ಮೊಬೈಲ್ ಗುಂಡಿಗಳ ನಡುವೆ
ಮೊಬೈಲ್ ಗುಂಡಿಗಳ ನಡುವೆ ಕಾಲ
ಕುಳಿತು ಕಳೆದಿಹರು ಬದುಕ ಸಕಾಲ
ಬೇಸರಿಕೆ ಕನವರಿಕೆ ಮೊಬೈಲ್ ಬೆಳಕೇ
ವಿವೇಕವನೇ ಕದ್ದ ಮಾಯಾವೀ ಹೊಳಪೇ.
ಬಗ್ಗಿದ ತಲೆಯೊಳಗೆ ನುಗ್ಗಿದ ಕೌತುಕವೇ
ಎಳೆಯರ ಆಟವ ಕದ್ದ ನಿನ್ನ ಕುತಂತ್ರವೇ
ಯಂತ್ರದ ಹಿಡಿತದಿ ಯುವಕನೂ ಬಂಧಿ
ಪರದೆಯಲಿ ಕಂಡವರಲ್ಲ ನಿಜದಿ ಸಂಬಂಧಿ.
ಬರಿಯ ಆ್ಯಪ್ ಜೊತೆಗೆ ಆಪ್ತತೆಯ ಭಾವ
ಆಪ್ತತೆ ಇಲ್ಲದ ಬದುಕ ಅನಾಮಿಕ ಸ್ವಭಾವ
ಪ್ರೇಮ-ಪ್ರೀತಿ ಇಲ್ಲಿ ಉಳಿದಿಲ್ಲ ಸಹಜತೆ
ಮೂಡಿ ಮರೆಯಾದ ದೃಶ್ಯದಂತೆ ಕೃತಕತೆ.
ಅಪ್ಪ ಅಮ್ಮ ಮಗ ಮೌನದಿ ಶರಣು
ಅಂಗೈಯಲಿ ಕಮಂಗಿ ಆಟದ ಮುಂದೇನು?
ಕಾಯುವಿಕೆ ಅರಿಯದ ಆಗುಂತಕ ಸಂದೇಶಕೆ
ಇರದು ಇಲ್ಲಿರುವ ಜನರ ಮನದ ಮನವರಿಕೆ.
ಹಾಳೆಯ ಪುಟಗಳು ಹೇಸರಿಕೆ ಈ ಜನಕೆ
ಮೊಬೈಲ್ ಪರದೆಯೇ ಜಗವಾದ ಮನಕೆ
ಒಲ್ಲದು ಬದುಕ ಬೆಳಗುವ ಬರವಣಿಗೆ ಸಾಲು
ಕೊನೆಗೆ ಸೋಲುವರು ಮುಗಿಯದಾ ಗೋಳು.
ಇರದು ಇಲ್ಲಿ ಯಾವುದೇ ನಿಧಾನ ವಿಧಾನ
ಬದುಕು ಯಂತ್ರ ವೇಗ ಬೇಕು ಸಮಾಧಾನ
ಒತ್ತು ಗುಂಡಿಯಲ್ಲ ಈ ಜೀವನ ಕಾಣು
ಸುತ್ತಲಿನ ಜಗವ ಸಹಜ ಕಣ್ಣಲಿ ನೀ ಕಾಣು!!
-ನಿರಂಜನ ಕೇಶವ ನಾಯಕ, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
