ಮುಂದಿನ ವರ್ಷ ತ್ರಿಶೂರ್‍ ಪೂರಂ ನೋಡೋಕೆ ಮರೆಯೋಲ್ಲ ತಾನೆ !

ಮುಂದಿನ ವರ್ಷ ತ್ರಿಶೂರ್‍ ಪೂರಂ ನೋಡೋಕೆ ಮರೆಯೋಲ್ಲ ತಾನೆ !

ಬರಹ

ಇವತ್ತು ಮಧ್ಯಾಹ್ನ ನಂಗೊಂದು ಅಚ್ಚರಿ ಕಾದಿತ್ತು. ಸುದ್ದಿ ವಾಹಿನಿಯ ವರದಿಗಾರನಲ್ವೇ ! ಬೆಂಗಳೂರಿನ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ ಇತ್ತು ನೋಡಿ. ವರದಿ ಮಾಡೋದಕ್ಕೆ ಹೋಗಿದ್ದೆ. ಮಧ್ಯಾಹ್ನ ಒಂದು ಗಂಟೆ ಬುಲೆಟಿನ್‌ಗೆ ಸುದ್ದಿಕೊಡಬೇಕು ಅನ್ನೋ ದಾವಂತದಲ್ಲಿದ್ದೆ. ಕಚೇರಿಯಲ್ಲಿ ಹಿರಿಯ ಸಹೋದ್ಯೋಗಿ ಒಬ್ಬರು ಇನ್ನೊಬ್ಬ ಸಹೋದ್ಯೋಗಿಗೆ ಪೋರಂ ಅಲ್ಲ ಪೂರಂ ಅಂತ ತಿದ್ದಿಕೊಳ್ಳಿ ಅಂತ ಹೇಳೋದು ಕೇಳ್ಸಿತ್ತು. ಅಷ್ಟೇ ಸಾಕಾಯ್ತು. ನನ್ನ ಕಿವಿ ಚುರುಕಾಯ್ತು. ಸರ್‍ ಅದು ತ್ರಿಶೂರ್‍ ಪೂರಂ ಅಂದೆ. ಅಷ್ಟೇ ಸಾಕಾಯ್ತು. ಅವರಿಗೆ ಕೂಡಲೇ ಹೇಯ್‌ ನೀನೀಗ್ಲೇ ಲೈವ್ ಚಾಟ್‌ಗೆ ನಿಲ್‌ಬೇಕು ಅನ್ನೋದೆ !
ಇನ್ನು ಹತ್ತು ನಿಮಿಷ ಸಮಯ ಅವಕಾಶವಿದೆ. ನನ್‌ ಬಳಿ ಪೂರಂ ಉತ್ಸವದ ಮಾಹಿತಿ ಅಷ್ಟೊಂದಿಲ್ಲ ಸಾರ್‍ ಅಂದೆ.. ಕೇರಳದ ಏಷ್ಯಾನೆಟ್ ವರದಿಗಾರನಿಗೆ ಫೋನ್ ಮಾಡಿ ತಿಳ್ಕೊಳ್ಳಿ ಅಂದ್ರು. ಅಷ್ಟೇ ! ಒಂದು ಗಂಟೆ ಹತ್ತು ನಿಮಿಷಕ್ಕೆ ಶುರುವಾಗಿ ಬಿಟ್ಟಿತ್ತು. ತ್ರಿಶೂರ್‍ ಪೂರಂ ಉತ್ಸವದ ಬಗ್ಗೆ ನನ್ನ ವಿವರಣೆ.

ಅದೇನು ಅಂತ ನಿಮ್ಮ ಬಳಿ ಕೂಡಾ ಹಂಚಿಕೊಳ್ಳಬೇಕು ಅಂತ ಆಸೆಯಾಯ್ತು. ಅದಕ್ಕೆ ಬಹಳ ದಿನಗಳ ನಂತರ ಸಂಪದದಲ್ಲಿ ಲಾಗಿನ್‌ ಆಗಿದ್ದೇನೆ. ಓದಿ ಕಮೆಂಟ್ ಮಾಡದಿದ್ರೂ ಪರವಾಗಿಲ್ಲ. ಮುಂದಿನ ವರ್ಷ ಈ ಉತ್ಸವವನ್ನು ಕಣ್ಣಾರೆ ನೋಡೋದಕ್ಕೆ ಪ್ರಯತ್ನಿಸಿ. ಅಷ್ಟೇ ಸಾಕು ನಂಗೆ.
ಏನಿದು ತ್ರಿಶೂರ್‍ ಪೂರಂ ?
ಪಂಚವಾದ್ಯಗಳ ಅಬ್ಬರ.. ಅಲಂಕೃತ ಆನೆಗಳ ಸಾಲು. ಸಿಡಿಮದ್ದು ಸುಡುವ ಸ್ಪರ್ಧೆ. ಇವಿಷ್ಟೂ ನಡೆಯುವುದು ನಿರಂತರ ೩೬ ಗಂಟೆಗಳಲ್ಲಿ. ಅಂದರೆ ಇದೊಂದು ಮ್ಯಾರಥಾನ್ ಸ್ಪರ್ಧೆ. ಹೀಗೆ ಹೇಳುತ್ತಾ ಹೋದರೆ ನಿಮಗೆ ಅರ್ಥವಾಗಲಾರದು. ಇದು ಕೇರಳದ ತ್ರಿಶೂರ್ ಪೂರಂ ಎಂಬ ಉತ್ಸವದ ಹೈಲೈಟ್ಸ್.. ಕೇರಳದ ಪ್ರಸಿದ್ಧ ಹಬ್ಬವೆಂದೇ ಇದು ಖ್ಯಾತಿ ಪಡೆದಿದೆ. ಕೇರಳದ ತ್ರಿಶೂರ್ ಪಟ್ಟಣದ ವಡಕ್ಕನಾಥನ್ ದೇವಸ್ಥಾನದ ಆವರಣದಲ್ಲಿ ಈ ಉತ್ಸವ ನಡೆಯುತ್ತಿದೆ. ಬೆಳಗ್ಗೆ ೬ ಗಂಟೆಗೆ ಪ್ರಾರಂಭವಾದ ಈ ಉತ್ಸವ ನಾಳೆ ಮಧ್ಯಾಹ್ನ ೧೨ ಗಂಟೆಗೆ ಈ ಉತ್ಸವ ಅಂತ್ಯಗೊಳ್ಳಲಿದೆ. ಇತಿಹಾಸದ ಪುಟ ತಿರುಗಿಸಿದರೆ ಪೂರಂ ಉತ್ಸವದ ಐತಿಹ್ಯ ಅನಾವರಣಗೊಳ್ಳುತ್ತದೆ.
ಹೌದು... ಈ ಉತ್ಸವ ತ್ರಿಶೂರಿನ ಎರಡು ಪ್ರಮುಖ ದೇವಸ್ಥಾನಗಳಾದ ಪೆರುಮಕ್ಕಾವ್ ಮತ್ತು ತಿರುವಂಬಾಡಿ ದೇವಸ್ಥಾನಗಳ ಬಣಗಳ ನಡುವಿನ ಸ್ಪರ್ಧೆ. ಕೊಚ್ಚಿಯ ರಾಜ ಶಕ್ತನ್ ತಂಬುರಾನ್ ಈ ಉತ್ಸವ ಪ್ರಾರಂಭಿಸಿದ್ದಾಗಿ ಇತಿಹಾಸ ಹೇಳುತ್ತದೆ. ಮೇಷ ಮಾಸದ ಪ್ರಾರಂಭದಲ್ಲಿ ಈ ಉತ್ಸವ ನಡೆಯುತ್ತದೆ. ಎರಡೂ ದೇವಸ್ಥಾನಗಳೂ ಭಗವತಿ ಕ್ಷೇತ್ರಗಳು. ಇದರಲ್ಲಿ ತಿರುವಂಬಾಡಿ ಕ್ಷೇತ್ರದ ಜೊತೆಗೆ ಶ್ರೀಕೃಷ್ಣ ದೇವಸ್ಥಾನ ಕೂಡಾ ಇದೆ. ಈ ಎರಡೂ ಬಣಗಳ ದೇವರ ಮೆರವಣಿಗೆ ಅಂಬಾರಿ ಮೇಲೆ ವಡಕ್ಕನಾಥನ್ ಕ್ಷೇತ್ರದ ಆವರಣ ಅಂದರೆ ತೆಕ್ಕಿನಕ್ಕಾಡ್ ಮೈದಾನಕ್ಕೆ ಆಗಮಿಸಿದ ಬಳಿಕ ಪೂರಂ ಉತ್ಸವಕ್ಕೆ ಚಾಲನೆ ದೊರೆಯುತ್ತದೆ.
ಎರಡೂ ಗುಂಪುಗಳಲ್ಲಿ ತಲಾ ಹದಿನೈದು ಆನೆಗಳಿರುತ್ತವೆ. ಪ್ರಾರಂಭದಲ್ಲಿ ಪಂಚವಾದ್ಯಗಳನ್ನು ನುಡಿಸುವ ಸ್ಪರ್ಧೆ ಇರುತ್ತದೆ. ಸಾಮಾನ್ಯವಾಗಿ ಒಂದು ಬಣ ಚೆಂಡೆ ಮೂಲಕ ತಮ್ಮ ಸ್ಪರ್ಧೆ ಪ್ರಾರಂಭಿಸಿ, ಮೇಳದ ಮೂಲಕ ಅಂತ್ಯ ಹೇಳುತ್ತದೆ. ಇನ್ನೊಂದು ಬಣ ಮೇಳದ ಮೂಲಕ ಸ್ಪರ್ಧೆ ಆರಂಭಿಸಿ, ಚೆಂಡೆ ನುಡಿಸುವ ಮೂಲಕ ಅಂತ್ಯ ಹೇಳುತ್ತದೆ. ಕ್ಲೈಮಾಕ್ಸ್ ಅಂತ ಹೇಳೋದಾದ್ರೆ ಬೆಳಗಿನ ಜಾವ ೨.೩೦ರ ವೇಳೆಗೆ ಮೂವತ್ತು ಆನೆಗಳ ನಡುವಿನ ಸ್ಪರ್ಧೆ ಮತ್ತು ವೈವಿಧ್ಯಮಯ ಸಿಡಿಮದ್ದು ಸುಡುವ ಸ್ಪರ್ಧೆ ಜನರ ಕುತೂಹಲಕ್ಕೆ ಕಾರಣ. ಆಕರ್ಷಣೆಯ ಕೇಂದ್ರವೂ ಹೌದು. ಇದಲ್ಲದೇ ಎಂಟು ಸಣ್ಣ ಕ್ಷೇತ್ರಗಳ ಪೂರಂ ಉತ್ಸವ ಕೂಡಾ ಇದೇ ಸಂದರ್ಭದಲ್ಲಿ ನಡೆಯುತ್ತದೆ. ಇಲ್ಲಿ ಆನೆಗಳ ಸಂಖ್ಯೆ ಕಡಿಮೆ ಇರುತ್ತದೆ.
ಈ ಎಲ್ಲ ಆಕರ್ಷಣೆಯ ಕೊನೆಯ ಭಾಗ ಎಂದರೆ ಎರಡೂ ಬಣಗಳ ಆನೆಗಳನ್ನು ದೇವರ ಮುಂದೆ ನಿಲ್ಲಿಸಿ "ತುಂಬಿ ಕೈ"ಯ ಷೇಕ್ ಹ್ಯಾಂಡ್ ಮಾಡಿಸಿ ಸ್ಪರ್ಧೆ ಕೊನೆಗೊಳಿಸುವುದು. ಬಳಿಕ ಆಕರ್ಷಕ ಸಿಡಿಮದ್ದು ಪ್ರದರ್ಶನ ಇರುತ್ತದೆ. ಇದಾದ ಬಳಿಕ ಜ್ಯೋತಿಷಿಗಳ ಹತ್ತಿರ ಮುಂದಿನ ವರ್ಷದ ಪೂರಂ ಯಾವಾಗ ಎಂದು ಕೇಳಿ ತಿಳಿಯುತ್ತಾರೆ. ಬಹುಶಃ ಈ ಎಲ್ಲ ಧಾರ್ಮಿಕ ವಿಶೇಷತೆ ಹೊಂದಿರುವ ಕಾರಣವೇ ಇರಬೇಕು... ಕೇರಳವನ್ನು ದೈವತ್ತಿಂದೆ ಸ್ವಂತಂ ನಾಡ್ ಅಂದರೆ ದೇವರ ಸ್ವಂತ ಊರು ಅಂತ ಹೇಳೋದು..