ಮೂರು ಕಾಲಿನ ಮನುಷ್ಯ !
ಲೇಖನದ ಶೀರ್ಷಿಕೆ ನೋಡಿ ಅಚ್ಚರಿಯಲ್ಲಿ ಮುಳುಗಿ ಹೋದಿರಾ? ಗಾಬರಿ ಪಡಬೇಡಿ, ಇದೇನೂ ಮ್ಯಾಜಿಕ್ ಅಲ್ಲ. ನಮ್ಮ ನಿಮ್ಮಂತೆ ಬದುಕಿದ್ದ ವ್ಯಕ್ತಿಯೊಬ್ಬನ ಕಥೆ. ತನಗಿದ್ದ ಮೂರು ಕಾಲುಗಳು ಬಹುಜನರಿಗೆ ಹಾಸ್ಯದ ವಸ್ತುವಾದಾಗ ಕುಗ್ಗಿ ಹೋದ, ಆದರೆ ಮತ್ತೆ ಎದ್ದು ನಿಂತ ಒಬ್ಬ ಅಸಾಮಾನ್ಯ ಸಾಧಕನ ಕಥೆಯಿದು. ಸರ್ಕಸ್ ನಲ್ಲಿ ಕೆಲಸ ಮಾಡಿ, ಫುಟ್ಬಾಲ್ ಆಟಗಾರನಾಗಿ ಈತ ಮಾಡಿದ ಸಾಧನೆ ಎಲ್ಲರಿಗೂ ಮಾರ್ಗದರ್ಶಕ. ಏಕೆಂದರೆ ನಮ್ಮ ವೈಕಲ್ಯವನ್ನು ನೋಡಿ ನೆಗಾಡುವ ಸಾವಿರಾರು ಮಂದಿಯ ನಡುವೆ ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಹೊರಗೆಡುವ ಪ್ರಯತ್ನ ನಾವು ಮಾಡಲೇ ಬೇಕು. ಆಗಲೇ ಜೀವನದಲ್ಲಿ ಜಯ ಸಿಗುತ್ತದೆ.
ಮೂರು ಕಾಲಿನ ಈ ಅಪರೂಪದ ವ್ಯಕ್ತಿಯ ಹೆಸರು ಫ್ರಾಂಕ್ ಲೆಂಟಿನಿ (ಫ್ರಾನ್ಸೆಸ್ಕೋ ಎ. ಲೆಂಟಿನಿ). ಈತ ಹುಟ್ಟಿದ್ದು ೧೯ನೇಯ ಶತಮಾನದ ಅಂತ್ಯಭಾಗದಲ್ಲಿ. ೧೮೮೯ರ ಮೇ ೧೮ರಂದು ಇಟಲಿ ದೇಶದ ಸಿಸಿಲಿಯ ರೋಸೊಲಿನಿ ಊರಿನಲ್ಲಿ ಹುಟ್ಟಿದವ ಲೆಂಟಿನಿ. ಹುಟ್ಟಿದ ಕೂಡಲೇ ವೈದ್ಯರಿಗೆ, ದಾದಿಯರಿಗೆ ದೊಡ್ಡ ಶಾಕ್ ಕಾದಿತ್ತು. ಈತನಿಗೆ ಹುಟ್ಟುವಾಗಲೇ ಮೂರನೇಯ ಕಾಲೊಂದಿತ್ತು. ಪೂರ್ಣ ಪ್ರಮಾಣದಲ್ಲಿ ಬೆಳೆದ ಕಾಲು ಅದಾಗಿಲ್ಲದಿದ್ದರೂ ಆ ಕಾಲಿಗೆ ಸಂವೇದನೆ ಹಾಗೂ ಧೃಢತೆ ಇತ್ತು. ಆಸ್ಪತ್ರೆಯಲ್ಲಿ ಈತ ಹುಟ್ಟಿದ ಸಮಯದಲ್ಲಿದ್ದ ವೈದ್ಯರು ಈ ಮಗುವನ್ನು ಕೊಲ್ಲುವ ಬಗ್ಗೆ ಯೋಚನೆ ಮಾಡಿದ್ದರಂತೆ. ಈತ ಹುಟ್ಟಿದಾಗ ಇವನ ತಾಯಿಗೆ ಪ್ರಜ್ಞೆ ಇರಲಿಲ್ಲ. ಇಂತಹ ಮಗು ಹುಟ್ಟಿ ಬೆಳೆದು ದೊಡ್ದದಾದರೆ ಸಮಾಜಕ್ಕೆ ಕಂಟಕವಾಗಬಹುದೆಂಬ ನಂಬಿಕೆ ವೈದ್ಯರಿಗಿತ್ತು. ಅದಕ್ಕಾಗಿ ಆ ವೈದ್ಯರು ಮಗುವನ್ನು ದೂರ ಕೊಂಡೊಯ್ಯುವಂತೆ ಓರ್ವ ದಾದಿಗೆ ತಿಳಿಸುತ್ತಾರೆ. ಆ ದಾದಿ ಈ ಮಗುವಿನ ಮೂರು ಕಾಲುಗಳನ್ನು ನೋಡಿ ಭಯಭೀತರಾಗಿ ಜೋರಾಗಿ ಕೂಗಿಕೊಳ್ಳುತ್ತಾಳೆ.
ದಾದಿಯ ಕೂಗಿಗೆ ಆಸ್ಪತ್ರೆಯಲ್ಲಿ ಜನರು ಒಟ್ಟುಗೂಡುತ್ತಾರೆ. ಆ ಮಗು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿ ಬಿಡುತ್ತದೆ. ಮೂರನೇಯ ಕಾಲೊಂದು ಹೊರತು ಪಡಿಸಿದರೆ ಬೇರೆಲ್ಲಾ ರೀತಿಯಲ್ಲೂ ಅದು ಸಾಮಾನ್ಯ ಮಗುವಾಗಿತ್ತು. ಅವನ ದೇಹದ ಹಿಂದಿನ ಭಾಗದಲ್ಲಿ ಈ ಮೂರನೇಯ ಕಾಲು ಬೆಳೆದಿತ್ತು. ಯಾವಾಗ ಈ ಮಗುವಿನ ಬಗ್ಗೆ ಆಸ್ಪತ್ರೆಯಲ್ಲಿದ್ದ ಎಲ್ಲರಿಗೂ ತಿಳಿಯಿತೋ ನಂತರ ಆ ಮಗುವನ್ನು ನಾಶ ಪಡಿಸುವ ವಿಚಾರವನ್ನು ವೈದ್ಯರು ಕೈ ಬಿಟ್ಟರು. ಆದರೆ ಬಹುದಿನಗಳ ತನಕ ಮಗುವನ್ನು ತಾಯಿಯಿಂದ ಅಡಗಿಸಿಟ್ಟರು. ಈ ಮಗುವನ್ನು ನೋಡಿ ತಾಯಿಗೆ ಶಾಕ್ ಆಗಬಹುದು ಎಂದು ಅವರ ಆಲೋಚನೆಯಾಗಿತ್ತು. ಪ್ರತೀ ಬಾರಿ ಮಗುವನ್ನು ಕೇಳಿದಾಗ 'ಸ್ನಾನಕ್ಕೆ ಕರೆದುಕೊಂಡು ಹೋಗಿದ್ದಾರೆ ಅಥವಾ ಪರೀಕ್ಷೆಗೆ ಮಗುವನ್ನು ಕರೆದುಕೊಂಡು ಹೋಗಿದ್ದಾರೆ' ಎಂದು ದಾದಿಯರು ಅಮ್ಮನಿಗೆ ಕಾರಣ ಕೊಡುತ್ತಿದ್ದರು. ಆದರೆ ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಆಗುತ್ತದೆ? ಕಡೆಗೊಂದು ದಿನ ತನ್ನ ಮಗುವಿಗೆ ಮೂರು ಕಾಲಿದೆ ಎಂಬ ವಿಚಾರ ತಿಳಿದು ಆಕೆಗೆ ಬಹಳ ನೋವಾಯಿತು.
ಈ ಮಗುವನ್ನು ಹೇಗಪ್ಪಾ ಜನರ ಕಣ್ಣುಗಳಿಂದ ರಕ್ಷಿಸುವುದು ಎಂದು ಆತಂಕದಲ್ಲಿದ್ದಳು ಆ ತಾಯಿ. ಒಂದು ದಿನ ಆಕೆ ವೈದ್ಯರಲ್ಲಿ ‘ಮಗು ಯಾಕೆ ಹೀಗಾಯಿತು? ಮಗುವಿನ ಬೇರೆಲ್ಲಾ ಸಂಗತಿಗಳು ಸಾಮಾನ್ಯವಾಗಿವೆಯಲ್ಲಾ?’ ಎಂದು ಕೇಳಿದಳು.
ವೈದ್ಯರು ಹೇಳಿದರು ‘ನಿಮ್ಮ ಗರ್ಭದಲ್ಲಿ ಸಯಾಮಿ ಅವಳಿಗಳು (ಒಂದಕ್ಕೊಂದು ಜೊತೆಯಾಗಿ ಅಂಟಿಕೊಂಡಿರುವ ಮಕ್ಕಳು) ಬೆಳೆಯಬೇಕಿತ್ತು. ಆದರೆ ಏನೋ ತೊಂದರೆಯಿಂದಾಗಿ ಸಯಾಮಿ ಅವಳಿಗಳಲ್ಲಿ ಒಂದು ಮಗು ಪೂರ್ತಿಯಾಗಿ ಬೆಳೆಯದೇ ಅದರ ಒಂದು ಕಾಲು ಮಾತ್ರ ಬೆಳೆದು ಈ ಮಗುವಿನ ಜೊತೆಗೆ ಅಂಟಿಕೊಂಡಿದೆ. ಅದೇ ಸಯಾಮಿ ಅವಳಿಗಳು ಹುಟ್ಟಿದ್ದರೆ ಅವುಗಳು ಜೀವನ ಪೂರ್ತಿ ಅಂಟಿಕೊಂಡ ಸ್ಥಿತಿಯಲ್ಲೇ ಜೊತೆಯಾಗಿರಬೇಕಿತ್ತು. ಇದರಿಂದ ನಿಮಗೆ ಇನ್ನಷ್ಟು ತೊಂದರೆಯಾಗುತ್ತಿತ್ತು. ಎರಡು ಮಕ್ಕಳು ಇರುವಾಗ ಎರಡು ಮೆದುಳು ಇರುತ್ತದೆ. ಆ ಕಾರಣದಿಂದ ಬೇರೆ ಬೇರೆಯಾಗಿ ಅವರು ಆಲೋಚಿಸುತ್ತಾರೆ. ಅವರ ಕಲಹ, ಮತ್ತಿತರ ಸಮಸ್ಯೆಗಳು ಜಾಸ್ತಿಯಾಗುವ ಸಾಧ್ಯತೆ ಇರುತ್ತಿತ್ತು. ಈಗ ಈ ಮಗುವಿಗೆ ಒಂದು ಕಾಲು ಹೆಚ್ಚಿದೆ ಎಂಬ ನ್ಯೂನತೆ ಹೊರತು ಪಡಿಸಿದರೆ ಬೇರೆ ಯಾವ ಸಮಸ್ಯೆಯೂ ಇಲ್ಲ. ಆದುದರಿಂದ ನೀವು ಗಾಬರಿ ಪಡದೇ ಮಗುವನ್ನು ಸಾಮಾನ್ಯ ಮಗುವಿನಂತೆ ಸಾಕಿ' ಎಂದು ಧೈರ್ಯ ತುಂಬಿದರು.
ಮಗುವಿನ ಅಧಿಕವಿರುವ ಕಾಲನ್ನು ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯುವ ಬಗ್ಗೆಯೂ ಅವನ ತಾಯಿ ಯೋಚನೆ ಮಾಡಿದರು. ಆದರೆ ವೈದ್ಯರು ಅದು ಅವನ ಜೀವಕ್ಕೆ ತೊಂದರೆಯಾದೀತು ಎಂದು ಎಚ್ಚರಿಸಿದಾಗ ಸುಮ್ಮನಾದರು. ಫ್ರಾಂಕ್ ಹುಟ್ಟಿದ್ದು ೧೨ ಮಂದಿ ಮಕ್ಕಳಿರುವ ಬಡ ಕುಟುಂಬವೊಂದರಲ್ಲಿ. ಅವನ ಹೆತ್ತವರಾದ ನತಾಲೆ ಹಾಗೂ ಜಿವೋವ್ನ ಫಾಲ್ಕೋ ಸಾಮಾನ್ಯ ರೈತರಾಗಿದ್ದರು. ಇವರಿಗೆ ತಮ್ಮ ದೊಡ್ದ ಕುಟುಂಬವನ್ನು ಸಾಕುವುದು ಮೊದಲೇ ಬಹಳ ಕಷ್ಟಕರವಾಗಿತ್ತು. ಅದರ ಮಧ್ಯೆ ಈ ವಿಚಿತ್ರ ಮಗು. ಮೂರು ಕಾಲಿರುವುದರಿಂದ ಎಲ್ಲರಿಗೂ ಧರಿಸಲು ಆಗುವ ಬಟ್ಟೆಗಳು ಈತನಿಗೆ ಆಗುತ್ತಿರಲಿಲ್ಲ. ಬೇರೆಯೇ ರೀತಿಯ ಬಟ್ಟೆಗಳನ್ನು ಹೊಲಿಸಬೇಕಾಗಿತ್ತು. ಕ್ರಮೇಣ ಸಿಸಿಲಿಯ ಊರಿನಲ್ಲಿ ಬದುಕು ಕಷ್ಟವಾದಾದ ಅವನ ಹೆತ್ತವರು ಅಮೇರಿಕಾಗೆ ವಲಸೆ ಹೋಗಲು ಮನಸ್ಸು ಮಾಡಿದರು.
ಅಮೇರಿಕಾಗೆ ಹೋಗಲು ಹಡಗು ಹತ್ತಿದಾಗ ಫ್ರಾಂಕ್ ಎಲ್ಲರ ಕಣ್ಣಿಗೂ ಬಿದ್ದ. ಆ ಹಡಗಿನಲ್ಲಿ ಸರ್ಕಸ್ ಕಂಪೆನಿಯ ಕೆಲವರು ಇದ್ದರು. ಅವರು ಫ್ರಾಂಕ್ ನನ್ನು ನೋಡಿ ಈತ ತಮ್ಮ ಸರ್ಕಸ್ ನಲ್ಲಿದ್ದರೆ ಖಂಡಿತಾ ತಮಗೆ ಪ್ರಯೋಜನವಾಗುತ್ತದೆ ಎಂದು ಯೋಚನೆ ಮಾಡಿದರು. ಅವರು ಫ್ರಾಂಕ್ ನ ತಂದೆಯವರ ಎದುರು ಈ ಪ್ರಸ್ತಾಪವನ್ನಿಟ್ಟರು. ಆದರೆ ಅವರು ಅದಕ್ಕೆ ಅಸಮ್ಮತಿಯನ್ನು ಸೂಚಿಸಿದರು. ಮುಂದಿನ ದಿನಗಳಲ್ಲಿ ಮತ್ತೆ ಮನವೊಲಿಸಲು ಪ್ರಯತ್ನಿಸುವ ಎಂದು ಸರ್ಕಸ್ ಕಂಪೆನಿಯವರು ಸುಮ್ಮನಾದರು.
ಅಮೇರಿಕಾದಲ್ಲಿ ಫ್ರಾಂಕ್ ನನ್ನು ಅಂಗವಿಕಲರ ಶಾಲೆಗೆ ಸೇರಿಸಲಾಯಿತು. ಅವನು ಮೊದಲಿಗೆ ಬಹುವಾಗಿ ನೊಂದು ಕೊಂಡರೂ ಕ್ರಮೇಣ ತನ್ನ ಅಂಗವೈಕಲ್ಯವನ್ನು ಹೇಗೆ ಮೆಟ್ಟಿ ನಿಂತು ಗೆಲುವಾಗಿಸಿಕೊಳ್ಳಬಹುದು ಎಂಬುದನ್ನು ಕಲಿತುಕೊಂಡ. ಕ್ರಮೇಣ ಫ್ರಾಂಕ್ ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾರಂಭಿಸಿದ. ಶಾಲಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸುತ್ತಿದ್ದ. ಮೂರನೇಯ ಕಾಲೊಂದಿದೆ ಎಂಬ ವಿಷಯ ಹೊರತು ಪಡಿಸಿ ಫ್ರಾಂಕ್ ಸಾಮಾನ್ಯ ವ್ಯಕ್ತಿಯೇ ಆಗಿದ್ದ.
ಫ್ರಾಂಕ್ ಗೆ ಹದಿನೆಂಟು ವರ್ಷವಾದಾಗ ಸರ್ಕಸ್ ಕಂಪೆನಿಯವರು ಮತ್ತೆ ಆತನನ್ನು ಸಂಪರ್ಕಿಸಿದರು. ಮೊದಲಿಗೆ ಅವನು ನಿರಾಕರಿಸಿದರೂ ಪದೇ ಪದೇ ಒತ್ತಾಯ ಮಾಡಿದಾಗ, ತನ್ನಂತಹ ವಿಚಿತ್ರ ವ್ಯಕ್ತಿಗೆ ಬೇರೆ ಯಾವ ಸಂಸ್ಥೆಯಲ್ಲೂ ಸೂಕ್ತ ನೌಕರಿ ದೊರೆಯಲಾರದು ಎಂದು ಮನಗಂಡ. ಹಲವಾರು ಸರ್ಕಸ್ ಕಂಪೆನಿಯವರು ಸಂಪರ್ಕಿಸಿದರೂ ಅವನು ಒಂದು ಕಂಪೆನಿಯವರನ್ನು ಆಯ್ದುಕೊಂಡ. ಇವನ ಪಾಲ್ಗೊಳ್ಳುವಿಕೆಯಿಂದ ಆ ಸರ್ಕಸ್ ಕಂಪೆನಿಯ ಖ್ಯಾತಿ ಬಹುಬೇಗನೇ ಎಲ್ಲೆಡೆ ಹರಡಿತು. ಫ್ರಾಂಕ್ ಗೂ ಉತ್ತಮ ಸಂಬಳ ನೀಡಲಾರಂಬಿಸಿದರು. ಇದರಿಂದ ಆತನ ಆರ್ಥಿಕ ಸ್ಥಿತಿಯೂ ಸುಧಾರಿಸಿತು. ಇದರಿಂದ ಅವನ ಮನಸ್ಸೂ ತಿಳಿಯಾಯಿತು. ಯಾವ ವಿಷಯ ತನಗೆ ಶಾಪವೆಂದು ಕಂಡಿತ್ತೋ ಆದನ್ನು ವರವಾಗಿ ಮಾಡಿಕೊಂಡೆ ಎಂಬ ಆತ್ಮಸ್ಥೈರ್ಯವು ಅವನಲ್ಲಿ ಮನೆಮಾಡಿತು.
ಮೂರು ಕಾಲುಗಳಿಂದ ಓಡುವುದನ್ನು ಅಭ್ಯಾಸ ಮಾಡಿಕೊಂಡ. ಮೊದಲಿಗೆ ಕಷ್ಟವಾದರೂ ಕ್ರಮೇಣ ಓಡುವುದರಲ್ಲಿ ಪ್ರಗತಿಯನ್ನು ಕಾಣತೊಡಗಿದ. ಸೈಕಲ್ ಬಿಡಲೂ ಕಲಿತ. ನಂತರ ಅವನಿಗೆ ಫುಟ್ಬಾಲ್ ಆಟದಲ್ಲಿ ಆಸಕ್ತಿ ಹುಟ್ಟಿಕೊಂಡಿತು. ಕ್ರಮೇಣ ತನ್ನ ಮೂರನೇ ಕಾಲಿನಲ್ಲೂ ಬಾಲ್ ಒದೆಯಲು ಪ್ರಾರಂಭಿಸಿ ಯಶಸ್ವಿಯಾದ. ಇದರಿಂದ ಅವನಿಗೆ ತಾನು ಯಾರಿಗೂ ಕಮ್ಮಿ ಇಲ್ಲ ಎಂಬ ನಂಬಿಕೆ ಮೂಡಿತು. ತಾನು ಅಂಗವಿಕಲನಲ್ಲ. ದೇವರು ಎಲ್ಲರಿಗೂ ಇರುವುದಕ್ಕಿಂತಲೂ ನನಗೆ ಸ್ವಲ್ಪ ಜಾಸ್ತಿಯೇ ನೀಡಿದ್ದಾನೆ ಎಂದು ತಿಳಿದುಕೊಂಡ. ಈ ಕಾರಣದಿಂದಲೇ ನಾನಿಂದು ಇಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದೇನೆ ಎಂದು ಅವನಿಗೆ ಅರಿವಾಯಿತು.
ಅವನು ತನ್ನ ಮೂರನೇ ಕಾಲನ್ನು ನಡೆದಾಡಲು ಬಳಸುತ್ತಿರಲಿಲ್ಲ. ಆ ಕಾಲಿನ ಮೇಲೆ ಅಧಿಕ ಭಾರವನ್ನೂ ಹಾಕುತ್ತಿರಲಿಲ್ಲ. ಅದನ್ನು ಒಂದು ಸ್ಟೂಲಿನ ಹಾಗೆ ಉಪಯೋಗಿಸುತ್ತಿದ್ದ. ಫ್ರಾಂಕ್ ನ ಹಾಸ್ಯ ಪ್ರಜ್ಞೆಯೂ ಉನ್ನತ ಮಟ್ಟದಲ್ಲಿತ್ತು. ಬಾಲ್ಯದಿಂದಲೇ ಎಲ್ಲರಿಗೂ ಹಾಸ್ಯದ ವಸ್ತುವಾಗಿದ್ದ ಫ್ರಾಂಕ್ ಈ ಲೇವಡಿಗಳನ್ನು ತನ್ನ ವ್ಯಕ್ತಿತ್ವಕ್ಕೆ ಸರಿಯಾಗುವಂತೆ ಬಳಸಿಕೊಳ್ಳಲು ಕಲಿತ. ಒಮ್ಮೆ ಅವನು ತನಗಾಗಿ ಶೂಗಳನ್ನು ಖರೀದಿಸುತ್ತಿದ್ದ. ಮೂರು ಕಾಲುಗಳಿರುವುದರಿಂದ ಎರಡು ಜೊತೆ ಶೂಗಳನ್ನು ಕೊಂಡುಕೊಂಡ. ಇದನ್ನು ಗಮನಿಸಿದ ಓರ್ವ ಅವನನ್ನು ನಾಲ್ಕನೇ ಶೂ ಹಾಕಲು ನಿನಗೆ ದನದ ಹಾಗೆ ನಾಲ್ಕು ಕಾಲುಗಳಿಲ್ಲವಲ್ಲ ಎಂದು ಹಾಸ್ಯ ಮಾಡಿದ. ಅದಕ್ಕೆ ನಗುತ್ತಲೇ ಉತ್ತರಿಸಿದ ಫ್ರಾಂಕ್ ‘ಒಂದು ವೇಳೆ ನಿನಗೆ ಅವಘಡವಾಗಿ ಒಂದು ಕಾಲು ಮುರಿದರೆ ಉಳಿಯುವ ಒಂದು ಕಾಲಿಗೆ ಈ ಶೂವನ್ನು ನಾನು ಕೊಡುಗೆಯಾಗಿ ಕೊಡುವೆ' ಎಂದ.
ನಮಗೂ ಫ್ರಾಂಕ್ ಲೆಂಟಿನಿಯ ಬದುಕು ಪಾಠವಾಗಬೇಕು. ನಮ್ಮ ಸಮಾಜದಲ್ಲಿ ಕೆಲವರಲ್ಲಿರುವ ಅಂಗವಿಕಲತೆಯನ್ನು ಮೀರಿ ಬೆಳೆಯಲು ಅವರು ಪ್ರಯತ್ನಿಸಬೇಕು. ಕೈಕಾಲುಗಳಿಲ್ಲ, ಕಣ್ಣು ಕಾಣಿಸುವುದಿಲ್ಲ, ಕಿವಿ ಕೇಳುವುದಿಲ್ಲ, ಬಾಯಿ ಬರುವುದಿಲ್ಲ ಹೀಗೆ ಹತ್ತು ಹಲವಾರು ಸಮಸ್ಯೆಗಳು ನಿಮ್ಮಲ್ಲಿರಬಹುದು. ಅವುಗಳನ್ನೆಲ್ಲಾ ಮೆಟ್ಟಿ ನಿಲ್ಲಬೇಕು. ಫ್ರಾಂಕ್ ನನ್ನೇ ಗಮನಿಸಿ. ಸರ್ಕಸ್ ಕಂಪೆನಿಯಲ್ಲಿ ದುಡಿದ. ಉತ್ತಮ ಫುಟ್ಬಾಲ್ ಆಟಗಾರನಾದ. ಸೈಕಲ್ ಕಲಿತ. ಮದುವೆಯನ್ನೂ ಆದ. ನಾಲ್ಕು ಮಕ್ಕಳ ತಂದೆಯೂ ಆದ. ಮೂರು ಕಾಲುಗಳೊಂದಿಗೆ ಸಂತೃಪ್ತ ಜೀವನ ನಡೆಸಿ ತನ್ನ ೭೭ನೇಯ (೧೯೬೬ ಸೆಪ್ಟೆಂಬರ್ ೨೧) ವಯಸ್ಸಿನಲ್ಲಿ ನಿಧನ ಹೊಂದಿದ. ಈಗಲೂ ಯುರೋಪ್ ಹಾಗೂ ಅಮೇರಿಕಾದ ಫುಟ್ಬಾಲ್ ಪ್ರೇಮಿಗಳು ಫ್ರಾಂಕ್ ಲೆಂಟಿನಿಯ ಮೂರನೇಯ ಕಾಲಿನ ‘ಕಿಕ್' ಅನ್ನು ನೆನಪಿಸಿಕೊಳ್ಳುತ್ತಿರುತ್ತಾರೆ.
(ಮಾಹಿತಿ ಸಂಗ್ರಹ : ಡಿಸೆಂಬರ್ ೧೯೭೯ರ ಕಸ್ತೂರಿ ಮಾಸಿಕ)
ಚಿತ್ರ ಕೃಪೆ: ಅಂತರ್ಜಾಲ ತಾಣ