ಮುಲ್ಲಾ ನಸ್ರುದ್ದೀನ್ ಕತೆಗಳು

ಮುಲ್ಲಾ ನಸ್ರುದ್ದೀನ್ ಕತೆಗಳು

ಬರಹ

ಮುಲ್ಲಾ ನಸ್ರುದ್ದೀನ್ ಒಬ್ಬ ಸೂಫಿ ದಾರ್ಶನಿಕ. ಸೂಫಿ ಎಂಬುದು ಇಸ್ಲಾಮ್ ಅನುಭಾವಿಗಳ ಒಂದು ಪಂಥ. ಯಾಂತ್ರಿಕವಾದ ಮತನಿಷ್ಠೆಗಿಂತ, ಒಣ ತಾತ್ವಿಕ ಚರ್ಚೆಗಳಿಗಿಂತ, ನೇರವಾಗಿ ದೈವಿಕ ಅನುಭವವನ್ನು ಪಡೆಯುವುದು ಸೂಕ್ತ ಎಂದು ನಂಬಿದ್ದವರು ಸೂಫಿಗಳು. ಕನ್ನಡದ ಶರಣರು, ದಾಸೆರು, ಸೂಫಿಗಳು ಒಂದೇ ಗೂಡಿನ ಹಕ್ಕಿಗಳು. ಸೂಫೀಸ್ ಆಫ್ ಬಿಜಾಪುರ್ ಎಂಬ, ಪೆಂಗ್ವಿನ್ ಪ್ರಕಾಶನದ ಪುಸ್ತಕವು ಕನ್ನಡದ ಸಂಸ್ಕೃತಿಗೂ ಸೂಫೀ ಪರಂಪರೆಗೂ ಇರುವ ಸಂಬಂಧಗಳನ್ನು ವಿವರಿಸುತ್ತದೆ.
ಮುಲ್ಲಾ ನಸ್ರುದ್ದೀನ್ ೧೩ನೆಯ ಶತಮಾನದಲ್ಲಿದ್ದವನು. ಅವನೊಬ್ಬ ಅಲೆಮಾರಿ ಅನುಭಾವೀ ವಿದೂಷಕ. ಅವನು ಇದ್ದದ್ದು ಮಧ್ಯಪ್ರಾಚ್ಯದಲ್ಲಿ. ಅರೇಬಿಯಾದ ಮರಳುಗಾಡುಗಳಲ್ಲಿ ಅಲೆದಾಡುತ್ತ ತನ್ನ ವಿಚಿತ್ರವೆಂಬಂತೆ ತೋರುವ ಬದುಕಿನ ನಿದರ್ಶನದ ಮೂಲಕ ಅನುಭಾವೀ ಸತ್ಯಗಳನ್ನು ಪ್ರಕಟಪಡಿಸಿದವನು ಅವನು. ಅವನ ಕತೆಗಳು ಜಾನಪದ ಕತೆಗಳಂತೆ ಜಗತ್ಪ್ರಸಿದ್ಧವಾಗಿವೆ. ಚೀನಾ ಮತ್ತು ಮಧ್ಯಪ್ರಾಚ್ಯದ ಜನ ಮುಲ್ಲಾ ತಮ್ಮವನು ಎಂದು ಹಕ್ಕು ಸ್ಥಾಪಿಸುತ್ತಾರೆ.
ಇದ್ರಿಸ್ ಶಾ ಅವರು ಮೊದಲ ಬಾರಿಗೆ ಇಂಗ್ಲಿಷ್ ಬಲ್ಲ ಜನರಿಗೆ ಮುಲ್ಲಾ ನಸ್ರುದ್ದೀನ್ ಕತೆಗಳ ಪರಿಚಯ ಮಾಡಿಕೊಟ್ಟರು. ಅತ್ಯಂತ ರಂಜನೀಯವಾದ, ಹಾಸ್ಯಭರಿತವಾದ, ಜಾಣತನದ ಈ ಕತೆಗಳು ಕೂಡ ಝೆನ್ ಕತೆಗಳಂತೆಯೇ ತಮ್ಮ ಒಡಲೊಳಗೆ ಬದುಕಿನ ಸತ್ಯಗಳನ್ನು, ವಿರೋಧಾಭಾಸಗಳನ್ನು ಬಚ್ಚಿಟ್ಟುಕೊಂಡಿರುವ ಕತೆಗಳು. ಅತ್ಯಂತ ಜಡವಾದ ಮನಸ್ಸನ್ನೂ ತನ್ನ ಹಾಸ್ಯದಿಂದ ಬಡಿದೆಬ್ಬಿಸಬಲ್ಲ ಮುಲ್ಲಾ ಮಹಾ ಅನುಭಾವಿಯೇ ಹೌದು. ಇಂದಿಗೂ ಕೂಡ ಸೂಫಿಗಳು ಮುಲ್ಲಾ ಕತೆಗಳನ್ನು ತಮ್ಮ ಶಿಕ್ಷಣದ ಪಾಠಗಳಂತೆ ಬಳಸುತ್ತಾರೆ. ದಿನವೂ ಒಂದೆರಡು ಮುಲ್ಲಾ ನಸ್ರುದ್ದೀನ್ ಕತೆಗಳನ್ನು ಓದಿ ಮೆಲುಕು ಹಾಕೋಣ.

೧. ನೀನು ಹೇಳುವುದು ನಿಜ

ಮುಲ್ಲಾ ನಸ್ರುದ್ದೀನ್‌ನನ್ನು ಒಮ್ಮೆ ನ್ಯಾಯ ತೀರ್ಮಾನ ಮಾಡು ಎಂದು ಕೂರಿಸಿದ್ದರು. ಫಿರ್ಯಾದಿ ಹೇಳುವ ಮಾತುಗಳನ್ನು ಕೇಳಿದ. “ನೀನು ಹೇಳುವುದು ನಿಜ” ಎಂದು ನುಡಿದ. ಆಮೇಲೆ ಆಪಾದಿತ ತನ್ನ ಮಾತು ಹೇಳಿದ. ಅದನ್ನು ಕೇಳಿದ ನಸ್ರುದ್ದೀನ್ “ನೀನು ಹೇಳುವುದು ನಿಜ” ಎಂದ. ನ್ಯಾಯಾಲಯದ ಗುಮಾಸ್ತ, “ಸ್ವಾಮಿ, ಇಬ್ಬರು ಹೇಳಿದ್ದೂ ನಿಜವಾಗಿರಲು ಹೇಗೆ ಸಾಧ್ಯ” ಎಂದ. ಮುಲ್ಲಾ ನಸ್ರುದ್ದೀನ್ “ಹೌದು, ನೀನು ಹೇಳಿದ್ದು ನಿಜ” ಅಂದ.
ನಮ್ಮ ಮನಸ್ಸುಗಳು ಸರಿ ತಪ್ಪು, ಒಳ್ಳೆಯದು ಕೆಟ್ಟದ್ದು ಎಂಬ ಕಲ್ಪನೆಗಳಿಗೆ ಬಲವಾಗಿ ಅಂಟಿಕೊಂಡಿರುತ್ತವೆ. ಕೇವಲ ತರ್ಕಕ್ಕೆ ಬದ್ಧವಾಗಿ ಆಲೋಚಿಸುವ ಮನಸ್ಸು ಪೂರ್ಣತೆಯನ್ನು ಅರಿಯಲಾರದು. ತರ್ಕದ ಜಟಿಲತೆಯಲ್ಲಿ ಸಿಕ್ಕಿಬಿದ್ದು ಬದುಕಿನ ಸಾರವನ್ನು ಕಳೆದುಕೊಂಡುಬಿಡುತ್ತೇವೆ.

೨ ಬಾಗಿಲು

ಮುಲ್ಲಾ ನಸ್ರುದದ್ದೀನ್ ಎಲ್ಲಿಗೆ ಹೋದರೂ ತನ್ನ ಮನೆಯ ಬಾಗಿಲನ್ನು ಬೆನ್ನ ಮೇಲೆ ಹೊತ್ತು ಹೋಗುತ್ತಿದ್ದನಂತೆ. ಯಾರೋ ಕೇಳಿದರು, “ಯಾಕೆ ಮುಲ್ಲಾ, ಬಾಗಿಲನ್ನು ಬೆನ್ನ ಮೇಲೆ ಹೊತ್ತು ಹೋಗುತ್ತಿದ್ದೀಯೆ?”
ಮುಲ್ಲಾ ಹೇಳಿದ: “ನನ್ನ ಮನೆ ಕಾಪಾಡಿಕೊಳ್ಳಬೇಡವೆ! ನಮ್ಮ ಮನೆಗೆ ಇರುವುದು ಇದೊಂದೇ ಬಾಗಿಲು. ಯಾರು ನುಗ್ಗಿದರೂ ಬಾಗಿಲ ಮೂಲಕವೇ ನುಗ್ಗಬೇಕು. ಬಾಗಿಲು ನನ್ನ ಹತ್ತಿರವಿದ್ದರೆ ಭದ್ರವಾಗಿರುತ್ತದೆ. ನಮ್ಮ ಮನೆಗೆ ಯಾರು ಹೇಗೆ ನುಗ್ಗುತ್ತಾರೋ ನೋಡೇ ಬಿಡುತ್ತೇನೆ”
ಮುಲ್ಲಾ ಸತ್ತ ಮೇಲೆ ಅವನ ಶಿಷ್ಯರು ಮುಲ್ಲಾನ ಜೊತೆಯಲ್ಲಿ ಅವನ ಬಾಗಿಲನ್ನೂ, ಬೀಗದ ಎಸಳನ್ನೂ ಸಮಾಧಿ ಮಾಡಿದರಂತೆ.
ಮನೆಯನ್ನು ಕಾಪಾಡಿಕೊಳ್ಳಲು ಬಾಗಿಲನ್ನು ಹೊತ್ತು ಓಡಾಡುವುದು ಹಾಸ್ಯಾಸ್ಪದವೆನಿಸಿದರೂ ತಮ್ಮ ತಮ್ಮ ವಿಚಾರಗಳಿಗೇ ಅಂಟಿಕೊಂಡು, ಸದಾ ಬದಲಾಗುತ್ತಲೇ ಇರುವ ಜಗತ್ತಿನಲ್ಲಿ ತಾವು ಬದಲಾಗದೆ ಉಳಿಯುವ ಜನರ ಬಗ್ಗೆ ಈ ಕತೆ ಒಂದು ವ್ಯಾಖ್ಯಾನ ಮಾಡದುವಂತೆ ಇದೆಯಲ್ಲವೆ?