗಳಲ್ಲಿ ಕೆಲವು ಬಾರಿ ದೀರ್ಘ ರೈಲು ಪ್ರಯಾಣ ಮಾಡಬೇಕಿತ್ತು. ಒಮ್ಮೆ ನಾಲ್ಕು ಗಂಟೆಗಳ ಕಾಲ ರೈಲಿಗಾಗಿ ಕಾಯುವಾಗ, ಕಾದಂಬರಿಯೊಂದನ್ನು ಬರೆಯುವ ಹೊಳಹು ಹೊಳೆಯಿತು. ಆಗ ಆಕೆಯ ತಲೆಯಲ್ಲಿ ಸೃಜಿಸಿದ್ದೇ 'ಹ್ಯಾರಿ ಪಾಟರ್'. ಇದು ನಡೆದದ್ದು ೧೯೯೦ರಲ್ಲಿ.
ಆದರೆ, ಅದೇ ವರ್ಷ ಆಕೆಯ ತಾಯಿ ಮೃತ ಪಟ್ಟಳು. ತಾಯಿಯೊಂದಿಗೆ ಆತ್ಮೀಯ ಒಡನಾಟ ಇದ್ದ ಈಕೆಗೆ, ಇದೊಂದು ಆಘಾತ. ಆಘಾತದಿಂದ ಹೊರಬಂದು ೧೯೯೨ರಲ್ಲಿ ಮದುವೆಯಾಯಿತು. ಮಗುವೂ ಆಯಿತು. ಆದರೆ ೧೯೯೩ರಲ್ಲಿ ಗಂಡನಿಂದ ಬೇರಾಗುವ ಅನಿವಾರ್ಯತೆ. ಪುಟ್ಟ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ಈಕೆಯ ಹೆಗಲ ಮೇಲೆ. ಆದರೆ, ಉತ್ತಮ ಎನಿಸುವ ವೃತ್ತಿ ಇರಲಿಲ್ಲ. ಈ ನಡುವೆ ಹ್ಯಾರಿ ಪಾಟರ್ ಕಾದಂಬರಿಯ ಮೊದಲ ಮೂರು ಅಧ್ಯಾಯಗಳನ್ನು ಬರೆದಿದ್ದಳು. ಮೊದಲು ತನ್ನ ಸಹೋದರಿಯ ಜೊತೆಗೆ ವಾಸಿಸಿ, ಅದು ಸರಿಹೋಗದೇ ಇದ್ದಾಗ, ಬಾಡಿಗೆ ಫ್ಲಾಟ್ ನಲ್ಲಿ ವಾಸಿಸತೊಡಗಿದಳು. ನಿರುದ್ಯೋಗಿಗಳಿಗೆ ಸರಕಾರ ನೀಡುವ ಅಲ್ಪ ಮೊತ್ತದ ಭತ್ಯೆಯನ್ನು ಪಡೆದು, ಮಗುವನ್ನು ಸಾಕುವ ಕಷ್ಟ. ಈ ಸಮಯದಲ್ಲಿ ತಾನೊಬ್ಬ ಬಡ ಮಹಿಳೆಯ ರೀತಿ ಜೀವಿಸಿದ್ದೆ ಎಂದು ಆಕೆ ಬರೆದುಕೊಂಡಿದ್ದಾಳೆ. ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ, ಕಾದಂಬರಿಯ ಬರವಣಿಗೆ ಮುಂದುವರೆಯಿತು. ಕೆಲವು ಬಾರಿ ಕೆಫೆಗಳಲ್ಲಿ ಕುಳಿತು ಬರವಣಿಗೆ ಮಾಡಿದ್ದುಂಟು.!
೧೯೯೫ರಲ್ಲಿ ಹ್ಯಾರಿ ಪಾಟರ್ ಸರಣಿಯ ಮೊದಲ ಕಾದಂಬರಿ ಪೂರ್ಣಗೊಂಡಿತ್ತು. ಆದರೆ ಅದನ್ನು ಹನ್ನೆರಡು ಪ್ರಕಾಶಕರು ತಿರಸ್ಕರಿಸಿದ್ದರು. ಹದಿಮೂರನೆಯ ಪ್ರಕಾಶಕರಾಗಿ ಬ್ಲೂಮ್ಸ್ ಬೆರಿ ಪಬ್ಲಿಷಿಂಗ್ ಸಂಸ್ಥೆ ಸ್ವೀಕರಿಸಿತು. ಆದರೆ, ಆಕೆಯ ಹೆಸರನ್ನು ಇಟ್ಟು ಪ್ರಕಟಿಸಿದರೆ ಮಕ್ಕಳು ಓದುವ ಸಾಧ್ಯತೆ ಕಡಿಮೆ ಎಂದು , ಆಕೆಯ ಸಮ್ಮತಿಯ ಮೇರೆಗೆ ಜೆ.ಕೆ.ರೌಲಿಂಗ್ ಎಂಬ ಗಂಡಸಿನ ಹೆಸರಿನಲ್ಲಿ ಪ್ರಕಟಿಸಲಾಯಿತು! ಮೊದಲ ಮುದ್ರಣ ಪ್ರಕಟ ಗೊಂಡದ್ದು ೧೯೯೭ರಲ್ಲಿ, ಕೇವಲ ೫೦೦ ಪ್ರತಿಗಳು. ಗೌರವ ಧನವೂ, ಇತರ ಲೇಖಕರಿಗೆ ಹೋಲಿಸಿದರೆ ಬಹಳ ಕಡಿಮೆ.
ಆಕೆ ಬಡತನದಿಂದ ಹೊರಬಂದದ್ದು ಹ್ಯಾರಿ ಪಾಟರ್ ಕಾದಂಬರಿಯು ಅಮೇರಿಕದಲ್ಲಿ ಪ್ರಕಟಣೆಗೆ ಸಿದ್ಧಗೊಂಡಾಗ. ೧,೦೫,೦೦೦ ಡಾಲರುಗಳಿಗೆ ಆಕೆಯ ಕಾದಂಬರಿಯ ಪ್ರಕಟಣೆಯ ಹಕ್ಕುಗಳನ್ನು ಅಮೇರಿಕದ ಪ್ರಕಾಶನ ಸಂಸ್ಥೆಯೊಂದು ಖರೀದಿಸಿತು. ಆ ಹಣದಿಂದ ಜೆ.ಕೆ.ರೌಲಿಂಗ್ ಒಂದು ಫ್ಲಾಟ್ ಖರೀದಿಸಿದಳು. ಹ್ಯಾರಿ ಪಾಟರ್ ಸರಣಿಯ ಮುಂದಿನ ಮೂರು ಕಾದಂಬರಿಗಳು ೧೯೯೮ ರಿಂದ ೨೦೦೦ರ ಅವಧಿಯಲ್ಲಿ ಪ್ರಕಟಗೊಂಡವು. ಈ ಸಮಯಕ್ಕೆ ಹ್ಯಾರಿ ಪಾಟರ್, ಜಗತ್ತಿನಾದ್ಯಂತ ಮಕ್ಕಳ ಮನದಲ್ಲಿ ಮನೆಮಾಡಿದ್ದ. ಈ ಕಾದಂಬರಿಗಳ ಲಕ್ಷಾಂತರ ಪ್ರತಿಗಳು ಮುದ್ರಣಗೊಂಡು ಜಗತ್ತಿನ ಮೂಲೆ ಮೂಲೆ ತಲುಪಿದವು. ಹೊಸ ಹ್ಯಾರಿ ಪಾಟರ್ ಕಾದಂಬರಿಯನ್ನು ಖರೀದಿಸಲು, ಮಕ್ಕಳು ತಮ್ಮ ಪೋಷಕರೊಡನೆ ಬೆಳಗಿನ ಜಾವವೇ ಕ್ಯೂ ನಿಲ್ಲುವುದು ಮಾಮೂಲು ಸುದ್ದಿ ಎನಿಸಿತು. ೨೦೦೭ರಲ್ಲಿ ಈ ಸರಣಿಯ ಏಳನೆಯ ಮತ್ತು ಕೊನೆಯ ಕಾದಂಬರಿ ಪ್ರಕಟಗೊಂಡಿತು.
ಈ ಕಾದಂಬರಿಯ ಮೂಲಕ, ಜೆ.ಕೆ.ರೌಲಿಂಗ್ ಜಗತ್ತಿನ ಅತಿ ಹೆಚ್ಚು ಸಂಭಾವನೆ ಪಡೆಯುವ ವ್ಯಕ್ತಿಗಳ ಸಾಲಿನಲ್ಲಿ ಸೇರಿಹೋದಳು. ೨೦೦೮, ೨೦೧೭ ಮತ್ತು ೨೦೧೯ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಸಾಹಿತಿಗಳಲ್ಲಿ ಈಕೆಗೆ ಮೊದಲ ಸ್ಥಾನ. ನಿಜ, ಹಣ ಗಳಿಕೆಯೊಂದೇ ಯಶಸ್ಸಿನ ಮಾನದಂಡವಲ್ಲ. ಆದರೆ, ಬಹುಮಟ್ಟಿಗೆ ನಿರುದ್ಯೋಗಿಯಾಗಿದ್ದು, ಮಗುವನ್ನು ಸಾಕುವ ಜವಾಬ್ದಾರಿಯ ನಡುವೆಯೇ, ಮಕ್ಕಳ ಮನ ಗೆಲ್ಲುವ ಕಾದಂಬರಿ ಬರೆದು, ಆ ಮೂಲಕ ತನ್ನ ಜೀವನದಲ್ಲಿ ಯಶಸ್ಸು ಗಳಿಸಿದ ಜೆ.ಕೆ.ರೌಲಿಂಗ್, ಎಲ್ಲರಲ್ಲೂ ಸ್ಪೂರ್ತಿ ತುಂಬಬಲ್ಲಳು.
-ಶಶಾಂಕ್ ಮುದೂರಿ (ವಿಶ್ವವಾಣಿಯಿಂದ)
ಚಿತ್ರ ಕೃಪೆ: ಅಂತರ್ಜಾಲ ತಾಣ