ಮೊದಮೊದಲ ಕಲ್ಪನೆಗಳು -ಕೃತಿ :ದೇವರು - ಎ.ಎನ್. ಮೂರ್ತಿರಾವ್

ಮೊದಮೊದಲ ಕಲ್ಪನೆಗಳು -ಕೃತಿ :ದೇವರು - ಎ.ಎನ್. ಮೂರ್ತಿರಾವ್

ಬರಹ

ಮೊದಮೊದಲ ಕಲ್ಪನೆಗಳು

ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ?

ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರುವ ಜ್ವಾಲೆ; ಕಾದು ಕರಗಿ ಉಕ್ಕಿ ತನ್ನ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಮೋಡದ ದಟ್ಟಣೆಯನ್ನು ಇರಿದಿರಿದು ಕಣ್ಣು ಕೋರ್ಯೆಸುವ ಮಿಂಚು; ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಕ್ಷುಬ್ದವಾದ ಸಮುದ್ರ, ಅದರ ತೀರದ ಮೇಲೆ ಅಪ್ಪಳಿಸುವ ಅಲೆಗಳು; ಇವುಗಳ ಜೊತೆಗಿನ ಗುಡುಗಿನ ಆರ್ಭಟ, ಸಿಡಿಲಿನ ಹೊಡೆತ, ಈ ಭಯಂಕರ ಪ್ರಪಂಚದಲ್ಲಿ ನಾನು ಹೇಗೆ ತಾನೆ ಬದುಕಿಯೇನು ?’ ಎಂದು ಅವನು ತಲ್ಲಣಿಸಿರಬೇಕು.

ಹೀಗೆ ಪ್ರಕೃತಿಯ ರೋಷವನ್ನೂ ಅದರ ಮಾರಕ ಪರಿಣಾಮವನ್ನೂ ನೋಡಿದ ಮಾನವನೇ ಅದರ ಮತ್ತೊಂದು ಮುಖವನ್ನೂ ನೋಡಿದ; ಸೂರ್ಯೋದಯ ಸೂರ್ಯಾಸ್ತಗಳ ಬಣ್ಣದ ಸಿರಿ; ಕಾಮನಬಿಲ್ಲಿನ ಸೊಬಗು; ಮಳೆಯಿಂದ (ಆ ಮಳೆ ಗುಡುಗು ಸಿಡಿಲುಗಳ ಜೊತೆಗೆ ಬಂದದ್ದು!) ತೊಯ್ದು ಕಾಡಿನಲ್ಲೂ ಬಯಲಿನಲ್ಲೂ ಹಸುರಿನ ಹಬ್ಬ; ಗಾಳಿಯಲ್ಲಿ ನಲಿದಾಡುತ ಹೂವುಗಳ ಕೋಮಲತೆ, ಸುಗಂಧ; ರಾತ್ರಿಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳು, ಅವುಗಳ ನಡುವಿನ ರಹಸ್ಯಪೂರ್ಣ
ನೀಲಿಯಾಳ; ಜಗತ್ತಿಗೆಲ್ಲ ಸೌಮ್ಯ ಸೌಂದರ್ಯವನ್ನು ಕೊಟ್ಟು, ತಂಪೆರೆಯುವ ಬೆಳದಿಂಗಳು; ಸಮುದ್ರದ ಪಾರವಿಲ್ಲದ ಹರವು, ಗಾಂಭೀರ್ಯ..........

ಮೊದಲು ಕ್ರೂರವಾಗಿದ್ದ ಪ್ರಕೃತಿಯೇ ಈಗ ಪ್ರಸನ್ನವಾಗಿದೆ, ಆಗಿನ ಮುಗ್ಧ ಮಾನವನಿಗೆ ಇದನ್ನು ಕಂಡು ಆಶ್ಚರ್ಯ, ಸಂತೋಷ. ಅದು ಒಂದು ಬಗೆಯ ಮೂಕ ಅನುಭವ; ಅವನು ಅದನ್ನು ಬಣ್ಣಿಸಲಾರ, ವಿಶ್ಲೇಷಿಸಲಾರ. ಈ ರುದ್ರ ಸುಂದರ, ಭೀಷನಪ್ರಸನ್ನ, ಪ್ರಪಂಚರ ವ್ಯಾಪಾರ - ಅವನಿಗೆ ಅದೊಂದು ಒಗಟೆ.

ಇದೆಲ್ಲ ಯಾರ ಕೆಲಸ ? ಯಾವ ಗಾರುಡಿಯ, ಯಾವ ಮಾಯಮಂತ್ರದ ಫಲ? ಇದರ ಹಿಂದೆ ಭವ್ಯವಾದದ್ದು ಏನೋ ಇರಬೇಕು. ಅದು (ಅಥವಾ ಅವನು) ಶತ್ರುವೋ ಮಿತ್ರನೋ? ಅದರದ್ದು ಚಂಚಲ ಮನೋವೃತ್ತಿ ಈ ಘಳಿಗೆ ಮ್ಯೆದಡವುತ್ತಿರುವ ತಂಗಾಳಿ ಮರುಘಳಿಗೆ ಸುಂಟರಗಾಳಿಯಾಗಬಹುದು. ನಿಂತ ನೆಲ ಬಾಯ್ದೆರಬಹುದು! ಪ್ರಕೃತಿವ್ಯಾಪಾರದ ಹಿಂದೆ ಒಂದು ’ಶಕ್ತಿ’ ಇದೆ ಎಂದು ಈಚಿನ ತತ್ವಜ್ಣರು ಹೇಳುವ ಮಾತು ಬಹುಶಃ ಆದಿಮಾನವನಿಗೆ ಹೊಳೆಯುತ್ತಿರಲಿಲ್ಲ.

ಅವನ ಮನಸ್ಸು ಬಲಶಾಲಿಯಾದ ಯಾವದೋ ಒಂದು ವಸ್ತುವನ್ನು ಅಥವಾ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಬಲ್ಲದು; ಅಮೂರ್ತವಾದ(abstract) ಶಕ್ತಿಯನ್ನಲ್ಲ. ಹಾಗೆ ಕಲ್ಪಿಸಿಕೊಂಡ ವಸ್ತುವಿನ ಅಥವಾ ವ್ಯಕ್ತಿಯ ವ್ಯಾಪಾರವೆಲ್ಲ ಮಾಯಾಮಂತ್ರದ ಕೆಲಸ!

ಬಹುಶಃ ಇಂಥದೇನೋ ಇರಬೇಕು- ’ದೇವರು’ ಎಂಬ ಕಲ್ಪನೆಯ ಪೂರ್ವ ಇತಿಹಾಸ. ಆ ಕಲ್ಪನೆಯ ಹಿಂದೆ ಭಯ, ಆಶ್ಚರ್ಯ, ರಕ್ಷಣೆಯನ್ನು ಬೇಡುವ ಮನೋವೃತ್ತಿ, ಇವೆಲ್ಲವನ್ನೂ ಗುರುತಿಸಬಹುದು. ಅಂತೂ ದೇವರನ್ನು ಎದುರು ಹಾಕಿಕೊಂಡರೆ ಅವನು ವಿಪತ್ತು ತಂದೊಡ್ಡುತ್ತಾನೆ ಎಂಬ ಭಯದಿಂದಲೋ; ಸುತ್ತಿನ ಅಪಾಯಕರ ಪ್ರಪಂಚದ ಕೋಟಲೆಯಿಂದ ನಮ್ಮನ್ನು ಪಾರುಮಾಡಿಯಾನು ಎಂಬ ನಿರೀಕ್ಷೆಯಿಂದಲೋ; ಅವನು ನಮ್ಮ ಉನ್ನತಓನ್ನತ ಮೌಲ್ಯಗಳ ಸಂಕೇತ ಎಂಬ ಭಾವನೆಯಿಂದಲೋ - ಒಂದಲ್ಲ ಒಂದು ಕಾರಣದಿಂದಾಗಿ ಅಥವಾ ಅವೆಲ್ಲ ಕಾರಣಗಳಿಂದಾಗಿ, ಈ ’ದೇವರು’ ಎಂಬ ಕಲ್ಪನೆ ನಮ್ಮ
ಮನಸ್ಸಿನಲ್ಲಿ ಸುಳಿದಾಡುತ್ತಲೇ ಇರುತ್ತದೆ. ಸಾವಿರಾರು ವರ್ಷಗಳಿಂದ ನಮ್ಮೊಡನೆ ಇದ್ದದ್ದು, ಈಗಲೂ ಇರುವುದು - ಈ ಕಲ್ಪನೆ. ಆದ್ದರಿಂದಲೇ ದೇವರಿಲ್ಲ ಎನ್ನುವವರು- ನಿರೀಶ್ವರವಾದಿಗಳು- ಕೂಡ ’ಅಯ್ಯೋ ದೇವರೆ!’ ’ದೇವರಾಣೆ’, ’ದೇವರೇ ಬಲ್ಲ’, ’ದೇವರಿಗೆ ಪ್ರೀತಿ’ ಮುಂತಾದ ಮಾತುಗಳನ್ನು ಅರ್ಥದ ಅರಿವೇ ಇಲ್ಲದೆ ಯಾಂತ್ರಿಕವಾಗಿ ಬಲಸುವುದುಂಟು. ಪ್ರಪಂಚದ ಎಲ್ಲ ದೇಶಗಳ, ಎಲ್ಲ ಜನರ ಮನಸ್ಸಿನಲ್ಲೂ ಇಷ್ಟು ಆಳವಾಗಿ ಬೇರೂರಿ ನೆಲಸಿರುವ ಈ ದೇವರಿಗೆ ಅಸ್ತಿತ್ವ ಇದ್ದೇ ಇರಬೇಕು ಎನ್ನಿಸುವುದು ಆಶ್ಚರ್ಯವೇನಲ್ಲ.

ಶಿಲಾಯುಗದ ಭೂಪಟ

ಆದರೆ ಈ ಅನಿಸಿಕೆಯನ್ನು ನೆಚ್ಚಬಹುದೆ? ಇದನ್ನು ನಿರ್ಣಯಿಸುವ ಮುನ್ನ ’ದೇವರು’ ಎಂದರೇನು, ಅವನ ಸ್ವರೂಪವೇನು ಎಂಬುದನ್ನು ನಮಗೆ ನಾವೇ ಸ್ವಷ್ಟಪಡಿಸಿಕೊಳ್ಳುವುದು ಉತ್ತಮ. ಆದರೆ ದೇವರ ಲಕ್ಷಣ (Definition) ಹೇಳುವುದು ಸುಲಭವಲ್ಲ. ತತ್ವಶಾಸ್ತ್ರಜ್ಣರೇ ಈ ವಿಷಯದಲ್ಲಿ ಒಮ್ಮತದ ನಿರ್ಣಯಕ್ಕೆ ಬಂದಿಲ್ಲ. ಆದ್ದರಿಂದ ಲಕ್ಷಣ ಹೇಳುವ ಕೆಲಸಕ್ಕೆ ಈಗಲೇ ಕ್ಯೆಹಾಕುವುದು ಬೇಡ. ಈಗ ನಾವು ಮಾಡಬಹುದಾದ ಕೆಲಸ ಇದು; ಬೇರೆ ಬೇರೆ ದೇಶಗಳ, ಬೇರೆ ಬೇರೆ ಕಾಲಗಳ ಮಾನವರು ಯಾವುದನ್ನು ದೇವರು ಎಂದು ಭಾವಿಸುತ್ತ ಬಂದಿದ್ದಾರೆ? ಆ ದೇವರುಗಳ ಸ್ವರೂಪಗಳೇನು? ಸಾಧ್ಯವಾದ ಮಟ್ಟಿಗೆ ಅದನ್ನು ತಿಳೀದುಕೊಳ್ಳೋಣ. ಅನಂತರ, ನಾವು ಪಡೆದ ತಿಳಿವಳಿಕೆಯ ಆಧಾರದ ಮೇಲೆ ದೇವರ ಸಾಮಾನ್ಯ ಸ್ವರೂಪವನ್ನು ತಿಳಿಯುವ ಪ್ರಯತ್ನ ಮಾಡೋಣ. ಇಂಗ್ಲೀಷಿನಲ್ಲಿ ಇದನ್ನು ’ಇಂಡಕ್ಟಿವ್ ಮೆಥೆಡ್’ (Inductive Method ಅಂದರೆ; ಗೊತ್ತಿರುವಷ್ಟು ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವುಗಳಿಂದ ಹೊರ ಪಡುವ ಸಾಮಾನ್ಯ ತತ್ವವನ್ನು ರೂಪಿಸಿಕೊಳ್ಳುವ ಮಾರ್ಗ) ಎಂದು ಕರೆಯುತ್ತಾರೆ.

’ದೇವರು ಎಂದರೇನು?’ ಎಂಬ ಪ್ರಶ್ನೆಗೆ ಪ್ರೇರಣೆ ಬರುವುದು ವಿಚಾರಶಕ್ತಿಯಿಂದ; ಅದಕ್ಕೆ ಉತ್ತರ ಕೊಡಬೇಕಾದರೂ ವಿಚಾರಶಕ್ತಿಯ ನೆರವು ಬೇಕು.

ಬಹುಶಃ ಆದಿಮಾನವ ಹಾಕಿಕೊಂಡ ಪ್ರಶ್ನೆ ಅದಲ್ಲ - ’ದೇವರು ಯಾರು?’ ಎಂಬುದಿರಬೇಕು. ಒಂದೇನೋ ಅವನಿಗೆ ಸ್ಪಷ್ಟವಾಗಿ ಕಂಡಿತ್ತು. ದೇವರು ಬಲಶಾಲಿ.

ಆ ಬಲ ಬರೀ ದೇಹದ ಬಲವಲ್ಲ, ಏನೋ ಮಂತ್ರಶಕ್ತಿ (magic) ಇರಬೇಕು. ಅವನೊಡನೆ ವ್ಯವಹರಿಸಬೇಕಾದರೆ ನಾವೂ ಹಾಗೆ ಬಲಶಾಲಿಗಳಾಗಬೇಕು.

ಮಂತ್ರಶಕ್ತಿಯನ್ನು ಪಡೆಯಲೇ ಬೇಕು.ಅದು ಎಲ್ಲರಿಗೂ ಸಾಧ್ಯವಿಲ್ಲ. ಬುದ್ದಿವಂತರಾದ ಕೆಲವರಿಗೆ ಮಾತ್ರ ಸಾಧ್ಯ. ಮಂತ್ರವ್ಯೆದ್ಯರೂ (witch-doctors) ಮಂತ್ರವಾದಿಗಳೂ ಹುಟ್ಟಿಕೊಂಡದ್ದು ಹೀಗೆ. ಅವರು ಈ ಭಾವನೆಗೆ ಪುಷ್ಟಿಕೊಟ್ಟರು- ತಮ್ಮ ಪ್ರತಿಷ್ಟೆಯನ್ನು ಉಳಿಸಿಕೊಳ್ಳಬೇಕಷ್ಟೆ. ಈ ಮಾಯಮಂತ್ರದ ಮ್ಯಾಜಿಕ್ನ ಅವಶೇಷ ಇಂದೂ ನಮ್ಮ ದಾರ್ಮಿಕ ಆಚರಣೆಗಳಲ್ಲಿ ಕಂಡುಬರುತ್ತದೆ.

ದೇವರನ್ನು  ಕುರಿತ ನಂಬಿಕೆಗಳು

ಪಿತೃಗಳು, ಕಲ್ಲು, ನೀರು, ಗಿಡಮರ, ಮೃಗಪಕ್ಷಿ ಮಾರಿಮಸಣಿಗಳು.

ಬಲಶಾಲಿ ದೇವರು ಯಾರು ! ಈ ಪ್ರಶ್ನೆಗೆ ಮಾನವಕುಲ ಹತ್ತಾರು ಉತ್ತರಗಳನ್ನು ಕೊಟ್ಟುಕೊಂಡಿದೆ. ಎಷ್ಟೋ ಕಡೆ ಪಿತೃಗಳನ್ನೂ ಹಳೆಯ ಕಾಲದ ವೀರರನ್ನೂ ಪೂಜಿಸುವ ಪರಿಪಾಠವಿತ್ತು. ಅವರು ಇಲ್ಲಿಯ ದೇಹವನ್ನು ಕಳಚಿ ಮತ್ರ್ಯಲೋಕವನ್ನು ಬಿಟ್ಟು ಹೋದಮೇಲೂ ಎಲ್ಲೋ ಒಂದು ಕಡೆ ಇರುತ್ತಾರೆ. ನಮ್ಮ ಯೋಗಕ್ಷೇಮದಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿರುತ್ತಾರೆ. ಅವರಿಗೆ ಗೌರವ ಸಲ್ಲಿಸಬೇಕು ಎಂಬ ಭಾವನೆ ಈಗಲೂ ಇದೆ. ಮೃತರಾದ ತಂದೆ ತಾಯಿಯರ ವಾರ್ಷಿಕ ಶ್ರಾಧ್ದವನ್ನು (ತಿಥಿಯನ್ನು) ನಾವು ಆಚರಿಸುತ್ತೀವಷ್ಟೆ. ಅದರಲ್ಲಿ ’ಅವರಿಗೆ ಸದ್ಗತಿ ದೊರಕಲಿ, ಅವರಿರುವ ಕಡೆ ಅನ್ನ ನೀರು ದೊರಕಲಿ’ ಎಂಬ ಉದ್ದೇಶದ ಜೊತೆಗೆ ಪೂಜೆಯ ಅಂಶವೂ ಸೇರಿದೆ. ಪುರೋಹಿತರು ಮಂತ್ರ ಹೇಳಿಸುವಾಗ ಆ ಪಿತೃಗಳನ್ನು "ಕೃಷ್ಣಪ್ಪ ದೇವ" "ರಾಮಣ್ಣ ದೇವ" ಎಂದೇ ಕರೆಯುತ್ತಾರೆ.

ಕಲ್ಲೂ ಮರಗಿಡಗಳೂ ದೇವರಾಗಬಹುದು, ಮಾರಮ್ಮನ ಗುಡಿಗಳಲ್ಲೆಲ್ಲ ಸಾಮಾನ್ಯವಾಗಿ ಇರುವುದು ಕಲ್ಲು; ಕಲ್ಲಿನ ವಿಗ್ರಹವಲ್ಲ, ಬರೀ ಕಲ್ಲು, ಮಾರಮ್ಮ ಅದರಲ್ಲಿ ನೆಲಸಿ ಅದಕ್ಕೆ ದ್ಯೆವತ್ವ ಕೊಡುತ್ತಾಳೆ ಎಂದು ನಂಬಿಕೆ. ಗಿಡಗಳ ಪೂಜೆಗೆ ಸುಲಭವಾಗಿ ನೆನಪಿಗೆ ಬರುವ ಉದಾಹರಣೆಯೆಂದರೆ, ಈಗಲೂ ಚಾಲತಿಯಲ್ಲಿರುವ ತುಳಸೀಪೂಜೆ. ತುಳಸಿ ಪೂಜಾಸಾಮಗ್ರಿಯೂ ಆಗುತ್ತದೆ. ತಾನೂ ಪೂಜೀಯನ್ನು ಸ್ವೀಕರಿಸುತ್ತದೆ. ನಮಗೆ ಅರಳಿಯ ಮರವೂ ದೇವರು; ಅದು ದ್ಯೆವತ್ವವನ್ನು ಪಡೆದು ’ಅಶ್ವತ್ಥನಾರಾಯಣ’ ಆಗಿದೆ. ಅದಕ್ಕೆ ನೂರೆಂಟು ಪ್ರದಕ್ಷಿಣೆ ಮಾಡಿದವರಿಗೆ ಸಂತಾನ ಲಭಿಸುತ್ತದೆ. ಅದರ ಮಗ್ಗುಲಲ್ಲಿ ಒಂದು ಬೇವಿನ ಮರವನ್ನು ಬೆಳೆಸಿ ಎರಡಕ್ಕೂ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸುವ ಜನ ಈಗಲೂ ಇದ್ದಾರೆ.

ಮರವೇ ದೇವರಾಗಬಹುದಾದರೆ ಪ್ರಾಣಿಗಳು ದೇವರಾಗಬಾರದೇಕೆ? ಆಫ್ರಿಕಾದ ಕೆಲವು ಬಣಗಳವರು ಮೊಸಳೆಯನ್ನು ದೇವರೆಂದು ಭಾವಿಸಿ ಅದಕ್ಕೆ ಬಲಿಕೊಡುತ್ತಿದ್ದರಂತೆ, ನಾಗರಹಾವನ್ನು ದೇವರೆಂದು ಭಾವಿಸಿ, ಅದಕ್ಕೆ ಬಲಿಕೊಡುತ್ತಿದ್ದರಂತೆ. ನಾಗರಹಾವನ್ನು ದೇವರೆಂದು ಪೂಜೆಮಾಡುವುದು ನಮ್ಮಲ್ಲಿ ಆಚರಣೆಯಲ್ಲಿದೆಯಷ್ಟೆ. ನಾಗಪ್ರತಿಷ್ಟೆ ಮಾಡಿದರೆ ಪುತ್ರಸಂತಾನ ಲಭಿಸುತ್ತದೆಂದು ಲಕ್ಷಗಟ್ಟಲೆ ಜನ ನಂಬಿದ್ದಾರೆ. ಅನಕ್ಷ್ರರಸ್ಥರು  ಮಾತ್ರವಲ್ಲ, ಘನ ವಿದ್ವಾಂಸರು ಕೂಡ ನಾಗಪ್ರತಿಷ್ಟೆ ಮಾಡಿದ್ದನ್ನು ನಾನೇ ನೋಡಿದ್ದೇನೆ.

ಆ ಸಂಧರ್ಭದಲ್ಲಿ ಏರ್ಪಡಿಸಿದ ರಸದೂಟವನ್ನೂ ಸವಿದ್ದಿದ್ದೇನೆ. ನಾಗಪ್ರತಿಷ್ಟೆ ಮಾಡದಿರುವವರು ಕೂಡ ನಾಗಪಂಚಮಿಯ ದಿನ ಹಾವಿಗೆ ಹಾಲೆರೆಯುವುದನ್ನು ನಾವೆಲ್ಲ ನೋಡಿದ್ದೇನೆ.

ನಾಗರಹಾವನ್ನು ಕೊಲ್ಲುವುದು ಪಾಪ! ಕೊಂದವರಿಗೆ ಚರ್ಮರೋಗ ಬಂದು ಅವರ ವಂಶದವರನ್ನೆಲ್ಲ ಕಾಡುತ್ತದೆಯಂತೆ.

ಕೆಲವು ವೇಳೆ ಪ್ರಥಮ ವರ್ಗದ ದೇವರೊಬ್ಬನ ಸಹವಾಸದಿಂದಾಗಿ ಮೃಗಪಕ್ಷಿಗಳಿಗೆ ದ್ಯೆವತ್ವ ಲಭಿಸುತ್ತದೆ. ವಿಷ್ಣುವಿನ ವಾಹನವಾದ್ದರಿಂದ ಗರುಡ ತಾನೂ ದೇವರಾಗಿದ್ದಾನೆ. ’ಕ್ಷೇಮಕಾರಿ’ ಎಂಬ ಬಿರುದನ್ನು ಪಡೆದಿದ್ದಾನೆ. ಗರುಡನಿಗಿಂತ ರಾಮಭಂಟನಾದ ಹನುಮನಿಗೆ ಪ್ರಾಶಸ್ತ್ಯ ಹೆಚ್ಚು. ಗರುಡನಿಗೆ ಯಾರೂ ಗುಡಿ ಕಟ್ಟಿದಂತೆ ಕಾಣೆ. ಆದರೆ ನಮ್ಮ ದೇಶದಲ್ಲಿ ಹನುಮಂತರಾಯನ ಗುಡಿಯಿಲ್ಲದ ಊರೇ ಇಲ್ಲ. ಸಾಧಾರಣವಾಗಿ ಅವನ ಗುಡಿ ಊರ ಬಾಗಿಲಿನಲ್ಲೇ ಇರುತ್ತದೆ. ಹನುಮಂತನ ಉಪಾಸಕರಿಗೆ ಘನವಾದ ಸಿದ್ದಿಗಳು ಲಭಿಸುತ್ತವೆಯಂತೆ. ಸಾವಿರಾರು ಜನ ಪ್ರತಿದಿನ ಬೆಳೆಗ್ಗೆಯೋ ಸಂಜೆಯೋ ಹನುಮಂತನ ಗುಡಿಗೆ ಹೋಗಿ ನಮಸ್ಕರಿಸಿ ಬರುವ ಪದ್ದತಿ ಇಟ್ಟುಕೊಂಡಿದ್ದಾರೆ. ಮುಂದಿನ ಕಲ್ಪದಲ್ಲಿ ಹನುಮಂತನ ಬಡತಿ ಪಡೆದು ಬ್ರಹ್ಮನೇ ಆಗುತ್ತಾನಂತೆ.

ಈ ಮಟ್ಟದಿಂದ ಒಂದು ಹಂತ ಮೇಲಕ್ಕೇರಿದರೆ (ಅಥವಾ ಕೆಳಕ್ಕಿಳಿದರೆ ಎನ್ನಬೇಕೋ!) ಸ್ವಲ್ಪ ಹೆಚ್ಚು ಕಡಿಮೆ ಮಾನವರೂಪವನ್ನುಳ್ಳ ಮಾರಿ ಮಸಣಿ ಬೀರೇದೇವರುಗಳೂ ಪಂಜುರ್ಲಿ ಬೊಬ್ಬರ್ಯಗಳಂಥ ಭೂತಗಳೂ ಸಿಕ್ಕುತ್ತಾರೆ. ಸಾಮಾನ್ಯವಾಗಿ ಇವರನ್ನು ’ದೇವರು’ ಎಂದು ಕರೆಯುವುದಿಲ್ಲ. ಆ ಪದ ನಮ್ಮ ಕಿವಿಗೆ ಬಿದ್ದಾಗ ನಾವು ಮೊದಲು ನೆನೆಯುವುದು ಮಾರಮ್ಮ ಬೊಬ್ಬರ್ಯಗಳನ್ನಲ್ಲ, ಆದರೂ ನಾವು ಅವರಿಗೆ ಅತಿಮಾನುಷ ಶಕ್ತಿಯನ್ನು ದಾನಮಾಡಿ ಪೂಜಿಸುತ್ತಿರುವುದೇನೋ ನಿಜ. ಕೆಲವು ’ಅಮ್ಮ’ ಗಳಂತೂ ತಮ್ಮ ತಮ್ಮ ಊರುಗಳಲ್ಲಿ ವಿಶೇಷ ಗೌರವದ ಸ್ಥಾನವನ್ನು ಗಳಿಸಿ ದೇವರ ಮಟ್ಟಕ್ಕೆ ಏರಿದ್ದಾರೆ. ಉದಾಹರಣೆ: ನಮ್ಮ ಊರಿನ ಒಡ್ಡರ ಗುಡಿಯಮ್ಮ, ಅವಳು ಲಕ್ಷ್ಮಿಯ ಅವತಾರ; ಅವಳನ್ನು ಇತರ ಅಮ್ಮಗಳ ಗುಂಪಿಗೆ ಸೇರಿಸುವಂತಿಲ್ಲ.

ಈ ದೇವತೆಗಳಿಗೆ ನಾವು (ಹೆಚ್ಚು ಕಡಮೆ) ಮಾನವರೂಪವನ್ನೂ ವಾಕ್ ಶಕ್ತಿಯನ್ನೂ ಕೊಟ್ಟೀದ್ದೇವೆ. ಅವರು ಯಾವನಾದರೊಬ್ಬನ ’ಮೇಲೆ ಬಂದು’(ಅಮ್ಮ ಎಂಬ ಪದ ಮಾರಿಮಸಣಿ ವರ್ಗದ ಎಲ್ಲ ಹೆಣ್ಣುದೇವತೆಗಳಿಗೂ ಅನ್ವಯಿಸುತ್ತದೆ. ಸೀತಾಲೆ ರೋಗವನ್ನು  ಹರಡುವವಳು ’ಚಿಕ್ಕ ಅಮ್ಮ.’ ಸಿಡುಬು ತರುವವಳು ’ದೊಡ್ಡ ಅಮ್ಮ’. ಪ್ಲೇಗು ಕಾಲರಾಗಳಿಗೂ ಅಮ್ಮಗಳುಂಟು. ಇವರ ಜೊತೆಗೆ ಪಾತಾಳಮ್ಮ, ರನಭೀರಮ್ಮ, ಕಲ್ಲೂರಮ್ಮ ಇತ್ಯಾದಿಗಳೂ ಸೇರಿಕೊಳ್ಳುತ್ತಾರೆ.) ಅವನ ಮೂಲಕ ತಮ್ಮ ಸಲಹೆಯನ್ನೋ ಅಪೇಕ್ಷೆಯನ್ನೋ ನಮಗೆ ತಿಳಿಸಬಲ್ಲರು. ಆ ಶಕ್ತಿಯಿಂದಾಗಿ ಅವರು ವೃಕ್ಷದೇವತೆಗಳಿಗಿಂತ ಒಂದು ಹಂತ ಮೇಲಿದ್ದಾರೆ. ಆದರೂ ಅವರು ಕ್ಷುದ್ರದೇವತೆಗಳು. ರೋಗರುಜಿನಗಳನ್ನು ತಂದು ಹಾಕಿ, ಸಾವುನೋವುಗಳನ್ನುಂಟುಮಾಡಿ, ಜನರಿಂದ ಕಾಣಿಕೆ ವಸೂಲು ಮಾಡಿದ ಮೇಲೆ ’ಬದುಕಿಕೋ ಹೋಗು’ ಎಂದು ಪಿಡುಗನ್ನು ಅಲ್ಲಿಗೆ ನಿಲ್ಲಿಸುತ್ತಾರೆ - ನಿಲ್ಲಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ತುಳಸಿ ಅಶ್ವತ್ಥಗಳಾಗಲಿ ಗರುಡ ಆಂಜನೇಯರಾಗಲಿ ಜನಕ್ಕೆ ಕೆಡುಕು ಮಾಡುವುದಿಲ್ಲ; ಏನಾದರೂ ಮಾಡಿದರೆ ಒಳ್ಳೆಯದು ಮಾಡುತ್ತಾರೆ. ಅಮ್ಮ, ಭೂತಗಳಾದರೋ, ಸಣ್ಣ ಕಾರಣಗಳಿಗಾಗಿ ಕೆಲವು ವೇಳೆ ಕಾರಣವಿಲ್ಲದೆಯೇ ನಮ್ಮನ್ನು ಭಯಂಕರ ರೋಗಗಳಿಗೆ ತುತ್ತಾಗಿಸುತ್ತಾರೆ. ಕುರಿಯನ್ನೋ,ಕೋಳಿಯನ್ನೋ ಬಲಿಕೊಡು ಎಂದು ಅಥವಾ ಪ್ರತಿದಿನ ಮೊಸರನ್ನ ಅರ್ಪಿಸು ಎಂದು ತಾಕೀತು ಮಾಡುತ್ತಾರೆ. ಆ ದೇವತೆಗಳು ತಾವಾಗಿ ಜನರಿಗೆ ಒಳ್ಳೆಯದು ಮಾಡಲು ಮುಂದೊಡಗಿ ಬಂದರೆಂದು ನಾನು ಎಲ್ಲೂ ಕೇಳಿಲ್ಲ. ಕೇಡನ್ನು ತಂದು ಹಾಕುವುದು, ಅನಂತರ ದಮ್ಮಯ್ಯದಂಡ (blackmail) ವಸೂಲುಮಾಡಿಕೊಂಡು ಕೇಡನ್ನು ನಿಲ್ಲಿಸುವುದು (?) - ಇದೇ ಅವರ ವೃತ್ತಿ ಎನ್ನಬಹುದು.


ಪ್ರಕೃತಿಶಕ್ತಿಗಳು

ನಮ್ಮ ಇಂದ್ರ, ಅಗ್ನಿ, ವಾಯು ಇತ್ಯಾದಿಗಳು ವಾಸ್ತವವಾಗಿ ನಾಮರೂಪಗಳನ್ನು ಪಡೆದ ಪ್ರಕೃತಿಶಕ್ತಿಗಳು. ಆ ಶಕ್ತಿಗಳಿಗೆ ದ್ಯೆವತ್ವವನ್ನು ದಾನಮಾಡುವುದು ಬಹಳ ಹಳೆಯ ಹವ್ಯಾಸ.

ಪುರಾತನ ಗ್ರೀಕರ ಸ್ಯೂಸ್(Zeus) ಪ್ರಕೃತಿಶಕ್ತಿಯೇ. ನಮ್ಮ ಇಂದ್ರ ಹಿಂದೆ ಪಡೆದ್ದಿದ್ದಂತೆ ಅವನೂ ಸರ್ವೋಚ್ಚ ಸ್ಥಾನವನ್ನು ಪಡೆದಿದ್ದ, ಇಂದ್ರನಿಗೆ ವಜ್ರಾಯುಧವಿರುವಂತೆ ಅವನಿಗೆ ಸಿಡಿಲೇ ಆಯುಧ. ಹೆಲಿಯಸ್ (Helios) ಸೂರ್ಯದೇವ; ಆರ್ಟಮಿಸ್ (Artemis) ಚಂದ್ರ; ಈಯಲಸ್ (Aeolus) ನಮ್ಮ ವಾಯುದೇವ; ಪೋಸ್ಯೆಡನ್ (Poseidon) ಸಮುದ್ರದ ಅಧಿದೇವತೆ. ಈ ಗ್ರೀಕ್ ದೇವತೆಗಳ  ಕಾಲ ಆಗಿಹೋಯಿತು. ಕ್ರ್ಯೆಸ್ತಮತದ ದಾಳಿಯನ್ನು ಎದುರಿಸಲಾಗದೆ ಓಡಿಹೋಗಿ ಅವರು ಸಾಹಿತ್ಯದ ಮ್ಯೂಸಿಯಂನಲ್ಲಿ ಅಡಗಿಕೊಂಡಿದ್ದಾರೆ.

ನಮ್ಮ ಇಂದ್ರಾದಿಗಳು ದ್ಯೆವತ್ವವನ್ನು ಉಳಿಸಿಕೊಂಡಿದ್ದಾರಾದರೂ ಅವರಿಗೆ ಪ್ರಥಮ ದರ್ಜೆಯ ಸ್ಥಾನವಿಲ್ಲ. ಉಪನಿಷತ್ತುಗಳ ಕಾಲದಲ್ಲೇ ಅವರನ್ನು ಕೆಳಕ್ಕೆ ಇಳಿಸಿದ್ದಾಗಿತ್ತು. ಕಠೋಪನಿಷತ್ತಿನ ಒಂದು ಮಂತ್ರದಲ್ಲಿ "ವಿದ್ಯುತ್ತಿಗೆ ಪರ ವಸ್ತುವಿನ ಎದುರಿನಲ್ಲಿ ಪ್ರಕಾಶವಿಲ್ಲ. ಇನ್ನು ಈ ಅಗ್ನಿ ಎಲ್ಲಿಯವನು!" ಎಂಬ ಮಾತು ಬರುತ್ತದೆ. ಕೇನೋಪನಿಷತ್ತಿನ ಕೊನೆಯಲ್ಲಿ ಬರುವ ಕಥೆಯಲ್ಲಿ ಅಗ್ನಿ (ಪರವಸ್ತುವಿನ ಬಲವಿಲ್ಲದ್ದರಿಂದ ಒಂದು ಹುಲ್ಲುಕಡ್ಡಿಯನ್ನು ಸುಡಲಾರದೆ ಅವಮಾನಕ್ಕೆ ಈಡಾಗುತ್ತಾನೆ. ವಾಯುವು ಹಾಗೆಯೇ ಮಾನ ಕಳೆದುಕೊಳ್ಳುತ್ತಾನೆ.)

ಇಂದ್ರನೂ ತನಗೆ ಹಿಂದಿದ್ದ ಉಚ್ಚಸ್ಥಾನದಿಂದ ಇಳಿದಿದ್ದಾನೆ. ಯಾವನಾದರೊಬ್ಬ ತಪಸ್ಸುಮಾಡಿ ದೇವತೆಗಳ ಮತ್ತು ಮಾನವರ ಹಿತಕ್ಕೆ ಧಕ್ಕೆ ತರುವಂಥ ವರವನ್ನು ಪಡೆದು (ದೇವರುಗಳು ಅಂಥ ಅವಿವೇಕದ ವರಗಳನ್ನು ಕೊಡುವುದುಂಟು) ಹಾವಳಿ ಮಾಡಲಾರಂಭಿಸಿದಾಗ ಇಂದ್ರನು ದೇವತೆಗಳನ್ನು ಕಟ್ಟಿಸಿಕೊಂಡು ಶಿವನ ಬಳಿಗೋ ವಿಷ್ಣುವಿನ ಬಳಿಗೋ ಹೋಗಿ ’ನಮ್ಮನ್ನು ರಕ್ಷಿಸು" ಎಂದು ಅಂಗಲಾಚುವುದು - ಈ ಮಟ್ಟಕ್ಕೆ ಇಳಿದುಹೋಗಿದೆ, ಇಂದ್ರನ ಮಹಿಮೆ!

ಈಗಲೂ ಇಂದ್ರಾದಿಗಳಿಗೆ ಹವಿಸ್ಸುನ್ನು ನೀಡಲು ಆಗಾಗ ಯಜ್ಣಗಳು ನಡೆಯುವುದುಂಟು. ಆದರೆ ಅವರಿಗೆ ಮೀಸಲಾದ ಗುಡಿಗಳಿಲ್ಲ. ಪೂಜೆಪುರಸ್ಕಾರಗಳಿಲ್ಲ. ಈ ಮಾತಿಗೆ ಸೂರ್ಯ, ಅಗ್ನಿ,ವಾಯು - ಈ ಮೂವರೂ ವಿನಾಯಿತಿ. ಸೂರ್ಯ ಎರಡು ಕ್ಷೇತ್ರಗಳಿಂದ ಅಭ್ಯರ್ಥಿಯಾಗಿ ನಿಂತು ಎರಡರಲ್ಲೂ ಗೆದ್ದಿದ್ದಾನೆ. ವಿಜ್ಣಾನಿಗಳಿಗೆ ಅವನು ಗ್ರಹವಲ್ಲದಿದ್ದರೂ ಜನಸಾಮಾನ್ಯಕ್ಕೂ ಜಾತಕಫಲ ಹೇಳುವವರಿಗೂ ಅವನು ಗ್ರಹವೇ ಹೌದು. ಜೊತೆಗೆ ಅವನು ’ನಾರಾಯಣ’ನೊಡನೆ ಒಂದಾಗಿ ’ಸೂರ್ಯನಾರಾಯಣ’ ಎಂದು ಹೆಸರು ಪಡೆದಿದ್ದಾನೆ.

ವಾಯುವಿಗೆ ಮಧ್ವಮತದಲ್ಲಿ ಉಚ್ಚಸ್ಥಾನವೇ ಇದೆ. ಅವನು ಮುಖ್ಯಪ್ರಾಣ, ಮಾಧ್ವರ ಮನೆಯಲ್ಲಿ ಯಾವ ಶುಭಕಾರ್ಯಗಳಾಗಲಿ ನಡೆಯುವುದು ’ಹರಿವಾಯುಗಲ ಪ್ರೇರಣೆ’ಯಿಂದ ("ನೇಮಾ ವಿದ್ಯುತ್ತೋ ಭಾಂತಿ ಕುತೋsಯಮಗ್ನೀಃ" - ಈ ಮಂತ್ರ ಇತರ ಒಂದೆರಡು ಉಪನಿಷತ್ತುಗಳಲ್ಲೂ ಬರುತ್ತದೆ.) ಹಿಂದೂಮತದ ಎಲ್ಲ ಶಾಖೆಗಳವರೂ ಅಗ್ನಿಗೆ ಸಹ ಗೌರವದ ಸ್ಥಾನ ಕೊಡುತ್ತಾರೆ. ಹೋಮ ಬಹಳ ಮುಖ್ಯವಾದ ಕರ್ಮ, ಅಂದ ಮೇಲೆ ಅಗ್ನಿಯೂ ಮುಖ್ಯ.

ಇದಿಷ್ಟು ನಿಜವಾದರೂ ಒಟ್ಟಿನಲ್ಲಿ ಪ್ರಕೃತಿದೇವತೆಗಳ ಪಾಡು "ಅಯ್ಯೋ ಪಾಪ!" ಎನ್ನುವಂತಾಗಿದೆ.