ಮೂರು ಗಝಲ್ ಗಳು

ಮೂರು ಗಝಲ್ ಗಳು

ಕವನ

ಗಝಲ್ - ೧

ಮೆಲ್ಲುಸಿರಿನ ಗಾಯನದಲ್ಲಿ ಅರಳಿಬಿಡೆ ನನ್ನವಳೆ

ಚೆಲುವಿನ ಅಪ್ಪುಗೆಯಲ್ಲಿ ನರಳಿಬಿಡೆ ನನ್ನವಳೆ

 

ಬೆಸುಗೆಯ ಬಂಧನದಲ್ಲಿ ಪ್ರೀತಿಯಿಲ್ಲವೆಂದೆ ಏಕೆ

ಹಿತವಾಗಿಯೆ ಬಿಗಿದಿರುವೆ ಕೆರಳಿಬಿಡೆ ನನ್ನವಳೆ

 

ತಂಪು ಹನಿಸುವ ಚಂದ್ರ ಇನ್ನೂ ಮುಳುಗಿಲ್ಲ ನೋಡು

ಹಾಸಿಗೆಯ ತುಂಬೆಲ್ಲ ಹೊರಳಿಬಿಡೆ ನನ್ನವಳೆ

 

ಆಲಿಂಗನ ಚೆನ್ನಾಟ ಕುಡಿನೋಟದ ಪ್ರೇಮದೊಸಗೆ

ಮುತ್ತುಗಳ ಮತ್ತಿನಲ್ಲಿ ಸುರುಳಿಬಿಡೆ ನನ್ನವಳೆ

 

ಕೈಹಿಡಿದ ಚೆಲುವನೀಗ ಬಿಡುವನೇನು ಹೇಳು ಈಶಾ

ಹಗಲು ಕಳೆದು ರಾತ್ರಿಗೆಲ್ಲ ಮರಳಿಬಿಡೆ ನನ್ನವಳೆ

***.

ಗಝಲ್ ೨

 

ನಿನ್ನಯ ಮನದಲ್ಲಿ ನಾನೆಂದೂ ನೆಲೆಸಿರುವೆ ಗೆಳತಿ

ಬಾನಿನಲ್ಲಿ ಹೊಳೆವ ಚಂದಿರನ ಬರಿಸಿರುವೆ ಗೆಳತಿ

 

ಮುದ್ದು ಮೊಗದಲ್ಲಿ ನೀ ಹೇಗೆ ಕಾಣುವೆಯೋ ನನಗೆ

ಚಿನ್ನದ ಅಂಬಾರಿಯಂತೆ ನೀನು ತಿಳಿಸಿರುವೆ ಗೆಳತಿ

 

ಕನಸಿನ ಲೋಕದಲ್ಲಿ ನಿನ್ನದೆ ಹೆಜ್ಜೆಯ ಕಂಡಿರುವೆ

ನನಸೊಳು ಬಾರೆಯಾ ನೀನು ಹಿಡಿಸಿರುವೆ ಗೆಳತಿ

 

ಬೇವಿನ ಮರದೊಳಗೆ ಎಂದೂ ಸವಿಜೇನು ಸಿಗದು

ಹೂವಿನ ಪರಿಮಳವ ನಿನ್ನೊಳು ಬೆರೆಸಿರುವೆ ಗೆಳತಿ

 

ಪ್ರೀತಿಯ ಜೀವನದಿ ಪಯಣವ ಮಾಡೋಣ ಸವಿಯೆ

ಮಧುವನದ ತುಂಬೆಲ್ಲ ಕೈಹಿಡಿದು ನಡೆಸಿರುವೆ ಗೆಳತಿ

***

ಗಝಲ್- ೩

ಮಧುರ ಕ್ಷಣಗಳ ಅರಿವಿದೆ ಮೌನವಾಗಿರು

ಬದುಕಿಗೆ ಸುಂದರ ಹರವಿದೆ ಮೌನವಾಗಿರು

 

ಪ್ರೀತಿಯ ತಂತಿಗೆ ಮನವಿದೆ ಮೌನವಾಗಿರು

ಕೈಯಬಳೆ ಸದ್ದಿಗೆ ತನುವಿದೆ ಮೌನವಾಗಿರು

 

ತುಟಿಗೆ ಮೀರಿದ ಚೆಲುವಿದೆ ಮೌನವಾಗಿರು

ಚೈತ್ರದ ಸೊಗಸಿಗೆ ದಿನವಿದೆ ಮೌನವಾಗಿರು

 

ರಾತ್ರಿಯ ಚಂದಿರನಿಗೆ ಒಲವಿದೆ ಮೌನವಾಗಿರು

ತಾರೆಯ ನೋಟದಲಿ ಗೆಲುವಿದೆ ಮೌನವಾಗಿರು

 

ಈಶನೊಲವಿಗೆ ಬಿರಿದ ಫಲವಿದೆ ಮೌನವಾಗಿರು

ಮನದರಸಿಗೆ ಸವಿಯ ಕುಲವಿದೆ ಮೌನವಾಗಿರು

-ಹಾ ಮ ಸತೀಶ ಬೆಂಗಳೂರು

ಚಿತ್ರ್