ಮೌನದೊಳಗಿನ ಭಾವ
ಮೌನ ಮರೆತ ಮಧುರ ಭಾವ
ಬಾನ ನಡುವೆ ಹೂತು ಹೋಗೆ
ಮೇನೆ ಬರದೆ ಪ್ರೀತಿ ಬರದು ತಿಳಿಯದಾಯಿತೆ
ಗಾನ ವಿರಹ ನಡುವೆ ಸೋರಿ
ಬೇನೆ ಹರಡೆ ಕಡಲು ಸುಡಲು
ಸೋನೆ ಮಳೆಯು ಬರದೆ ನೊಂದು ಹಾರಿ ಹೋಯಿತೆ
ತಂಪು ಇರದೆ ಜಲವು ಸಿಗದು
ಕಂಪು ಸಿಗದೆ ಪ್ರೇಮ ತರದು
ನೆಂಪು ಸವಿಯ ಒಲವ ಸೆಲೆಯು ಸನಿಹ ಬಂದಿದೆ
ಕೆಂಪು ಹೊಳೆಯ ಬದಿಯೆ ಸಿಡಿಲು
ಬಂತು ನೋಡು ಮುನಿಸ ತೊರೆದು
ಸಂತನಂತೆ ಬಳಿಗೆ ಬಂದು ಕೈಯ ಹಿಡಿಯಿತೆ
ದಾರಿ ಕಿರಿದು ಹೋಗಿ ಸೆಳೆಯು
ತೋರಿ ಮನವ ಮುದದಿ ತೆರೆದು
ತಾರೆ ಚಂದ್ರ ಮೊಗದಿ ನಗುವು ಸೇರಿಕೊಂಡಿತು
ಬಾರೆ ಚೆಲುವೆ ಮುದ್ದು ಮುಖವೆ
ಮೋರೆ ಸನಿಹ ತಂದು ನಿಲಿಸೆ
ಮಾರ ನಾನು ನಿನ್ನ ತೀರ ಹೇಳಿ ನಿಂತಿತು
***
ಗಝಲ್
ನಿನ್ನ ಹುಡುಕುತ್ತಲೇ ಅಲೆಯುತ್ತಿರುವೆ ಪ್ರಿಯೆ ಎಲ್ಲಿರುವೆಯೆಂದು ಹೇಳುವುದಿಲ್ಲವೆ ಸಾಕಿ
ನನ್ನ ಮನದೊಳಗೆ ಇಣಿಕಿ ಹೋದವಳು ಜೀವನದ ಹೊಸಿಲ ತುಳಿಯಲಿಲ್ಲವೆ ಸಾಕಿ
ಬರಡಾದ ಈ ಬದುಕಿನಲ್ಲಿ ನೀನು ಶಿಲೆಯಾಗಿಯೇ ಹೋದೆಯಲ್ಲೆ
ಕಾಡಿನೊಳಗೆ ಇದ್ದ ಮೊಲದ ಸ್ಥಿತಿಯಂತಾಗಿ ಹೋಯಿತಲ್ಲವೆ ಸಾಕಿ
ಹಾಳು ಮರದ ಬಿಳಲಿನಲ್ಲಿ ಉಯ್ಯಾಲೆ ಆಡಿದಂತಾಗಿದೆ ನೋಡಲು ನೀನೇ ಇಲ್ಲವಲ್ಲೆ
ಮನಸಿನಾಳದ ಪ್ರೀತಿಯು ಚಿಗುರೊಡೆಯಿತು ಎನ್ನುವಾಗಲೆ ಕಾಣೆಯಾದೆಯಲ್ಲವೆ ಸಾಕಿ
ಕಲ್ಲುಸಕ್ಕರೆಯ ಕಡೆಯುವಕಲ್ಲಿನಲ್ಲಿ ಹಾಕಿ ಕಡೆದಂತಾಗಿದೆ ಎನ್ನ ಹೃದಯ ತಿಳಿದೆಯ
ಶಪಿಸಲು ಯಾರು ಉಳಿದಿದ್ದಾರೆ ಗೋರಿಗಳೆಡೆ ಮಲಗಿಯಾಯಿತಲ್ಲವೆ ಸಾಕಿ
ಒಲವೆಂಬ ಕಲೆಯೊಳಗೆ ಇನ್ನೆಂದು ಈಶ ಬಂದರೂ ಬಾರದಿದ್ದರೂ ಒಂದೇಯಲ್ಲವೆ
ಮನದಾಳದ ನೋವಿಗೆ ಅರ್ಥ ಹುಡುಕುವುದರಲ್ಲೇ ಪ್ರಾಯವಾಯ್ತಲ್ಲವೆ ಸಾಕಿ
-ಹಾ ಮ ಸತೀಶ