ಮ್ಯಾಕ್ ಕಂಪ್ಯೂಟರುಗಳಿಗೆ ಟ್ರೋಜನ್ ಕಾಟ

ಮ್ಯಾಕ್ ಕಂಪ್ಯೂಟರುಗಳಿಗೆ ಟ್ರೋಜನ್ ಕಾಟ

 ಮ್ಯಾಕ್ ಕಂಪ್ಯೂಟರುಗಳಿಗೆ ಟ್ರೋಜನ್ ಕಾಟ
ಮ್ಯಾಕ್ ಕಂಪ್ಯೂಟರುಗಳಿಗೆ ಹೆಚ್ಚು ವೈರಸ್ ಅಥವಾ ದಾಳಿಕೋರರ ಕಾಟ ಇರಲಿಲ್ಲ.ವಿಂಡೋಸ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಕಂಪ್ಯೂಟರುಗಳಿಗೆ ಇಂತಹ ಸಮಸ್ಯೆಗಳು ಹೆಚ್ಚು.ಜನಪ್ರಿಯತೆ ಮತ್ತು ವ್ಯವಸ್ಥೆಯ ದೌರ್ಬಲ್ಯ ಇದಕ್ಕೆ ಪ್ರಮುಖ ಕಾರಣಗಳು.ಅದೇನೇ ಇರಲಿ ಮ್ಯಾಕ್ ಆಪರೇಟಿಂಗ್ ವ್ಯವಸ್ಥೆ ಬಳಸುವ ಆಪಲ್ ಕಂಪ್ಯೂಟರುಗಳ ಪೈಕಿ ಸುಮಾರು ಆರುಲಕ್ಷ ಕಂಪ್ಯೂಟರುಗಳು ಟೋಜನ್ ಸಮಸ್ಯೆಯಿಂದ ಬಾಧಿತವಾಗಿದೆ ಎಂದು ರಶ್ಯಾದ ಲಸಿಕೆ ತಂತ್ರಾಂಶ ತಯಾರಿಕಾ ಕಂಪೆನಿ ವರದಿ ಮಾಡಿದೆ.ಫ್ಲಾಶ್ ತಂತ್ರಾಂಶದ ಸೋಗಿನಲ್ಲಿ ಈ ಅಪಾಯಕಾರಿ ತಂತ್ರಾಂಶವನ್ನು ಲಭ್ಯವಾಗಿಸಲಾಗಿದೆ.ಬಳಕೆದಾರರು ತಂತ್ರಾಂಶವನ್ನು ಅನುಸ್ಥಾಪಿಸಿಕೊಂಡೊಡನೆ,ಅದು ಭದ್ರತಾ ವ್ಯವಸ್ಥೆಯನ್ನು ದುರ್ಬಲಗೊಳಿಸಿ,ಕಂಪ್ಯೂಟರನ್ನು ದಾಳಿಕೋರರ ನಿಯಂತ್ರಣಕ್ಕೆ ಒಳಪಡಿಸುತ್ತಿತ್ತು.ಆರುಲಕ್ಷ ಪೈಕಿ ಅರ್ಧಾಂಶ ಮ್ಯಾಕ್ ಕಂಪ್ಯೂಟರುಗಳು ಅಮೆರಿಕಾದಲ್ಲೇ ಇವೆ.ಪೀಡಿತ ಕಂಪ್ಯೂಟರುಗಳನ್ನು ಬಳಸಿಕೊಂಡು ದಾಳಿಕೋರರು ಇದುವರೆಗೂ ಯಾವ ದುಸ್ಸಾಹಸಗಳಿಗೆ ಕೈಹಾಕಿದ ವರದಿಗಳಿಲ್ಲ.ಇದೀಗ ಆಪಲ್ ಮತ್ತು ಎಫ್-ಸೆಕ್ಯೂರ್‌ನಂತಹ ಕಂಪೆನಿಗಳು ಈ ಟ್ರೋಜನ್ ಕಾಟದಿಂದ ಕಂಪ್ಯೂಟರುಗಳನ್ನು ಮುಕ್ತವಾಗಿಸಲು ಪ್ಯಾಚ್ ತಂತ್ರಾಂಶಗಳನ್ನು ಬಿಡುಗಡೆ ಮಾಡಿವೆ.
-----------------------------------------------------------------------
ಅಂತರ್ಜಾಲದಲ್ಲಿ ಎಪ್ರಿಲ್‌ಫೂಲ್ 
ಗೂಗಲ್ ಪ್ರತಿ ವರ್ಷದಂತೆ ಈ ವರ್ಷವೂ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿತು.ಸ್ಮಾರ್ಟ್‌ಪೋನ್ ಬಳಕೆದಾರರಿಗಾಗಿ ಗೂಗಲ್ ಟ್ಯಾಪ್ ಎನ್ನುವ ಅಪ್ಲಿಕೇಶನ್ ಲಭ್ಯವಿದೆ ಎನ್ನುವುದೇ ಎಪ್ರಿಲ್ ಫೂಲ್ ಮಾಡಿದ ಬಗೆ.ಎರಡೇ ಎರಡು ಕೀಲಿಗಳನ್ನು ಹೊಂದಿದ ಕೀಲಿಮಣೆಯ ಮೂಲಕ ಟೈಪಿಸಿ,ಟೈಪಿಂಗ್ ಸುಲಭಗೊಳಿಸುವುದು ಸಾಧ್ಯ-ಇದಕ್ಕೆ ಟೆಲಿಗ್ರಾಫ್ ಕಳಿಸಲು ಬಳಸುವ ಮೋರ್ಸ್ ಕೋಡ್ ತಿಳಿದಿದ್ದರೆ ಸಾಕು ಎನ್ನುವುದು ಗೂಗಲ್ ಟ್ಯಾಪ್ ಮುಖ್ಯಾಂಶ.ಕೀಲಿಮಣೆಯಲ್ಲಿ ಡ್ಯಾಶ್ ಮತ್ತು  ಡಾಟ್ ಕೀಲಿಗಳಿದ್ದರೆ ಸಾಕು.ಬೇರೆ ಬೇರೆ ಅಕ್ಷರಗಳಿಗೆ ಬೇರೆ ಬೇರೆ ಸಂಕೇತಗಳಿರುವ ಕಾರಣ ಟೈಪಿಸುವುದು ಸಾಧ್ಯ.
ಇನ್ನು ಸಿಎನೆನ್ ಐಬಿಎನ್ ಅಂತರ್ಜಾಲ ತಾಣದಲ್ಲಿ ಭಾರತ ಸರಕಾರ ವಿದೇಶಗಳಿಂದ ಭಾರೀ ಪ್ರಮಾಣದ ಕಪ್ಪು ಹಣ ವಾಪಸ್ಸು ತರಲು ಯಶಸ್ವಿಯಾಗುವುದರಲ್ಲಿದೆ ಎನ್ನುವ ಸುದ್ದಿಯನ್ನು ಪ್ರಕಟಿಸಿ,ಜನರನ್ನು ಬೆಪ್ಪುತಕ್ಕಡಿಗಳಾಗಿಸಲು ಯತ್ನಿಸಿತು.ಬಿಜೆಪಿಯು ಹೇಳಿದ ಕಪ್ಪು ಹಣಕ್ಕಿಂತ ಹತ್ತುಪಟ್ಟು ಹೆಚ್ಚು ಕಪ್ಪುಹಣ ಭಾರತಕ್ಕೆ ವಾಪಸ್ಸು ಬರಲಿದೆ.ಇದರಿಂದ ಭಾರತದ ಹಣಕಾಸಿನ ಸಮಸ್ಯೆ ಬಗೆಹರಿದು-ಭಾರತವು ವಿಶ್ವದ ಹಣಕಾಸಿನ ಸೂಪರ್ ಪವರ್ ಆಗಲಿದೆ ಎನ್ನುವ ಬೊಗಳೆಯೂ ಅಲ್ಲಿತ್ತು.
------------------------------------------------------------------------
ಸಾಮಾಜಿಕ ಜಾಲತಾಣಗಳ ಬಳಕೆಗೆ ಮಾರ್ಗದರ್ಶಿ ಸೂತ್ರಗಳು
ಸರಕಾರದ ವಿವಿಧ ಇಲಾಖೆಗಳು ಸೇರಿದಂತೆ ಪ್ರಧಾನಿ ಕಾರ್ಯಾಲಯ,ಮುಖ್ಯಮಂತ್ರಿಗಳೂ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚೆಚ್ಚು ಜನರನ್ನು ತಲುಪಲು ಯತ್ನಿಸುತ್ತಿರುವುದು,ಇತ್ತೀಚಿನ ದಿನಗಳಲ್ಲಿ ಕಾಣುತ್ತಿರುವ ಬೆಳವಣಿಗೆಯಾಗಿದೆ.ಜನರು ಎತ್ತುವ ಸಮಸ್ಯೆಗಳನ್ನು ಬಗೆಹರಿಸಲು,ಅವರ ಮನಸ್ಸಿನ ಸಂಶಯಗಳನ್ನು ನಿವಾರಿಸುವುದು ಮತ್ತು ವದಂತಿಗಳಿಂದ ಹಾದಿ ತಪ್ಪದಂತೆ ಜನರನ್ನು ಎಚ್ಚರಿಸಲು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್,ಅರ್ಕುಟ್‌ಗಳನ್ನು ಬಳಸಲಾಗುತ್ತಿದೆ.ಬಳಕೆಯ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ,ಇಲಾಖೆಗಳಿಗೆ ನೆರವಾಗಲು ಯೋಜಿಸಲಾಗಿದೆ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಯ ಕಾರ್ಯದರ್ಶಿಯವರು ಸಮಾರಂಭವೊಂದರಲ್ಲಿ ಮಾತನಾಡುತ್ತಾ ತಿಳಿಸಿದರು.ಮಾರ್ಗದರ್ಶಿ ಸೂತ್ರಗಳ ಪ್ರಕಾರ ಸಾಮಾಜಿಕ ಜಾಲತಾಣಗಳನ್ನು ಬಳಸಿದರೆ,ಅವುಗಳ ಸದ್ಬಳಕೆಯಾಗುವಂತೆ ಎಚ್ಚರಿಕೆ ವಹಿಸುವುದು ಸಾಧ್ಯವಾಗಲಿದೆ.
--------------------------------------------------------------------
ನಿಮ್ಮಿಷ್ಟದ ಆಕಾರದ ಚಾಕಲೇಟ್
ಗ್ರಾಹಕರು ತಮಗಿಷ್ಟ ಬಂದ ಆಕಾರದ ಚಾಕಲೇಟನ್ನು ಎರಕಹೊಯ್ದುಕೊಳ್ಳಲು ಅನುವು ಮೂಡುವ ಸಾಧನ ಸದ್ಯವೇ ಲಭ್ಯವಾಗಲಿದೆ.ಇಂಗ್ಲೆಂಡಿನ ಎಕ್ಸಿಟರ್ ವಿಶ್ವವಿದ್ಯಾಲಯದ ಸಂಶೋಧಕರು ತಿಂಗಳೊಪ್ಪತ್ತಿನಲ್ಲಿ ಸಾಧನ ಬಿಡುಗಡೆ ಮಾಡಲಿರುವವರು.ಇದಕ್ಕಾಗಿ ಚೋಕ್ ಎಜ್ ಎನ್ನುವ ಕಂಪೆನಿಯನ್ನೂ ಸ್ಥಾಪಿಸಲಾಗಿದೆ.ಕಂಪ್ಯೂಟರಿನ ಮೂಲಕ ವಿನ್ಯಾಸಗೊಳಿಸಿದ ಆಕಾರವನ್ನು ಮುದ್ರಕವು ಮುದ್ರಿಸುತ್ತದೆ.ಮುದ್ರಣಕ್ಕೆ ಶಾಯಿಯಾಗಿ ಚಾಕಲೇಟ್ ದ್ರಾವಣವನ್ನು ಬಳಸಲಾಗುತ್ತದೆ ಎನ್ನುವುದು ಸ್ಪಷ್ಟ ತಾನೇ?
------------------------------------------
ಸ್ಮಾರ್ಟ್ ಹರಳು:ಸಾಮಗ್ರಿ ಅರಳು



ಮಸಾಚುಸೆಟ್ಟಿನ ಎಮ್ ಐ ಟಿಯ ಸಂಶೋಧಕರು ಬಯಸಿದ ಆಕಾರವನ್ನು ರೂಪಿಸಬಲ್ಲ ಹರಳುಗಳನ್ನು ತಯಾರಿಸಿದ್ದಾರೆ. ಒಂದು ಸೆಂಟಿಮೀಟರ್ ಅಳತೆಯ ಘನಾಕೃತಿಯ ರೊಬೋಟ್‌ಗಳೇ ಈ ಹರಳುಗಳು.ಇವುಗಳಿಗೆ ಅಯಸ್ಕಾಂತೀಯ ಗುಣವನ್ನು ನೀಡಬಹುದು.ಪ್ರತಿ ಹರಳಿನಲ್ಲೂ ಮೈಕ್ರೋಪ್ರಾಸೆಸರ್ ಇದೆ.ಇವು ಹರಳುಗಳ ಬೇಕಾದ ಮುಖಗಳಿಗೆ ಕಾಂತಶಕ್ತಿ ನೀಡಬಲ್ಲುವು.ವಿದ್ಯುತ್‌ಪ್ರವಾಹವಿಲ್ಲದೇ ಕಾಂತೀಯಶಕ್ತಿ ಬರುತ್ತದೆ.ಬೇಡವಾದಾಗ ಈ ಶಕ್ತಿಯನ್ನು ತೆಗೆದು,ಹರಳುಗಳನ್ನು ಪ್ರತ್ಯೇಕಗೊಳಿಸಬಹುದು.ಮೈಕ್ರೋಪ್ರಾಸೆಸರಿನ ಸ್ಮರಣಕೋಶದಲ್ಲಿ ತಂತ್ರಾಂಶವನ್ನು ಅನುಷ್ಟಾನಿಸಲಾಗಿದೆ.ಹರಳುಗಳ ಗಾತ್ರವನ್ನು ಸದ್ಯದ ಒಂದು ಸೆಂಟಿಮೀಟರಿನಿಂದ ಇಳಿಸಿ,ಮರಳಿನ ಗಾತ್ರಕ್ಕಿಳಿಸುವುದು ಮುಂದಿನ ಹೆಜ್ಜೆ.ಮುಂದೆ ಇಂತಹ ಮರಳು ತುಂಬಿದ ಚೀಲಕ್ಕೆ ಮಾದರಿ ವಸ್ತುವಿನ ವಾಮನ ಗಾತ್ರದ ಪ್ರತಿಯನ್ನು ಹಾಕಿದರೆ,ಅದರ ಹಿಗ್ಗಿದ ಆಕಾರವನ್ನು ರೊಬೋಟುಗಳು ನಿರ್ಮಿಸಿಕೊಡಲು ತಮ್ಮನ್ನು ತಾವೇ ಪ್ರೊಗ್ರಾಮ್ ಮಾಡಿಕೊಳ್ಳುವಂತೆ ಮಾಡುವುದು ಸಂಶೋಧಕರ ಕನಸು.ಕನಸು ನನಸಾಗಲು ಇನ್ನೂ ಹತ್ತು ವರ್ಷಗಳೇ ಬೇಕಂತೆ.
-----------------------------------------------------
ಅಪಾಯಕಾರಿಯಾಗಬಲ್ಲ ಗೂಗಲ್ ಗಾಗಲ್ಸ್



ಸೆಲ್‌ಪೋನ್ ಬಳಕೆಯಿಂದ ವಾಹನ ಚಾಲಕರು,ರಸ್ತೆ ಬಳಕೆದಾರರು ಮೈಮರೆತು ಅಪಘಾತಗಳು ಸಂಭವಿಸುವುದು ಕಾಣಬರುತ್ತದೆ.ಸ್ವಲ್ಪ ಸಮಯದಲ್ಲಿ ಲಭ್ಯವಾಗಲಿರುವ ಗೂಗಲ್ ಗಾಗಲ್ಸ್ ತೊಟ್ಟರೆ ನಮಗೆ ರಸ್ತೆಯ ಬಗ್ಗೆ ಮಾರ್ಗದರ್ಶನದಿಂದ ಹಿಡಿದು,ಸುತ್ತಮುತ್ತಲಿನಲ್ಲಿ ಲಭ್ಯವಿರುವ ವ್ಯವಹಾರ ಮಳಿಗೆಗಳು,ಅಲ್ಲಿನ ರಿಯಾಯಿತಿ ಮಾರಾಟಗಳ ವಿವರಗಳು ನಮ್ಮ ಕಣ್ಣಮುಂದೆಯೇ ಮೂಡಲಿವೆ.ಆದರೆ ಗೂಗಲ್ ಗಾಗಲ್ಸ್ ಬಳಸಿದರೆ,ಜನರು ಮೈಮರೆತು ತಮ್ಮದೇ ಲೋಕದಲ್ಲಿ ಮುಳುಗಿ,ಸುತ್ತಲಿನ ಪರಿಸರವನ್ನು ಗಮನಿಸದೆ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದ್ದೇ ಇದೆ.ಈ ಬಗ್ಗೆ ಎಚ್ಚರಿಕೆ ವಹಿಸುವುದು ಅವಶ್ಯಕ ಎಂದು ಪ್ರತಿಕ್ರಿಯೆಗಳು ಬರಲಾರಂಭಿಸಿವೆ.ಗೂಗಲ್ ಗಾಗಲ್ಸ್‌ನ್ನು ಇತ್ತೀಚೆಗೆ ಪ್ರದರ್ಶಿಸಿದ ನಂತರ ಬಂದ ಪ್ರತಿಕ್ರಿಯೆಗಳಿವು.
---------------------------------------------------------------------------------
ಸ್ಯಾಮ್ ಪಿತ್ರೋಡಾ ರಾಷ್ಟ್ರಪತಿ?
ಸ್ಯಾಮ್ ಪಿತ್ರೋಡಾ ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗಬಹುದು ಎನ್ನುವ ಸುದ್ದಿ ಕೇಳಿಬರುತ್ತಿದೆ.ಭಾರತವು ದೂರಸಂಪರ್ಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಸ್ಯಾಮ್ ಪಿತ್ರೋಡಾ ಕಾಣಿಕೆ ಮಹತ್ತ್ವದ್ದು.ತಂತ್ರಜ್ಞಾನ ಕ್ಷೇತ್ರದ ಸ್ಯಾಮ್ ಪಿತ್ರೋಡಾ ಅವರು ಅಬ್ದುಲ್ ಕಲಾಮ್ ಅವರಂತಹ ವ್ಯಕ್ತಿತ್ವವನ್ನೇ ಹೊಂದಿದ್ದಾರೆ.ರಾಜಕೀಯ ವ್ಯಕ್ತಿಗಳಿಗಿಂತ ಇಂತವರು ಹೆಚ್ಚು ಸರ್ವಸಮ್ಮತ ಅಭ್ಯರ್ಥಿಯಾಗಬಹುದು.ರಾಷ್ಟ್ರಪತಿಯಂತಹ ಅಲಂಕಾರಿಕ ಹುದ್ದೆಯನ್ನು ನಿರ್ವಹಿಸುವವರು ಸಭೆ ಸಮಾರಭಗಳಲ್ಲಿ ಭಾಗವಹಿಸುತ್ತಾ,ಭಾಷಣಗಳನ್ನು ಮಾಡುತ್ತಿರಬೇಕಾಗುತ್ತದೆ.ಅಬ್ದುಲ್ ಕಲಾಂ,ಸ್ಯಾಮ್ ಪಿತ್ರೋಡಾ ಅವರು ತಮ್ಮ ವಿಭಿನ್ನ ವಿಚಾರಲಹರಿಗಳನ್ನು ಜನರಿಗೆ ಮುಟ್ಟಿಸಿ,ಯುವಜನರ ವಿಚಾರಶಕ್ತಿ,ಆಲೋಚನಾ ದಾಟಿಯನ್ನು ಬದಲಿಸಬಲ್ಲರು.
-------------------------------------UDAYAVANIudayavani
*ಅಶೋಕ್‌ಕುಮಾರ್ ಎ

Comments