ಮೌಲ್ಯಗಳ ಹುಡುಕಾಟದಲ್ಲಿ

ಮೌಲ್ಯಗಳ ಹುಡುಕಾಟದಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಯಾಕೂಬ್ ಎಸ್ ಕೊಯ್ಯೂರು
ಪ್ರಕಾಶಕರು
ಮಾಮರ ಪ್ರಕಾಶನ, ಕೆ ಆರ್ ಮೊಹಲ್ಲಾ, ಮೈಸೂರು - ೫೭೦೦೦೪
ಪುಸ್ತಕದ ಬೆಲೆ
ರೂ. ೨೭೦.೦೦, ಮುದ್ರಣ: ೨೦೨೩

ಯಾಕೂಬ್ ಎಸ್ ಕೊಯ್ಯೂರು ಅವರು ವೃತ್ತಿಯಲ್ಲಿ ಪ್ರೌಢ ಶಾಲೆಯಲ್ಲಿ ಗಣಿತ ವಿಷಯದ ಶಿಕ್ಷಕರು. ಮಕ್ಕಳಿಗೆ ಗಣಿತ ಯಾವಾಗಲೂ ಕಬ್ಬಿಣದ ಕಡಲೆಯೇ. ಇವರು ಕಾರ್ಯ ನಿರ್ವಹಿಸುವ ಸರಕಾರಿ ಪ್ರೌಢ ಶಾಲೆ ನಡ, ಬೆಳ್ತಂಗಡಿಯಲ್ಲಿ ಗಣಿತ ಪ್ರಯೋಗ ಶಾಲೆಯನ್ನು ನಿರ್ಮಿಸಿ, ರಾಜ್ಯದಲ್ಲೇ ಸಂಚಲನ ಮೂಡಿಸಿದ್ದಾರೆ. ಇವರ ಈ ಸೃಜನಶೀಲ ವ್ಯಕ್ತಿತ್ವವನ್ನು ಗುರುತಿಸಿ ಕೇಂದ್ರ ಸರಕಾರವು ಯಾಕೂಬ್ ಅವರಿಗೆ ೨೦೨೦ರಲ್ಲಿ ದೇಶದ ಅತ್ಯುನ್ನತ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಯಾಕೂಬ್ ಅವರು ಒಬ್ಬ ಉತ್ತಮ ಶಿಕ್ಷಕರು ಮಾತ್ರವಲ್ಲ, ಪ್ರತಿಭಾವಂತ ಬರಹಗಾರರೂ ಹೌದು. ಇವರು ಬರೆದ ಲೇಖನಗಳನ್ನು ಸಂಗ್ರಹಿಸಿ “ಮೌಲ್ಯಗಳ ಹುಡುಕಾಟದಲ್ಲಿ" ಎಂಬ ಕೃತಿಯನ್ನು ಹೊರ ತಂದಿದ್ದಾರೆ. ಈ ಪುಸ್ತಕದಲ್ಲಿ ಯಾಕೂಬ್ ಅವರ ವೃತ್ತಿ ಜೀವನದ ಅನುಭವಗಳ ಸಾರ ಅಡಗಿದೆ. ಈ ಕೃತಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಉತ್ತಮ ದಾರಿದೀಪವಾಗುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.

ಈ ಚಿಂತನಾ ಬರಹಗಳ ಸಂಕಲನಕ್ಕೆ ಲೇಖಕರಾದ ಅರವಿಂದ ಚೊಕ್ಕಾಡಿ ಇವರು ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ಇಲ್ಲಿದೆ..."ಈ ಕೃತಿಯಲ್ಲಿ ಬರಹಗಳು ವೈಚಾರಿಕ ಬರಹಗಳಾಗಿವೆ. ಆದರೆ ಕೆಲವೊಮ್ಮೆ ಕಥೆಗಳಾಗಿ, ಕೆಲವೊಮ್ಮೆ ಅನುಭವ ಕಥನಗಳಾಗಿ, ಮತ್ತೆ ಕೆಲವೊಮ್ಮೆ ಲಲಿತ ಪ್ರಬಂಧಗಳಾಗಿ ಈ ಬರಹಗಳು ತೀವ್ರ ಉತ್ಸಾಹ ಮತ್ತು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಆದರೆ ಕಥೆಯ ರೂಪ, ಅನುಭವ ಕಥನದ ರೂಪಗಳೆಲ್ಲ ಇಲ್ಲಿ ಕಾಣಿಸಿದರೂ ಬರಹಗಳ ಒಟ್ಟೂ ನಿಲುವು ವೈಚಾರಿಕತೆಯೇ ಆಗಿದೆ.

ಯಾಕೂಬ್ ಅವರ ಬರಹಗಳು ಈ ಮಾದರಿಯನ್ನು ಅನುಸರಿಸಲು ಯಾಕೂಬ್ ಅವರ ಬರಹಕ್ಕೆ ಪ್ರೇರಣೆ ಅಮೂರ್ತ ಶುಷ್ಕ ಗ್ರಹಿಕೆಗಳಾಗಲಿ, ಸ್ಥಾಪಿತ ಸಿದ್ಧಾಂತಗಳಾಗಲಿ ಅಲ್ಲ. ಅವರ ಸುತ್ತಲಿನ ಬದುಕಿನ ಅನುಭವಗಳೇ ಅವರಿಗೆ ಪ್ರೇರಕಗಳಾಗಿವೆ. ಅಂತಹ ಅನುಭವಗಳಿಗೆ ಅವರು ಭಾವ ಜೀವಿಯಾಗಿ ಕಾವ್ಯಾತ್ಮಕ ನೆಲೆಯಲ್ಲಿ ಸ್ಪಂದಿಸುತ್ತಾರೆ. ಬದುಕಿನ ನೋವು, ಸೋಲು, ಹತಾಶೆಗಳಿಗೆ “ಇದೆಲ್ಲ ಯಾಕೆ ಹೀಗೆ?” ಎನ್ನುವ ಬೆರಗಿನ ದೃಷ್ಟಿಯಲ್ಲಿ ತನ್ನೊಳಗೆ ಪ್ರತಿಕ್ರಿಯಿಸುತ್ತಾರೆ. ಅಂತಹ ಬೆರಗಿನ ಕಾರಣದಿಂದ ಹುಟ್ಟಿಕೊಳ್ಳುವ ಮಾರ್ದವತೆಯು ಸಾಹಿತ್ಯವನ್ನು ಕಲಾತ್ಮಕವಾಗಿ ಕಥೆಯಂತೆ, ಅನುಭವ ಕಥನದಂತೆ, ಲಲಿತ ಪ್ರಬಂಧದಂತೆ ನಿರೂಪಣೆ ಮಾಡಿಸಿದೆ. ಆದರೆ ಅದಕ್ಕೆ ಅವರು ಉತ್ತರವನ್ನು ಕಂಡುಕೊಳ್ಳುವುದು ಕಲ್ಪನೆಯಲ್ಲಲ್ಲ ; ಸುಡು ವಾಸ್ತವದಲ್ಲೆ. ಆದ್ದರಿಂದ ಅವೆಲ್ಲವೂ ವೈಚಾರಿಕ ಬರಹಗಳಾಗಿಯೇ ನೆಲೆ ಕಾಣುತ್ತವೆ. ಆದ್ದರಿಂದ ಯಾಕೂಬ್ ಅವರ ಬರಹಗಳು ವೈಚಾರಿಕ ತಾರ್ಕಿಕತೆಯ ಆಚೆಗೂ ಜಿಗಿಯುವ ‘ಒಳ ಶೋಧ' ದ ಸ್ವರೂಪವನ್ನೂ ಹೊಂದಿವೆ.

ಯಾಕೂಬ್ ಅವರು ತಮ್ಮ ಮೊದಲ ಕೃತಿಯಲ್ಲೇ ತಾನೊಬ್ಬ ಸಮರ್ಥ ಲೇಖಕ ಎಂಬುದನ್ನು ನಿರೂಪಿಸಿದ್ದಾರೆ. ಅದಕ್ಕೆ ತಕ್ಕುದಾದ ಭಾಷಾ ಲಾಲಿತ್ಯ ಯಾಕೂಬ್ ಅವರ ಬರಹಗಳನ್ನು ಆಪ್ತವಾಗಿಸುತ್ತದೆ." 

ಯಾಕೂಬ್ ಅವರು ತಮ್ಮ ಲೇಖಕರ ನುಡಿಯಲ್ಲಿ ತಾನೇಕೆ ಈ ಬರಹಗಳನ್ನು ಬರೆದೆ ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ “ ನಾನೊಬ್ಬ ಗಣಿತ ಶಿಕ್ಷಕ. ಹಲವಾರು ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಅನುಭವವನ್ನು ಹೊಂದಿದವನು. ವಿದ್ಯಾರ್ಥಿಗಳ ಬಹಳಷ್ಟು ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವನು. ಅದೇ ರೀತಿ ಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನೂ ಕಂಡವನು. ನಮ್ಮ ವೃತ್ತಿಯಲ್ಲಿ ನಾವು ಅನೇಕ ಎಡವಟ್ಟುಗಳನ್ನೂ ಮಾಡಿದ್ದಿದೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂವೇದನೆ ಹೊಂದಿರುತ್ತೇನೆ. ಇವೆಲ್ಲ ಅನುಭವಗಳನ್ನು ಬರಹರೂಪದಲ್ಲಿ ವ್ಯಕ್ತಪಡಿಸಿದರೆ ಚೆನ್ನಾಗಿತ್ತು ಎಂಬ ಯೋಚನೆ ನನ್ನದು. ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಹಲವಾರು ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಸಮಾಜವನ್ನು ಎಚ್ಚರಿಸುವ ಕಾರ್ಯವನ್ನೂ ಬರಹದಿಂದ ಮಾಡಬಹುದೆಂದು ಅನ್ನಿಸಿತು.” ಎಂದಿದ್ದಾರೆ.

ಯಾಕೂಬ್ ಅವರ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿಯಮಿತವಾಗಿ ಕಾಣಲು ಸಿಗುತ್ತವೆ. ಬರಹಗಳಲ್ಲಿ ಒಂದು ಆಪ್ತತೆ ಇದೆ. ಪುಸ್ತಕದ ಪರಿವಿಡಿಯಲ್ಲಿ ಇರುವ ೬೨ ಬರಹಗಳಲ್ಲಿ ಎಲ್ಲದರಲ್ಲೂ ಯಾಕೂಬ ಅವರ ಶಿಕ್ಷಕ ವೃತ್ತಿಯ ಅನುಭವಗಳು ಕಾಣಸಿಗುತ್ತವೆ. ಪ್ರತೀ ಬರಹಕ್ಕೆ ಸೂಕ್ತವಾದ ಉದಾಹರಣೆ ನೀಡಿದ್ದಾರೆ. ಕೆಲವು ಬರಹಗಳನ್ನು ಓದುವಾಗಲಂತೂ ಕಣ್ಣುಗಳು ತೇವವಾಗುತ್ತವೆ. ಅಷ್ಟೊಂದು ಭಾವನಾತ್ಮಕವಾಗಿದೆ. ಈ ರೀತಿಯ ಬರವಣಿಕೆಯ ಕಲೆ ಅವರಿಗೆ ಸಿದ್ಧಿಸಿದೆ. 

ಯಾಕೂಬ್ ಅವರು ಬರೆದ ಪ್ರತಿಯೊಂದು ಅಧ್ಯಾಯವೂ ಬದುಕಿನ ಪಾಠ ಹೇಳುತ್ತಿದೆ. ಶ್ರೀಮಂತಿಕೆ ಹಣದಲ್ಲಿ ಅಲ್ಲ ಹೃದಯದಲ್ಲಿರಲಿ ಎನ್ನುವ ಬರಹವಾಗಲೀ, ಆತ್ಮ ವಿಶ್ವಾಸವೆಂಬ ಅಗೋಚರ ಶಕ್ತಿಯಾಗಲೀ, ನೀರು ಸೇವನೆಯ ಸರಿಯಾದ ವಿಧಾನ ಮೊದಲಾದ ಅತ್ಯಮೂಲ್ಯ ಬರಹಗಳಿವೆ. ಈ ಅಧ್ಯಾಯಗಳಲ್ಲಿ ಬಹಳಷ್ಟು ಮನಸ್ಸಿಗೆ, ಹೃದಯಕ್ಕೆ ಹತ್ತಿರವಾದ ಬರಹ “ಅಪ್ಪನ ನೆನಪಿನಲ್ಲಿ...". ಅಪ್ಪನ ನಿಧನದ ನಂತರವೂ ಲಲಿತ ಎನ್ನುವ ಮಹಿಳೆ ಅವರ ಉದಾರ ಮನಸ್ಸಿನ ಬಗ್ಗೆ ಮತ್ತು ಆಕೆ ಹಾಗೂ ಮನೆಯವರು ಕಷ್ಟದಲ್ಲಿದ್ದಾಗ ಲೇಖಕರ ಅಪ್ಪ ಮಾಡಿದ ಸಹಕಾರ, ಸಹಾಯವನ್ನು ಮರೆಯದೇ ಕಣ್ಣೀರು ಸುರಿಸಿದ ಘಟನೆ ಮಾತ್ರ ಬಹಳ ಆಪ್ತವಾಗಿ ಕಾಡುತ್ತದೆ. ಯಾವುದೇ ಫಲಾಪೇಕ್ಷೆಯಿಲ್ಲದೇ ವ್ಯಕ್ತಿಯೊಬ್ಬ ಪರರಿಗೆ ಸಹಾಯ ಮಾಡುವ ಸುಂದರ ನೈಜ ಕಥಾನಕ ಇದು. ಇಂತಹ ಹಲವಾರು ಅಧ್ಯಾಯಗಳು ಈ ಕೃತಿಯಲ್ಲಿವೆ. ೨೪೦ ಪುಟಗಳ ಈ ಸಮೃದ್ಧ ಓದಿನ ಕೃತಿಯನ್ನು ಓದಿದರೆ ನಿಮ್ಮಲ್ಲಿ ಸಾರ್ಥಕತೆಯ ಭಾವನೆ ಖಂಡಿತಾ ಮೂಡುತ್ತದೆ.