ಮೋಹಕ ನಗೆ
ಕವನ
ಆರಂಭವೂ ಇಲ್ಲ, ಅಂತ್ಯವೂ ಇಲ್ಲ ವರ್ಣನೆಗೆ
ನಿನ್ನ ಅತಿಸುಂದರ ಮುಗುಳ್ನಗೆಯ ಆರಾಧನೆಗೆ
ಮುಗ್ಧತೆಯು ತುಂಬಿದ ಆ ನಗುವೆಷ್ಟು ಮೋಹಕ
ಹಿಡಿದಿಟ್ಟಿದೆ ನನ್ನ ಮನವ ಒಂದೇ ಕ್ಷಣದಲಿ
ಈಗ ಬೆಳೆದು ನಿಂತಿವೆ ಕನಸುಗಳು ಅನೇಕ
ಹಾರಾಡುತಿವೆ ಅವೆಲ್ಲ ಗರಿಬಿಚ್ಚಿ ಆಕಾಶದಲಿ
ತಂಪೆರೆವ ಮುಂಗಾರಿನಂತಿದೆ ನಿನ್ನ ಮಂದಹಾಸ
ಛಳಿಯ ಹವೆಯಲಿ ತರುವಂತಿದೆ ಬೆಚ್ಚಗಿನ ಅನುಭವ
ಧೈರ್ಯಗೆಟ್ಟ ಜೀವಕೆ ತುಂಬುವಂತಿದೆ ವಿಶ್ವಾಸ
ತುಂಬುತ ಕಪ್ಪು-ಬಿಳುಪಿನ ಹಾಳೆಗೆ ನೂರಾರು ಬಣ್ಣವ
ತಿಳಿಯದಂತಾಗಿದೆ ನನಗೆ ಹಗಲು-ರಾತ್ರಿಗಳ ವ್ಯತ್ಯಾಸ
ಸದಾಕಾಲ ಆಗಿದೆ ನಿನ್ನಯ ನಗುವಿನ ಧ್ಯಾನ
ಮರೆಸಿರುವೆ ಎಲ್ಲವ, ನೀ ಹೂಡಿ ನನ್ನೊಳು ವಾಸ
ಇನ್ನು ಹೇಳಬೇಕಿರುವುದನು ಹೇಳುವುದೆನ್ನ ಮೌನ
ಇಂತಿ,
ಮೋಹಕ ಮುಗುಳ್ನಗೆಯ ಅಭಿಮಾನಿ