ಮುಂಬರುವ ದಿನಗಳ ದಿಕ್ಸೂಚಿ

ಮುಂಬರುವ ದಿನಗಳ ದಿಕ್ಸೂಚಿ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ತಮ್ಮ ದುಡಿಮೆಯ ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ಶಾಲೆಯ ಸರ್ವತೋ ಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ.              (ಪ್ರ. ವಾ.21/12/2021)
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಜನರು ಸರ್ಕಾರಿ ಕಿರಿಯ ಶಾಲೆಗಳ ಅಭಿವೃದ್ಧಿಗಾಗಿ ಒಂದೇ  ದಿನ ಒಂದು ಕೋಟಿ ರೂಪಾಯಿ  ದೇಣಿಗೆ ಸಂಗ್ರಹಿಸಿದ್ದಾರೆ.
ಇಂತಹ ಸುದ್ದಿಗಳು ಇತ್ತೀಚೆಗೆ ಬರುತ್ತಿರುವುದನ್ನು ನೋಡಿ , ಇಂದಿನ ಯುವಕರ, ಜನ ಸಾಮಾನ್ಯರ, ಸಾಮಾಜಿಕ ಕಳಕಳಿಯ ಬಗ್ಗೆ ಹೆಮ್ಮೆ ಎನಿಸಿದರೂ, ಇದೆಲ್ಲದರ ಜವಾಬ್ದಾರಿ ಹೊರಬೇಕಾದ ಸರ್ಕಾರಗಳ ದಿವ್ಯ ನಿರ್ಲಕ್ಷತೆಗೆ ಮರುಕವುಂಟಾಗುತ್ತದೆ.
ಇದೇ ರೀತಿ ಗ್ರಾಮಾಂತರ ಪ್ರದೇಶಗಳಲ್ಲಿ ಯುವಕರು ತಮ್ಮದೇ ಸಂಪನ್ಮೂಲ ಕ್ರೋಢಿಕರಿಸಿ, ಕೆರೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ, ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿಕೊಂಡರೆ, ಸರ್ಕಾರಕ್ಕೇನು ಕೆಲಸ. ಶಾಸಕರ ಅಭಿವೃದ್ಧಿ ನಿಧಿ, ಸಂಸದರ ಅಭಿವೃದ್ಧಿ ನಿಧಿ , ಇಂತಹ ನಿಧಿಗಳು ಅವರವರ ಕ್ಷೇತ್ರಗಳ ಅಭಿವೃದ್ಧಿಗಾಗಿ ಇವೆಯೋ ಅಥವಾ ಅವರ ಸ್ವಂತ ಅಭಿವೃದ್ದಿಗಾಗಿ ಇವೆಯೋ, ಎನ್ನುವ ಅನುಮಾನ ಮೂಡಿಸುತ್ತದೆ. ಕೋಟ್ಯಂತರ ರೂಪಾಯಿ ತೆರಿಗೆ ಹಣ ಸಂಗ್ರಹಿಸಿ 10% , 40% ಕಮಿಷನ್ ಗಾಗಿ ಅಭಿವೃದ್ಧಿ ಹೆಸರಿನಲ್ಲಿ ಖರ್ಚು ಮಾಡಿ, ತಮ್ಮ ಅಭಿವೃದ್ಧಿ ಮಾಡಿ ಕೊಳ್ಳುತ್ತಿದ್ದಾರೆ. ಇನ್ನೊಂದು ಆತಂಕದ ಸುದ್ದಿ, ಒಂದು ತಿಂಗಳ ಹಿಂದೆ ಅಭಿವೃದ್ಧಿ ಪಡಿಸಿದ ಸುಂದರವಾದ ಪಾದಚಾರಿ ಮಾರ್ಗವನ್ನು, ಒಳಚರಂಡಿ ಇಲಾಖೆಯವರು ಕಿತ್ತು ಹಾಕಿರುವುದು, ಮತ್ತೆ ಅದನ್ನು ಸರಿಪಡಿಸಲು ಮತ್ತೆ ಖರ್ಚು ಮಾಡುವುದು. ಅಭಿವೃದ್ಧಿ ಮಾಡಿದ ಜಾಗಗಳಲ್ಲೇ ಪದೇ ಪದೇ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ಮಾಡಿ ಖರ್ಚು ತೋರಿಸುವುದು, ಹಾಕಿದ ಯೋಜನೆಗಳನ್ನು ನಿಯಮಿತ ಸಮಯದಲ್ಲಿ ಮುಗಿಸದಿರುವುದು, ಅವುಗಳನ್ನು ಮುಗಿಸಲು ಮತ್ತೆ ಸಾವಿರಾರು ಕೋಟಿ ಖರ್ಚು ತೋರಿಸಿ , ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳನ್ನು ಯಾವ ಚರ್ಚೆ ಇಲ್ಲದೆ ಒಪ್ಪಿಗೆ ಕೊಟ್ಟು, ಮುಂದಿನ ಚುನಾವಣೆಗೆ ಹಣ ಒಟ್ಟು ಮಾಡುವ ರಾಜಕಾರಣಿಗಳ ಪ್ರವೃತ್ತಿ ಖಂಡನೀಯ. 
ಇಂತಹ ಸುದ್ದಿಗಳು,ಮುಂಬರುವ ದಿನಗಳಲ್ಲಿ ಸಾರ್ವಜನಿಕರು, ಮತದಾರರು, ತಮ್ಮ ಪವಿತ್ರವಾದ ಮತವನ್ನು ವಿಧಿ ಇಲ್ಲದೆ ಚಲಾವಣೆ ಮಾಡಿ, ತಪ್ಪದೆ ತೆರಿಗೆಯನ್ನು ಪಾವತಿಸಿ, ತಮ್ಮ ಕರ್ತವ್ಯವನ್ನು ಮೆರೆದು, ಸರ್ಕಾರದಿಂದ ಏನನ್ನೂ ನಿರೀಕ್ಷಿಸದೆ,  ನಂತರ ತಮ್ಮ ಉಳಿದ ಹಣ ದಲ್ಲಿ ದೇಣಿಗೆ ಸಂಗ್ರಹಿಸಿ, ತಮಗೆ ಬೇಕಾದ ಅಭಿವೃದ್ಧಿ ಮಾಡಿಕೊಳ್ಳ ಬೇಕಾದ ಪರಿಸ್ಥಿತಿಯ ದಿಕ್ಸೂಚಿಯೇ.?