ಮುಲ್ಲಾ ಕಥೆಗಳು: ೯: ಯಾರೂ ಅಲ್ಲ!

ಮುಲ್ಲಾ ಕಥೆಗಳು: ೯: ಯಾರೂ ಅಲ್ಲ!

ಬರಹ

ಒಮ್ಮೆ ನಸ್ರುದ್ದೀನ್ ಮುಲ್ಲಾ ಅರಮನೆಯಲ್ಲಿ ನಡೆಯುತ್ತಿದ್ದ ಸಮಾರಂಭಕ್ಕೆ ಹೋಗಿದ್ದ. ಅಲ್ಲಿ ಭೋಜನದ ಏರ್ಪಾಟು ನಡೆದಿತ್ತು. ಮುಲ್ಲಾ ಸೀದಾ ಹೋಗಿ ಅಲ್ಲಿದ್ದ ಎಲ್ಲಕ್ಕಿಂತ ಚೆಲವಾದ, ಎತ್ತರವಾದ ಕುರ್ಚಿಯ ಮೇಲೆ ಕುಳಿತ.
ಕಾವಲುಗಾರರ ಮುಖ್ಯಸ್ಥ ಓಡಿ ಬಂದ. “ಸ್ವಾಮಿ, ಇದು ಮುಖ್ಯ ಅತಿಥಿಗಳಿಗೆ ಮೀಸಲಾದ ಸ್ಥಳ” ಎಂದ.
“ಓಹೋ, ನಾನು ಮುಖ್ಯ ಅತಿಥಿಗಿಂತ ದೊಡ್ಡವನು” ಎಂದ ಮುಲ್ಲಾ.
“ನೀವು ರಾಯಭಾರಿಗಳೇ?” ಕಾವಲುಗಾರ ಕೇಳಿದ.
“ಅದಕ್ಕಿಂತ ಮಿಗಿಲಾದವನು.”
“ಹೌದೇ! ಹಾಗಾದರೆ ನೀವು ಮಂತ್ರಿಗಳಿರಬೇಕು?”
“ಅಲ್ಲ, ಮಂತ್ರಿಗಿಂತ ದೊಡ್ಡವನು.”
“ಹಾಗಾದರೆ ನೀವು ಮಹಾರಾಜರೇ ಇರಬೇಕು ಸ್ವಾಮಿ,” ಕಾವಲುಗಾರ ವ್ಯಂಗ್ಯವಾಗಿ ಹೇಳಿದ.
“ಮಹಾರಾಜನಿಗಿಂತ ದೊಡ್ಡವನು” ಮುಲ್ಲಾ ನುಡಿದ.
“ಕೇವಲ ಅಲ್ಲಾ ಮಾತ್ರ ಮಹಾರಾಜರಿಗಿಂತ ದೊಡ್ಡವನು” ಎಂದ ಕಾವಲುಗಾರ.
“ಅಲ್ಲಾಗಿಂತ ದೊಡ್ಡವನು” ಎಂದ ಮುಲ್ಲಾ.
“ಅಸಾಧ್ಯ. ಅಲ್ಲಾಗಿಂತ ದೊಡ್ಡವರು ಯಾರೂ ಅಲ್ಲ!” ಸಿಟ್ಟಿನಿಂದ ಕಾವಲುಗಾರ ಹೇಳಿದ.
“ಈಗ ಸರಿಯಾಗಿ ಹೇಳಿದೆ ನೋಡು. ನಾನು ಯಾರೂ ಅಲ್ಲ” ಎಂದ ಮುಲ್ಲಾ.