ಮಿಶ್ರಕೃಷಿ-ಮೌಲ್ಯವರ್ಧನೆ-ನೇರಮಾರುಕಟ್ಟೆ: ಎಸ್.ಎಂ.ಪಾಟೀಲರ ಮಾದರಿ
ಹುಬ್ಬಳ್ಳಿ ತಾಲ್ಲೂಕಿನ ಗಿರಿಯಾಲ, ಕಟ್ನೂರು, ಮಾವನೂರು, ಬುಡರಸಿಂಗಿ, ಬೆಳಗಲಿ, ವೀರಾಪೂರ, ಕರಡಿಕೊಪ್ಪ, ರಾಮಾಪೂರ, ಮಿಶ್ರಿಕೋಟಿ ಹಾಗೂ ಭೋಗೇನಾಗರಕೊಪ್ಪ ಗ್ರಾಮಗಳಲ್ಲಿ ಇತ್ತೀಚೆಗೆ ಶಂಖದ ಹುಳುಗಳ ಕಾಟ ವಿಪರೀತವಾಗಿತ್ತು.ಗ್ರಾಮಸ್ಥರು ಹೇಳುವ ಪ್ರಕಾರ ತಂಪಿನ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಇವು, ಸುಡು ಬಿಸಿಲಿನಲ್ಲಿ ಮುದುಡಿಕೊಂಡಿರುತ್ತವೆ. ರಾತ್ರಿ ಎಚ್ಚೆತ್ತು ಹಸಿರು ಎಲೆಗಳನ್ನು ತಿಂದು ಮುಕ್ಕುತ್ತಿವೆ. ಒಂದು ಬಸವನ ಹುಳು ೩೦೦ ಮೊಟ್ಟೆ ಇಡುತ್ತಾ, ವಂಶ ವೃದ್ಧಿಸಿಕೊಳ್ಳುತ್ತದೆ!
ಈ ಸುದ್ದಿ ನನ್ನ ಗಮನಕ್ಕೆ ಬಂದಿದ್ದೇ ತಡ, ಕಟ್ನೂರಿನ ಗೆಳೆಯರಿಗೆ ದೂರವಾಣಿ ಕರೆ ಮಾಡಿ ನಾನು ಬರುತ್ತಿರುವುದಾಗಿ ಹೇಳಿದೆ. ಕಟ್ನೂರಿನ ಹೇಮರೆಡ್ಡಿ ರಡ್ಡೇರ್ ನನ್ನನ್ನು ನೋಡಿದವರೆ, "ಸ್ವಾಮಿಗೋಳು ಬರಬೇಕು..ಬರಬೇಕು. ನಾವ ಇಂದರ..ನಾಳೆರ.. ಈ ಪೇಪರ್ ನಾವರಿಗೆ ಒಂದ ಮನವಿ ಕೊಡಾಕ ಬರಬೇಕು ಅಂತ ಮಾಡಿದ್ವಿ..ಅಷ್ಟರೊಳಗ ನೀವ ಬಂದ್ರಿ; ಭಾಳ ಛೋಲೋ ಆತು" ಅಂದ್ರು. ನಾನು ತುಸು ಸಂಕೋಚದಿಂದ ಕೇಳ್ದೆ.."ನನಗ್ಯಾಕರೆಪಾ ನಿಮ್ಮ ಮನವಿ..?"..ರಡ್ಡೇರ್ ಅಂದ್ರು.."ಮತ್ತ ನೀವಾಗಂತೂ ನಮ್ಮ ಊರಿನ ಕಡೆ ತಲಿ ಹಾಕೋದಿಲ್ಲ. ಸರಕಾರದವರಂತೂ ನಮ್ಮನ್ನ ಹೆಂಗದೀರಿ ಅಂತ ಕೇಳುದುಲ್ಲ. ಇನ್ನ ನಾವ ಸುದ್ದ್ಯಾಗ ಇರದಿದ್ರ ನಾವು ಅದೇವೋ? ಸತ್ತೇವೋ? ಅಂತ ಗೊತ್ತಗೋದು ಹೆಂಗ್ರಪಾ..ನಮ್ಮ ಬಗ್ಗೆ ಬರೀರಿ ಅಂತ ತಮಗೊಂದು ಮನವಿ ಕೊಡೋಣು ಅಂತ ಮಾಡಿದ್ವಿ.." ಅಂತ ಚುಚ್ಚಿದ್ರು..
ಪೇರಲ, ಸಪೋಟ, ಸೂರ್ಯಕಾಂತಿ, ಗೋವಿನಜೋಳ, ಹೆಸರು, ಅಲಸಂದಿ, ಹೀರೇಕಾಯಿ, ಟೊಮ್ಯಾಟೋ, ಸೌತೆಕಾಯಿ, ಮೂಲಂಗಿ ಹಾಗೂ ಹಿಪ್ಪು ನೇರಳೆ ಇವುಗಳಿಗೆ ಆಹುತಿಯಾಗುತ್ತಿವೆ. ರೈತರು ನಿತ್ಯ ಬಕೇಟಿನಲ್ಲಿ ಹುಳುಗಳನ್ನು ಹಿಡಿದು ರಸ್ತೆಯಲ್ಲಿಯೇ ಸುರಿದು ಅವುಗಳನ್ನು ಕೊಲ್ಲುತ್ತಿದ್ದಾರೆ. ಆದರೆ ಈ ಹಿಂದೆ ಬಸವನಹುಳುಗಳ ಉಪಟಳ ಹೆಚ್ಚಾದಾಗ ಗುಂಡಿತೋಡಿ ಅದರಲ್ಲಿ ಈ ಹುಳುಗಳನ್ನು ಹಾಕಿ ಮೇಲೆ ಉಪ್ಪು ಸುರಿವಿ ಕೊಲ್ಲುವ ಕ್ರಮ ಅನುಸರಿಸಲಾಗಿತ್ತು. ಈ ಬಾರಿ ಅವುಗಳ ಹಬ್ಬುವಿಕೆ ಪ್ರಮಾಣ ಮಿತಿಯಲ್ಲಿರದೇ ಹೋಗಿ, ನಿಯಂತ್ರಿಸುವುದು ಅಸಾಧ್ಯವಾಗಿ ಪರಿಣಮಿಸಿತ್ತು. ಈ ಬೆಳವಣಿಗೆಗೆ ಕಾರಣ ನಿಗದಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದೇ ಹೋದದ್ದು.
ಅವರ ಸಾತ್ವಿಕ ಸಿಟ್ಟೇನು ಅಂದ್ರ..ಅವರ ಊರಿನೊಳಗ ಸಾಕಷ್ಟು ಒಳ್ಳೆ ರೈತರು ಅದಾರ. ಒಳ್ಳೊಳ್ಳೆ ಕೆಲಸಗಳು ಊರ ತುಂಬ ನಡದಾವು. ಎಂಥಾ ಕಷ್ಟದೊಳಗೂ ಹೊಲಮನಿ ಕಾಯಕ ಮುನ್ನಡೆಸಿಕೊಂಡು ಬಂದಂಥವರು ಇದ್ದಾರ. ನೆಲಮೂಲ ಜ್ಞಾನ ಹಾಗೂ ಅನುಭವದಿಂದ ಕೃಷಿಯೊಳಗ ಸಾಕಷ್ಟು ಒಳ್ಳೊಳ್ಳೆ ಪ್ರಯೋಗ ಮಾಡ್ಯಾರ. ಅದರ ಬಗ್ಗೆ ಬರೀಲಿಕ್ಕೆ ಯಾವತ್ತೂ ಬರಲಿಲ್ಲ. ಅಂಥವರ ಬಗ್ಗೆ ಬರೀಲಿಕ್ಕೆ ಪುರುಸೊತ್ತು ಸಿಗಲಿಲ್ಲ; ಈಗ ಶಂಖದ ಹುಳುಗಳ ಕಾಟದ ಬಗ್ಗೆ ಬರೀಲಿಕ್ಕೆ ಹೋದೆ.. ಅನ್ನೋದಾಗಿತ್ತು.
ಇಂತಹ ಸಾಮಾನ್ಯ ಪ್ರಯೋಗಗಳು ಪತ್ರಿಕೋದ್ಯಮದದಲ್ಲಿ ಹೊಸದೇನಲ್ಲ. ಆದರೆ ನಿರಶಾದಯಕ ಸಂದರ್ಭದೊಳಗ ಎದೆಗುಂದದೇ ಆಶಾದೀಪವಾದ ರೈತರ ಬಗ್ಗೆ, ಅವರ ಯಶೋಗಾಥೆಯ ಬಗ್ಗೆ, ಸೋಲು-ಗೆಲುವುಗಳ ಬಗ್ಗೆ ಒಂದಷ್ಟು ಮಾಹಿತಿ ನೇಗಿಲಯೋಗಿಗೆ ದೊರಕುವಂತಾದರೆ ಅದು ಆಶಾಕಿರಣ ಮೂಡಿಸಬಹುದಲ್ಲವೇ?
ಧಾರವಾಡದ ಕೃಷಿ ಮಾಧ್ಯಮ ಕೇಂದ್ರ ಎಸ್.ಎಂ. ಪಾಟೀಲರ ಕೃಷಿ ಯಶೋಗಾಥೆಯ ಬಗ್ಗೆ ಇತ್ತೀಚೆಗೆ ಪುಟ್ಟದಾದ ಪುಸ್ತಕವೊಂದನ್ನು ಪ್ರಕಟಿಸಿದೆ. ಮಿಶ್ರಕೃಷಿ-ಮೌಲ್ಯವರ್ಧನೆ-ನೇರಮಾರುಕಟ್ಟೆ: ಎಸ್.ಎಂ.ಪಾಟೀಲರ ಮಾದರಿ ಪುಸ್ತಕದ ಹೆಸರು.
ಬೆಳಗಾವಿ ಜಿಲ್ಲೆ ಅಥಣಿಯ ಎಸ್.ಎಂ. ಪಾಟೀಲರು ತಮ್ಮ ಬದುಕಿನ ೫೮ ವರುಷಗಳನ್ನ ಕಡತ-ಕಾಗದಗಳಲ್ಲಿ ಕಳೆದವರು. ಕಳೆದ ಒಂದು ದಶಕದ ಹಿಂದೆ ಸರಕಾರಿ ಸೇವೆಯಿಂದ ನಿವೃತ್ತಿಹೊಂದಿದಾಗ ಅವರ ತಲೆಯಲ್ಲಿ ಒಂದೇ ಯೋಚನೆ ಇತ್ತು. ‘ಆದಷ್ಟು ಬೇಗ ಒಕ್ಕಲು ತನಕ್ಕೆ ಇಳಿಯಬೇಕು’. ಅವರು ತಡ ಮಾಡಲಿಲ್ಲ. ಹಾಗಂತ ದುಡುಕಲೂ ಇಲ್ಲ. ಹತ್ತಾರು ಕಡೆ ಓಡಾಡಿ ಸಾವಯವ ಕೃಷಿಕರ ಪ್ರಯೋಗಗಳನ್ನು ಕೂಲಂಕಷ ನೋಡಿದರು. ಅವರ ಅನುಭಗಳಿಗೆ ಕಿವಿಕೊಟ್ಟರು. ಅಷ್ಟರಲ್ಲಿ ಮುಂದಿನ ಹಾದಿ ಸ್ಪಷ್ಟವಾಗಿತ್ತು. ನಾನಾ ಬೆಳೆಗಳು, ಪ್ರತಿಯೊಂದರಿಂದ ಬಗೆಬಗೆಯ ಮೌಲ್ಯವರ್ಧಿತ ಉತ್ಪನ್ನ, ಸದಾ ಹೊಸ-ಹೊಸ ಪ್ರಯೋಗಗಳು, ನೇರ ಮಾರುಕಟ್ಟೆ, ಸಂಘಟನೆಯ ಮೂಲಕ ಸಾವಯವ ಚಳವಳಿಯ ಬಲವರ್ಧನೆ..ಈಗ ಪಾಟೀಲರ ಮನಸ್ಸು-ಕೃಷಿ-ಬದುಕು ಎಲ್ಲವೂ ಸಾವಯವ. ಆದುದರಿಂದ ಒಕ್ಕಲುತನದಲ್ಲಿ ಅವರಿಗೆ ಖುಷಿ-ನೆಮ್ಮದಿ.
"ನನ್ನ ನೌಕರಿಯ ಅನುಭವದಿಂದ ಹೇಳುವುದಾದರೆ ಕೃಷಿಯಲ್ಲಿರುವ ಪ್ರಾಮಾಣಿಕತೆ ಬೇರೆ ಯಾವ ಉದ್ಯೋಗದಲ್ಲಿಯೂ ಇಲ್ಲ. ಏಕದಂ, ಕೃಷಿಗೆ ಇಳಿದೆ. ಆದರೆ ಎಲ್ಲೂ ಸೋತಿಲ್ಲ." ಎಸ್.ಎಂ. ಪಾಟೀಲರ ಈ ಮಾತು ಅಭಿಮಾನ ಮೂಡಿಸುತ್ತದೆ.
ಕೃಷಿ ಅಧಿಕಾರಿ ಹಾಗೂ ಕಾಮ್ ಫೆಲೋ ಲೀಲಾ ನಾ. ಕೌಜಗೇರಿ ಈ ಪುಸ್ತಕದ ಲೇಖಕರು. ಅತ್ಯಂತ ಅಚ್ಚುಕಟ್ಟಾಗಿ, ಸರಳವಾಗಿ ಹಾಗೂ ಸುಂದರವಾಗಿ ಎಸ್.ಎಂ. ಪಾಟೀಲರ ಸಮಗ್ರ ಕೃಷಿಯನ್ನು ಹದವಾಗಿ ದಾಖಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಕಾಮ್ ಅಧ್ಯಕ್ಷೆ ಶ್ರೀಮತಿ ಅನಿತಾ ಶಿವರಾಂ ಪೈಲೂರು ಪ್ರಾಸ್ತಾವಿಕ ಮುನ್ನುಡಿ ಬರೆದಿದ್ದಾರೆ. ಪುಸ್ತಕದ ಬೆಲೆ: ೨೦ ರೂಪಾಯಿಗಳು. ಪುಸ್ತಕ ಲಭ್ಯವಾಗುವ ಸ್ಥಳ: ಕೃಷಿ ಮಾಧ್ಯಮ ಕೇಂದ್ರ, ೧೧೯, ೧ನೇ ಮುಖ್ಯರಸ್ತೆ, ೪ನೇ ಅಡ್ಡರಸ್ತೆ, ನಾರಾಯಣಪುರ ಧಾರವಾಡ - ೫೮೦ ೦೦೮. ದೂರವಾಣಿ: ೦೮೩೬- ೨೪೪೪೭೩೬.
ಪುಸ್ತಕ ಓದುವ ಸಂಸೃತಿಯನ್ನು ಬೆಳೆಸಲೋಸುಗ ಅಥವಾ ಕೃಷಿಯಲ್ಲಿ ‘ಕೈ ಕೆಸರು ಅಥವಾ ಬಾಯಿ ಮೊಸರು’ ಮಾಡಿಕೊಂಡವರಿಗೂ ಇದನ್ನು ನಾವು ಉಡುಗೊರೆಯಾಗಿ ನೀಡಬಹುದಾದ ಪುಸ್ತಕ.