ಮೂರು ಗಝಲ್ ಗಳ ದನಿ !
ಗಝಲ್ - ೧
ಬರೆದಿರುವುದೇ ಸಾಹಿತ್ಯ ಅಂದುಕೊಂಡಂತೆ ಇದ್ದೇವೆ
ಬರೆಯಲಾಗದೇ ಸಾಹಿತಿ ಅನಿಸಿಕೊಂಡಂತೆ ಇದ್ದೇವೆ
ವ್ಯಂಜನವೊಂದೇ ಸ್ವರವೇ ಬೇಡವೆನ್ನುವರಿದ್ದಾರೆಯೆ
ನಾಮ ಪದಗಳನೆಲ್ಲ ದೂಡಿ ಕಳೆದುಕೊಂಡಂತೆ ಇದ್ದೇವೆ
ಪದ ಸಂದರ್ಭಗಳ ಬಗ್ಗೆ ಅರಿಯದೆ ತಿರುಳನ್ನೇ ಮುರಿದಿದ್ದೇವೆ
ಗೊತ್ತಿದ್ದರೂ ಹೊಸತನದ ಹೊಲದಿ ಕಾಲಿಟ್ಟುಕೊಂಡಂತೆ ಇದ್ದೇವೆ
ಪ್ರಾಸಗಳ ನಡುವೆ ಓದುಗರಿಗೆ ತ್ರಾಸ ಕೊಟ್ಟು ಸಾಗಿದ್ದೇವೆಯೆ
ಬಲ್ಲೆಗಳ ನಡುವೆ ಪಾರ್ಥೇನಿಯಂ ಹುಟ್ಟಿಕೊಂಡಂತೆ ಇದ್ದೇವೆ
ಬರೆದದುಯೆಲ್ಲ ಸಾಹಿತ್ಯವಲ್ಲ ತಿಳುವಳಿಕೆಯಿದೆ ಈಶಾ
ಬಟ್ಟಿಯಿಳಿಸಿ ಸ್ವಂತ ಬರಹವೆಂದು ಹೇಳಿಕೊಂಡಂತೆ ಇದ್ದೇವೆ
***
ಗಝಲ್ - ೨
ಹೊಟ್ಟೆ ಹಸಿವಿಗೆ ಸೋತವರ ಬದುಕು ಸರಿಯಾಗಲೇ ಇಲ್ಲ ಸಖಿ
ಬಟ್ಟೆ ತೊಡಲು ಗತಿಯಿಲ್ಲದೆ ಜೀವನ ಗರಿಯಾಗಲೇ ಇಲ್ಲ ಸಖಿ
ಹುಟ್ಟು ದೌಲತ್ತಿನ ಹಾಸಿಗೆಯಲ್ಲಿ ಮಲಗಿದವರು ಎಲ್ಲಿದ್ದಾರೋ
ದಟ್ಟ ಹೊಗೆಯಲ್ಲಿ ಎಳೆವ ತೋಳಿಗೆ ಅರಿವಾಗಲೇ ಇಲ್ಲ ಸಖಿ
ಹಟ್ಟಿ ಬಿಟ್ಟಿರುವ ಜನರಿಗೆ ಚಿಂತನೆ ಇರುವುದೇ ಇಂದು ಹೇಳು
ಕಟ್ಟಿ ಹೊತ್ತಿರುವ ಕನಸುಗಳು ಮನೆಯೊಳಗೆ ಮರಿಯಾಗಲೇ ಇಲ್ಲ
ನೆಟ್ಟ ಮನಸಿನಲ್ಲಿಯದು ಭಯದ ಗುಂಡಿಗೆಯೇ ಕಂಡರೆ ಹೇಗೆ
ಕುಟ್ಟಿ ಪುಡಿಯ ಮಾಡಲಿಂದು ತನುವದುವು ಉರಿಯಾಗಲೇ ಇಲ್ಲ
ಮಟ್ಟ ಹಾಕಲಿಂದು ಬೇಕು ಉಳ್ಳವರಿಗೆ ಅಂಬಲಿಯನು ತಿನಿಸಿ
ಸುಟ್ಟು ಕ್ರೌರ್ಯವ ಬಾಳ ಬೇಕೆಂಬುವುದು ಗುರಿಯಾಗಲೇ ಇಲ್ಲ ಸಖಿ
-ಹಾ ಮ ಸತೀಶ ಬೆಂಗಳೂರು
***
ಗಝಲ್ - ೩
ಮಲ್ಲಿಗೆಯ ಮೊಗ್ಗರಳಿ ಕಂಪು ಅಡರಿದಂತೆ ನಿನ್ನೊಲವು
ಕಗ್ಗತ್ತಲ ಹಾದಿಯಲಿ ಹಚ್ಚಿಟ್ಟ
ಸೊಡರಿನಂತೆ ನಿನ್ನೊಲವು ||
ಚಿಗುರುಣಿಸೆ ಕದ್ದು ತಿಂದಂತೆ
ಆ ನಿನ್ನ ಮಧುರ ಸ್ಪರ್ಶವು
ಚಿಗುರೊಡೆದ ಎಲೆ ಬಿಡೊ ವಸಂತ ಋತುವಿನಂತೆ ನಿನ್ನೊಲವು ||
ಆಗುಂಬೆಯ ಸೂರ್ಯಾಸ್ತವೂ
ನಿನ್ನಂದದೈಸಿರಿಗೆ ಮಂಕಾಯಿತೇ
ದಾಳಿಂಬೆಯ ಸೊಗಸಾದ ಫಲದ
ಸೊಗಡಿನಂತೆ ನಿನ್ನೊಲವು ||
ಕುಣಿಯುವ ನವಿಲು ನಾಚಿತಲ್ಲ ನಿನ್ನ ನಡಿಗೆಯ ಕಂಡು
ತೀಡಿದಷ್ಟೂ ಘಮಿಸುವ ಶ್ರೀಗಂಧದ
ಕೊರಡಿನಂತೆ ನಿನ್ನೊಲವು ||
ಕಾರ್ಮೋಡದ ಮರೆಯಲ್ಲಿ ಮಿನುಗೊ
ಬಿಜಲಿಗೆ ಜಗ ಬೆರಗು
ಮೇಘಗಳು ಸುರಿಸೊ ಸ್ವಾತಿಮುತ್ತಿನ
ಮಳೆಯ ಹನಿಗಳಂತೆ ನಿನ್ನೊಲವು ||
-ಈರಪ್ಪ ಬಿಜಾಪೂರ ಕೊಪ್ಪಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ