ಮೊಬೈಲ್
ಆಸೆ
ನಾನು ಶಾಲೆಯಲ್ಲಿದ್ದಾಗ ಅಪ್ಪ ಒಮ್ಮೆ ಮೊಬೈಲ್ ಕೊಂಡುಕೊಂಡಿದ್ದರು. ರಾಜ್ಯವಿಡೀ ನಮಗಾಗ ಇದ್ದದ್ದು ಒಂದೇ ಒಂದು ಸರ್ವೀಸ್ - 'spice'ಟೆಲಿಕಾಮ್. ಎಲ್ಲೋ ಕೆಲವರು ಹೊತ್ತುಕೊಂಡು ತಿರುಗಾಡುತ್ತಿದ್ದ ಭಾರವಾದ ಮೊಬೈಲ್ ಫೋನುಗಳು ಆಗ ಆಭರಣಗಳಂತೆ. ನೋಕಿಯ ಇದ್ದವರಂತೂ ಸಾಕ್ಷಾತ್ 'ಯಜಮಾನ'ರೇ. ಆಗ incoming callsಗೂ ದುಡ್ಡು!
ಅಪ್ಪನ ಬಳಿ ಇದ್ದ ಮೊಬೈಲ್ ನೋಡಿ ನನಗೂ ಒಂದು ಮೊಬೈಲ್ ಬೇಕೆಂದೆನಿಸಿತ್ತು. ನಮ್ಮ ಕೈಗೆ ಮೊಬೈಲ್ ಸಿಕ್ಕಾಗಲೆಲ್ಲ ಅದರ ಗುಂಡಿಗಳನ್ನು ಅದುಮಿ ಅದನ್ನ explore ಮಾಡುವುದು, ಅಪ್ಪ ಊಟ ಮಾಡಲು ಕುಳಿತಾಗ ಮೊಬೈಲನ್ನ ಯಾರು ಇಟ್ಟುಕೊಂಡಿರಬೇಕು ಎಂದು ನಾನು ಮತ್ತು ನಮ್ಮಣ್ಣ ಕಿತ್ತಾಡುವುದೂ, ಅದನ್ನ ನೋಡಿ ಅಪ್ಪ ಮೊಬೈಲನ್ನ ನಮ್ಮಿಬ್ಬರಿಗೂ ಬೇಡವೆಂದು ಕಿತ್ತುಕೊಂಡು ಊಟ ಮಾಡುತ್ತ ಕುಳಿತಲ್ಲಿಯೇ ದೂರ ಇಟ್ಟುಕೊಳ್ಳುತ್ತಿದ್ದುದು ಸಾಮಾನ್ಯವಾಗಿ ಹೋಗಿತ್ತು. ನನಗಂತೂ ಮೊಬೈಲ್ ಮೇಲೇ ಕಣ್ಣು. ಸಮಯ ಸಿಕ್ಕಾಗಲೆಲ್ಲ ಅದನ್ನ ಹಿಡಿದು ಗೇಮ್ಸ್ ಆಡುತ್ತಲೋ ಇಲ್ಲ ಸುಮ್ಮನೆ ಅದರಲ್ಲಿದ್ದ ಸವಲತ್ತುಗಳನ್ನು ನೋಡುತ್ತಲೋ ಕುಳಿತಿರುತ್ತಿದ್ದೆ. ನನಗೊಂದು ಮೊಬೈಲ್ ಬರೋದಿರಲಿ, ಮೂರನೆಯ ತಿಂಗಳು ಬಂದ ಬಿಲ್ ಎಷ್ಟರಮಟ್ಟಿಗೆ ಗರ ಬಡಿಯಿತೆಂದರೆ ಅಪ್ಪನ ಹತ್ತಿರ ಇದ್ದ ಮೊಬೈಲನ್ನೇ ಹೊರಗೋಡಿಸಿತು.
****
ಮಸ್ತಿ
ನಾನು ಇಂಜಿನೀಯರಿಂಗ್ ಓದುತ್ತಿದ್ದಾಗ, ನಮ್ಮ ಮನೆಗೆ ಮತ್ತೊಮ್ಮೆ ಮೊಬೈಲ್ ಫೋನು ಪ್ರವೇಶ ಮಾಡಿತ್ತು. ಈ ಬಾರಿ ರಿಲಯನ್ಸ್ 'ಕ್ರಾಂತಿ'ಯಿಂದ ಇದು ಸಾಧ್ಯವಾದದ್ದು. ಅಪ್ಪನೂ ಬಿಲ್ ಬಗ್ಗೆ ಚಿಂತೆ ಮಾಡದೆ ತೆಗೆದುಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಿತ್ತು, ಆಗ. ಜೊತೆಗೆ ಅದೆಷ್ಟೋ ತಿಂಗಳು 'ಉಚಿತವಾಗಿ ಕರೆಗಳನ್ನು ಮಾಡಬಹುದು' ಎಂದು ನಮಗೆ ಮಾರಿದ್ದ ರಿಲಯನ್ಸ್ ಆದ್ಮಿ ಹೇಳಿದ್ದ. ಅದರಲ್ಲಿ ಬಿಟ್ಟಿ ಇಂಟರ್ನೆಟ್ ಬೇರೆ! ಅಪ್ಪ ಆಫೀಸಿನಿಂದ ಮನೆಗೆ ಬರೋದೇ ತಡ ಅವರಿಂದ ಮೊಬೈಲು ಕಿತ್ತುಕೊಂಡು ಸ್ನೇಹಿತರಿಗೆಲ್ಲ ಫೋನು ಹೊಡೆಯೋದು... ಕಂಪ್ಯೂಟರಿಗೆ ಸೇರಿಸಿ ಸಿಕ್ಕಾಪಟ್ಟೆ ಇಂಟರ್ನೆಟ್ ಬಳಸೋದು ಸಾಮಾನ್ಯವಾಗಿ ಹೋಯ್ತು.
ಆದರೂ ಮೊಬೈಲ್ ಅಂದರೆ 'ಮಸ್ತಿ' ಎಂಬ ಅನಿಸಿಕೆ ಬಹಳ ದಿನ ಹಾಗೇ ಉಳಿಯಲಿಲ್ಲ. ರಿಲಯನ್ಸಿನ 'ಬಿಟ್ಟಿ ಕಾಲ್ಸ್' ಆಫರ್ ಕೊನೆಗೊಂಡ ಮೇಲೆ ಬಳಕೆಗೆ ತದ್ವಿರುದ್ಧವಾಗಿ ಯದ್ವಾತದ್ವಾ ಬಿಲ್ಲು ಬರೋಕೆ ಪ್ರಾರಂಭವಾದ ನಂತರ ಅವರು ನೀಡಿದ್ದ ಉಚಿತ ಕರೆಗಳು ಎಲ್ಲಿ ವಸೂಲಾಗುತ್ತಿದೆಯೆಂದು ತಿಳಿದುಬಂತು. ಒಂದು ಸಾರಿ ರಿಲಯನ್ಸ್ ೧೫೦೦೦ ರೂ ಬಿಲ್ ಕಳುಹಿಸಿದ್ದೇ ತಡ ಈ ಮೊಬೈಲಿಗೂ ಕತ್ತರಿ ಬಿತ್ತು. ಇಂದಿಗೂ ಆವತ್ತು ರಿಲಯನ್ಸ್ ಕಳುಹಿಸಿದ ಬಿಲ್ ಇತ್ಯರ್ಥವಾಗಿಲ್ಲ. ಮೊಬೈಲು ಫೋನು ಮಾತ್ರ ಹಾಗೆಯೇ ಬಿದ್ದು ಈಗ ಅಣ್ಣನ ಮಗನ ಆಟದ ಸಾಮಾನಾಗಿ ಮಾರ್ಪಟ್ಟಿದೆ.
****
ಅನಿವಾರ್ಯತೆ
ಕಾಲೇಜಿನಲ್ಲಿ ಪ್ರತಿಯೊಬ್ಬರ ಬಳಿಯೂ ಒಂದೊಂದು ಮೊಬೈಲು. ಹಿಂದಿನ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ನಮ್ಮ ಎರಡರಷ್ಟು ವಯಸ್ಸಾದ ಧಡಿಯನ ಬಳಿ ಅದೇನೋ ಹಾಡು ಹೇಳುತ್ತಿದ್ದ ಮೊಬೈಲು ಬೇರೆ ಇತ್ತು! ಕ್ಲಾಸಿನ ಮಧ್ಯೆ ಒಂದೆರಡು ಸಾರಿ ಸಿನೆಮಾ ಹಾಡುಗಳನ್ನ ಅದರಿಂದ ಹಾಡಿಸಿ ಅವನ್ನನ್ನ ಎದುರು ಹಾಕಿಕೊಳ್ಳೋದಕ್ಕೆ ಹೆಣಗಾಡುತ್ತಿದ್ದ ಲೆಕ್ಚರರ್ರುಗಳನ್ನ ಅತಂತ್ರ ಸ್ಥಿತಿಗೆ ತಂದಿಟ್ಟು ಪೇಚಾಡುವಂತೆ ಮಾಡಿ ಪೀಡೀಸುತ್ತಿದ್ದ.
ಮುಂದೆ ಕುಳಿತವ ಪಾಠ ನಮಗಲ್ಲವೆಂದೇ ನಂಬಿ ತನ್ನ ಮೊಬೈಲಿನಲ್ಲಿಯೇ ಮುಳುಗಿಬಿಡುತ್ತಿದ್ದ. ಅವನ ಪಕ್ಕದಲ್ಲಿದ್ದ ಗುಜರಾತೀ ಹುಡುಗಿಗೆ ಆಗಲೇ ಮದುವೆ ಗೊತ್ತಾಗಿದ್ದರಿಂದ ತನ್ನ fiance ಜೊತೆಗೆ ಮಾತನಾಡುವುದೇ ದಿನವಿಡೀ ಕಸುಬು. ಘಂಟೆಗಟ್ಟಲೆ ಹಾಜರಾತಿ ಹಾಕಿಕೊಂಡು ಸಮಯಕಳೆಯುತ್ತಿದ್ದ ಲೆಕ್ಚರರುಗಳ ಮಧ್ಯೆ ಇನ್ನುಳಿದ, ಸಮಯಕಳೆಯಲು ಗೊತ್ತಿಲ್ಲದ ಪೆಂಗಗಳಿಗೆ, ಸುತ್ತಲು ನಡೆಯುತ್ತಿದ್ದ ಡ್ರಾಮಾ ನೋಡೋ ದೌರ್ಭಾಗ್ಯವೇ ಗತಿ. ಧಡಿಯನ ಪಕ್ಕದಲ್ಲಿದ್ದ ಇನ್ನಿಬ್ಬರು ಧಡಿಯಂದಿರು (ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಅದೂ ಈಗಿನ 'ದುಡ್ಡಿಗೆ ಸೀಟು' ಕಾಲದಲ್ಲಿ ಎಷ್ಟು ವಯಸ್ಸಿನವರೂ ಓದಬಹುದು - ಝಣ ಝಣ ದುಡ್ಡಿರಬೇಕಷ್ಟೆ. ಯಾವ ಕಾಲೇಜಿನ ಗೋಡೆಯೂ ದುಡ್ಡಿನ ಮುಂದೆ ಒಂದಡಿ ಎತ್ತರವೂ ನಿಲ್ಲುವುದಿಲ್ಲ) ಅವರವರ ಫೋನುಗಳಲ್ಲಿ ಸಮಯ ಕಳೆಯೋದಕ್ಕೆ ಅವರವರಲ್ಲೇ sms ಕಳುಹಿಸಿಕೊಂಡು ನಗಾಡುವುದು, ಅವರವರ ಮೊಬೈಲುಗಳನ್ನೇ exchange ಮಾಡಿಕೊಂಡು ನೋಡುತ್ತಾ ಕುಳಿತಿರುವುದು - ಇಷ್ಟೆಲ್ಲಾ ಅಷ್ಟೇನು ರಹಸ್ಯವಾಗಿ ಮಾಡಲಾಗದ ಕ್ಲಾಸಿನಲ್ಲಿಯೇ ನಡೆಯುತ್ತಿತ್ತು.
ಹೀಗಿದ್ದಾಗ, ಅಪ್ಪನಿಗೆ ಮತ್ತೊಮ್ಮೆ ಮೊಬೈಲ್ 'ಬೇಕೇ ಬೇಕು' ಎಂಬ ಪರಿಸ್ಥಿತಿ ಎದುರಾಯಿತು. ಆಗಲೇ ಮೊಬೈಲ್ ಬಿಲ್ಲುಗಳನ್ನು ನೋಡಿ ಸಾಕಷ್ಟು ಹೆದರಿದ್ದ ಅಪ್ಪನಿಗೆ ಏನನ್ನಿಸಿತೋ ಏನೋ ನನಗೊಂದು ಮೊಬೈಲ್ ತಂದುಕೊಟ್ಟು 'ಅದೇನೋ ಕಾರ್ಡ್ ಹಾಕಿಕೊಂಡು ತಿಂಗಳುಗಟ್ಟಲೇ ಬಳಸಬಹುದಂತೆ, ಹಾಗೆ ಹಾಕಿಸಿಕೊಂಡು ಇಟ್ಟುಕೋ. ನನಗೆ ಬೇಕಾದಾಗ ಕೊಡು' ಎಂದಿದ್ದರು. ಕೊನೆಗೂ ನನಗೊಂದು ಮೊಬೈಲ್ ಸಿಕ್ಕಿತ್ತು.
****
ಗೋಳು
ಮೊದಮೊದಲು ಬಹಳ ಖುಷಿಯಿಂದ ಮೊಬೈಲನ್ನ ಕೈಯಲ್ಲಿ ಹಿಡಿದು ತಿರುಗಾಡಿಕೊಂಡಿರುತ್ತಿದ್ದ ನನಗೆ ಮೊಬೈಲು ಬೇಜಾರಿನ ವಿಷಯವೂ ಆಗುತ್ತದೆ ಎಂದು ಆಗ ಯಾವತ್ತೂ ಅನ್ನಿಸಿದ್ದಿಲ್ಲ. ಹಾಗೆ ಅನ್ನಿಸಿದ್ದರೂ ಇವತ್ತಿನ ಪರಿಸ್ಥಿತಿ ತಪ್ಪುತ್ತಿರಲಿಲ್ಲವೇನೋ! ಈಗ ಎಲ್ಲಿ ನೋಡಿದರೂ ಮೊಬೈಲು. ದಾರಿಯಲ್ಲಿ ಹೋಗುತ್ತಿರುವ ಎಲ್ಲರ ಕಿವಿಗೂ ಒಂದೊಂದು ಅಂಟಿಕೊಂಡಿರುತ್ತೆ. ಕಿವಿಗೆ ಅಂಟಿಸಿಕೊಂಡಿರದವರಿದ್ದರೆ ಅವರ ಜೇಬಿನಲ್ಲಂತೂ ಒಂದು ಮೊಬೈಲ್ ಖಂಡಿತ ಇರುತ್ತೆ. ಪತ್ರಕರ್ತರು, ಫೈನಾನ್ಸ್, ಸೇಲ್ಸ್ - ಇಂತದ್ದರಲ್ಲಿರುವವರ ಬಳಿಯಂತೂ ಎರಡೆರಡು ಮೊಬೈಲುಗಳು! ಮೊಬೈಲು ಸದ್ದಾದರೆ ಇಸ್ಮಾಯಿಲ್ ತಮ್ಮ ಪ್ಯಾಂಟಿನ ಎರಡೂ ಜೇಬು ತಡಕಾಡಿಕೊಳ್ಳುತ್ತಿರುತ್ತಾರೆ. ಫೈನಾನ್ಸ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಕ್ಕ ಮನೆಗೆ ಬಂದಾಗ ಅವಳ ಬ್ಯಾಗು, ಅವಳ ಸ್ಕೂಟಿ - ಹೀಗೆ ಎಲ್ಲೆಲ್ಲಿಂದಲೋ ಫೋನುಗಳ ಸದ್ದು ಕೇಳಿ ಬರುತ್ತಿರುತ್ತೆ. ಯಾವುದರಲ್ಲೋ "ಹಲೋ" ಎಂದು ಕೂಗಿ "ಛೆ! ಇದಲ್ಲ, ಇನ್ನೊಂದು ಹೊಡ್ಕೋತಾ ಇರೋದು" ಅಂತ ಅವಳು ಪೇಚಾಡೋದು commonಉ. ಈಗ ಮನೆಯಲ್ಲಿ ಐದೈದು ಫೋನುಗಳು! ಯಾವುದು ಹೊಡೆದುಕೊಂಡರೂ ದಿನದ ತಲೆನೋವಿಗೆ additionಉ.
'ಅಮ್ಮ ಅಪ್ಪ' ಎಂದು ಹೇಳೋಕೆ ಬರದ ಅಣ್ಣನ ಮಗನಿಗೆ ಆಗಲೇ 'ಅಲೋ' ಅನ್ನೋಕೆ ಬರುತ್ತಿರೋದು ಸೋಜಿಗವೇನಲ್ಲ. ಅವನಿಗೆ ಆಟದ ಸಾಮಾನುಗಳಿಗಿಂತ (ನಮಗೆ) ಕೆಟ್ಟದಾಗಿ ಹೊಡೆದುಕೊಳ್ಳುವ (ಅವನಿಗೆ) ಸುಂದರವಾದ ಮೊಬೈಲ್ ಫೋನೇ ಬೇಕು! ಲಾಕ್ ಮಾಡದೇ ಕೈಗೆ ಕೊಟ್ಟರೆ ಯಾರಿಗೋ ಫೋನು ಹೊಡೆದು ಕೊನೆಗೆ ನಮಗೆ ಇಕ್ಕಟ್ಟಿಗೆ ಸಿಲುಕುವಂತೆ ಮಾಡ್ತಾನೆ! ಲಾಕ್ ಮಾಡಿ ಕೊಟ್ಟರೆ ಲೈಟು ಬರದೆ ನೆಲಕ್ಕೆ ಕುಟ್ಟುತ್ತಾನೆ ;)
ನಿದ್ರೆ ಮಾಡುತ್ತಿರುವಾಗ ಮೊಬೈಲು ಕೊಡೋ ಕಾಟ ಹೇಳತೀರದ್ದು. ಮೊದಲು ಅಲಾರ್ಮ್ ಗಡಿಯಾರ ಇಲ್ಲದ್ದರಿಂದ ಮೊಬೈಲನ್ನೇ ಅಲಾರ್ಮ್ ಆಗಿ ಬಳಸುತ್ತಿದ್ದೆ. ಅದು ಅಲಾರ್ಮ್ ಹೊಡೆಯೋ ಮೊದಲೇ ಯಾರೋ ಅಲಾರ್ಮ್ ಹೊಡೆಸಿ ಬಡಿದೆಬ್ಬಿಸುತ್ತಿದ್ದದ್ದು ಅಲಾರ್ಮಿಗಿಂತ ಹೆಚ್ಚು ಪೇಚಾಟದ ಪರಿಸ್ಥಿತಿ ತರುತ್ತಿತ್ತು. ಕೊನೆಗೆ ಅಲಾರ್ಮ್ ಗಡಿಯಾರವೇ ಮೇಲು - ಅದನ್ನಾದರೂ ಬಂದ್ ಮಾಡಬಹುದು ಅಂತ ಒಂದನ್ನ ಕೊಂಡುತಂದೆ.
ಟಿ ವಿಯ ದಾರಾವಾಹಿಯಲ್ಲಿ ಫೋನು ಹೊಡೆದುಕೊಂಡರೆ ನಮ್ಮ ಮನೆಯಲ್ಲಿರುವವರೆಲ್ಲ ತಮ್ಮ ತಮ್ಮ ಫೋನಿನ ಮುಖ ಒಂದು ಸಾರಿ ನೋಡಿ ಬರುತ್ತಾರೆ. ಮನೆಗೆ ಬಂದವರು ನಮ್ಮ ಜೊತೆ ಹತ್ತು ನಿಮಿಷ ಮಾತನಾಡಿದರೆ ಫೋನಿನಲ್ಲಿ ೩೦ ನಿಮಿಷ ಮಾತನಾಡಿ ನಮ್ಮ ಸಹನೆ ಎಷ್ಟಿದೆ ಎಂದು ಪರೀಕ್ಷೆ ಮಾಡುತ್ತಿರುತ್ತಾರೇನೊ. ಮನೆಗೆ ಬಂದು ನಮ್ಮನ್ನ ಮಾತನಾಡಿಸಲೂ ಸಮಯವಿಲ್ಲದಂತೆ ಡಬ್ಬಿಯೊಂದಕ್ಕೆ ವಟಗುಟ್ಟುವ ಅಕ್ಕಂಗೆ ಫೋನು ಕಿವಿಗಿಟ್ಟು ಹೊಲೆದು ಆಪರೇಶನ್ ಮಾಡಿಸಿದರೆ ಚೆನ್ನಾಗಿರುತ್ತೆ ಅಂತ ಯಾಕೆ ನನಗೆ ಯಾವಾಗಲೂ ಅನ್ನಿಸುತ್ತಿರುತ್ತೆ?
ಒಟ್ಟು, ಮೊಬೈಲ್ ಸದ್ಯಕ್ಕೆ ಬರಿ 'ಗೋಳು'. :)
*******
UPDATE: ರಾತ್ರಿ ನಿದ್ರೆಗಣ್ಣಿನಲ್ಲಿ ಗೀಚಿದ ಲೇಖನ ಇದು, ವ್ಯಂಗ ಚಿತ್ರ ಕೂಡ Inkscapeನಲ್ಲಿ ಒಂದು ನಿಮಿಷವೂ ವ್ಯಯಿಸದೇ ಗೀಚಿದ್ದು. ಲೇಖನ ಸಾಧಾರಣವಾಗಿದ್ದಲ್ಲಿ ಓದಲು ಕಷ್ಟಪಟ್ಟವರಲ್ಲಿ ಕ್ಷಮೆ. ;)