ಮೀಸಲಾತಿ…!
ವೈಯಕ್ತಿಕ ಬದುಕಿನಲ್ಲೂ ಒಂದಷ್ಟು ಮೀಸಲಾತಿ ಇರಲಿ. ದ್ವೇಷದ ನಡುವೆಯೂ ಪ್ರೀತಿಗೆ ಒಂದಷ್ಟು ಮೀಸಲಾತಿಯ ಅವಕಾಶ ನೀಡಿ. ಕೋಪದ ನಡುವೆಯೂ ತಾಳ್ಮೆಗೆ ಸ್ವಲ್ಪ ಮೀಸಲಾತಿ ಕೊಡಿ. ಸ್ವಾರ್ಥದ ನಡುವೆಯೂ ತ್ಯಾಗಕ್ಕೂ ಸ್ವಲ್ಪ ಮೀಸಲಾತಿ ಕಲ್ಪಿಸಿ. ಹಿಂಸೆಯ ನಡುವೆಯೂ ಅಹಿಂಸೆಯ ಮೀಸಲಾತಿ ಜಾರಿಯಲ್ಲಿರುವಂತೆ ನೋಡಿಕೊಳ್ಳಿ. ಅಸೂಯೆಯ ನಡುವೆಯೂ ಒಂದಷ್ಟು ಕರುಣೆಗೂ ಮೀಸಲಾತಿ ಒದಗಿಸಿ. ಗಲಭೆಗಳ ನಡುವೆಯೂ ಶಾಂತಿಗೆ ಸ್ವಲ್ಪ ಮೀಸಲಾತಿ ಕಲ್ಪಿಸಿ. ಆಡಂಬರದ ನಡುವೆಯೂ ಸರಳತೆಗೆ ಮೀಸಲಾತಿಯ ಅವಕಾಶ ನೀಡಿ. ಅಸಹನೆಯ ನಡುವೆಯೂ ಸಹನೆಯ ಮೀಸಲಾತಿಗೆ ಜಾಗ ನೀಡಿ. ಸೇಡಿನ ನಡುವೆಯೂ ಕ್ಷಮಾಗುಣಕ್ಕೆ ಸ್ವಲ್ಪ ಮೀಸಲಾತಿ ಕಲ್ಪಿಸಿ. ಸಂಪ್ರದಾಯಗಳ ನಡುವೆಯೂ ವೈಚಾರಿಕತೆಗೆ ಮೀಸಲಾತಿಯ ಅವಕಾಶ ಕೊಡಿ. ಶ್ರೀಮಂತಿಕೆಯ ನಡುವೆಯೂ ಬಡವರ ಪರ ಧ್ವನಿಯಾಗುವ ಮೀಸಲಾತಿಯ ಅವಕಾಶ ಸೃಷ್ಟಿ ಮಾಡಿ. ಹಣದ ನಡುವೆಯೂ ಮಾನವೀಯ ಮೌಲ್ಯಗಳ ಮೀಸಲಾತಿ ಸದಾ ಇರಲಿ.
ಕುಟುಂಬದ ನಡುವೆಯೂ ಸಮಾಜ ಸೇವೆಗಾಗಿ ಮೀಸಲಾತಿ ಕಲ್ಪಿಸಿ. ಬುದ್ದಿವಂತಿಕೆಯ ನಡುವೆಯೂ ಹೃದಯವಂತಿಕೆಗೆ ಮೀಸಲಾತಿ ಕಲ್ಪಿಸಿ. ವ್ಯಾಪಾರದ ನಡುವೆಯೂ ಸಂಬಂಧಗಳಿಗೆ ಮೀಸಲಾತಿ ಇರಲಿ. ಸುಳ್ಳುಗಳ ನಡುವೆಯೂ ನಿಜಕ್ಕೂ ಸ್ವಲ್ಪ ಮೀಸಲಾತಿ ಇರಲಿ. ಶ್ರೇಷ್ಠತೆಯ ನಡುವೆಯೂ ಸಮಾನತೆಗೆ ಮೀಸಲಾತಿ ಕಲ್ಪಿಸಿ. ಸಿನಿಮಾ ನಟರ ಫೋಟೋಗಳ ನಡುವೆಯೂ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ವಲ್ಪ ಮೀಸಲಾತಿ ನೀಡಿ. ರಾಜಕಾರಣಿಗಳ ನಡುವೆಯೂ ದಾರ್ಶನಿಕರಿಗೂ ಮೀಸಲಾತಿ ಕೊಡಿ. ಧಾರವಾಹಿಗಳ ನಡುವೆಯೂ ಪುಸ್ತಕಗಳಿಗೆ ಮೀಸಲಾತಿ ಕಲ್ಪಿಸಿ. ಮದ್ಯಪಾನದ ಅಂಗಡಿಗಳ ನಡುವೆಯೂ ಗ್ರಂಥಾಲಯಗಳಿಗೆ ಮೀಸಲಾತಿಯ ಅವಕಾಶ ನೀಡಿ. ದೇವರ ನಂಬಿಕೆಯ ನಡುವೆಯೂ ಮನುಷ್ಯರ ಮೇಲಿನ ನಂಬಿಕೆಗೂ ಸ್ವಲ್ಪ ಮೀಸಲಾತಿ ಇರಲಿ. ಕೇವಲ ಮಾತು - ತಿಳಿವಳಿಕೆಯ ನಡುವೆಯೂ ನಡವಳಿಕೆಗೆ ಸ್ವಲ್ಪ ಮೀಸಲಾತಿ ಕೊಡಿ. ಕೆಟ್ಟವರ ನಡುವೆಯೂ ಒಳ್ಳೆಯವರಿಗೆ ಸ್ವಲ್ಪ ಮೀಸಲಾತಿ ಕಲ್ಪಿಸಿ...
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ