ಮೇಣದ ಲೋಕ

ಮೇಣದ ಲೋಕ

ಬರಹ

ಮೇಣದ ಲೋಕ
ಮೇಣ ಎಂದ ಕೂಡಲೇ ನಾವು ಹಿಡಿ ಹಿಡಿ ಶಾಪ ಹಾಕುವ ಪವರ್ ಔಟೇಜ್ ನೆನಪಿಗೆ ಬಂದು ಬಿಡುತ್ತದೆ. ಮೇಣದ ಉಪಯೋಗ ಹಲವೆಡೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಬಳಸುತ್ತೇವೆ. ಈ ಆಧುನಿಕ ಇಲೆಕ್ಟ್ರಾನಿಕ್ ಯುಗದಲ್ಲಿ ಇನ್ನೂ ತನ್ನ ಉಪಯುಕ್ತತೆಯನ್ನು ಬಿಟ್ಟು ಕೊಡದೆ ಸೆಣಸುತ್ತಿರುವ ಹಲವು ವಸ್ತುಗಳಲ್ಲಿ ಬಡ ಮೇಣವೂ ಒಂದು.

ಮೇಡಂ ಟುಸ್ಸೋ ( madam tussaud ) ಮೇಣದ ವಸ್ತು ಸಂಗ್ರಹಾಲಯ ಲಂಡನ್ನಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.
ವಿವಿಧ ಕಾರ್ಯಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ ವ್ಯಕ್ತಿಗಳ ಮೇಣದ ಪ್ರತಿಮೆ ಈ ಸಂಗ್ರಹಾಲಯದಲ್ಲಿ. shakespeare ನಿಂದ ಹಿಡಿದು ಶಾರುಕ್ ಖಾನ್ ವರೆಗೆ ಸಾವಿರಾರು ಖ್ಯಾತ ವ್ಯಕ್ತಿಗಳು ಮೇಣದಲ್ಲಿ ಅಮರರು. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಬಚನ್, ಐಶ್ವರ್ಯ, ತೆಂಡೂಲ್ಕರ್, ಕಪಿಲ್ ದೇವ್ ಹೀಗೆ ಸಾಗುತ್ತದೆ ಭಾರತದ ಪಟ್ಟಿ. ಅಮೀರ್ ಖಾನ್ ಮಾತ್ರ ತನ್ನನ್ನು ಮೇಣದ ಮಟ್ಟಕ್ಕೆ ಇಳಿಸಿಕೊಳ್ಳುವುದು ತರವಲ್ಲ ಎಂದೋ ಏನೋ ಒಪ್ಪಲಿಲ್ಲ. ಯುದ್ಧಕೋರರಾದ ಹಿಟ್ಲರ್, ಸದ್ದಾಂ ಇಲ್ಲಿ ರಾರಾಜಿತ. ನಮ್ಮ ಆನೆ ಹಂತಕ ವೀರಪ್ಪನ್ ತನ್ನ ವಿಶಿಷ್ಟ ಮೀಸೆಯೊಂದಿಗೆ ಇಲ್ಲದಿರುವುದು ಸ್ವಲ್ಪ ಬೇಸರವೇ.

ಮೇಡಂ ಟುಸ್ಸೋ (1761–1850), ಫ್ರಾನ್ಸ್ ದೇಶದವರಾದ ಈಕೆ ವೈದ್ಯರಾದ ತನ್ನ ತಂದೆಯಿಂದ ಕಲಿತರು ಮೇಣದ ಶಿಲ್ಪಕಲೆ.

ಈ ಸಂಗ್ರಹಾಲಯದಲ್ಲಿರುವ ಮೂರ್ತಿಗಳಲ್ಲಿ ಕಿಡಿಗೇಡಿಗಳಿಗೆ ಪ್ರೀತಿಯ ಪ್ರತಿಮೆ ಅಡಾಲ್ಫ್ ಹಿಟ್ಲರ್ ನದು. ಒಂದೆರಡು ಸಲ ಹಿಟ್ಲರ್ ನ ಮೇಲೆ ಧಾಳಿ ಮಾಡಿ ಅವನ ತಲೆಯನ್ನು ಬೇರ್ಪಡಿಸಿದ್ದರು ಪುಂಡರು. ಅವರ ಆಕ್ರೋಶವೂ ಅರ್ಹ್ತವಾಗುವನ್ಥದ್ದೆ. ವಿನಾಕಾರಣ ೬೦ ಲಕ್ಷ ಯಹೂದಿಯರನ್ನು ಸಾವಿನ ಕೂಪಕ್ಕೆ ನೂಕಿದವನಲ್ಲವೇ ಹಿಟ್ಲರ್?

ನನ್ನ ತಂಗಿಯ ಮಗ ೯ ವರ್ಷದ ಅಯ್ಮನ್ ಲಂಡನ್ ಪ್ಯಾರಿಸ್ ಪ್ರವಾಸದ ವೇಳೆ ಈ ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ ಲೇಖನದೊಂದಿಗಿರುವುದು. ಅವನ ಅಮ್ಮ ಫೋಟೋ ಕ್ಲಿಕ್ಕಿಸುವಾಗ ಹೇಳಿಸಿಕೊಳ್ಳದೆಯೇ ತನಗೆ ತಾನೇ ಕೈ ಮುಗಿದು ನಿಂತು ಬಿಟ್ಟ ನಮ್ಮನ್ನು ಪರಂಗಿ ದಾಸ್ಯದಿಂದ ಮುಕ್ತಿ ಗೊಳಿಸಿದ ಮಹಾ ಚೇತನದೆದುರು.

ಇನ್ನೂ ಬೇರೆ ಬೇರೆ ಮಹಾಮಹಿಮರೂ ಇದ್ದರು ಕರಗದ ಮೇಣವಾಗಿ. ಇವರಾರಿಗೂ ಕೊಡದ ಮರ್ಯಾದೆ ಗಾಂಧೀಜಿಗೆ ಕೊಟ್ಟಿದ್ದು ನನಗೆ ತಿಳಿಯಲಿಲ್ಲ. ಏಕೆಂದರೆ ಅವನು ಕಲಿಯುತ್ತಿರುವುದು British ಶಾಲೆಯಲ್ಲಿ, ಚರ್ಚಿಲ್, ಥ್ಯಾಚರ್, ರಾಣಿ ವಿಕ್ಟೋರಿಯಾ, ಲೇಡಿ ಡಯಾನ ಇವರ ಬಗ್ಗೆಯೇ ಕೇಳಿದ್ದ ಇವನಿಗೆ ಭಾರತದ ನಾಯಕರ ಪರಿಚಯ ಕಡಿಮೆ. ವಿಚಾರಿಸಿದಾಗ ನನಗೆ ಹಾಗೆ ಕೈ ಮುಗಿಯಬೇಕೆಂದು ತೋಚಿತು ಮುಗಿದೆ ಅಷ್ಟೇ ಎಂದು ಭುಜ ಹಾರಿಸಿ ಹೇಳಿದ.

ಯಾರಲ್ಲೂ ಗೌರವ ಮನೋಭಾವ ಹುಟ್ಟಿಸುವಂಥ ವ್ಯಕ್ತಿತ್ವ ಗಾಂಧಿ ತಾತನದು. ಅದು ಅವರನ್ನು ಕೊಂದ ದುಷ್ಟನಿಗೆ ಹೊಳೆಯದೆ ಹೋಯಿತಲ್ಲ ಎಂದು ಕನಿಕರ ತೋರಿತು.