ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

ಬರಹ

ಈತನ ಹೆಸರು ಬಸಪ್ಪ ಫಕೀರಪ್ಪ ಮುಳಗುಂದ. ವಯಸ್ಸು ೭೫ ವರ್ಷ.

ಧಾರವಾಡದ ವಿರಕ್ತಮಠ ಓಣಿಯ ಮೂವತ್ತಡಿಯ ಪುಟ್ಟ ರಸ್ತೆಯ ಒಂದು ಪಕ್ಕದಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ಈತ ಠಿಕಾಣಿ ಹೂಡ್ಡಿದ್ದಾನೆ. ಯಾರನ್ನೂ ಏನೂ ಕೇಳುವುದಿಲ್ಲ. ಯಾರಾದರೂ ಹಣ ಅಥವಾ ಆಹಾರ ಕೊಡಲು ಬಂದರೆ ಸ್ವೀಕರಿಸುವುದಿಲ್ಲ. ರಸ್ತೆ ಪಕ್ಕ, ಚರಂಡಿ ಮೇಲೆ ದಿನಕ್ಕೆ ಎರಡು ಹೊತ್ತು ಅಡುಗೆ ಮಾಡುತ್ತಾನೆ. ಉಳಿದಂತೆ ಅವರಿವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ರಾತ್ರಿಯಾಗುತ್ತಲೇ ಅಲ್ಲೇ ರಸ್ತೆ ಪಕ್ಕ ಮಲಗಿ ಬಿಡುತ್ತಾನೆ.

ಕಳೆದ ಮೂವತ್ತೆರಡು ವರ್ಷಗಳಿಂದ ಒಂದು ದಿನವೂ ವ್ಯತ್ಯಾಸವಾಗದಂತೆ ಈತ ಇಂತಹ ಬದುಕನ್ನು ನಡೆಸುತ್ತ ಬಂದಿದ್ದಾನೆ. ಒಂದು ವೇಳೆ ಈತ ಯಾರಿಂದಾದರೂ ಏನನ್ನಾದರೂ ಕೇಳ್ದಿದರೆ ಅದು ‘ವೇಳೆ ಎಷ್ಟು?’ ಎಂದು ಮಾತ್ರ.

ಏಕೆಂದರೆ ಈತ ಅಡುಗೆ ಮಾಡುವುದೇ ಎರಡು ಹೊತ್ತು. ಬೆಳಿಗ್ಗೆ ೧೦ಕ್ಕೆ ಹಾಗೂ ಸಂಜೆ ೫ಕ್ಕೆ. ಅದಕ್ಕಾಗಿ ಮಾತ್ರ ಸಮಯ ವಿಚಾರಿಸುವುದು. ಅದು ಬಿಟ್ಟರೆ ಆತನಿಗೆ ಈ ಜಗತ್ತಿನಿಂದ ಆಗಬೇಕಾಗಿರುವುದು ಏನೂ ಇಲ್ಲ.

ಸಿನಿಮಾ ಚಟ

ಬಸಪ್ಪ ಮುಳಗುಂದ ಮೊದಲು ಹೀಗಿದ್ದಿಲ್ಲ. ಅಂದರೆ ರಸ್ತೆ ಬದಿ ವಾಸವಾಗಲು ಬರುವುದಕ್ಕೆ ಮುಂಚೆ ಮಂಗಳವಾರಪೇಟೆಯ್ಲಲಿ, ವಕೀಲರೊಬ್ಬರ ಮನೆಯ ಪಕ್ಕ ಸ್ವಂತ ಮನೆ ಹೊಂದಿದ್ದ. ಮದುವೆಯಾಗಿದ್ದಿಲ್ಲ. ಪರಿಚಯದವರ ಬಟ್ಟೆ ಬರೆಗಳನ್ನು ಒಂದಾಣೆಗೆ ಎರಡರಂತೆ ಒಗೆದು, ಇಸ್ತ್ರೀ ಮಾಡುವ ಕೆಲಸ ಮಾಡುತ್ತಿದ್ದ. ಬಂದ ಹಣದಲ್ಲಿ ಊಟದ ಖರ್ಚು ತೆಗೆದರೆ ಮಿಕ್ಕಿದ್ದೆಲ್ಲ ಸಿನಿಮಾ ನೋಡಲು ಖರ್ಚಾಗುತ್ತಿತ್ತು.

ಕ್ರಮೇಣ ಸಿನಿಮಾ ವೀಕ್ಷಣೆ ಹುಚ್ಚಿನ ರೂಪಕ್ಕೆ ತಿರುಗಿತು. ಊಟದ ಪರಿವೆಯೂ ಇಲ್ಲದೇ ಸಿನಿಮಾ ನೋಡುವುದು ರೂಢಿಯಾಯಿತು. ಒಂಟಿಯಾಗ್ಗಿದ್ದ ಬಸಪ್ಪ ಸಿನಿಮಾ ವೀಕ್ಷಣೆಯಲ್ಲಿ ಮುಳುಗಿಹೋದ. ಇತ್ತ ಆತನ ಏಕೈಕ ಆಸ್ತಿಯಾಗಿದ್ದ ಮನೆ ಪಕ್ಕದಲ್ಲೇ ಇದ್ದ ವಕೀಲರ ಪಾಲಾಯಿತು.

ಬೀದಿಗೆ ಬಂದ ಬದುಕು

ಬಸಪ್ಪ ಬೀದಿಗೆ ಬಂದಿದ್ದು ಹಾಗೆ. ಮನೆ ಹೋಗಿದ್ದಕ್ಕೆ ಆತನಿಗೆ ವ್ಯಥೆ ಇರಲಿಲ್ಲ. ಆಸ್ತಿಯ ಬಗ್ಗೆ ಮೋಹವೂ ಇರಲಿಲ್ಲ. ಅದ್ಹೇಗೋ ಸಿನಿಮಾ ಚಟ ಬಿಟ್ಟು ಹೋಯಿತು. ಮೊದಲೇ ಮಾತು ಕಡಿಮೆ ಇದ್ದ ಬಸಪ್ಪ ಈಗ ಪೂರ್ತಿ ಮೌನಿಯಾದ. ತನ್ನ ಪಾಡಿಗೆ ತಾನು ರಸ್ತೆ ಬದಿ ಅಡುಗೆ ಮಾಡಿಕೊಂಡು, ಅಲ್ಲೇ ಬದುಕು ಪ್ರಾರಂಭಿಸಿದ. ಅವತ್ತಿನಿಂದ ವಿರಕ್ತಮಠದ ಪುಟ್ಟ ರಸ್ತೆ ಬದಿಯೇ ಆತನಿಗೆ ಮನೆಯಾಗಿದೆ.

ಬೆಳಿಗ್ಗೆ ಊಟವಾದ ನಂತರ ಸುತ್ತಲಿನ ಮನೆಗಳಿಗೆ ಹೋಗಿ ಕರೆಂಟ್-ನೀರಿನ ಬಿಲ್ ಕಟ್ಟುವುದು, ನೀರು ತುಂಬಿಕೊಡುವುದು ಮುಂತಾದ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ಪರಿಚಯದವರ ಹಿಟ್ಟಿನ ಗಿರಣಿಗೆ ಹೋಗಿ, ಕೆಳಗೆ ಬಿದ್ದ ಹಿಟ್ಟನ್ನು ತಂದು ತನ್ನ ಅಡುಗೆ ಮಾಡಿಕೊಳ್ಳುತ್ತಾನೆ. ಅದು ಬಿಟ್ಟರೆ ತನ್ನ ಸೇವೆಗೆ ಆತ ಯಾರಿಂದಲೂ ಒಂದು ಪೈಸೆಯನ್ನೂ ಪಡೆಯುವುದಿಲ್ಲ. ಹಬ್ಬ ಇರಲಿ, ದುರ್ದಿನಗಳು ಬರಲಿ, ತನ್ನ ಮುದ್ದೆಯಂತಹ ಹಿಟ್ಟಿನ ರೊಟ್ಟಿ ಬಿಟ್ಟರೆ ಆತ ಬೇರೆ ಏನನ್ನೂ ತಿನ್ನುವುದಿಲ್ಲ.

 ಇದೊಂಥರಾ ಮಾನಸಿಕ ವ್ಯಕಲತೆ. ಆದರೆ, ಬಸಪ್ಪನ ದುರಾದೃಷ್ಟಕ್ಕೆ ಯಾರೂ ಚಿಕಿತ್ಸೆ ಮಾಡಿಸಿಲ್ಲ. ಕಳೆದ ಮೂರು ದಶಕಗಳಲ್ಲಿ ಧಾರವಾಡ ಸಾಕಷ್ಟು ಬದಲಾಗಿದೆ. ಬೇಕಾದಷ್ಟು ಬೆಳೆದಿದೆ. ಇಡೀ ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದ ಮಾನಸಿಕ ಆರೋಗ್ಯ ಆಸ್ಪತ್ರೆ ಧಾರವಾಡದಲ್ಲಿದ್ದರೂ ಬಸಪ್ಪನಿಗೆ ಆ ಸೇವೆ ದಕ್ಕಿಲ್ಲ. ಎಲ್ಲರ ನಿರ್ಲಕ್ಷ್ಯಕ್ಕೆ ಒಳಗಾಗಿ, ಹೀಗೇ, ರಸ್ತೆಯ ಮೇಲೆ ಉಳಿದುಕೊಂಡೇ ಆತ ತನ್ನ ಯೌವನ ಕಳೆದುಬಿಟ್ಟ.

ಎಲ್ಲದಕ್ಕೂ ಸರ್ಕಾರವನ್ನು ಬೇಡುವ ದೂರುವ ಜನರ ನಡುವೆ ಏನನ್ನೂ ಕೇಳದ, ಏನಾದರೂ ಕೊಡಲು ಬಂದರೂ ನಿರಾಕರಿಸುವ, ಸುತ್ತಲಿನವರ ನೆಮ್ಮದಿ ಹೆಚ್ಚಿಸುತ್ತಲೇ ರಸ್ತೆ ಬದಿ ತನ್ನ ನೆಮ್ಮದಿ ಕಂಡುಕೊಂಡಿರುವ ಬಸಪ್ಪ ಮುಳಗುಂದ ನಿಜಕ್ಕೂ ವಿಕ್ಷಿಪ್ತ, ಆದರೆ ಅಪರೂಪದ ವ್ಯಕ್ತಿ.

- ಚಾಮರಾಜ ಸವಡಿ