ಮುಟ್ಟು ಮತ್ತು ಆರೋಗ್ಯ

ಮುಟ್ಟು ಮತ್ತು ಆರೋಗ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಜ್ಯೋತಿ ಇ.ಹಿಟ್ನಾಳ್
ಪ್ರಕಾಶಕರು
ಅಂಗಳ ಪ್ರಕಾಶನ, ಕೊಪ್ಪಳ
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ : ೨೦೨೨

ಜ್ಯೋತಿ ಇ.ಹಿಟ್ನಾಳ್ ಇವರು ಬರೆದ ಪುಟ್ಟ ಮಹಿಳೆಯರ ಆರೋಗ್ಯ ಸಂಬಂಧಿ ಪುಸ್ತಕ “ಮುಟ್ಟು ಮತ್ತು ಆರೋಗ್ಯ" ಬಿಡುಗಡೆಯಾಗಿ ಬಹಳ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. "ಇತ್ತೀಚಿನ ದಿನಗಳಲ್ಲಿ ಮುಟ್ಟನ್ನು ಕುರಿತು ಇದ್ದ ಅನೇಕ ಪೂರ್ವಗ್ರಹಗಳು ನಗರಗಳಲ್ಲಿ ಮರೆಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಆರೋಗ್ಯದ ಹಿನ್ನೆಲೆಯಲ್ಲಿ ಮನೆಮದ್ದು, ವೈದ್ಯಕೀಯ ನೆರವು ಕುರಿತು ಮುಕ್ತ ಮಾತುಕತೆಯಾಗುತ್ತಿದೆ. ಮುಟ್ಟಾದ ಹೆಣ್ಣುಮಕ್ಕಳೊಡನೆ ಹೇಗೆ ನಡೆದುಕೊಳ್ಳಬೇಕು, ಮುಟ್ಟಾದ ಮಕ್ಕಳು ಕೀಳರಿಮೆ, ತಾರತಮ್ಯಕ್ಕೆ ಒಳಗಾಗದಂತೆ ಹೇಗೆ ನೆರವು ನೀಡಬೇಕು ಎಂದು ಶಿಕ್ಷಕ ಮತ್ತು ಶಿಕ್ಷಕೇತರ ವರ್ಗಕ್ಕೆ, ವಿದ್ಯಾರ್ಥಿನಿಲಯಗಳ ಸಿಬ್ಬಂದಿಗೆ ತರಬೇತಿಗಳಲ್ಲಿ ಮಾಹಿತಿ ನೀಡಲಾಗುತ್ತಿದೆ" ಎನ್ನುತ್ತಾರೆ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಸಾಹಿತಿ ವಾಸುದೇವ ಶರ್ಮಾ ಎನ್.ವಿ. ಅವರು ಈ ಪುಸ್ತಕದ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ನಿಮ್ಮ ಓದಿಗಾಗಿ...

“ಜೀವಜಾಲದ ಹುಟ್ಟು, ಬೆಳವಣಿಗೆಗೂ ಮುಟ್ಟಿಗೂ ಇರುವ ಸಂಬಂಧ ಬಹುತೇಕರಿಗೆ ಒಂದು ರಹಸ್ಯ ಮತ್ತು ವಿಸ್ಮಯ. ಮೊದಲ ಮುಟ್ಟಾಗುವ ತನಕ ಬಹುತೇಕ ಹೆಣ್ಣುಗಳಿಗೆ ಸರಿಯಾಗಿ ತಿಳಿಯದ ವಿಚಾರ. ಇನ್ನು ಗಂಡು ಕುಲಕ್ಕಂತೂ ಎಷ್ಟು ದೊಡ್ಡವರಾದರೂ ಮುಟ್ಟು ಕುರಿತು ಅಜ್ಞಾನ ಹೇಳತೀರದಷ್ಟು! ಪ್ರಾಯಶಃ ಅದಕ್ಕೆ ಮುಖ್ಯ ಕಾರಣ ನಮ್ಮ ಕುಟುಂಬಗಳು, ಸಮುದಾಯ ಈ ಪ್ರಾಕೃತಿಕ ಸಹಜ ಪ್ರಕ್ರಿಯೆಗೆ ‘ಅಸಹ್ಯ’ ಎಂದು ಹೇಳಿ ನೋಡಬಾರದ, ತಿಳಿಯಬಾರದ, ಮಾತನಾಡಬಾರದ ನಿಷೇಧವನ್ನು ಹೇರಿರುವುದೇ ಆಗಿದೆ.

ಮೂರು ಅಕ್ಕಂದಿರು, ಅದೆಷ್ಟೊಂದು ಸಂಖ್ಯೆಯಲ್ಲಿ ಸೋದರ ಸಂಬಂಧಿ ಹೆಣ್ಣುಮಕ್ಕಳು, ಅತ್ತೆಯರು, ಚಿಕ್ಕಮ್ಮಂದಿರ ನಡುವೆ ಬೆಳೆದರೂ ನನಗೆ ಮುಟ್ಟು ಎಂಬ ವಿಚಾರ ಅರ್ಥವಾದದ್ದು ಸಮಾಜಕಾರ್ಯ ಸ್ನಾತಕೋತ್ತರ ಪದವಿಯಲ್ಲಿ ದೇಹ ರಚನೆ, ಆರೋಗ್ಯ ಮತ್ತು ಪ್ರಜನನಶಾಸ್ತ್ರದ ಪಾಠಗಳನ್ನು ಕಲಿಯುವಾಗ. ಏಳನೇ ತರಗತಿಯಲ್ಲಿ ಮತ್ತು ಹತ್ತನೇ ತರಗತಿಯ ವಿಜ್ಞಾನ ಪಾಠಗಳಲ್ಲಿ ಜನನಾಂಗಗಳ ಬಗ್ಗೆ ಪಾಠವಿದ್ದರೂ, ‘ಇದು ಪರೀಕ್ಷೆಯಲ್ಲಿ ಬರುವುದಿಲ್ಲ’ ಎಂದು ನಮ್ಮ ಶಿಕ್ಷಕ ಶಿಕ್ಷಕಿಯರು ಆ ಪಾಠವನ್ನು ಕೈಬಿಟ್ಟಿದ್ದರು. ನಾವು ನಾವೇ ಓದಿಕೊಂಡರೂ ನಮಗೆ (ಹುಡುಗರಿಗೆ) ಏನು ಅರ್ಥವಾಗಿತ್ತೋ ಗೊತ್ತಿಲ್ಲ. ಆದರೆ ಅಮ್ಮ ತಿಂಗಳಲ್ಲಿ ಮೂರು ದಿನ ಮೂಲೆ ಸೇರಿದಾಗ ಅಪ್ಪನ ಅಡುಗೆ, ಅಕ್ಕಂದಿರಿಂದ ಮನೆ ನಿರ್ವಹಣೆ, ಅಮ್ಮ ಮೂರು ದಿನವೂ ಕುಳಿತು, ಮಲಗಿ, ಕತೆ ಕಾದಂಬರಿ ಓದಿಕೊಂಡು ಇರುವುದು ಪ್ರಶ್ನೆಯಾಗಿದ್ದರೂ, ಅಮ್ಮನಿಗೆ ಒಳ್ಳೆಯದಾಗುತ್ತಿತ್ತು ಎಂಬುದು ನನ್ನ ಭಾವನೆ!

ಜ್ಯೋತಿ ಹಿಟ್ನಾಳ್ ಅವರು ಸಂಪಾದಿಸಿದ ಪುಸ್ತಕ ‘ಮುಟ್ಟು ಏನಿದರ ಒಳಗುಟ್ಟು?’ ನಮ್ಮ ಪರಿಸರದಲ್ಲಿ ಮುಟ್ಟಿನ ಕುರಿತು ಇದ್ದ ಮಡಿವಂತಿಕೆಯನ್ನು ಸರಿಸಲು ಒಳ್ಳೆಯ ಪ್ರಯತ್ನವಾಯಿತು. ಅದರ ಮುಂದುವರಿದ ರೀತಿಯಲ್ಲಿ ಜ್ಯೋತಿಯವರೇ ‘ಮುಟ್ಟು ಮತ್ತು ಆರೋಗ್ಯ ಹದಿಹರೆಯದ ಹೆಣ್ಣುಮಕ್ಕಳಿಗಾಗಿ...’ ಪುಸ್ತಕವನ್ನು ನಮ್ಮೆದುರು ಇಟ್ಟಿದ್ದಾರೆ. ಮುಟ್ಟನ್ನು ಎದುರಿಟ್ಟುಕೊಂಡು ದೇಹ ರಚನೆಯ ವಿಜ್ಞಾನ, ಸಾಮಾಜಿಕ ಚಿಂತನೆಗಳು, ಮನಶಾಸ್ತ್ರದ ಅಂಶಗಳು, ಆರೋಗ್ಯ ಶಾಸ್ತ್ರದ ವಿಚಾರಗಳು ಜೊತೆಗೆ ಸಾಂಪ್ರದಾಯಿಕ ಅಭ್ಯಾಸಗಳೊಡನೆ ಆರೋಗ್ಯಕರ ಆವಿಶ್ಕಾರಗಳನ್ನೂ ಹೇಗೆ ಅಳವಡಿಸಿಕೊಂಡು ಪ್ರಮುಖವಾಗಿ ಹದಿಹರೆಯದ ಹೆಣ್ಣುಮಕ್ಕಳ ಸಮಗ್ರ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ, ಮಾರ್ಗದರ್ಶನಗಳನ್ನು ಕೊಟ್ಟಿದ್ದಾರೆ. ಪುಸ್ತಕವನ್ನು ಓದುತ್ತಿದ್ದಾಗ ನನಗನ್ನಿಸಿದ್ದು ಈ ಪುಸ್ತಕವನ್ನು ಕೇವಲ ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಎಲ್ಲ ಹುಡುಗರೂ, ಪುರುಷರೂ ಓದಬೇಕು ಮತ್ತು ಇಲ್ಲಿನ ಸಲಹೆಗಳನ್ನು ತಮ್ಮ ನಡವಳಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು. ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಜಾಹೀರಾತು ಭರಾಟೆಯಲ್ಲಿ ಬಹುತೇಕರಲ್ಲಿ ಇರುವ ಕೆಲವು ತಪ್ಪು ಅಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲೂ ಈ ಪುಸ್ತಕ ಮುಖ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಮುಟ್ಟನ್ನು ಕುರಿತು ಇದ್ದ ಅನೇಕ ಪೂರ್ವಗ್ರಹಗಳು ನಗರಗಳಲ್ಲಿ ಮರೆಯಾಗುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ. ಆರೋಗ್ಯದ ಹಿನ್ನೆಲೆಯಲ್ಲಿ ಮನೆಮದ್ದು, ವೈದ್ಯಕೀಯ ನೆರವು ಕುರಿತು ಮುಕ್ತ ಮಾತುಕತೆಯಾಗುತ್ತಿದೆ. ಮುಟ್ಟಾದ ಹೆಣ್ಣುಮಕ್ಕಳೊಡನೆ ಹೇಗೆ ನಡೆದುಕೊಳ್ಳಬೇಕು, ಮುಟ್ಟಾದ ಮಕ್ಕಳು ಕೀಳರಿಮೆ, ತಾರತಮ್ಯಕ್ಕೆ ಒಳಗಾಗದಂತೆ ಹೇಗೆ ನೆರವು ನೀಡಬೇಕು ಎಂದು ಶಿಕ್ಷಕ ಮತ್ತು ಶಿಕ್ಷಕೇತರ ವರ್ಗಕ್ಕೆ, ವಿದ್ಯಾರ್ಥಿನಿಲಯಗಳ ಸಿಬ್ಬಂದಿಗೆ ತರಬೇತಿಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಇದೊಂದು ಆರೋಗ್ಯಕರ ಬೆಳವಣಿಗೆ. ಈ ಪುಸ್ತಕ ಅಂತಹ ಸಿಬ್ಬಂದಿಗಳಿಗೂ ಉಪಯುಕ್ತವಾಗಲಿದೆ.

ಜಾಗತಿಕವಾಗಿ ಈಗ ಎಲ್ಲೆಡೆ ಚಾಲ್ತಿಯಲ್ಲಿರುವ ವಿಚಾರ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ೨೦೧೬-೩೦) ಗುರಿಗಳು. ಈ ಜಗತ್ತು ಮತ್ತು ಇಲ್ಲಿನ ಜೀವಜಾಲವನ್ನು ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಅನೇಕ ಕ್ರಮಗಳಲ್ಲಿ ಮರುಬಳಕೆ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಮೆನ್ಸ್ಟ್ರುಯಲ್ ಕಪ್ (ಮುಟ್ಟಿನ ಕಪ್)ಗೂ ಮಹತ್ವದ ಸ್ಥಾನಮಾನವಿದೆ. ಹಾಗೆಂದು ಜಗತ್ತನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಹೆಗಲೇರಿದೆ ಎಂದು ಪುರುಷರು ಕೈಕಟ್ಟಿ ಕೂರುವಂತಿಲ್ಲ. ಭಾರತದಲ್ಲಿ ೩೫ ಕೋಟಿ ಮುಟ್ಟಾಗುವ ಹೆಣ್ಣುಗಳಿದ್ದಾರೆ. ಇವರಲ್ಲಿ ಬಹುತೇಕರು ಬಳಸುವ ೧,೨೩೦ ಕೋಟಿ ಸ್ಯಾನಿಟರಿ ಪ್ಯಾಡ್‌ಗಳು ಪ್ರತಿವರ್ಷ ಕಸದ ರಾಶಿಯೊಡನೆ ಗುಂಡಿಗಳನ್ನು ಸೇರುತ್ತಿದೆ. ಈ ಪ್ರತಿಯೊಂದು ನ್ಯಾಪ್‌ಕಿನ್ ಸಂಪೂರ್ಣವಾಗಿ ಕರಗಲು ೨೫೦ರಿಂದ ೮೦೦ ವರ್ಷಗಳು ಬೇಕು. ಹೀಗಾಗಿ ಇವೇ ಜಗತ್ತನ್ನು ಹಾಳು ಮಾಡುತ್ತಿವೆಯೆಂದು ಹುಯಿಲೆಬ್ಬಿಸುವ ಸಮಾಜ, ಕೈಗಾರಿಕೆಗಳು ಸುರಿಯುವ ಕೊಳೆ, ರಾಸಾಯನಿಕಗಳತ್ತ ಕಣ್ಣು ಮುಚ್ಚುವುದೂ ಉಂಟು. ಪ್ರಾಯಶಃ ಈ ಸ್ಯಾನಿಟರಿ ಪ್ಯಾಡ್‌ಗಳು ಮಾಡುವ ಕೊಳೆ ಕೈಗಾರಿಕೆಗಳಿಗೆ ಹೋಲಿಸಿದರೆ ಸೂಜಿಮೊನೆಯಷ್ಟಿರಬಹುದು! ಅದನ್ನೂ ಕಡಿಮೆ ಮಾಡಲು ಸಾಧ್ಯ ಎಂದು ಮರುಬಳಕೆ ಪ್ಯಾಡ್‌ಗಳು ಪ್ರಮಾಣ ಮಾಡಿ ತೋರಿಸಿವೆ.

ಮುಟ್ಟು ಮತ್ತು ಸಂಬಂಧಿತ ವಿಚಾರಗಳಾದ ರಕ್ಷಿತ ಮತ್ತು ಏಕಾಂತತೆಯನ್ನು ಖಾತರಿಪಡಿಸುವ ವಿಶ್ರಾಂತಿ ಕೊಠಡಿ, ಪರಿಶುಭ್ರವಾದ ಶೌಚಾಲಯ, ಅಲ್ಲಿ ಸಮರ್ಪಕ ನೀರಿನ ವ್ಯವಸ್ಥೆ, ಗಾಳಿ ಬೆಳಕು, ಬಳಸಿದ ನ್ಯಾಪ್‌ಕಿನ್‌ಗಳ ವಿಸರ್ಜನೆ, ಮರುಬಳಕೆ ಬಟ್ಟೆಗಳನ್ನು ಒಣಗಿಸಲು ಸ್ಥಳ, ಬೇಕಿದ್ದಲ್ಲಿ ವೈದ್ಯಕೀಯ ನೆರವು, ಬಹಳ ಮುಖ್ಯವಾಗಿ ಎಲ್ಲ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಪೌಷ್ಟಿಕ ಆಹಾರವನ್ನು ಖಚಿತವಾಗಿ ದೊರಕಿಸುವುದೇ ಮೊದಲಾದವುಗಳು ಪುರುಷರನ್ನೂ ಒಳಗೊಂಡ ಸ್ಥಳೀಯ ಮತ್ತು ರಾಜ್ಯ, ಕೇಂದ್ರ ಸರ್ಕಾರಗಳು ಹಾಗೂ ಒಟ್ಟೂ ಸಮಾಜದ ಜವಾಬ್ದಾರಿ. ಇದರಲ್ಲೊಂದು ಬಹಳ ಮುಖ್ಯವಾದ ಕೆಲಸ ಎಲ್ಲ ಸಾರ್ವಜನಿಕ ಸ್ಥಳಗಳು, ಬಸ್, ರೈಲು ನಿಲ್ದಾಣಗಳು, ಉದ್ಯಾನವನ, ಆಸ್ಪತ್ರೆ, ಶಾಲಾ ಕಾಲೇಜುಗಳು, ಸರ್ಕಾರಿ ಮತ್ತು ಖಾಸಗಿ ಕಛೇರಿಗಳು, ಅಂಗಡಿ ಮುಂಗಟ್ಟುಗಳ ಸಂಕೀರ್ಣಗಳು, ಸಾರ್ವಜನಿಕ ಮೂತ್ರಿಗಳೇ ಮೊದಲಾದೆಡೆ ಶುಭ್ರವೂ, ಸುಸಜ್ಜಿತವಾದ ಮತ್ತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಉಚಿತವಾಗಿ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಿಸುವುದು.

ಜರ್ಮನಿಯ ವಾಷ್ ಯನೈಟೆಡ್ ಎಂಬ ಸಂಸ್ಥೆ ೨೦೧೩ರಲ್ಲಿ ಮುಂದಿಟ್ಟ ಕಲ್ಪನೆ ಪ್ರತಿ ವರ್ಷ ಮೇ ೨೮ರಂದು ‘ಮುಟ್ಟಿನ ನೈರ್ಮಲ್ಯ ದಿನ’ ಎಂದು ಆಚರಿಸುವುದು. ೨೦೧೪ರಿಂದ ಈಗ ಜಗತ್ತಿನಾದ್ಯಂತ ಈ ದಿನವನ್ನು ಆಚರಿಸುವುದರ ಉದ್ದೇಶ ಮುಟ್ಟಿಗಂಟಿಸಿರುವ ಕಳಂಕ, ಮೂದಲಿಕೆ, ತಾರತಮ್ಯ, ಕೀಳರಿಮೆಯನ್ನು ತೊಲಗಿಸಿ ‘ಮುಟ್ಟೆಂದರೆ ಜೀವಸೃಷ್ಟಿ ಮತ್ತು ಆರೋಗ್ಯದ ಲಕ್ಷಣ’ ಎಂಬ ಮಾಹಿತಿ ತಲುಪಿಸುವುದೇ ಆಗಿದೆ. ಮುಟ್ಟನ್ನು ಕುರಿತು ಸರಿಯಾದ ಮಾಹಿತಿ ತಲುಪಿಸಲು ಮತ್ತು ಮರುಬಳಕೆ ಬಟ್ಟೆ ಪ್ಯಾಡ್‌ಗಳನ್ನು ಹಾಗೂ ಮೆನ್ಸ್ಟ್ರುಯಲ್ ಕಪ್ ಬಳಸುವುದನ್ನು ಪ್ರಚುರಪಡಿಸಲು ಅನೇಕ ಸಂಸ್ಥೆಗಳು ಇಂದು ಸಮುದಾಯಗಳ ನಡುವೆ ಕೆಲಸಗಳನ್ನು ಕೈಗೊಂಡಿವೆ. ಅದರಲ್ಲೊಂದು ‘ಕೆಂಪನ್ನು ಹಸಿರಾಗಿಸಿ’ ಎಂಬುದು. ಇವರೊಂದಿಗೆ ಕೈಜೋಡಿಸಿ ಮರುಬಳಕೆ ಬಟ್ಟೆ ಪ್ಯಾಡ್‌ಗಳನ್ನು ಸಿದ್ಧಮಾಡುವ ಒಂದು ಘಟಕವನ್ನು ಶಿಡ್ಲಘಟ್ಟದಲ್ಲಿ ನಮ್ಮ ಸಂಸ್ಥೆ ನಡೆಸಿದೆ.

‘ಮುಟ್ಟು’ ಕೇಳಬಾರದ, ನೋಡಬಾರದ, ಆಡಬಾರದ ವಿಚಾರವಲ್ಲ, ಬದಲಿಗೆ ಮುಕ್ತ ಮಾತುಕತೆಯಲ್ಲಿ ಬಂದಾಗ ಮಾತ್ರ ಎಲ್ಲರ ಆರೋಗ್ಯ ಸಾಧ್ಯ ಎಂಬ ವಿಚಾರಗಳನ್ನು ಒಳಗೊಂಡ ಜ್ಯೋತಿ ಹಿಟ್ನಾಳ್ ಅವರ ಪುಸ್ತಕ ‘ಮುಟ್ಟು ಮತ್ತು ಆರೋಗ್ಯ ಹದಿಹರೆಯದ ಹೆಣ್ಣುಮಕ್ಕಳಿಗಾಗಿ...’ ಎಲ್ಲರನ್ನೂ ಮುಟ್ಟಲಿ.”