ಮೂರು ಗಝಲ್ ಗಳು
ಗಝಲ್-೧
ಯಾವುದಕ್ಕಾಗಿ ದ್ವೇಷಿಸುತ್ತಾರೋ ಅವರ ಬಗ್ಗೆ *ಅನುಕಂಪದಿಂದ* ಇರೋಣ
ಯಾರು ಕೈಹಿಡಿದು ನಡೆಸುತ್ತಾರೋ ಅವರ ಜೊತೆಗೆ *ಪ್ರೀತಿಯಿಂದ* ಇರೋಣ
ಜೀವನವೆಂದರೆ ಏಳೇಳು ಸುತ್ತಿನ ಕೋಟೆಯೆಂದು ತಿಳಿದಿಯೇನು
ಸೋತವರು ಹತ್ತಿರವಿದ್ದರೆ ಅವರ ಬಗ್ಗೆ *ಕರುಣೆಯಿಂದ* ಇರೋಣ
ಬರೆದುದೆಲ್ಲವನು ರದ್ದಿಯೊಳಗೆ ಬಿಸಾಡುತ್ತಿದ್ದರೆ ಸಾಹಿತ್ಯ ಯಾಕೆ ಬೇಕು
ಮಾತಿನಲ್ಲೇ ಸೌಧ ಕಟ್ಟುವವರ ಜೊತೆಗೆ *ಹುಷಾರಿಯಿಂದ* ಇರೋಣ
ಒಲವೆಂದರೆ ನಾವು ತಿಳಿದಷ್ಟು ಸುಲಭದ ವಸ್ತುವಲ್ಲವೋ ಅರಿಯು
ಪ್ರೇಮಕ್ಕೂ ಕಣ್ಣಿದೆಯೆನ್ನುವವರ ಜೊತೆಗೆ *ಹಿಂದಿನಿಂದ* ಇರೋಣ
ಪ್ರತಿಯೊಂದು ಮರದಲ್ಲೂ ಹೂವು ಬಿಟ್ಟಾಗಲಷ್ಟೇ ಪ್ರೀತಿಯರಳುತ್ತದೆ ಈಶಾ
ಯೌವನದಲ್ಲೂ ಕಡಿವಾಣವಿದೆಯೆನ್ನುವರ ಜೊತೆಗೆ *ದೂರದಿಂದ* ಇರೋಣ
***
ಗಝಲ್-೨
ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯೇನು ಗೆಳತಿ
ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯೇನು ಗೆಳತಿ
ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆಳತಿ
ಮೈಮನಗಳ ಮಧುರವಾದ ಭಾವನೆಗಳ ಒಲವಿನೊಳಗೆ ಇರಲಾರೆಯೇನು ಗೆಳತಿ
ಪ್ರೇಮ ಪೂಜಾರಿಯ ಹೃದಯದೊಳಗೆ ಸವಿಯು ಇರುವುದನು ಅನುಭವಿಸಿದೆಯೇನು ಗೆಳತಿ
ಬದುಕೊಳು ಛಲವಿದೆಯೆಂದಾದಲ್ಲಿ ಹೊಂಗನಸುಗಳ ನಡುವೆಯೇ ಅರಳಲಾರೆಯೇನು ಗೆಳತಿ
ಸುಂದರವೆನಿಸುವ ಕೆಂಪಗಿನ ಗುಲಾಬಿಯಲ್ಲಿರುವ ಎಸಳಿನಂತೆ ಶೋಭಿಸಲಾರೆಯೇನು ಗೆಳತಿ
ಮುಳ್ಳುಗಳ ಮನಸ್ಥಿತಿಯ ಕಲ್ಲುಗಳೆಡೆಯಿಂದ ಹೊರಬಂದು ನಡೆಯಲಾರೆಯೇನು ಗೆಳತಿ
ಈಶನ ನನಸಿನ ನೋಟಗಳ ಹೂವಿನ ಮೃದುವಾದ ಬಾಣಗಳಿಗೆ ಮೆಲ್ಲನೆ ನಾಚಿದೆಯೇನು ಗೆಳತಿ
ತುಟಿಯಂಚಿನ ಪ್ರಿಯವಾದ ಮಾತಿನಾಳದ ನಗುವಿನ ಹತ್ತಿರವೇ ಸುಳಿಯಲಾರೆಯೇನು ಗೆಳತಿ
***
ಗಝಲ್-೩
ಮಡಿ ಮಡಿಯು ಎನಬೇಡಿ ದಡಿಯಾಚೆ ಸಾಗದಿರಿ
ಮಡಿಯಾಕೆ ಬೇಕೆನುವ ಗಡಿಯಾಚೆ ಸಾಗದಿರಿ
ನೆಲ ನೆಲಕೆ ತಕರಾರು ಬಹುಜನರೆ ತೊರೆಯದಿರಿ
ನಡೆಯಿರುವ ಪದತಳದ ಗುಡಿಯಾಚೆ ಸಾಗದಿರಿ
ಅಡಿ ಅಡಿಗೆ ಮೈಲಿಗೆಯ ಹಳೆ ವಿಷಯ ಕೆದಕದಿರಿ
ಸುಡುಗಾಡು ಮತ್ಸರದ ಪಡಿಯಾಚೆ ಸಾಗದಿರಿ
ಮುಡಿ ಮುಡಿಗೆ ಸಾಂಗತ್ಯ ಬೇಕೆಂದು ಹಲುಬದಿರಿ
ಕಡುಮನದ ವಿಷಮತೆಯ ನುಡಿಯಾಚೆ ಸಾಗದಿರಿ
ಹೊಡೆ ಹೊಡೆದು ಹೋಗುತಿಹ ಈಶನಿಗೆ ಹೆದರದಿರಿ
ಸುಡುತಿರುವ ರಶ್ಮಿಗಳ ಚಡಿಯಾಚೆ ಸಾಗದಿರಿ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ