ಮೋರಿಯಲ್ಲಿ ನುಗ್ಗಿ ನೋಡಿದ ಕ್ರಿಕೆಟ್...
ನೆನ್ನೆ ನನ್ನ ಬಾಲ್ಯದ ಗೆಳೆಯ ಬಹಳ ದಿನಗಳ ನಂತರ ಸಿಕ್ಕ. ಕಳೆದ ವಾರವಷ್ಟೇ ಸ್ಕಾಟ್ಲೆಂಡ್ ಇಂದ ಬಂದದ್ದಾಗಿ ತಿಳಿಸಿದ. ಹಾಗೆ ಇಬ್ಬರು ನಮ್ಮ ಮನೆಗೆ ಹೋಗಿ ಕಾಫಿ ಕುಡಿಯುತ್ತ ಮಾತನಾಡುತ್ತಿದ್ದಾಗ ಅವನು ನನ್ನ ಕಡೆ ಏನಪ್ಪಾ ಜಿಮ್ ಗೆ ಹೋಗಿ ಒಳ್ಳೆ ಬಾಡಿ ಬಿಲ್ಡರ್ ಆದ ಹಾಗೆ ಆಗಿದ್ದೀಯ..ಮುಂಚೆ ಒಳ್ಳೆ ಕಡ್ಡಿ ಇದ್ದ ಹಾಗೆ ಇದ್ದೆ ಎಂದು ಒಂದು ಹಳೆಯ ಘಟನೆ ನೆನಪಿಸಿಕೊಂಡ.
ಅದು ೧೯೯೪ ನೆ ಇಸವಿ. ನಮ್ಮ ಹತ್ತನೇ ತರಗತಿ ಅರ್ಧವಾರ್ಷಿಕ ಪರೀಕ್ಷೆಯ ಸಮಯ. ನಾನು ಮನೆಯಲ್ಲಿದ್ದರೆ ಓದುವುದು ಕಮ್ಮಿ ಎಂದು ರಾತ್ರಿ ವೇಳೆ ನನ್ನ ಗೆಳೆಯನ ಮನೆಯಲ್ಲಿ "ಕಂಬೈನ್ಡ್ ಸ್ಟಡಿ" ಮಾಡುತ್ತಿದ್ದೆವು. ಅದು ಅಲ್ಲದೆ ಅವನು ನನಗಿಂತ ಓದಿನಲ್ಲಿ ಬಹಳ ಬುದ್ಧಿವಂತ. ಹಾಗಾಗಿ ಅವನ ಜೊತೆ ಓದಿದರೆ ಏನಾದರು ಸಂಶಯ ಇದ್ದರೆ ಪರಿಹರಿಸಿಕೊಳ್ಳಬಹುದೆಂಬ ನಂಬಿಕೆಯಿಂದ ಅವನ ಮನೆಯಲ್ಲಿ ಓದಿಕೊಳ್ಳುತ್ತಿದ್ದೆ. ನನ್ನಮನೆಗೂ ಅವನ ಮನೆಗೂ ಕೇವಲ ಒಂದು ರಸ್ತೆಯ ದೂರವಿತ್ತು.
ನಮಗೆಲ್ಲ ಕ್ರಿಕೆಟ್ ಎಂದರೆ ಪಂಚಪ್ರಾಣ ಎಷ್ಟೆಂದರೆ ಅದು ಯಾವ ಸಮಯದಲ್ಲೇ ಇದ್ದರು ಹಗಲು ರಾತ್ರಿಯೆನ್ನದೇ ನೋಡುತ್ತಿದ್ದೆವು. ಸರಿಯಾಗಿ ಪರೀಕ್ಷೆಯ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು( ಸಹಾರ ಕಪ್ ಅನಿಸುತ್ತದೆ) ಅದು ಬೆಳಗಿನ ಜಾವ ಮೂರಕ್ಕೆ ಶುರುವಾಗುತ್ತಿತ್ತು. ನಾನು ನನ್ನ ಗೆಳೆಯನ ಮನೆಯಲ್ಲಿ ಓದುತ್ತಾ ಕುಳಿತಿದ್ದರು ನಮ್ಮಿಬ್ಬರಿಗೂ ಕ್ರಿಕೆಟ್ ನೋಡುವ ಆಸೆ. ಆದರೆ ಅವರ ಮನೆಯಲ್ಲಿ ಟಿ.ವಿ. ಇರಲಿಲ್ಲ.ಮೊದಲೆರಡು ಪಂದ್ಯಗಳನ್ನು ನೋಡಲು ಆಗಲಿಲ್ಲ. ಆದರೆ ಮೂರನೇ ಪಂದ್ಯ ಹೇಗಾದರೂ ನೋಡಲೇಬೇಕೆಂದು ನಿರ್ಧರಿಸಿದೆವು.ಸರಿ ಬೆಳಗಿನ ಜಾವ ೨.೪೫ ಕ್ಕೆ ಎದ್ದು ನಮ್ಮ ಮನೆಗೆ ಬಂದು ನೋಡುವುದೆಂದು ಹಿಂದಿನ ದಿನವೇ ಮಾತಾಡಿದ್ದೆವು.ಅಂದುಕೊಂಡಹಾಗೆ ಬೆಳಿಗ್ಗೆ ೨.೩೦ ಕ್ಕೇ ನಮ್ಮ ಮನೆಯ ಬಳಿ ಬಂದೆವು. ಆದರೆ ನಮ್ಮ ವಠಾರಕ್ಕೆ ದೊಡ್ಡ ಗೇಟ್ ಇರುವ ಬಗ್ಗೆ ಮರೆತೇ ಹೋಗಿದ್ದೆವು. ಆ ಗೇಟ್ ದಾಟಿ ಒಳಗೆ ಹೋಗಬೇಕೆಂದರೆ ಬೀಗ ತೆಗೆದೇ ಹೋಗಬೇಕು..ಅಷ್ಟು ದೊಡ್ಡ ಗೇಟ್ ಅದು. ಸರಿ ಬಂದು ಬಿಟ್ಟಿದ್ದೇವೆ ಇನ್ನೇನು ಮಾಡುವುದು ಎಂದು ಅಲ್ಲಿಂದನೇ ಸುಮಾರು ಸಲ ನಮ್ಮ ತಂದೆಯವರನ್ನು ಕರೆದೆ. ಅವರು ಗಾಢ ನಿದ್ರೆಯಲ್ಲಿದ್ದ ಕಾರಣ ಎದ್ದು ಬರಲಿಲ್ಲ..ಸರಿ ನಡಿ ವಾಪಸ್ ಹೋಗೋಣ ಇನ್ನೇನು ಮಾಡಕ್ಕಾಗತ್ತೆ ಅನ್ನೋ ಅಷ್ಟರಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ಗೇಟ್ ಕೆಳಗಿನ ಸಣ್ಣ ಮೋರಿ. ಮೋರಿ ಎಂದರೆ ಕೊಳಚೆ ನೀರಿನ ಮೋರಿಯಲ್ಲ..ಮಳೆ ನೀರು ಹೋಗಲು ಮಾಡಿದ್ದ ಸಣ್ಣ ಕಾಲುವೆಯಂತದ್ದು. ನಾವು ಅದನ್ನು ಮೋರಿ ಎಂದು ಕರೆಯುತ್ತಿದ್ದೆವು. ಅದು ಬಹಳ ದೊಡ್ಡದೇನಲ್ಲ. ೧/೧ ಅಡಿಯಷ್ಟಿಯಿದ್ದಿರಬಹುದು. ನಾನು ನನ್ನ ಗೆಳೆಯನಿಗೆ ಅದನ್ನು ತೋರಿಸಿ ಅದರಲ್ಲಿ ತೂರಿ ಹೋಗೋಣ ಎಂದೆ. ಅವನು ಅದು ಸಾಧ್ಯವಿಲ್ಲ ನಡಿ ವಾಪಸ್ ಎಂದ..ನನಗೆ ಅವತ್ತು ಹೇಗಾದರೂ ಕ್ರಿಕೆಟ್ ನೋಡಲೇಬೇಕೆಂಬ ಹಠ. ಅವನ ಮಾತಿಗೆ ಬೆಲೆ ಕೊಡದೆ ಮೊದಲು ನನ್ನ ತಲೆಯನ್ನು ತೂರಿಸೇಬಿಟ್ಟೆ. ನಂತರ ಅಡ್ಡಡ್ಡ ಮಲಗಿಕೊಂಡು ತೆವಳುತ್ತಾ ತೆವಳುತ್ತಾ ಒಂದು ಕಡೆಯಿಂದ ಇನ್ನೊಂದೆಡೆಗೆ ಬಂದೇಬಿಟ್ಟೆ. ನಂತರ ನನ್ನ ಗೆಳೆಯ ನಾನು ಪ್ರಯತ್ನಿಸುತ್ತೇನೆ ಎಂದು ಒಳಬರಲು ಪ್ರಯತ್ನಿಸಿ ಅರ್ಧಕ್ಕೆ ಸಿಕ್ಕಿಹಾಕಿಕೊಂಡು ಬರಲಾಗದೆ ಹಾಗೆ ವಾಪಸ್ ಹೋಗಿಬಿಟ್ಟ,.ಮತ್ತೆ ನಾನು ಮನೆಗೆ ಹೋಗಿ ಗೇಟ್ ಬೀಗದಕೈ (ಬೀಗದ ಕೈ ನಮ್ಮ ಮನೆಯಲ್ಲೇ ಇರುತ್ತಿತ್ತು) ತಂದು ಅವನನ್ನು ಕರೆದುಕೊಂಡು ಹೋಗಿ ಕ್ರಿಕೆಟ್ ನೋಡಿದೆವು...ನಾವು ಅಷ್ಟು ಕಷ್ಟಪಟ್ಟಿದ್ದಕ್ಕೆ ಅಂದು ಭಾರತ ಒಳ್ಳೆಯ ಪ್ರದರ್ಶನ ನೀಡಿ ಅಂದಿನ ಪಂದ್ಯವನ್ನು ಗೆದ್ದಿತು.
ಆ ಘಟನೆ ನೆನಪಿಸಿದ ನನ್ನ ಸ್ನೇಹಿತ ನಾನು ಬಿದ್ದು ಬಿದ್ದು ನಕ್ಕು ಅವನನ್ನು ಬೀಳ್ಕೊಟ್ಟೆ.
Comments
ಉ: ಮೋರಿಯಲ್ಲಿ ನುಗ್ಗಿ ನೋಡಿದ ಕ್ರಿಕೆಟ್...
ಉ: ಮೋರಿಯಲ್ಲಿ ನುಗ್ಗಿ ನೋಡಿದ ಕ್ರಿಕೆಟ್...