ಮೃದುತನವೇ ಜೀವನ

ಮೃದುತನವೇ ಜೀವನ

ಇಂದಿಗೆ ಸುಮಾರು ೨,೫೦೦ ವರ್ಷಗಳ ಹಿಂದೆ ಚೀನಾದಲ್ಲಿದ್ದ ಕನ್ಫ್ಯೂಷಿಯಸ್ ಒಬ್ಬ ತತ್ವಜ್ಞಾನ, ಚಿಂತಕ, ಕವಿ ಮತ್ತು ರಾಜಕಾರಣಿ. ಆತ ಸುಮಾರು ೭೧ ವರ್ಷಗಳ ಕಾಲ ಬದುಕಿದ್ದ. ಹೊಸತನ್ನು ಹುಡುಕುವುದು, ಹೊಸ ವಿಚಾರಗಳನ್ನು ಚಿಂತಿಸುವುದು, ಅವುಗಳನ್ನು ತನ್ನ ಶಿಷ್ಯರಿಗೆ ಮತ್ತು ಜನರಿಗೆ ತಲುಪಿಸುವುದು ಎಂದರೆ ಅವನಿಗೆ ಬಹಳ ಆಸಕ್ತಿ, ಖುಷಿ.

ಆತನು ಈ ಆಸಕ್ತಿಯನ್ನು ಕೊನೆಯ ತನಕವೂ ಇಟ್ಟುಕೊಂಡಿದ್ದ. ಆತ ಮರಣಶಯ್ಯೆಯಲ್ಲಿದ್ದಾಗ, ಒಂದು ದಿನ ತನ್ನ ಶಿಷ್ಯರನ್ನು ಕರೆದು, ಒಂದು ಹೊಸ ವಿಚಾರ ಹೇಳುತ್ತೇನೆ ಎಂದ. ಆಗಿನ ಕಾಲದ ಬಹುದೊಡ್ಡ ತತ್ವಜ್ಞಾನಿಯಾಗಿದ್ದ ಕನ್ಫ್ಯೂಷಿಯಸ್, ಕೊನೆಯದಾಗಿ ಏನನ್ನೋ ಮಹತ್ವವಾದದ್ದು ಹೇಳುತ್ತೇನೆ ಎಂದಾಗ, ಅದೊಂದು ದೊಡ್ಡ ಸುದ್ದಿಯಾಯಿತು. ಹಲವಾರು ಜನರು ಆತನ ಕೊನೆಯ ಬೋಧನೆಯನ್ನು ಕೇಳಲು ನೆರೆದರು.

ಜನಸಂದಣಿ ಜಾಸ್ತಿಯಾಯಿತು. ಆಯ್ದ ಕೆಲವೇ ಕೆಲವು ಶಿಷ್ಯರನ್ನು ಮಾತ್ರ ಆತನ ಬಳಿ ಇರುವಂತೆ ನೋಡಿಕೊಳ್ಳಲಾಯಿತು. ಕನ್ಫ್ಯೂಷಿಯಸ್ ತನ್ನ ಶಿಷ್ಯರಿಗೆ ಹೇಳಿದ -”ಮಕ್ಕಳೇ, ನಾನು ಹೇಳುತ್ತಿರುವುದು ನಿಮಗೆ ಕೇಳಿಸುತ್ತಿದೆಯೇ?”

“ಹೌದು ಗುರುಗಳೇ, ಹೇಳಿ, ಕೇಳಿಸುತ್ತಿದೆ.”

“ನನಗೆ ಒಂದು ಸಹಾಯ ಮಾಡುತ್ತೀರಾ?” ಎಂದು ಕನ್ಫ್ಯೂಷಿಯಸ್ ಕೇಳಿದಾಗ, ಶಿಷ್ಯರು ಮೊದಲು ಗೊಂದಲಕ್ಕೆ ಬಿದ್ದರು. ಅವರೆಲ್ಲರೂ ಕನ್ಫ್ಯೂಷಿಯಸ್ ನ ಕೊನೆಯ ಬೋಧನೆಯನ್ನು ಕೇಳಲು ನೆರೆದಿದ್ದರು. 

“ಸರಿ ಗುರುಗಳೇ, ನೀವು ಏನನ್ನೋ ಕೇಳಬೇಕು ಎಂದಿರಲ್ಲಾ, ಅದನ್ನು ಕೇಳಬೇಕೆಂದು ಎಲ್ಲರೂ ನೆರೆದಿದ್ದಾರೆ.” ಎಂದ ಒಬ್ಬ ಶಿಷ್ಯ.

“ಅದನ್ನೇ ಹೇಳಬೇಕು ಅಂತಿದ್ದೆ. ಈಗ ನನಗೆ ಒಂದು ಸಹಾಯ ಮಾಡಿ. ಒಬ್ಬರು ನನ್ನ ಮುಖದ ಹತ್ತಿರ ಬನ್ನಿ"

ಶಿಷ್ಯನೊಬ್ಬನು ಕನ್ಫ್ಯೂಷಿಯಸ್ ಹತ್ತಿರ ಹೋದ. 

“ನಾನೀಗ ಬಾಯಿ ತೆರೆಯುತ್ತೇನೆ. ಅದರೊಳಗೆ ನೋಡಿ ಏನು ಕಾಣಿಸುತ್ತಿದೆ ಎಂದು ಹೇಳಪ್ಪಾ” ಎಂದ ಕನ್ಫ್ಯೂಷಿಯಸ್, ತನ್ನ ಬಾಯಿಯನ್ನು ತೆರೆದ.

ಶಿಷ್ಯನು ಗುರುಗಳ ತೆರೆದ ಬಾಯಿಯನ್ನು ನೋಡಿ, “ಗುರುಗಳೇ, ಏನೂ ಕಾಣಿಸುತ್ತಿಲ್ಲ" ಎಂದ. 

“ಬಾಯಿಯಲ್ಲಿರಬೇಕಾದ ಹಲ್ಲು ಕಾಣಿಸುತ್ತಿದೆಯೇ?”

“ಇಲ್ಲ ಗುರುಗಳೇ”

ಸರಿ, ಆದರೆ ನನ್ನ ನಾಲಿಗೆ ಕಾಣಿಸುತ್ತಿದೆಯೇ?”

“ಹೌದು ಗುರುಗಳೇ, ನಿಮ್ಮ ನಾಲಿಗೆ ಕಾಣಿಸುತ್ತಿದೆ. ಅದರ ಸಹಾಯದಿಂದ ನೀವು ಮಾತನಾಡುತ್ತಿರುವಿರಿ ಎಂದು ಎಲ್ಲರಿಗೂ ಕಾಣಿಸುತ್ತಿದೆ.”

“ಹಾಗಿದ್ದಲ್ಲಿ ನನಗೆ ಹಲ್ಲು ಈ ಮೊದಲು ಇತ್ತೇ ಇಲ್ಲವೇ?” ಕನ್ಫ್ಯೂಷಿಯಸ್ ಕೇಳಿದ. 

“ಮೊದಲು ನಿಮಗೆ ಹಲ್ಲುಗಳಿದ್ದವು. ಅವೆಲ್ಲಾ ಬಿದ್ದು ಹೋದವು.” ಎಂದ ಇನ್ನೊಬ್ಬ ಶಿಷ್ಯ. ಹಲ್ಲಿನ ವಿಚಾರ ಬಂದಾಗ, ನೆರೆದಿದ್ದ ಜನರೂ ಕೆಲವು ವಿಚಾರಗಳನ್ನು ಹೇಳಿದರು. ಹಲ್ಲುಗಳು ಮುರಿದು ಹೋಗುವುದು ಸಹಜ. ಎಲ್ಲರಿಗೂ ಅದು ನಡೆಯುವಂಥದ್ದೇ. ಹೆಚ್ಚಿನವರ ಹಲ್ಲುಗಳು ಬಿದ್ದು ಹೋಗುತ್ತವೆ ಎಂದೆಲ್ಲಾ ಚರ್ಚಿಸಿದರು. 

‘ಹಾಗಿದ್ದಲ್ಲಿ, ಹಲ್ಲುಗಳು ಏಕೆ ಮುರಿದು ಹೋದವು?’ ಎಂದು ಕನ್ಫ್ಯೂಷಿಯಸ್ ಕೇಳಿದ. ಅಲ್ಲಿದ್ದ ಶಿಷ್ಯರಿಗೆ ಸರಿಯಾದ ಉತ್ತರ ಹೇಳಲು ಆಗಲಿಲ್ಲ. . ವಯಸ್ಸಾದಂತೆ, ಹಲ್ಲುಗಳು ಬಿದ್ದು ಹೋಗುವುದು ಸಹಜವಲ್ಲವೇ? ಇದನ್ನು ಗುರುಗಳು ಏಕೆ ಕೇಳುತ್ತಿದ್ದಾರೆ ಎಂದು ಕೆಲವರು ಅಚ್ಚರಿ ಪಟ್ಟರು.

‘ಇಲ್ಲೊಂದು ರಹಸ್ಯವಿದೆ. ಈಗ, ಅಂದರೆ , ನನ್ನ ಶಕ್ತಿ ಸಂಪೂರ್ಣ ಉಡುಗಿ ಹೋಗುತ್ತಿರುವಾಗ, ಆ ರಹಸ್ಯದ ಹಿಂದಿರುವ ಸತ್ಯ ನನಗೆ ಹೊಳೆಯಿತು. ಮಗು ಹುಟ್ಟಿದಾಗ ನಾಲಗೆ ಮಾತ್ರ ಇರುತ್ತದೆ. ನನಗೂ ಅಷ್ಟೆ, ಮೊದಲು ನಾಲಗೆ ಮಾತ್ರ ಇತ್ತು. ಕೆಲವು ತಿಂಗಳುಗಳಾದ ಮೇಲೆ ಸಾಕಷ್ಟು ಹಲ್ಲುಗಳು ಬರುತ್ತವೆ. ಆದರೆ, ಮೊದಲಿನಿಂದ ಇದ್ದ ನಾಲಗೆ ಇನ್ನೂ ಇದೆ. ನಂತರ ಬಂದ ಹಲ್ಲುಗಳು ಒಂದೊಂದಾಗಿಯೇ ಮುರಿದು ಹೋದವು. ಏಕೆ ಹೇಳಿ ನೋಡೋಣ?” ಎಂದ ಕನ್ಫ್ಯೂಷಿಯಸ್.

ಶಿಷ್ಯರು ಮತ್ತು ಅಲ್ಲಿದ್ದವರೆಲ್ಲಾ ಮೌನವಾಗಿ, ಗುರುಗಳು ಏನು ಹೇಳುತ್ತಾರೆಂದು ಕಾತುರದಿಂದ ನೋಡುತ್ತಿದ್ದರು.

‘ಹಲ್ಲುಗಳು, ಒರಟು, ಪೆಡಸು ಮತ್ತು ಗಟ್ಟಿ. ಈ ಒರಟುತನದಿಂದಾಗಿ, ಕಾಲ ಕಳೆದಂತೆ, ಅವು ಮುರಿದು ಹೋದವು. ಹುಳುಕು ಹಲ್ಲು ರೋಗಕ್ಕೆ ಗುರಿಯಾದವು. ಆದರೆ ನಾಲಗೆ ಮೆದು. ಯಾವ ದಿಕ್ಕಿಗೆ ಬೇಕಾದರೂ ಹೊರಳಬಲ್ಲದು. ಇದರಿಂದ ಜೀವನಕ್ಕೆ ಒಂದು ಪಾಠವೂ ಇದೆ. ನಾವು ಒರಟಾಗಿದ್ದರೆ, ಬೇಗನೇ ಕುಸಿಯುತ್ತೇವೆ. ಮೃದುವಾಗಿ ಎಲ್ಲರೊಂದಿಗೆ ಹೊಂದಿಕೊಂಡಿದ್ದರೆ ಬದುಕು ಹಸನಾಗುತ್ತದೆ" ಎಂದು ಕನ್ಫ್ಯೂಷಿಯಸ್ ತನ್ನ ಕೊನೆಯ ಬೋಧನೆಯನ್ನು ಹೇಳಿ ಮುಗಿಸಿದ.

-ಶಶಾಂಕ್ ಮುದೂರಿ (ವಿಶ್ವವಾಣಿಯಿಂದ)

ಚಿತ್ರ ಕೃಪೆ: ಅಂತರ್ಜಾಲ ತಾಣ