ಮೌನ ಮೀರಲಿಲ್ಲ!

ಮೌನ ಮೀರಲಿಲ್ಲ!

ಕವನ

ಕಡಲಾಳದಂತಿರುವ ಬಡತನದ ಬವಣೆಯಲಿ,
ಈಜಲೆಂದು ದೂಡಿದೆ ನೀನು.
ನಾ ಮಾತಾಡಲಿಲ್ಲ| ಮೌನವ ಮೀರಲಿಲ್ಲ |
ಬಡತನದ ಬೇಗೆಯನು ಸಹಿಸುತಲಿ,
ಸಿರಿತನದ ಆಸೆಗಳ ಮರೆಯುತಲಿ, ಈಜಿ ದಡ ಸೇರಿದೆ ನಾನು.
ನಾ ಮುಳುಗಲಿಲ್ಲ| ಬಡತನ ಎನಗೆ ಹೊರೆಯಾಗಲಿಲ್ಲ |

ಜೀವನ ಯಾನದ ಪ್ರತಿಹಂತದಲು,
ದುಃಖದ ಬಾಣಗಳ ಮಳೆಗರೆದೆ ನೀನು.
ನಾ ದೂಷಿಸಲಿಲ್ಲ| ಮೌನವ ಮೀರಲಿಲ್ಲ |
ನೋವುಗಳ ನುಂಗುತಲಿ, ಮುಂಬರುವ
ನಲಿವುಗಳ ನೆನೆಯುತಲಿ, ಯಾನವ ಬೆಳೆಸಿದೆ ನಾನು.
ನಾ ಹೆದರಲಿಲ್ಲ| ದುಃಖದ ಬಾಣಗಳ ಇರಿತಕ್ಕೆ, ನಾ ಮಣಿಯಲಿಲ್ಲ |

ಜೀವನದ ಹೋರಾಟದಿ, ಅಸ್ತ್ರವಾಗಿರಲೆಂದು,
ಅಂಗವಿಕಲತೆಯ ಬಳುವಳಿಯಾಗಿ ತಂದೆ ನೀನು.
ನಾ ನಿಂದಿಸಲಿಲ್ಲ| ಮೌನವ ಮೀರಲಿಲ್ಲ |
ಅಂಗವಿಕಲ ತಾನೆಂದು ಮರೆಯುತಲಿ,
ಛಲವ ಹೂಡಿ, ಹೋರಾಟ ಮುನ್ನಡೆಸಿದೆ ನಾನು.
ನಾ ಸೋಲಲಿಲ್ಲ| ನೀನಿತ್ತ ಬಳುವಳಿ, ಎನ್ನ ಧೈರ್ಯವ ಕುಗ್ಗಿಸಲಿಲ್ಲ |

ದೋಷವಿರುವ ಜಾತಕ ಬರೆದು,
ಸಮಾಜ ನಿಂದನೆಗೆ ಗುರಿಮಾಡಿದೆ ನೀನು.
ನಾ ಆಕ್ಷೇಪಿಸಲಿಲ್ಲ| ಮೌನವ ಮೀರಲಿಲ್ಲ |
ನಿಂದನೆಯ ಮಾತುಗಳಿಗೆ ಆಸ್ಪದಕೊಡೆದೆ,
ಎನ್ನಲಿದ್ದ ನಂಬಿಕೆ ಬಿಡದೆ, ಹಾದಿ ಹುಡುಕಿದೆ ನಾನು.
ನಾ ಅಳುಕಲಿಲ್ಲ| ಅಪನಿಂದನೆಗೆ ನಾ ಬಲಿಯಾಗಲಿಲ್ಲ |