ಮೊಬೈಲ್ ಕಳ್ಳರ ನಡುವೆ....!

ಮೊಬೈಲ್ ಕಳ್ಳರ ನಡುವೆ....!

ಒಂದು ಬಸ್ ನಿಲ್ದಾಣದಲ್ಲಿ ಬಸ್ಸು ಹತ್ತಿ ಸೀಟಿನಲ್ಲಿ ಕುಳಿತುಕೊಳ್ಳುವ ಕೇವಲ ‌30 ಸೆಕೆಂಡುಗಳ ಅವಧಿಯಲ್ಲಿ ಯುವಕರಿಬ್ಬರು ನನ್ನರಿವಿಗೆ ಬಾರದಂತೆ ನನ್ನ ಮೊಬೈಲ್ ಕದ್ದರು. ಒಂದು ಕ್ಷಣ ಗಾಬರಿ, ಆತಂಕ, ಕತ್ತಲು. ಮೊಬೈಲ್ ಕಳೆದಿಲ್ಲ ಅದು ಖಚಿತವಾಗಿ ಪಿಕ್ ಪಾಕೆಟ್ ಆಗಿದೆ ಇನ್ನು ಅದು ಸಿಗುವುದಿಲ್ಲ ಎಂದು ಅರ್ಥವಾದ ಮರುಕ್ಷಣವೇ ನಿರ್ಲಿಪ್ತನಾದೆ. ಮತ್ತೊಂದು ಬಸ್ ಹತ್ತಿ ಪ್ರಯಾಣ ಮುಂದುವರಿಸಿ ಮನೆ  ತಲುಪಿದೆ.

ವೈಯಕ್ತಿಕವಾಗಿ ನನ್ನ ಸ್ವಂತ ಮೊಬೈಲ್ ಕಳುವಾದ ಮಾತ್ರಕ್ಕೆ ಮೊಬೈಲ್ ಕಳ್ಳರನ್ನು ಹಿಗ್ಗಾ ಮಗ್ಗಾ ಟೀಕಿಸಿದರೆ ಅದು ಬಹುದೊಡ್ಡ ಸ್ವಾರ್ಥವಾಗುತ್ತದೆ. ಇದು ವ್ಯವಸ್ಥೆಯ ಒಂದು ಭಾಗ ಮಾತ್ರ. ಕಳ್ಳತನವೆಂಬುದು ಅನಾದಿ ಕಾಲದಿಂದಲೂ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಬಹುಶಃ ಹಸಿವಿಗಾಗಿ, ಹೊಟ್ಟೆ ಪಾಡಿಗಾಗಿ ಕಳ್ಳತನ ಪ್ರಾರಂಭವಾಗಿರಬೇಕು. ಮುಂದೆ ಅದು ವೃತ್ತಿಯಾಗಿಯೂ ಅಸ್ತಿತ್ವಕ್ಕೆ ಬಂದಿತು. ಈಗ ಕಳ್ಳತನವೇ ಅನೇಕ ರೂಪಗಳನ್ನು ಪಡೆದು ಹಣ ಅಧಿಕಾರ ಅಂತಸ್ತುಗಳನ್ನು ಮೀರಿ ಜೀವನದ ಯಶಸ್ಸಿಗೆ ಕಳ್ಳತನ ಅನಿವಾರ್ಯ ಎಂಬಲ್ಲಿಗೆ ಬಂದಿದೆ. 

ಅದು ಕೇವಲ ಆಹಾರದ ರೂಪ ಮಾತ್ರವಲ್ಲ, ವಸ್ತು ರೂಪ ಮಾತ್ರವಲ್ಲ, ಪ್ರತ್ಯಕ್ಷ, ಪರೋಕ್ಷ, ಅಮೂರ್ತ, ಕಪ್ಪು ಬಿಳುಪು ಇತ್ಯಾದಿ ಊಸರವಳ್ಳಿಯ ರೀತಿ ಬಣ್ಣ ಬದಲಾಯಿಸುತ್ತಲೇ ಇದೆ. ಕೊನೆಗೆ ಕಳ್ಳತನದ ಮತ್ತೊಂದು ರೂಪ ಹ್ಯಾಕರ್ ( ‌Hacker/Hacking ) ಎಂಬುದು ಅಧೀಕೃತ ಶಿಕ್ಷಣದ ಭಾಗವೇ ಆಗಿದೆ. ಇದು ಕಂಪ್ಯೂಟರ್ ಭಾಷೆಯಲ್ಲಿ ಒಂದು ರಕ್ಷಣಾ ಕ್ರಮವಾದರೂ ಇದು ವಾಸ್ತವವಾಗಿ ಕಳ್ಳ ಮಾರ್ಗದ ಒಂದು ವಿಧಾನವೇ ಆಗಿದೆ.

ಆಡಳಿತದ ಮುಖ್ಯ ಸ್ಥಾನದಿಂದ ಪ್ರಾರಂಭವಾಗುವ ಕಳ್ಳತನ ಕೊನೆಯ ಹಂತದವರೆಗೂ ವ್ಯಾಪಿಸಿದೆ. ವ್ಯಾಪಾರಂ ದ್ರೋಹ ಚಿಂತನಂ ಎಂಬ ನಾಣ್ಣುಡಿಯಲ್ಲಿಯೇ ಕಳ್ಳತನಕ್ಕೆ ಪರೋಕ್ಷವಾಗಿ ಅಧೀಕೃತ ಮುದ್ರೆ ಒತ್ತಲಾಗಿದೆ. ವ್ಯಾಪಾರದಲ್ಲಿ ಲಾಭ ಇರಬೇಕೆ ಹೊರತು ದ್ರೋಹ ಇರಬಾರದು. ಆದರೆ ದ್ರೋಹವೇ ವ್ಯಾಪಾರವಾಗಿರುವ ಸಮಾಜದಲ್ಲಿ ನಾವು ವಾಸಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಚುನಾವಣೆ, ಆಡಳಿತ, ವ್ಯಾಪಾರ ವಹಿವಾಟು ಮಾತ್ರವಲ್ಲ ಶಿಕ್ಷಣ ಆರೋಗ್ಯ ಧಾರ್ಮಿಕ ಸಂಸ್ಥೆಗಳು, ಮಾಧ್ಯಮ ಮುಂತಾದ ಅತ್ಯಂತ ಶುದ್ಧ ಸೇವಾ ಮನೋಭಾವದ ಕ್ಷೇತ್ರಗಳು ಕೂಡ ಇಂದು ನಮ್ಮ ಅರಿವಿಗೆ ಬಾರದಂತೆ ಅತ್ಯಂತ ಅನಿವಾರ್ಯತೆ ಸೃಷ್ಟಿಸಿ ನಯವಾಗಿ, ನಾಜೂಕಾಗಿ ಮತ್ತು ಅಧಿಕೃತವಾಗಿ ಸೇವೆಯ ಹೆಸರಿನಲ್ಲಿ ಸೂಕ್ಷ್ಮವಾಗಿ ಕಳ್ಳತನ ಮಾಡುತ್ತಲೇ ಇವೆ.

ನಗರ ಪ್ರದೇಶಗಳಲ್ಲಿ ಈ ಕಳ್ಳತನ ಹೆಚ್ಚು, ಅಕ್ಷರಸ್ಥರ ನಡುವೆಯೇ ಇನ್ನೂ ಹೆಚ್ಚು ಎಂಬುದೇ ಒಂದು ಸೋಜಿಗ. ಅಧಿಕಾರಿಗಳು ಮತ್ತು ರಾಜಕಾರಣಿಗಳೇ ಹೆಚ್ಚು ಭ್ರಷ್ಟರು ಎಂಬುದು ಬಹಿರಂಗ ಸತ್ಯ. ಇಡೀ ರಾಜ್ಯದಲ್ಲಿ ಸುಮಾರು ‌385 ದಿನ, 11500 ಕಿಲೋಮೀಟರ್ ಮತ್ತು ಎಲ್ಲಾ ರೀತಿಯ ಪ್ರದೇಶಗಳನ್ನು ಸುತ್ತುವಾಗ ನಾನು ಎಷ್ಟೇ ನಿರ್ಲಕ್ಷ್ಯದಿಂದ ನನ್ನ ‌ವಸ್ತುಗಳನ್ನು ಇಟ್ಟಿದ್ದರು ಒಂದು ‌ಸಣ್ಣ ವಸ್ತುವೂ ಕಳುವಾಗಿರಲಿಲ್ಲ. ಆದರೆ ನಗರ ಪ್ರದೇಶದಲ್ಲಿ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ನನ್ನ ಮೊಬೈಲ್ ಕಳ್ಳತನವಾಯಿತು ಮತ್ತು ನನಗಿರುವ ಮಾಹಿತಿಯ ಪ್ರಕಾರ ಬೆಂಗಳೂರು ನಗರದಲ್ಲೇ ದಿನಕ್ಕೆ ನೂರಾರು ಮೊಬೈಲುಗಳು ಕಳ್ಳತನವಾಗುತ್ತಲೇ ಇರುತ್ತದೆ. ಅದಕ್ಕಾಗಿ ತರಬೇತಿ ಪಡೆದ ತಂಡಗಳು ಕಾರ್ಯ ನಿರ್ವಹಿಸುತ್ತವೆ. ಹಾಗೆಯೇ ಸರಗಳ್ಳತನ, ವಾಹನ ಕಳ್ಳತನ ಮತ್ತು ಮನೆಗಳ್ಳತನ ಸಹ.

ಆದರೂ ಕಿಡ್ನಿ ಕಳ್ಳರ ನಡುವೆ, ಖಜಾನೆ ಕಳ್ಳರ ನಡುವೆ, ಮತದಾರರ ಮಾಹಿತಿ ಕಳ್ಳರ ನಡುವೆ ಈ ಹೊಟ್ಟೆ ಪಾಡಿನ ಕಳ್ಳರು ನಿಜಕ್ಕೂ ಕ್ಷಮೆಗೆ ಅರ್ಹರು. ಕೊಲೆಗಡುಕರು, ಅತ್ಯಾಚಾರಿಗಳ ನಡುವೆ ಇವರು ಅತ್ಯಂತ ಕಡಿಮೆ ಉಪದ್ರವಿಗಳು ಎಂದು ಭಾವಿಸಬಹುದು. ಅವರ ಬಗ್ಗೆ ಸಹಾನುಭೂತಿ ಇದೆ. ನಾಗರಿಕ ಸಮಾಜದಲ್ಲಿ ದೊಡ್ಡ ದೊಡ್ಡ ಬೀಗದ ಕೈಗಳಿಗೆ ಅಂದರೆ ರಕ್ಷಣೆಗಾಗಿ ಮಾಡುವ ಪ್ರಯತ್ನಕ್ಕಿಂತ ಮಾನವೀಯ ಮೌಲ್ಯಗಳ ರಕ್ಷಣಾತ್ಮಕವಾಗಿ ಮಾಡುತ್ತಿರುವ ಪ್ರಯತ್ನ ತುಂಬಾ ಕಡಿಮೆ. ಎಲ್ಲರೂ ಹೇಳುವುದು ಎಚ್ಚರಿಕೆ ಇರಬೇಕು. ಎಚ್ಚರಿಕೆ ಎಂದರೆ ನಮ್ಮ ಇಡೀ ಪ್ರಯತ್ನ ನಮ್ಮ ರಕ್ಷಣೆಗಾಗಿ ಮಾತ್ರ. ಇತರೆ ಕ್ರಿಯಾತ್ಮಕ ಚಟುವಟಿಕೆಗಳಿಗೆ ಜಾಗವೇ ಕಾಣುತ್ತಿಲ್ಲ. ಆ ನೆಪದಲ್ಲಿ ದುಷ್ಟರು ನಮ್ಮನ್ನು ಹಗಲು ದೋಚುವುದೇ ಕಾಣುತ್ತಿಲ್ಲ. ಇದೇ ಇಂದಿನ ದುರಂತ.

ಕಳ್ಳರ ಚಾಕಚಕ್ಯತೆ - ನಮ್ಮ ದಡ್ಡತನ, ವಂಚಕರ ಅಸಹಜತೆ - ನಮ್ಮ ‌ಸಹಜತೆ, ಭ್ರಷ್ಟರ ನಿರ್ಲಜ್ಜತೆ - ನಮ್ಮ ‌ಸಂಕೋಚತೆ, ದುಷ್ಟರ ಧೈರ್ಯ - ಮುಗ್ದರ ಭಯ ನಾವು ಸಾಗುತ್ತಿರುವ ಹಾದಿಯ ದುರಂತ ಚಿತ್ರಣ......

***

ಈ ನಡುವೆ ದಿನಾಂಕ  26/11/2022 ಶನಿವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನ ನಡುವಿನ ಬೇಡಕಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಂವಿಧಾನ ದಿನ ಮತ್ತು ಎನ್ ಸಿ ಸಿ ದಿನದ ಅಂಗವಾಗಿ ಅಲ್ಲಿನ ಕಾಲೇಜಿನಲ್ಲಿ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿ ಮಾತುಕತೆ ನಡೆಸಲಾಯಿತು. ಅಂದೇ ಸಂಜೆ ಹುಬ್ಬಳ್ಳಿಯ ವಿದ್ಯಾನಗರದ ಮೈದಾನದಲ್ಲಿ ನಡೆದ ಕನ್ನಡ ಕೃಷಿ ಬಳಗದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಖ್ಯಾತ ಹಾಸ್ಯ ಸಾಹಿತಿಗಳು ಕಲಾವಿದರು ಆದ ಪ್ರೊಫೆಸರ್ ಕೃಷ್ಣೇಗೌಡರ ಜೊತೆ ಒಂದು ಸುಂದರ ಕಾರ್ಯಕ್ರಮಲ್ಲಿ ಭಾಗವಹಿಸಿದೆನು.

ಪ್ರತಿನಿತ್ಯದ ಲೇಖನ ಇಲ್ಲದ ಈ 5 ದಿನಗಳಲ್ಲಿ ನನ್ನ ಕ್ಷೇಮದ ಬಗ್ಗೆ ಕಾಳಜಿ ವಹಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೀತಿ ಅಭಿಮಾನ ಆಸಕ್ತಿ ತೋರಿದ ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತಾ.... ಮಾನವೀಯ ಮೌಲ್ಯಗಳ ಪುನರುತ್ಥಾನದ ಪ್ರಯತ್ನ ನಿರಂತರ.....

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ