ಮೇಷ್ಟ್ರನ್ನು ಬದುಕಿಸಿದ ಡೆಂಗ್ಯೂ
ಅಂದು ಮಗಳು ಶಾಲೆ ಬಿಟ್ಟು ಬಂದವಳು ಚೀಲವನ್ನು ಮೇಜಿನ ಮೇಲೆ ಕುಕ್ಕುತ್ತಾಳೆ. ಅಮ್ಮ ಇನ್ನೂ ಬಂದಿರಲಿಲ್ಲ. ಕೆಲಸ ಮುಗಿಸಿ ಅಮ್ಮ ಮನೆಗೆ ಬಂದಾಗ ಮಗಳು ಎಂದಿನಂತೆ ಇಲ್ಲವೆಂಬುವುದು ಅರ್ಥವಾಗಿತ್ತು. ತಿಂಡಿ ತಿನ್ನಲು ಕರೆದರೆ ಬೇಡವೆಂಬ ಉತ್ತರ. ಅಮ್ಮನಿಗೆ ಅದೇಕೋ ಕಳವಳ. ಅದ್ಯಾವುದೋ ಸಮಸ್ಯೆಯಿದೆ ಎಂದು ಆಕೆಗೆ ಅರ್ಥವಾಗಿತ್ತು. ಆದರೆ ಕೇಳಲು ಭಯ. ಸ್ವಲ್ಪ ಹೊತ್ತು ಬಿಟ್ಟು ನಿಧಾನವಾಗಿ ಕೇಳೋಣವೆಂದು ಆಕೆ ಸುಮ್ಮನಾಗುತ್ತಾಳೆ.
ಸುಮಾರು ಹೊತ್ತು ಕಳೆದಿರಬೇಕು. ಮಗಳ ಬಳಿ ಬಂದು ಅಮ್ಮ ಮಾತಾಡಿಸಲು ಪ್ರಯತ್ನಿಸುತ್ತಾಳೆ. ಅಪ್ಪ ಇನ್ನೂ ಮನೆಗೆ ಬಂದಿರಲಿಲ್ಲ. "ಶಾಲೆಯಲ್ಲಿ ಮೇಷ್ಟ್ರು ಏನಾದರೂ ಅಂದ್ರಾ? " ಎಂದು ಕೇಳಿದಳಾಕೆ. ಅದಕ್ಕೆ ಕಾರಣವೂ ಇದೆ. ವಾರದ ಹಿಂದೆ ನಡೆದ ಪೋಷಕರ ಸಭೆಗೆ ಅಮ್ಮ ಬಂದಿದ್ದಳು. ಮಗಳ ಬಗ್ಗೆ ವಿಚಾರಿಸಿದಾಗ ಬಹಳಷ್ಟು ದಿನ ಮಗಳು ಶಾಲೆ ತಪ್ಪಿಸಿದ್ದಳು. ಅಮ್ಮ ಅಪ್ಪ ಇಬ್ಬರೂ ಕೆಲಸಕ್ಕೆ ಹೋಗುವವರು. ಅವರು ಮನೆಗೆ ಬರುವಾಗ ಮಗಳು ಆಗಲೇ ಮನೆ ಸೇರಿರುತ್ತಿದ್ದಳು. ಶಾಲೆಗೆ ರಜೆ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿರಲಿಲ್ಲ. ಅಂಕಗಳನ್ನು ನೋಡಿದಾಗ ಏಕ ಅಂಕಿಗಳೇ ಇದ್ದವು. "ಮೇಷ್ಟ್ರೆ ನೀವು ಸರಿ ನಾಲ್ಕು ಬಾರಿಸಿ, ನಾವು ಕೇಳಲು ಬರುವುದಿಲ್ಲ" ಎಂದು ಹೇಳಿ ಆಕೆ ಮನೆಗೆ ಬಂದಿದ್ದಳು.
ಮನೆಯಲ್ಲಿ ಅಪ್ಪನ ಗಮನಕ್ಕೆ ಇದ್ಯಾವುದೂ ಬರುತ್ತಿರಲಿಲ್ಲ. ಆತನಿಗೆ ಮಗಳ ಬಗ್ಗೆ ತಿಳಿದುಕೊಳ್ಳಲು ಸಮಯವೂ ಇರದು. ಆದರೆ ಮಗಳು ಕೇಳಿದ್ದನ್ನೆಲ್ಲಾ ಎಷ್ಟೇ ಕಷ್ಟವಾದರೂ ತಂದು ಕೊಡುತ್ತಿದ್ದ. ಅಮ್ಮನಿಗೆ ಮಗಳ ಬಗ್ಗೆ ಭಯ. ಆಕೆ ಗಂಡನ ಬಳಿ ಮಗಳ ಬಗ್ಗೆ ಚಕಾರವೆತ್ತುತ್ತಿರಲಿಲ್ಲ.
ಇಂದು ಮಗಳಿಗೆ ಶಾಲೆಯಲ್ಲಿ ಏನೋ ಆಗಿದೆ ಎಂದು ಆಕೆಗೆ ಅನ್ನಿಸತೊಡಗಿತು. ಮಗಳನ್ನು ಮಾತಾಡಿಸಲು ಬಹಳನೇ ಪ್ರಯತ್ನ ಪಡುತ್ತಿದ್ದಳು. ಆಗಲೇ ಆಕೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. "ಅಮ್ಮ ನಾನು ಶಾಲೆಗೆ ಹೋಗುವುದಿಲ್ಲ, ನನಗೆ ಮೇಷ್ಟ್ರು ತುಂಬಾ ಕೆಟ್ಟದಾಗಿ ಬೈದರು." ಎಂದವಳೇ ಮತ್ತಷ್ಟು ಅಳತೊಡಗಿದಳು. ಅಮ್ಮನಿಗೆ ಮನಸ್ಸಿಗೆ ಅದೇನೋ ನೋವಾದಂತೆ ಅನ್ನಿಸತೊಡಗಿತು. ಮೇಷ್ಟ್ರ ಬಗ್ಗೆ ಮನಸ್ಸಿನಲ್ಲೇ ಕುದಿಯ ತೊಡಗಿದಳು. ಮಗಳ ಮುಂದೆಯೇ ಮೇಷ್ಟ್ರಿಗೆ ಮನಸ್ಸಿಗೆ ತೋಚಿದಂತೆ ಬೈಯುತ್ತಿದ್ದಳು.
ಅಪ್ಪ ಅಷ್ಟರಲ್ಲೇ ಕೆಲಸ ಬಿಟ್ಟು ಮನೆಗೆ ಬಂದಿದ್ದ. ಮಗಳು ಎಸ್.ಎಸ್.ಎಲ್.ಸಿ. ಆಕೆ ವಾಚ್ ಬೇಕೆಂದು ಕೇಳಿದ್ದಳು. ಅದ್ಹೇಗೋ ಹಣ ಹೊಂದಿಸಿ ಮಗಳಿಗೆ ಕೊಡಲು ವಾಚ್ ತಂದಿದ್ದ. ಮನೆಗೆ ಬರುತ್ತಿದ್ದಂತೆ ಹೆಂಡತಿಯು ಗಟ್ಟಿಯಾಗಿ ಗೊಣಗುತ್ತಿದ್ದಾಳೆ. ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಅವನಿಗೂ ಸಿಟ್ಟು ನೆತ್ತಿಗೇರಿತು. "ಮೇಷ್ಟ್ರು ಬೈದಿದ್ದಾರೆ" ಅಂದಾಗ ಆತ ಕೆಂಡಾಮಂಡಲವಾದ. ಮಗಳು ಶಾಲೆಗೆ ತಪ್ಪಿಸುವಾಗ ಇಲ್ಲದ, ಅರ್ಧಕ್ಕಿಂತ ಹೆಚ್ಚು ವಿಷಯಗಳಲ್ಲಿ ನಿರಂತರ ಸೊನ್ನೆ ಸುತ್ತುತ್ತಿರುವಾಗ ಬಾರದ ರೋಷವೆಲ್ಲಾ ಇಂದು ಆತನಿಗೆ ಆವರಿಸಿತ್ತು. ಆತನ ರೋಷ ಕಂಡರೆ ಅಪ್ಪನಾಗಲು ಯೋಗ್ಯ ಅನ್ನಿಸುತ್ತಿತ್ತು. ಒಂದು ವಾರದ ಹಿಂದೆ ಮೇಷ್ಟ್ರಿಗೆ ಮಗಳಿಗೆ ಬಾರಿಸಲು ಕೊಟ್ಟ ಭರವಸೆ ಅಮ್ಮನಿಗೆ ಮರೆತೇ ಹೋಗಿತ್ತು.
ಅಕ್ಕ ಪಕ್ಕದವರು ಗದ್ದಲ ಕೇಳಿ ಓಡಿಬಂದರು. ವಿಷಯ ತಿಳಿದಾಗ ಅವರಿಗೂ ಕೋಪ ಉಕ್ಕಿ ಬಂದಿತ್ತು. ಎಲ್ಲರೂ ಸೇರಿ ಮೇಷ್ಟ್ರನ್ನು ಮನಸ್ಸಿಗೆ ಬಂದಂತೆ ಬೈಯುತ್ತಿದ್ದರು. ಪೋಲೀಸ್ ಕಂಪ್ಲೆಂಟ್ ಕೊಡೋದೇ ಸೂಕ್ತ ಎಂಬ ಅಭಿಪ್ರಾಯ ಎಲ್ಲರದ್ದೂ. ಮಗಳನ್ನು ಕರೆದುಕೊಂಡು ಹೋಗಿ ಕೇಸ್ ಕೊಡಿಸಿದ್ದೂ ಆಯಿತು. ಆದರೆ ನಾಳೆ ಶಾಲೆಗೆ ಬಂದು ವಿಚಾರಿಸುತ್ತೇವೆ ಎಂದು ಸಮಾಧಾನ ಮಾಡಿದಾಗ ಮನೆಗೆ ಮರಳಿದ್ದರು.
ಮರುದಿನ ಶಾಲೆಗೆ ಒಂದು ದಂಡೇ ಬಂದಿತ್ತು. ಅವರೆಲ್ಲಾ ಗೇಟಿನ ಹೊರಗಿದ್ದರು. ಶಿಕ್ಷಕರಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ಏನೊಂದೂ ತಿಳಿಯದು. ಅಷ್ಟರಲ್ಲೇ ಪೋಲೀಸರ ಆಗಮನವಾಯಿತು. ಗೇಟ್ ಬಳಿ ಇದ್ದವರೆಲ್ಲಾ ಒಳಗೆ ಗುಂಪು ಸೇರಿದರು. ವಿಚಾರಣೆಗಾಗಿ ಮೇಷ್ಟ್ರನ್ನು ಬರುವಂತೆ ಪೋಲೀಸರು ಕರೆದರು. ಆದರೆ ಆ ಮೇಷ್ಟ್ರು ಶಾಲೆಯಲ್ಲಿ ಇರಲಿಲ್ಲ. ವಿಚಾರಿಸಿದಾಗ ಅವರು ಡೆಂಗ್ಯೂ ಜ್ವರದಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಮೂರು ದಿನದಿಂದ ಶಾಲೆಗೇ ಬಂದಿರಲಿಲ್ಲ. ವಿಷಯ ತಿಳಿಯುತ್ತಿದ್ದಂತೆ ಪೋಲೀಸರೇ ಆವಕ್ಕಾದರೂ. ಹಾಗಾದರೆ ನಡೆದ ಘಟನೆ ಏನು?...
ಬೆಳಕಿಗೆ ಬಂದ ಸತ್ಯ ಬೇರೆನೇ ಆಗಿತ್ತು. ಆಕೆಗೆ ಕಲಿಕೆಯಲ್ಲಿ ಎಲ್ಲಷ್ಟೂ ಆಸಕ್ತಿ ಇರಲಿಲ್ಲ. ಸರಿಯಾಗಿ ಓದಲೂ ಅಸಮರ್ಥಳು. ಈ ಮಧ್ಯೆ ಆತನಿಗೆ ಯುವಕನೊಬ್ಬ ಪರಿಚಯವಾಗಿದ್ದ. ಆಕೆ ಶಾಲೆ ತಪ್ಪಿಸಿ ಆತನೊಂದಿಗೆ ಸಮಯ ಕಳೆಯುತ್ತಿದ್ದಳು. ಕಳೆದ ಮೂರು ದಿನಗಳಿಂದಲೂ ಆಕೆ ಶಾಲೆಗೆ ಬಂದಿರಲಿಲ್ಲ. ಅಂದು ಆಕೆ ಶಾಲೆ ತಪ್ಪಿಸಿ ಆ ಯುವಕನೊಂದಿಗೆ ಇರುವುದನ್ನು ಅವಳದೇ ತರಗತಿಯ ವಿದ್ಯಾರ್ಥಿಗಳಿಬ್ಬರು ಗಮನಿಸಿದ್ದರು. ಅವರು ಅದನ್ನು ಮೇಷ್ಟ್ರಿಗೆ ಹೇಳಿದರೆ ಅವಾಂತರವಾಗುತ್ತದೆ ಎಂದು ಭಾವಿಸಿ ಆಕೆ ಕಟ್ಟಿದ ಕಥೆಯಾಗಿತ್ತು ಇದು. ಮೇಷ್ಟ್ರಿಗೆ ಡೆಂಗ್ಯೂ ಬಂದದ್ದು ಆಕೆಗೆ ಇನ್ನೂ ತಿಳಿಯದು.
ಆಕೆ ಕಟ್ಟಿದ್ದು ಕಥೆಯಾದರೂ ಮೇಷ್ಟರನ್ನು ಡೆಂಗ್ಯು ಕಾಪಾಡಿತ್ತು. ಇದ್ಯಾವುದೂ ತಿಳಿಯದೆ ಆಸ್ಪತ್ರೆಯಲ್ಲಿ ಮಲಗಿಯೂ ಅವರು ಫಲಿತಾಂಶದ ಬಗ್ಗೆಯೇ ಯೋಚಿಸುತ್ತಿದ್ದರು. ಇತ್ತ ಅವರೊಂದಿಗೆ ಬಂದವರು ಅವಕಾಶವೊಂದು ತಪ್ಪಿಹೋದ ಬಗ್ಗೆ ಬೇಸರದಿಂದಲೇ ಹಿಂತಿರುಗಿದರು. ಅಪ್ಪ- ಅಮ್ಮ ಮನೆಯ ಕಡೆ ವೇಗ ಹೆಚ್ಚಿಸಿದರು. ಈ ವಿಷಯಕ್ಕಾದರೂ ಅವರಿಗೆ ಮಗಳನ್ನು ವಿಚಾರಿಸಬೇಕಿತ್ತು. ಅವರು ಇಂದು ಮಗಳನ್ನು ಒಟ್ಟಿಗೆ ಕರೆದುಕೊಂಡು ಬರಬೇಕಿತ್ತು! ಆದರೆ ಮೇಷ್ಟ್ರಿಗೆ ಗತಿ ಕಾಣಿಸುವ ವೇಗದಲ್ಲಿ ಅವರು ಮಗಳನ್ನು ಮನೆಯಲ್ಲಿ ಬಿಟ್ಟು ಬಂದು ಬಹು ದೊಡ್ಡ ಪ್ರಮಾದ ಮಾಡಿದ್ದರು. ಬಹುದೊಡ್ಡ ಸಾಧನೆ ಮಾಡುವ ಆವೇಶದಲ್ಲಿದ್ದ ಅವರಿಗೆ ಮುಂದೆ ನಡೆಯುವ ಅನಾಹುತದ ಅರಿವಿರಲಿಲ್ಲ. ಮನೆ ತಲುಪಿದಾಗ ಬಾಗಿಲಿನ್ನೂ ತೆರೆದೇ ಇತ್ತು. ಮಗಳು ಮನೆಯಲ್ಲಿರಲಿಲ್ಲ. ವಾರ ಕಳೆದರೂ ಮಗಳಿನ್ನೂ ಪತ್ತೆಯಾಗಿಲ್ಲ. ಅವರಿನ್ನೂ ಹುಡುಕಾಟದಲ್ಲೇ ಇದ್ದರೆ, ಇತ್ತ ಮೇಷ್ಟ್ರು ಚೇತರಿಸಿಕೊಂಡು ಮಕ್ಕಳಿಗೆ ಬೋಧಿಸುತ್ತಿದ್ದಾರೆ. ಅವರಲ್ಲಿ ಯಾವ ನಂಬಿಕೆಯೂ ಉಳಿದಿಲ್ಲ.
-ಯಾಕೂಬ್ ಎಸ್ ಕೊಯ್ಯೂರು, ಬೆಳ್ತಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ