ಮುಂಬೈಯಲ್ಲಿ ಬೆಂಕಿ ಹಕ್ಕಿ - ಫ್ಲೆಮಿಂಗೋ ಬದುಕು

ಮುಂಬೈಯಲ್ಲಿ ಬೆಂಕಿ ಹಕ್ಕಿ - ಫ್ಲೆಮಿಂಗೋ ಬದುಕು

"ಗುಲಾಬಿ ರಂಗ್ ಕಾ ಹೈ ಅಗ್ನಿಪಂಖ್, ದೇಖ್ ಉಸೆ ಸಬ್ ರಹ್ ಜಾಯೇಗೆ ದಂಗ್”
(ಬೆಂಕಿ ಹಕ್ಕಿಯ ಗುಲಾಬಿ ರಂಗು, ಅದನ್ನು ನೋಡುತ್ತ ಎಲ್ಲರೂ ದಂಗು)
-ಮುಂಬಯಿಯ ಪಕ್ಷಿ ವೀಕ್ಷಕ ಸೂರಜ್ ಬಿಷ್ಣೋಯಿ, ೧೩ನೇ ವಯಸ್ಸಿನಲ್ಲೊಮ್ಮೆ, ಮುಂಬಯಿಯ “ವಾರ್ಷಿಕ ಅತಿಥಿ”ಗಳಾದ ಫ್ಲೆಮಿಂಗೋಗಳನ್ನು ಪ್ರಾಸಬದ್ಧವಾಗಿ ಬಣ್ಣಿಸಿದ ಪರಿ ಇದು.

"ನಾನು ಬಾಲಕನಾಗಿದ್ದಾಗ, ಮುಂಬಯಿ ಸಮುದ್ರ ತೀರದಲ್ಲಿ ಫ್ಲೆಮಿಂಗೋಗಳನ್ನು ನೋಡಲು ಹೋಗಿದ್ದೆ. ಆಗ ನನಗೆ ಕಾಣಿಸಿದ್ದು ಮೈಲುಮೈಲುದ್ದದ ಗುಲಾಬಿ ಬಣ್ಣದ ರತ್ನಗಂಬಳಿ ಮಾತ್ರ; ಅದರ ಹೊರತಾಗಿ ಬೇರೇನೂ ಕಾಣಿಸಲಿಲ್ಲ. ನಾನು ನೋಡುತ್ತಿದ್ದಂತೆಯೇ ಆ ರತ್ನಗಂಬಳಿ ಮೇಲಕ್ಕೆದ್ದು ಗಾಳಿಯಲ್ಲಿ ಹಾರಾಡಿತು. ಅಗ್ನಿರೆಕ್ಕೆಯ ಪಕ್ಷಿಗಳ ಆ ಮೊಟ್ಟಮೊದಲ ನೋಟ ನಾನು ಮರೆಯುವಂತಿಲ್ಲ. ನನ್ನ ಮಟ್ಟಿಗೆ ಅದು ಫ್ಲೆಮಿಂಗೋ ಮ್ಯಾಜಿಕ್ ರತ್ನಗಂಬಳಿ” ಎಂದು ಸೂರಜ್ ಬಿಷ್ಣೋಯಿ ನೆನಪು ಮಾಡಿಕೊಳ್ಳುತ್ತಾರೆ.

ಚಳಿಗಾಲ ಶುರುವಾಗುತ್ತಿದ್ದಂತೆಯೇ ಮುಂಬಯಿಯ ದಿಗಂತದಲ್ಲಿ ಗುಲಾಬಿ ರಂಗು ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ಸಾವಿರಸಾವಿರ ಫ್ಲೆಮಿಂಗೋಗಳು ಹಾರುತ್ತಾ ಬಂದು ಸೆವ್‌ರಿ ಪ್ರದೇಶದ ಕೆಸರುಜಾಗದಲ್ಲಿ ಬಂದಿಳಿಯುತ್ತವೆ. ಆ ಜೌಗು ಮತ್ತು ಕಲುಷಿತ ಪ್ರದೇಶದಲ್ಲಿ ಮಗುವೊಂದು ಕಾಟನ್ ಕ್ಯಾಂಡಿಯ ಸಾವಿರಾರು ಚೂರುಗಳನ್ನು ಗಾಳಿಯಲ್ಲಿ ತೇಲಿಬಿಟ್ಟಂತೆ ಕಾಣಿಸುತ್ತದೆ. ಈ ಫ್ಲೆಮಿಂಗೋ ಪಕ್ಷಿಗಳು ಗುಜರಾತಿನ ಕಚ್ ಪ್ರದೇಶದಿಂದ ಮುಂಬೈಗೆ ಬರುತ್ತವೆ ಎನ್ನಲಾಗಿದೆ; ತಿಂಗಳುಗಳ ನಂತರ, ಮುಂಬೈಗೆ ಮುಂಗಾರು ಮಳೆ ಅಪ್ಪಳಿಸುವ ಮುನ್ನ, ಅವು ಅಲ್ಲಿಗೇ ಮರಳಿ ಹಾರಿ ಹೋಗುತ್ತವೆ.

ಎರಡು ದಶಕಗಳಿಂದೀಚೆಗೆ, ಛಾಯಾಚಿತ್ರಗ್ರಾಹಕರು, ಪತ್ರಿಕಾ ಮತ್ತು ಟಿವಿ ವರದಿಗಾರರು, ಪಕ್ಷಿವೀಕ್ಷಕರು, ವನ್ಯಜೀವಿ ರಕ್ಷಕರು ಹಾಗೂ ವಿದ್ಯಾರ್ಥಿಗಳು ಸೆವ್‌ರಿ ಕೊಲ್ಲಿಗೆ ದಾಂಗುಡಿ ಇಡುತ್ತಿದ್ದಾರೆ - ಫ್ಲೆಮಿಂಗೋಗಳನ್ನು ಕಾಣಲು ಮತ್ತು ಫೋಟೊ ತೆಗೆಯಲಿಕ್ಕಾಗಿ. ಫ್ಲೆಮಿಂಗೋಗಳ ಜೊತೆಗೆ, ಇಂಡಿಯನ್ ಪಾಂಡ್ ಹೆರೊನ್, ಈಗ್ರೆಟ್, ಕಪ್ಪುಬಾಲದ ಗೊಡ್‌ವಿಟ್, ಸಮುದ್ರ ಹಕ್ಕಿಗಳು, ಗಿಡುಗಗಳು ಮತ್ತು ಬೆಳ್ಳಕ್ಕಿಗಳನ್ನೂ ಅಲ್ಲಿ ಕಾಣಬಹುದು. ಜ್ವಾಲೆ ಎಂಬರ್ಥದ "ಫ್ಲಮ್ಮಾ" ಎಂಬ ಶಬ್ದದಿಂದ ಫ್ಲೆಮಿಂಗೋ ಎಂಬ ಹೆಸರು ಮೂಡಿಬಂದಿದೆ; ಬೆಂಕಿ ಹಕ್ಕಿ ಎಂಬ ಇವುಗಳ ಇನ್ನೊಂದು ಹೆಸರಿಗೂ ಇದುವೇ ಮೂಲ.

ಹಲವು ವೀಕ್ಷಕರಿಗೆ “ಅದೇಕೆ, ಎರಡು ಬಣ್ಣದ ಫ್ಲೆಮಿಂಗೋಗಳಿವೆ?" ಎಂಬ ಗೊಂದಲ. ಕೆಲವು ಗುಲಾಬಿ ಬಣ್ಣದವು, ಇನ್ನು ಕೆಲವು ಬೂದು ಮಿಶ್ರಿತ ಬಿಳಿ ಬಣ್ಣದವು. ಯಾಕೆಂದರೆ, ಹುಟ್ಟುವಾಗ ಫ್ಲೆಮಿಂಗೋಗಳ ಬಣ್ಣ ಬೂದು ಮಿಶ್ರಿತ ಬಿಳಿ; ಎರಡು ವರುಷಗಳ ನಂತರ ಅವುಗಳ ರೆಕ್ಕೆಗಳ ಬಣ್ಣ ಗುಲಾಬಿಯಾಗಿ ಬದಲಾಗುತ್ತದೆ. ಇದಕ್ಕೆ ಕಾರಣ ಕಾರೊಟಿನೋಯ್ಡುಗಳು ಸಮೃದ್ಧವಾಗಿರುವ ಅವುಗಳ ಆಹಾರ: ನೀಲಿ-ಹಸುರು ಮತ್ತು ಕೆಂಪು ಪಾಚಿ, ಸಣ್ಣ ಕೀಟಗಳು, ಮೃದ್ವಂಗಿಗಳು, ಚಿಪ್ಪು ಪ್ರಾಣಿಗಳು ಮತ್ತು ಸಣ್ಣ ಮೀನುಗಳು. ಗೂಡುಗಳಲ್ಲಿ ಫ್ಲೆಮಿಂಗೋಗಳನ್ನು ಸಾಕಿದಾಗ, ಅವುಗಳ ಬಣ್ಣ ಮಸುಕಾಗುತ್ತದೆ (ಅವುಗಳಿಗೆ ಸೂಕ್ತ ಆಹಾರ ನೀಡದಿದ್ದರೆ.)

ಒಂದು ಕಾಲಿನಲ್ಲಿ ನಿಂತಿರುವ ಫ್ಲೆಮಿಂಗೋಗಳೇ ಕಾಣಸಿಗುವುದು ಸಾಮಾನ್ಯ. ಈ ಭಂಗಿಯಲ್ಲಿ ಅವು ವಿಶ್ರಾಂತಿ ಪಡೆಯುತ್ತವೆ. ಫ್ಲೆಮಿಂಗೋಗಳು ಕುಳಿತುಕೊಳ್ಳುತ್ತವೆ - ಎರಡೂ ಕಾಲುಗಳನ್ನು ಮಡಚಿ, ಹೊಟ್ಟೆಯಡಿಯಲ್ಲಿ ಇರಿಸಿಕೊಂಡು. ಇವೆರಡನ್ನೂ ಮಾಡದಿರುವ ಹೊತ್ತಿನಲ್ಲಿ ಅವು ತಮ್ಮ ಕೊಕ್ಕಿನಿಂದ ರೆಕ್ಕೆಗಳನ್ನು ಒಪ್ಪಓರಣ ಮಾಡುತ್ತಿರುತ್ತವೆ. ಪ್ರತಿ ದಿನ ಹಗಲಿನಲ್ಲಿ ಶೇಕಡಾ ೧೫-೨೦ರಷ್ಟು ಸಮಯವನ್ನು ಅವು ಈ ಕೆಲಸದಲ್ಲಿಯೇ ಕಳೆಯುತ್ತವೆ. ಆಹಾರ ಹುಡುಕುವಾಗ ಅವು ರಂಪ ಮಾಡುತ್ತವೆ. ಅಂದರೆ, ತಮ್ಮ ಉದ್ದ ಕಾಲುಗಳಿಂದ ಕೆಸರಿಗೆ ಒದೆಯುತ್ತವೆ. ಆಗ ತಳದ ಕಸವೆಲ್ಲ ಮೇಲೆದ್ದು ಕೆಸರು ರಾಡಿಯಾಗುತ್ತದೆ. ಆ ರಾಡಿ ನೀರನ್ನು ಕೊಕ್ಕಿನಲ್ಲಿ ಹೀರಿಕೊಂಡು, ನಂತರ ಅದನ್ನು ಉಗುಳಿ, ಅದರಲ್ಲಿರುವ ಕೀಟಗಳನ್ನು ತಿನ್ನುತ್ತವೆ.  

ಫೋಟೋಗ್ರಾಫರ್ ಅಶಿಮಾ ನಾರಾಯಣ್ ಫ್ಲೆಮಿಂಗೋಗಳ ಬಗ್ಗೆ “ಇನ್ ದ ಪಿಂಕ್” ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಾರೆ. ಮುಂಬೈಗೆ ಫ್ಲೆಮಿಂಗೋಗಳ ಆಗಮನ ಮತ್ತು ಅಲ್ಲಿ ಅವುಗಳ ಬದುಕು ಈ ಚಿತ್ರದ ಹೂರಣ. ಒಂದು ಕೋಟಿಗಿಂತ ಅಧಿಕ ಜನರು ವಾಸವಾಗಿರುವ ಮಹಾನಗರವೊಂದರಲ್ಲಿ ಬದುಕುವ ವನ್ಯಜೀವಿಗಳ ಬಗೆಗಿನ ಮೊದಲ ಸಾಕ್ಷ್ಯಚಿತ್ರ ಎಂಬುದು ಇದರ ಹೆಗ್ಗಳಿಕೆ. "ಫ್ಲೆಮಿಂಗೋಗಳನ್ನು ನೋಡಬೇಕೆಂದರೆ ಸಾವಿರಾರು ಮೈಲು ದೂರ ಪ್ರಯಾಣಿಸಬೇಕು. ಹಾಗಿರುವಾಗ ಮುಂಬೈ ನಿವಾಸಿಗಳಿಗೆ ಅವರ ಮಹಾನಗರದಲ್ಲೇ ಫ್ಲೆಮಿಂಗೋಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ. ಆದರೆ ಎಷ್ಟು ಜನರಿಗೆ ಈ ಅಮೂಲ್ಯ ಪ್ರಾಕೃತಿಕ ಸಂಪತ್ತಿನ ಬಗ್ಗೆ ಅರಿವಿದೆ? ಮುಂಬೈಯಲ್ಲಿ ಫ್ಲೆಮಿಂಗೋಗಳ ಬದುಕು ರೋಚಕ” ಎನ್ನುತ್ತಾರೆ ಅಶಿಮಾ ನಾರಾಯಣ್.

“ಎಂತಹ ವಿಪರ್ಯಾಸ! ಸೆವ್‌ರಿ ಪ್ರದೇಶದಲ್ಲಿ ಗುಲಾಬಿ ಬಣ್ಣದ ಸಾವಿರಾರು ಫ್ಲೆಮಿಂಗೋಗಳ ಅದ್ಭುತ ಮೇಳ. ಆದರೆ ಆ ಪ್ರದೇಶ ಮಹಾ ಕೊಳಚೆ ಪ್ರದೇಶ. ಅಲ್ಲಿವೆ ವಿದ್ಯುತ್ ಉತ್ಪಾದನಾ ಘಟಕ, ಪೆಟ್ರೋ ಕೆಮಿಕಲ್ ಕೈಗಾರಿಕೆಗಳು ಮತ್ತು ರಾಸಾಯನಿಕ ಗೊಬ್ಬರ ಕಾರ್ಖಾನೆ. ಜಗತ್ತಿನ ಬೇರೆ ಎಲ್ಲಿಯೇ ಆದರೂ ಇಂತಹ ಕಲುಷಿತ ಪ್ರದೇಶದಲ್ಲಿ ಸಾವಿರಾರು ಹಕ್ಕಿಗಳು ಬದುಕುವ ವಿದ್ಯಮಾನ ಘಟಿಸುತ್ತಿದ್ದರೆ, ಆ ಪ್ರದೇಶ ಪ್ರಸಿದ್ಧ ಪ್ರವಾಸಿ ಕೇಂದ್ರವಾಗುತ್ತಿತ್ತು” ಎನ್ನುತ್ತಾರೆ ಅವರು.

ಇಲ್ಲಿ ಫ್ಲೆಮಿಂಗೋಗಳು ಎದುರಿಸುವ ವಿಪತ್ತುಗಳು ಹತ್ತುಹಲವು. ಈ ಮಹಾ ಕಾರ್ಖಾನೆಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯ, ಅಲ್ಲಿನ ನೀರಿನಲ್ಲಿರುವ ವಿಷದ ಅಂಶಗಳು, ಹಕ್ಕಿಗಳನ್ನು ಕೊಲ್ಲುವವರಿಂದ ಅಪಾಯ ಇತ್ಯಾದಿ. ಆದ್ದರಿಂದಲೇ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡುಗಳನ್ನು ಕಳಿಸುವ ಅಭಿಯಾನ ಆರಂಭಿಸಿದರು ಸೂರಜ್. “ಮುಂಬೈಯ ಸೆವ್‌ರಿಯಲ್ಲಿರುವ ಫ್ಲೆಮಿಂಗೋಗಳ ನೆಲೆಯನ್ನು ಉಳಿಸಿ. ಆ ಪ್ರದೇಶವನ್ನು “ಫ್ಲೇಮಿಂಗೋ ಬೇ” ಎಂದು ಹೆಸರಿಸಿ. ಅದು ಜಗತ್ ಪ್ರಸಿದ್ಧ ಪ್ರವಾಸಿ ತಾಣವಾಗುವಂತೆ ಮಾಡಿ" ಎಂದು ಅವರು ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡ್ ರವಾನಿಸಿದರು. ಸಾವಿರಾರು ಜನರು ಅದೇ ವಿನಂತಿ ಸಹಿತ ಮುಖ್ಯಮಂತ್ರಿಗಳಿಗೆ ಅಂಚೆ ಕಾರ್ಡ್ ಬರೆದದ್ದು ದೊಡ್ದ ಸುದ್ದಿಯಾಯಿತು.

ಈ ಎಲ್ಲ ವಿದ್ಯಮಾನಗಳ ಬಗ್ಗೆ “ಸ್ಯಾಂಕ್ಚುವರಿ ಏಷ್ಯಾ" ಪತ್ರಿಕೆಯ ಸಂಪಾದಕರಾದ ಬಿಟ್ಟು ಸಾಹ್‌ಗಲ್ ಹೀಗೆನ್ನುತ್ತಾರೆ; "ಸುಮಾರು ೨೫,೦೦೦ ಫ್ಲೆಮಿಂಗೋಗಳು ಇಲ್ಲಿ ಬದುಕುವುದು ಮುಂಬೈಯ ಅದೃಷ್ಠ. ಇದು ಮಹಾನಗರದ ಪ್ರಮುಖ ವಿದ್ಯಮಾನ ಎಂದು ಗುರುತಿಸಬೇಕಾಗಿದೆ. ಈ ಸಂಗತಿ, ಫ್ಲೆಮಿಂಗೋಗಳನ್ನು ನೋಡಲಿಕ್ಕಾಗಿ ನಾವು ಕರೆದೊಯ್ಯುವ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ. ಆದರೆ ಸರಕಾರಿ ಅಧಿಕಾರಿಗಳಿಗೆ ಅರ್ಥವಾಗುವುದೇ ಇಲ್ಲ. ಫ್ಲೆಮಿಂಗೋಗಳು, ಮ್ಯಾಂಗ್ರೂವ್‌ಗಳು ಮತ್ತು ರಾಷ್ಟ್ರೀಯ ಉದ್ಯಾನವನ - ಇವು ಮುಂಬೈಯನ್ನು ಜಗತ್ ಪ್ರಸಿದ್ಧ ನಗರವನ್ನಾಗಿ ಮಾಡಿವೆ."

ಮುಂಬೈ ಮಹಾನಗರವು ಇನ್ನು ಮುಂದೆಯೂ ಬೆಂಕಿ ಹಕ್ಕಿ ಫ್ಲೆಮಿಂಗೋಗಳ ಅಚ್ಚುಮೆಚ್ಚಿನ ಮಹಾನಗರವಾಗಿ ಮುಂದುವರಿಯಲಿ ಎಂದು ಹಾರೈಸೋಣ.

ಫೋಟೋ ೧ ಮತ್ತು ಎರಡು: ಫ್ಲೆಮಿಂಗೋ ಹಕ್ಕಿಗಳು; ರೆಕ್ಕೆಗಳ “ಬೆಂಕಿ ಬಣ್ಣ" ಗಮನಿಸಿ.
ಫೋಟೋ ೨: ಫ್ಲೆಮಿಂಗೋ ಹಕ್ಕಿಗಳ ಹಿಂಡು ..... ಕೃಪೆ: ಫ್ರೀಇಮೇಜಸ್.ಕೋಮ್