ಮೂರು ಗಝಲ್ ಗಳು
೧.
ಸ್ವತಂತ್ರ ನಾಡಿನ ಶ್ರೇಣಿಗಳೊಳಗೆ ಪುಣ್ಯ ಪುರುಷರ ಬೀಡುಗಳು
ಕ್ಷಾತ್ರ ಕಲೆಗಳ ನಾಡುಗಳೊಳಗೆ ಪುಣ್ಯ ಪುರುಷರ ಬೀಡುಗಳು
ಶೂರರು ಮೆರೆದಿಹ ನೆಲ ಇದುವು ಕವಿಗಳು ಜನಿಸಿದ ನೆಲೆಯಿದುವು
ಸೊಬಗಿನ ಸುಂದರ ಕೋಡುಗಳೊಳಗೆ ಪುಣ್ಯ ಪುರುಷರ ಬೀಡುಗಳು
ವಿಶ್ವದ ಮಾನ್ಯತೆ ತಾಣದ ಜೊತೆಗೆ ಮನ್ನಣೆ ಪಡೆದಿಹ ಜೀವನ ಫಲವು
ಪ್ರೇಮವು ತುಂಬಿದ ಭಾವನೆಯೊಳಗೆ ಪುಣ್ಯ ಪುರುಷರ ಬೀಡುಗಳು
ಭಾರತ ಮಾತೆಯ ಒಲವಿನ ಮೈಯೊಳು ನಲಿವಿನ ನದಿಗಳ ಕಾಯವಿದು
ಮುಂದಿನ ಜನತೆಯ ಸ್ಪೂರ್ತಿಗಳೊಳಗೆ ಪುಣ್ಯ ಪುರುಷರ ಬೀಡುಗಳು
ಈಶನ ಮುಂದಿನ ನನಸಿನ ದೇಗುಲ ಭಕುತಿಯ ಜೊತೆಯಲಿ ಸಾಗುವುದು
ಮೌನವ ಮುರಿಯತ ನೆಮ್ಮದಿಯೊಳಗೆ ಪುಣ್ಯ ಪುರುಷರ ಬೀಡುಗಳು
***
೨.
ಬುವಿಯಲ್ಲಿ ಮುಂಗಾರಿನ ಸವಿಯ ಹೊಳೆ ಹರಿಯುತ್ತಿದೆ ಗೆಳತಿ
ಪ್ರೀತಿಯ ಮೂರಕ್ಷರದೊಳು ಜೇನಿನ ಹನಿ ಹೊಳೆಯುತ್ತಿದೆ ಗೆಳತಿ
ಮಧುರ ಗಾನದ ಮೋಹ ಸುತ್ತಲೆಲ್ಲವು ಚೆಲ್ಲಿ ಮರೆಯಾಗಿದೆ
ಅತಿಯೆನಿಪ ಒಡಲ ಬಯಕೆಯು ಕಾಣೆಯಾಗುತ್ತಿದೆ ಗೆಳತಿ
ನನ್ನ ಹೃದಯ ಕಮಲದ ಮಕರಂದವ ಬಗೆದು ನೋಡುತ್ತಿದ್ದೇನೆ
ಮೋಹಕ ರೂಪದ ಚೆಲುವ ರಾಶಿಯು ಮರೆಯಾಗುತ್ತಿದೆ ಗೆಳತಿ
ಹುಣ್ಣಿಮೆಯ ದಿನಗಳಲ್ಲಿ ಪ್ರೇಮಾಸರೆಯ ನಡುವೆ ತೇಲುತ್ತಿದ್ದೆ
ಮಾತೇ ಇಲ್ಲದ ಮತ್ತಿನಲ್ಲಿ ತೃಷೆಯು ಮಾಯವಾಗುತ್ತಿದೆ ಗೆಳತಿ
ಉಣಿಸುವವರ ನಡುವೆಯೇ ಗರಬಡಿದವನಂತೆ ಕುಳಿತ ಈಶಾ
ಮುತ್ತೇ ಇಲ್ಲದ ಈ ಜಗತ್ತು ಮತ್ತೊಮ್ಮೆ ಮುನಿಯುತ್ತಿದೆ ಗೆಳತಿ
***
೩.
ಮುತ್ತುಗಳು ಸಿಗಲಿಲ್ಲ ಬದುಕಿಂದ ದೂರ ಸಾಗಿತೆ ಸಾಕಿ
ಚಿತ್ರಗಳು ಬರಲಿಲ್ಲ ಮನವಿಂದು ಹೊರಗೆ ಹಾಕಿತೆ ಸಾಕಿ
ಮರೆಯುವ ಸಮಯದಲಿ ಹತ್ತಿರವೇ ಬರುತ ನಿಂತೆ ಏಕೆ
ದೊರಕುವ ಕಾಮನೆಗೆ ತನುವ ಒಲವಿಂದು ಕಾಡಿತೆ ಸಾಕಿ
ಜನುಮ ಇತ್ತವರ ದಾರಿಯಲೇ ಮರೆತು ಹೋದೆಯೇನು
ಕಾರಣ ಕೊಟ್ಟವರ ಹಾಡಿಯಿಂದ ಪ್ರೀತಿ ಹೋಯಿತೆ ಸಾಕಿ
ಮಧುರ ಭಾವನೆ ಯಾರಿಗೆ ನೆಮ್ಮದಿಯ ಕೊಡುವುದೆ ಹೇಳು
ಆತುರದ ನಿರ್ಧಾರದ ಚೆಲುವಿನಿಂದ ಸೋತು ಮೂಡಿತೆ ಸಾಕಿ
ಜೀವನದ ಕನಸುಗಳ ಸವಿಯಿಂದು ಬರದೆಯೆ ಎಲ್ಲಿದೆ ಈಶಾ
ಕಾಣದೇ ಹೋದ ಪಯಣವು ನಿಜವಾಗಿಯೂ ಮೆಟ್ಟಿತೆ ಸಾಕಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
