ಮುಗ್ಧತೆಯ ಮೋಡಿ

ಮುಗ್ಧತೆಯ ಮೋಡಿ

ಬರಹ

ಅಜ್ಜಿಯವರ ಹಠಾತ್ ನಿಧನದ ವಾರ್ತೆ ಕೇಳಿ ಕೂಡಲೇ ಭಾರತಕ್ಕೆ ಬಂದೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ನನ್ನ ಪ್ರಥಮ landing. ಹೊಚ್ಚ ಹೊಸ ನಿಲ್ದಾಣ. ಆದರೆ ಆಗಲೇ ನಿರ್ವಹಣೆಯ ಬೇಜವಾಬ್ದಾರಿಯೋ ಏನೋ ಸೀಲಿಂಗ್ ನ ಲೈಟ್ ಫಿಟ್ಟಿಂಗ್ ಮೇಲೆ ಒಂದಿಂಚು ಧೂಳು ತುಂಬಿಕೊಂಡಿತ್ತು. ಸಾವಿರಾರು ಕೋಟಿ ಖರ್ಚು ಒಂದು ಒಳ್ಳೆ ವಿಮಾನ ನಿಲ್ದಾಣದ ನಿರ್ಮಾಣಕ್ಕೆ. ಆ ಹಣ ಪ್ರಜೆಗಳದು. ಈ ರೀತಿಯ ನಿರ್ಲಕ್ಷ್ಯದಿಂದ ಕೆಲವೇ ವರ್ಷಗಳಲ್ಲಿ ಕಟ್ಟಡ ಶಿಥಿಲಗೊಳ್ಳಲು ಶುರುವಾಗುತ್ತದೆ. ಅಂದರೆ ಈ ಸಾರ್ವಜನಿಕ ಹಣ ಈ ರೀತಿ ಪೋಲಾದರೆ ಅದಕ್ಕೆ ಒಂದು ವ್ಯವಸ್ಥೆ ಬೇಡವೇ ಪ್ರಶ್ನಿಸಲು? ಖರ್ಚು ಮಾಡುವವರೂ, ನಿರ್ವಹಿಸುವವರೂ ಒಬ್ಬರೇ ಆದಾಗ ಈ ಸಮಸ್ಯೆ ತಲೆದೋರುತ್ತದೋ ಏನೋ? ವಲಸೆ ವಿಭಾಗದಲ್ಲಿ ತನ್ನ ಪಾಡಿಗೆ ತಾನು ಪ್ರಯಾಣಿಕರ ಪಾಸ್ಪೋರ್ಟ್ಗಳನ್ನು ಎಂಟರ್ ಮಾಡುತ್ತಿದ್ದ ಸಿಬ್ಬಂದಿಯ ಹತ್ತಿರ ಅಧಿಕಾರಿ ಥರ ಕಾಣುತ್ತಿದ್ದ ವ್ಯಕ್ತಿ ಹೋಗಿ " ಹೀಗೆ ಸುಮ್ಮನೆ ಮಾತಾಡದೆ ಎಂಟರ್ ಮಾಡಬಾರದು, ಏನಾದರೂ ಪ್ರಶ್ನೆ ಕೇಳಬೇಕು" ಎಂದು ತನ್ನ ಬ್ರಿಟಿಷ್ ಕಾಲದ ಯಜಮಾನಿಕೆಯ ಪ್ರದರ್ಶನ ಮಾಡುತ್ತಿದ್ದ. ನಿಲ್ದಾಣದಿಂದ ಹೊರ ಬಂದ ನಾನು ನನ್ನನ್ನು ಬರ ಮಾಡಿಕೊಳ್ಳಲು ಬರುವ ತಮ್ಮನಿಗಾಗಿ ಕಾಯುತ್ತಾ ಅಲ್ಲೇ ಇದ್ದ ಸಾಲು ಖುರ್ಚಿಗಳತ್ತ ನಡೆದು ಕುಳಿತಾಗ ಪಕ್ಕದಲ್ಲಿ ೬೫- ೭೦ ಸುಮಾರಿನ ಗೌಡರು ಕುಳಿತಿದ್ದರು. ನಮಸ್ಕಾರ ಯಜಮಾನರಿಗೆ ಎಂದ ಕೂಡಲೇ ತಬ್ಬಿಬ್ಬಾದ ಅವರು ಇದ್ಯಾರು ಅಪರಿಚಿತ ವ್ಯಕ್ತಿ ಎಂದು ನನ್ನೆಡೆ ನೋಡಿ, ನಂಸ್ಕಾರ ಕೂತ್ಕೋ ಅಪ್ಪ ಎಂದು ಸ್ವಾಗತಿಸಿದರು. ಶುಭ್ರ ಬಿಳಿ ಪಂಚೆ, ಅಂಗಿ, ತಲೆಗೆ ಮುಂಡಾಸು ಧರಿಸಿದ್ದ ಅವರನ್ನು ಕೇಳಿದೆ ಯಾರನ್ನು ಬರಮಾಡಿಕೊಳ್ಳಲು ಬಂದಿರಿ ಎಂದು. ಅವರು, ಅಯ್ಯೋ, ಇಲ್ಲ ಕಣಪ್ಪ, ಏನೋ ಒಸ ವಿಮಾನ ನಿಲ್ದಾಣ ಕಟ್ಟವ್ರಂತ ಕೇಳ್ದೆ, ನೋಡ್ಕೊಂಡ್ ಓಗಣ ಅಂತ ಬಂದೆ ಎಂದರು.

ಆಗ ತಾನೇ ತಿರುಪತಿಯಿಂದ ಮಗ ಅಳಿಯಂದಿರ ಒಟ್ಟಿಗೆ ಮರಳಿ ಬಂದಿದ್ದ ಗೌಡರಿಗೆ ನಮ್ಮ ಹೊಸ development ನೋಡುವಾಸೆ. ನೋಡಪ್ಪ ಎಂಗೈತೆ ಕಟ್ಟಡ, ಎಲ್ನೋಡಿದ್ರೂ ಗಾಜೆ ಎಂದು ಅಚ್ಚರಿ ಪಟ್ಟರು. ನೋಡಪ್ಪ, ನೀನು ಯಾರೋ ಏನೋ ನಾ ಕಾಣೆ, ಆದರೆ ನೀನಾಗೇ ಬಂದು ನಮಸ್ಕಾರ ಹೇಳ್ದೆ, ಅಷ್ಟು ಸಾಕು ಎಂದು ನನ್ನತ್ತ ನೋಡಿ ಹೇಳಿದಾಗ ಈ ಹಿರಿಯ ವ್ಯಕ್ತಿಯ ಸೀದಾ ಸಾದಾ ನಡವಳಿಕೆ, ಅವರ ಶುಭ್ರ ಮಂಜಿನಂಥ ವಸ್ತ್ರದಷ್ಟೇ ಸ್ವಚ್ಛ ಮನಸ್ಸು ಕಂಡು ಸಂತಸ ಪಟ್ಟೆ. ಸ್ವಲ್ಪ ದೂರದಲ್ಲಿ ಒಬ್ಬ ತರುಣ ಮತ್ತು ತರುಣಿ ( ಅಣ್ಣ ತಂಗಿಯೋ, ಯಾರೋ ಇರಬೇಕು ) hug ಮಾಡುವುದನ್ನು ನೋಡಿ, ಅಯ್ಯೋ ಇದೇನು, ನಮ್ ಕಾಲ್ದಲ್ ಇದಿರ್ಲಿಲ್ಲ ಬಿಡು ಎಂದು ಮುಗ್ಧತೆಯಿಂದ ನಾಚಿದರು ಗೌಡರು. ಇನ್ನೂ ಪೇಟೆ ಜೀವನ ಪೂರ್ತಿ ಕಾಣದಿದ್ದ ಗೌಡರಿಗೆ ಬರೀ ಒಂದು "simple hug" atrocious ಆಗಿ ಕಂಡಿದ್ದು ನೋಡಿ ಮನದಲ್ಲೇ ನಕ್ಕೆ. ನಮ್ಮದು ತೋರಿಕೆಯ ಬದುಕು ಸ್ವಾಮೀ, ಎಲ್ಲಾ ಥಳಕು ಬೆಳಕು, ವಿಮಾನದಲ್ಲಿ ಹಾರಿದ ಮಾತ್ರಕ್ಕೆ ಇಂಗ್ಲಿಷ್ ಭಾಷೆಯಲ್ಲೇ ಉಲಿಯಬೇಕು, hug ಮಾಡ್ಬೇಕು, ಹೊಸದಾಗಿ ಬಂದ ಸಂಪತ್ತನ್ನು ಎಲ್ಲರಿಗೂ ಕಾಣುವಂತೆ ತೋರಿಸಿ ಬಿಂಕದಿಂದ ನಡೆಯಬೇಕು, ಅದನ್ನೇ ಈ modern ಬದುಕು ಕಲಿಸುತ್ತಿರುವುದು ಎಂದು ಹೇಳೋಣ ಅನ್ನಿಸಿದರೂ ಹೇಳದೆ ಸುಮ್ಮನಾದೆ. ಇಷ್ಟೆಲ್ಲಾ ಮಾತನಾಡಿದರೂ ನನ್ನ ಹೆಸರನ್ನೂ, ಧರ್ಮವನ್ನೂ, ಜಾತಿ ಉಪಜಾತಿಯನ್ನೋ ಕೇಳದ ಗೌಡರ ಹೃದಯವೈಶಾಲ್ಯತೆಗೆ ಮನದಲ್ಲೇ ವಂದಿಸಿ ಅವರಿಂದ ಬೀಳ್ಕೊಂಡು ಆಗಮಿಸಿದ ತಮ್ಮನೊಂದಿಗೆ ದೇವನಹಳ್ಳಿಯ ಬೆಳಗ್ಗಿನ ತಂಪಾದ ಹವೆಯನ್ನು ಸವಿಯುತ್ತ ಊರಿನ ದಾರಿ ಹಿಡಿದೆ.