ಮೊಲವೂ... ಸಿಂಹವೂ....

ಮೊಲವೂ... ಸಿಂಹವೂ....

ಕವನ

 

ಪಂಪಾತೀರದ ಕಿಷ್ಕಿಂಧೆಯ ಕಾಡಲಿ

ಹಂತಕ ಸಿಂಹಕೆ ಬೇಟೆಯ ತೀಟೆ

ತುಂಗೆಯ ತೀರದ ನೀರಿನ ದಾಹವ

ತಣಿಸುವ ತಾಣದ ಮರೆಯಲಿ ಹೊಂಚಿ

ಹಸಿದಿಹ ಸಿಂಹದ ಸಹಿಸದ ಹಿಂಸೆಗೆ

ಪ್ರಾಣಿಯ ಪ್ರಾಣದ ನಿಲ್ಲದ ಹರಣದ

ಪಿಡುಗಿನ ಸಿಂಹದ ದಹಿಸುವ ಹಸಿವಿಗೆ

ಹೆದರಿದವೆಲ್ಲಾ ಕಾಡಿನ ಮೃಗಗಳು       || 1 ||

 

ಸಿಂಹದ ಹಸಿವಿನ  ನಿಲ್ಲದ ಕಾಟದ  

ಬೇಟೆಯ ನಶೆಯಲಿ ನಶಿಸುವೆವೆಲ್ಲಾ

ನಾಶವ ನಿಲಿಸುವ ದಿಶೆಯಲಿ ಸೇರಲು

ಕರೆಯುವ ಪ್ರಾಣಿಯ ಪರಿಷತ್ತು  || 2 ||

 

ಎಲ್ಲರು ಸೇರಿರಿ ತಪ್ಪದೆ ಸಭೆಯಲಿ

ಮಂಗನು ಚೀರುತ ಡಂಗುರ ಸಾರಲು

ಸೇರಿದವೆಲ್ಲಾ ಹೇಳಿದ ಸಮಯದಿ

ಸಭೆಯಲಿ ನಿಲ್ಲದ ಬಿಸಿಬಿಸಿ ಚರ್ಚೆಯು

ಸಿಂಹದ ಬೇಟೆಯ ಕಾಟದ ಭಯಕೆ

ಸಲಗನ ಸಲಹೆಯ ಸರದಿಯ ನಿಯಮದ

ಕರಡನು ಮಾಡಿದ ಕರಡಿಯ ಮಾತನು

ಕರತಾಡನ ಮಾಡಿ ಒಪ್ಪಿದ ಸಭೆಯು

ಕರಡಿನ ನಿಯಮವ ಸಿಂಹಕೆ ತಿಳಿಸಲು

ಗರುಡನ ನಿಯೋಗವ ಕಳಿಸಿತು ಸಭೆಯು  || 3 ||

 

ಕಾಡಿನ ಸಭೆಯ ಕರಡಿನ ನಿಯಮವ

ನಯದಲಿ ವಿವರಿಸಿ ಹೇಳಿದ ಗರುಡನ

ಮಾತಿಗೆ ಒಪ್ಪುತ ಹಾಕಿತು ಅಂಕಿತ

ದಿನವೂ ಹಸಿವೆಯು ಮೀರುವ ಮುನ್ನವೆ

ಸರದಿಯ ಬೇಟೆಯು ಬಾಗಿಲ ಬಳಿಯಲಿ

ಸುಳಿಯದೆ ಹೋದರೆ ಸಹಿಸದೆ ಕೊಲ್ಲುವೆ

ತಿಳಿಸಿರಿ ಖಗಪತಿ ಸಭೆಯಲಿ ತಪ್ಪದೆ

ನಿಯಮಕೆ ಬದ್ಧ ಈ ಮೃಗರಾಜನು ಎಂದು

ಬೀಳ್ಕೊಟ್ಟನು ಖಗರಾಜನ ಗೌರವದಿ  || 4 ||

 

ದಿನಗಳು ಕಳೆದವು ಸರದಿಯ ನಿಯಮದಿ

ಭಯವೇ ಇಲ್ಲದ ನೆಮ್ಮದಿ  ಜೀವನ

ಪ್ರಾಣದ ಭಯವು ಸರದಿಯ ಪ್ರಾಣಿಗೆ

ಉಳಿದವಕೆಲ್ಲಾ ಸಂತಸ ದಿನಚರಿ

ಪುಸ್ತಕ ನೋಡುತ ಕೂಗಿತು ನರಿಯು

ಮೊಲದಾ ಮನೆಯ ಮುಂದೆಯೆ ನಿಂತು

ಈದಿನ ಸಿಂಹಕೆ ನಿನ್ನಯ ಸರದಿಯು

ಸಿಂಹದ ಹಸಿವೆಯು ಮೀರುವ ಮುನ್ನವೆ

ಗುಹೆಯ ಬಾಗಿಲ ಬಳಿಯಲೆ ಸುಳಿದಿರು

ಸಮಯವ ಪಾಲಿಸು ನಿಯಮವ ತಪ್ದದೆ  || 5 ||

 

ಸಾವಿನ ಬಾಯನು ಹೊಗುವ ಮೊಲವದು

ಭಯವೇ ಇಲ್ಲದೆ ಎಲ್ಲರ ಜೊತೆಯಲಿ

ಆಡುತ ಕುಣಿಯುತ ಸಮಯವ ಕಳೆದು

ಹೊರಟಿತು ಸಿಂಹದ ಬಾಯಿಗೆ ಬೀಳಲು

ಮಾರ್ಗದ ಮಧ್ಯದ ಆಳದ ಭಾವಿಯ

ಇಣುಕಿದ ಮೊಲವು ತನ್ನಯ ಬಿಂಬವು

ಕಾಣುವ ಪರಿಗೆ ಯೋಜನೆ ಹೆಣೆಯುತ

ಗುಹೆಯ ಬಳಿಯಲೇ ಬಂದಿತ್ತು  || 6 ||

 

ಹಸಿವೆಯ ಸಹಿಸುವ ಮಿತಿಯದು ಮೀರಲು

ಶತಪಥ ನಡೆಯುತ ಸಿಂಹವು ಸಿಟ್ಟಲಿ

ಕೊಲ್ಲುವೆನೆಲ್ಲರ ಒಂದೇ ಏಟಿಗೆ

ಎನ್ನುತ ಸಿಂಹವು ಬಾಗಿಲ ನೋಡಲು

ತಿಂಡಿಗು ಆಗದ ಮೊಲವನು ಕಾಣುತ

ಸಂಯಮ ಮೀರಿದ ಸಿಂಹವು ಜೋರಲಿ

ಸಮಯವ ಮೀರಿ ಒಬ್ಬನೆ ಬಂದಿಹೆ

ಕೊಲ್ಲುವೆನೆಲ್ಲರ ನಿಯಮವ ಮುರಿದಿಹೆ || 7 ||

 

ಮೊಲವದು ಮುಖದಲಿ ಭಯವನು ಸೂಸುತ

ನಿನ್ನಯ ಹಸಿವೆಯ ತೀರಿಸೊ ಸರದಿಗೆ 

ನಾಲ್ವರು ಬರುತಿರೆ ಕೋಟೆಯ ಸಿಂಹವು

ಹಸಿವೆಯ ಸಮಯದಿ ಬಂದಿಹ ನಿಮ್ಮನು

ತಿನ್ನದೆ ಬಿಡುವೆನೆ ಹಾಗೆಯೆ ಸುಮ್ಮನೆ

ರಾಜನ ಊಟದ ಮೊಲಗಳು ನಾವು

ಬಿಡುಬಿಡು ನಮ್ಮನು ಸಮಯವು ಮೀರಿದೆ 

ಎಂದರು ಬಿಡದೆ ನಿನ್ನನು ಬೈಯುತ

ನಾನೇ ರಾಜನು ಕೋಟೆಯಲಿರುವೆನು

ಕೋಟೆಯೆ ಇಲ್ಲದ ನಿಮ್ಮಯ ಸಿಂಹವು

ರಾಜನೆ ಅಲ್ಲ ಎಂದಿತು ದರ್ಪದಿ

ನಾನೆ ನಿಜದಲಿ ರಾಜನು ನಿಮಗೆ

ಎನ್ನುತ ಮೂವರ ಕೊಂದೇ ತಿಂದಿದೆ   

ಕಡುಕಷ್ಟದಿ ನಾನು ತಪ್ಪಿಸಿಕೊಂಡು

ಓಡುತ ಬಂದಿಹೆ ನಿನ್ನಯ ಊಟಕೆ  

ಕೋಪವ ಮಾಡದೆ ಊಟವ ಮಾಡು

ಎಂದಿತು ಮೊಲವು ಮುದುಡಿದ ಮುಖದಲಿ  || 8 ||

 

ಮೊದಲಲಿ ಕೋಟೆಯ ಸಿಂಹವ ಕೊಲ್ಲುವೆ

ನಂತರ ಊಟದ ತಂಟೆಗೆ ಬರುವೆ  

ತೋರಿಸು ಸಿಂಹದ ಕೋಟೆಯ ಮೊದಲು

ಸಹಿಸೆನು ಶತ್ರುವ ನನ್ನಯ ಕ್ಷೇತ್ರದಿ

ತೋರಿತು ಮೊಲವದು ಭಾವಿಯ ಸಿಂಹಕೆ

ನೋಡದೊ ಆಳದ ಕೋಟೆಯ ಒಳಗಡೆ

ಇಣುಕಿತು ಬಾವಿಯ ಸಿಂಹವು ಕೋಪದಿ

ನೀರಲಿ ತನ್ನಯ ಬಿಂಬವ ನೋಡಿ

ಭರ್ಜರಿ ಘರ್ಜನೆ ಮಾಡಲು ಸಿಂಹವು

ಘರ್ಜನೆ ಪ್ರತಿಧ್ವನಿ ಮರಳಿಯೆ ಕೇಳಲು

ಹಾರಿತು ನೋಡದೆ ಹಿಂದುಮುಂದು   || 9 ||

 

ಬುದ್ಧಿಯ ಬಲದಲಿ ಮೀರಿದ ಮೊಲವು

ಮುಗಿಸಿತು ಸಿಂಹದ ಕಥೆಯನು ಅಂದು

ಶಕ್ತಿಯ ಮುಂದೆ ಯುಕ್ತಿಯೆ ಮಿಗಿಲು

ಸಾಧಿಸಿ ಮೊಲವು ಸಾರಿತು ಕಾಡಲಿ

ಪಂಚತಂತ್ರದ ಪ್ರಾಣಿಯ ಕಥೆಯಲಿ

ನೀತಿಯ ನಿಲಿಸಿ ಮತಿಯನು ಬೆಳೆಸಿದ

ವಿಷ್ಣುಶರ್ಮ ಕಥನದ ಜಯಪ್ರಕಾಶಿತ ಕವನ  || 10 ||

Comments