ಮ್ಯಾಸಬೇಡರ ಚಾರಿತ್ರಿಕ ಕಥನ

ಡಾ. ಪ್ರಹ್ಲಾದ ಡಿ.ಎಂ ಅವರ ‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ. ಈ ಕೃತಿಯ ಲೇಖಕರಾದ ಡಾ.ಡಿ.ಎಂ. ಪ್ರಹ್ಲಾದ್ ಅವರು ಬಹಳ ಶ್ರಮಪಟ್ಟು ಆಕರಗಳನ್ನು ಸಂಗ್ರಹಿಸಿ ಬಹಳ ತಾಳ್ಮೆಯಿಂದ ವಿಶ್ಲೇಷಿಸಿದ್ದಾರೆ. ಕುಲಮೂಲದ ಚರಿತ್ರೆ ಭಾಗದಲ್ಲಿ ಬಹಳ ಪುರಾತನವಾದ ಹಸ್ತಪ್ರತಿಯನ್ನು ಉಲ್ಲೇಖಿಸಿ ಅದರಲ್ಲಿ ವಿವರಿಸಿರುವ ತ್ರಿಮೂರ್ತಿಗಳ ಪೌರಾಣಿಕ ಪ್ರಸಂಗವನ್ನು ಮ್ಯಾಸಬೇಡರ ಕುಲಮೂಲಕ್ಕೆ ಕಾರಣವೆಂದೇ ಚರ್ಚೆಯನ್ನು ಆರಂಭಿಸಿದ್ದಾರೆ. ಮಂದರಾಜ, ಅವನ ವಿವಾಹ, ಅಂಭೋಜರಾಜ, ಶಿಶುಪಾಲ, ದಾನಸಾಲದೇವಿ, ಶುಕ್ಲಮಲ್ಲಿನಾಯಕ, ಪೆದ್ದಕ್ಕ ರಾಯಲದೇವಿ, ಸಂಚುಲಕ್ಷ್ಮೀ, ಭಾನುಕೋಟಿ ರಾಜ, ಅನೇಕ ಬೆರಗುಗಳ ಹುಟ್ಟು, ಗಾದ್ರಿಪಾಲನಾಯಕ ಮತ್ತು ಹುಲಿಗಳ ಪ್ರಸಂಗ, ಯರಮಂಚನಾಯಕನ ನಲ್ಲಮಲೈ ಪ್ರಯಾಣ, ರ್ರಮಲೈ ಪ್ರಯಾಣ, ವಟ್ಟಳ್ಳಿ ನಾಯಕನ ಸಂಘರ್ಷ, ಕೊಳಗಲ್ಲಬೊಮ್ಮನ ಒಪ್ಪಂದ, ದಡ್ಡಿಸೂರನಾಯಕನ ಸಂಘರ್ಷ, ಬೋರೇದೇವರ ಪ್ರತಿಷ್ಠಾಪನೆ ಮುಂತಾದ ಘಟನೆಗಳ ವಿವರವನ್ನು ಸರಳವಾಗಿ ನಿರೂಪಿಸಿದ್ದಾರೆ.
ಈ ಚಾರಿತ್ರಿಕ ಕಥನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಡಿ ವಿ ಪರಮಶಿವಮೂರ್ತಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಸಾರ ಇಲ್ಲಿದೆ…” ಕರ್ನಾಟಕದ ಬುಡಕಟ್ಟು ಜನಾಂಗಗಳಲ್ಲಿ ಮ್ಯಾಸಬೇಡರ ಸಂಸ್ಕೃತಿ ಬಹು ವಿಶಿಷ್ಟವಾದದ್ದು, ಇಂದಿಗೂ ಪಶುಪಾಲನೆಯನ್ನೇ ಮುಖ್ಯವಾಗಿ ನಂಬಿರುವ ಇವರು ಬೇಟೆಯನ್ನು ಆಡುವುದರಲ್ಲಿಯೂ ಸಿದ್ಧಹಸ್ತರು. ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತು ಆಸುಪಾಸಿನಲ್ಲಿ ನೆಲೆಸಿರುವ ಇವರು ತಮ್ಮ ಕುಲಮೂಲವನ್ನು ತ್ರಿಮೂರ್ತಿಗಳ ಪ್ರೇರಣೆಯಿಂದ ಗುರುತಿಸುತ್ತಾರೆ. ಬಹಳ ಜನರು ಬೇಟೆಯ ಜೊತೆ ಪಶುಪಾಲನೆ ಹಾಗೂ ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
‘ಮ್ಯಾಸಬೇಡರ ಚಾರಿತ್ರಿಕ ಕಥನ’ ಎಂಬ ಪ್ರಸ್ತುತ ಕೃತಿಯು ಮ್ಯಾಸಬೇಡರ ಕುಲಮೂಲ, ಸಾಂಸ್ಕೃತಿಕ ವೀರರು, ಮಾತೃದೈವಗಳು ಮತ್ತು ಆ ಕುಲದ ಚಾರಿತ್ರಿಕ ಕಾವ್ಯಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಕೃತಿಯಾಗಿದೆ. ಈ ಕೃತಿಯ ಲೇಖಕರಾದ ಡಾ.ಡಿ.ಎಂ. ಪ್ರಹ್ಲಾದ್ ಅವರು ಬಹಳ ಶ್ರಮಪಟ್ಟು ಆಕರಗಳನ್ನು ಸಂಗ್ರಹಿಸಿ ಬಹಳ ತಾಳ್ಮೆಯಿಂದ ವಿಶ್ಲೇಷಿಸಿದ್ದಾರೆ.
ಕುಲಮೂಲದ ಚರಿತ್ರೆ ಭಾಗದಲ್ಲಿ ಬಹಳ ಪುರಾತನವಾದ ಹಸ್ತಪ್ರತಿಯನ್ನು ಉಲ್ಲೇಖಿಸಿ ಅದರಲ್ಲಿ ವಿವರಿಸಿರುವ ತ್ರಿಮೂರ್ತಿಗಳ ಪೌರಾಣಿಕ ಪ್ರಸಂಗವನ್ನು ಮ್ಯಾಸಬೇಡರ ಕುಲಮೂಲಕ್ಕೆ ಕಾರಣವೆಂದೇ ಚರ್ಚೆಯನ್ನು ಆರಂಭಿಸಿದ್ದಾರೆ. ಮಂದರಾಜ, ಅವನ ವಿವಾಹ, ಅಂಭೋಜರಾಜ, ಶಿಶುಪಾಲ, ದಾನಸಾಲದೇವಿ, ಶುಕ್ಲಮಲ್ಲಿನಾಯಕ, ಪೆದ್ದಕ್ಕ ರಾಯಲದೇವಿ, ಸಂಚುಲಕ್ಷ್ಮೀ, ಭಾನುಕೋಟಿ ರಾಜ, ಅನೇಕ ಬೆರಗುಗಳ ಹುಟ್ಟು, ಗಾದ್ರಿಪಾಲನಾಯಕ ಮತ್ತು ಹುಲಿಗಳ ಪ್ರಸಂಗ, ಯರಮಂಚನಾಯಕನ ನಲ್ಲಮಲೈ ಪ್ರಯಾಣ, ರ್ರಮಲೈ ಪ್ರಯಾಣ, ವಟ್ಟಳ್ಳಿ ನಾಯಕನ ಸಂಘರ್ಷ, ಕೊಳಗಲ್ಲಬೊಮ್ಮನ ಒಪ್ಪಂದ, ದಡ್ಡಿಸೂರನಾಯಕನ ಸಂಘರ್ಷ, ಬೋರೇದೇವರ ಪ್ರತಿಷ್ಠಾಪನೆ ಮುಂತಾದ ಘಟನೆಗಳ ವಿವರವನ್ನು ಸರಳವಾಗಿ ನಿರೂಪಿಸಿದ್ದಾರೆ. ಇದು ಒಂದು ಹಂತವಾಯಿತು. ಸಂಶೋಧಕರಾದವರು ಇಷ್ಟಕ್ಕೆ ನಿಲ್ಲದೆ ಇದರ ಸತ್ಯಾಸತ್ಯತೆಯನ್ನು ಒರೆಗೆಹಚ್ಚಿ ನೋಡಬೇಕು. ಈ ಪುರಾಣದ ಆಶಯವನ್ನು ಕುರಿತು ಚಾರಿತ್ರಿಕವಾಗಿ ಚರ್ಚಿಸಿದ್ದಾರೆ ಚೆನ್ನಾಗಿತ್ತು. ಈ ರೀತಿ ಪುರಾಣ ಹುಟ್ಟಲು ಪ್ರೇರಣೆ ಏನು? ಸಮಕಾಲೀನ ಸಂದರ್ಭದ ಒತ್ತಡಗಳೇನು? ಇದರಲ್ಲಿ ಅಡಗಿರುವ ಐತಿಹಾಸಿಕ ಸತ್ಯಗಳೇನು? ಎಂದು ಚರ್ಚಿಸಬಹುದಿತ್ತು. ಕುಲವು ನಂಬಿದ ಮೌಲ್ಯಗಳು, ಆರಾಧಿಸುವ ಗುಣ, ಸ್ತ್ರೀದೇವತೆಯರಿಗಿರುವ ಪ್ರಾಮುಖ್ಯತೆ, ಕುಲಕಸುಬಿನ ಪ್ರೀತಿ, ಕಸುಬಿನ ಪಲ್ಲಟದ ಲಕ್ಷಣಗಳು, ಆಧುನಿಕತೆಯ ಪ್ರಭಾವ ಇವುಗಳು ಈ ಪುರಾಣದ ಒಳಗೆ ಕಂಡುಬರುತ್ತವೆಯೆ? ಎಂದು ಚರ್ಚಿಸಬೇಕಾಗಿತ್ತು.
ಭಾಗ ಎರಡರಲ್ಲಿ ಮ್ಯಾಸಬೇಡರ ಸಾಂಸ್ಕೃತಿಕ ವೀರರ ಚರಿತ್ರೆ ಭಾಗದಲ್ಲಿ ಬುಡಕಟ್ಟುಗಳಿಗೂ ಬೇಟೆಗೂ ಇರುವ ಸಂಬಂಧ, ಇವರ ಪಶುಪಾಲಕ ವೃತ್ತಿಗೆ ಸಂಬಂಧಿಸಿದಂತೆ ದೈವಗಳು ಹಾಗೂ ಸಾಂಸ್ಕೃತಿಕ ವೀರರನ್ನು ಕುರಿತು ಚರ್ಚಿಸಿದ್ದಾರೆ. ತಲೆ ತಲಾಂತರದ ಪಶುಪಾಲಕ ವೃತ್ತಿಯಲ್ಲಿ ಅವುಗಳ ರಕ್ಷಣೆಗಾಗಿ ಹೋರಾಡಿದವರೇ ಇವರ ಕುಲದ ಸಾಂಸ್ಕೃತಿಕ ವೀರರಾಗಿದ್ದಾರೆ. ಅವರುಗಳಲ್ಲಿ ಕೊರ್ಲ ಮಲ್ಲಿನಾಯಕ, ಯರಮಂಚನಾಯಕ, ಕೊಳಗಲ ಬೊಮ್ಮನಾಯಕ, ದಡ್ಡಿ ಕಾಮನಾಯಕ, ದಡ್ಡಿ ಸೂರನಾಯಕ, ಗಾದ್ರಿ ಪಾಲನಾಯಕ, ಸೂರ್ಯ ಯರಗಟ್ಟನಾಯಕ, ಜಗಳೂರು ಪಾಪಿನಾಯಕ, ಕಂಪಳರಂಗರ ಆದರ್ಶಗಳನ್ನು ಮತ್ತು ಅವರು ಕುಲಕ್ಕೆ ನೀಡಿದ ಗೌರವ, ಘನತೆಯನ್ನು ಸರಳವಾಗಿ ನಿರೂಪಿಸಿದ್ದಾರೆ. ಅವರ ಮಾನವೀಯತೆಯ ಗುಣ, ನಂಬಿದವರನ್ನು ಕೈಬಿಡದ ಸ್ವಭಾವ, ಕುಲದ ವೃತ್ತಿಯಲ್ಲಿನ ಗೌರವ ಹಾಗೂ ಸಂದರ್ಭಕ್ಕೆ ತಕ್ಕ ವೀರತ್ವ ಈ ಎಲ್ಲ ಗುಣಗಳು ಅವರನ್ನು ಮ್ಯಾಸಬೇಡರ ಕುಲದ ವೀರರನ್ನಾಗಿ ಪರಿವರ್ತಿಸಿದೆ. ಎದುರಾದ ಕಷ್ಟಗಳನ್ನು ತಮ್ಮ ಶೌರ್ಯ-ಸಾಹಸ ಮತ್ತು ಬುದ್ಧಿವಂತಿಕೆಯಿಂದ ಪರಿಹರಿಸಿಕೊಂಡ ಗುಣವೇ ಈ ಸಮುದಾಯಕ್ಕೆ ಅವರನ್ನು ಆರಾಧಿಸುವುದಕ್ಕೆ ಮೂಲ ಕಾರಣವಾಗಿದೆ. ಈ ಕುಲದ ಮತ್ತೊಂದು ದೊಡ್ಡ ಗುಣ ಪ್ರಕೃತಿಯನ್ನು ಆರಾಧಿಸುವ ಮುಗ್ಧತೆ, ಈ ಕಾರಣದಿಂದಲೂ ಮ್ಯಾಸಬೇಡರ ವೀರರು ನಮಗೆ ಆಪ್ತರಾಗುತ್ತಾರೆ. ದೌರ್ಬಲ್ಯಗಳನ್ನು ಮೆಟ್ಟಿನಿಂತು ಸಮಾಜಕ್ಕೆ ಒಳಿತು ಮಾಡುವ ಈ ಗುಣವೇ ಅವರನ್ನು ಸಾಂಸ್ಕೃತಿಕ ವೀರರನ್ನಾಗಿ ರೂಪಿಸಿದೆ.
ಅಧ್ಯಾಯ ಮೂರರಲ್ಲಿ ಮ್ಯಾಸಬೇಡರ ಮಾತೃದೈವಗಳನ್ನು ಕುರಿತು ಚರ್ಚಿಸಿದ್ದಾರೆ. ಈ ಬುಡಕಟ್ಟು ಸಮುದಾಯದವರು ಮಾತೃ ಆರಾಧನೆಯವರು. ಕುಟುಂಬ ನಿರ್ವಹಣೆಗೆ ಮತ್ತು ಸಮುದಾಯದ ಮುಂದುವರಿಕೆಗೆ ಸ್ತ್ರೀ ಎಷ್ಟು ಅವಶ್ಯಕಳೆಂಬುದು ಬುಡಕಟ್ಟು ಜನಾಂಗ ಚೆನ್ನಾಗಿ ಅರಿತಿತ್ತು. ವ್ಯವಸಾಯ, ಪಶುಪಾಲನೆ, ಕುಟುಂಬ ಪೋಷಣೆ, ಸಂತಾನ ಮುಂದುವರಿಕೆ, ಮಕ್ಕಳ ಲಾಲನೆ-ಪಾಲನೆ ಸ್ತ್ರೀಯರ ಹೊಣೆಯಾಗಿತ್ತು. ಹೀಗಾಗಿ ಮಾತೃತ್ವಕ್ಕೆ ಹೆಚ್ಚಿನ ಮಹತ್ವವಿರುವುದರಿಂದ ಸಹಜವಾಗಿಯೇ ಸ್ತ್ರೀದೈವಗಳು ಪ್ರಧಾನತ್ವ ಹೊಂದಿದ್ದವು. ದಾನಸಾಲಿಯಮ್ಮ, ಅಕ್ಕರಾಯಮ್ಮ, ಮಲಿಯಮ್ಮ, ನನ್ನಿವಾಳದ ಅರವಜ್ಜಿ, ಚಿಂತಲ ಪಾಪಮ್ಮ, ಮುಂಗಲು ದೇವಮ್ಮ, ಕೆಂಚವ್ವ-ಕಾಮವ್ವ, ವಡೇಲು ಮಾರಮ್ಮ, ಶೂನ್ಯದ ಮಾರಮ್ಮ, ನಿಡುಗಲ್ಲು ತಾಯಜ್ಜಿ ಮುಂತಾದ ದೈವಗಳನ್ನು ವರ್ಣಿಸಿದ್ದಾರೆ. ಇವರೆಲ್ಲ ತಮ್ಮ ಸಮುದಾಯದ ಏಳಿಗೆಗಾಗಿ ದುಡಿದ, ತ್ಯಾಗ ಮಾಡಿದವರೇ ಆಗಿದ್ದು ಅವರ ಗುಣ-ತ್ಯಾಗವೇ ದೈವಗಳಾಗಿ ಪರಿವರ್ತನೆಯಾಗಲು ಕಾರಣವಾಗಿವೆ. ಒಂದು ಸಮುದಾಯವು ತನ್ನ ಒಳಿತಿಗಾಗಿ ಶ್ರಮಿಸಿದವರನ್ನು ಆರಾಧಿಸುವುದು ಸಾಮಾನ್ಯ. ಮ್ಯಾಸಬೇಡರಲ್ಲಿಯೂ ಇದೇ ಕಾರಣಕ್ಕೆ ಅನೇಕ ಸ್ತ್ರೀಯರು ದೈವಗಳಾಗಿ ಮಾರ್ಪಟ್ಟು ಪೂಜೆಗೆ ಒಳಗಾಗಿದ್ದಾರೆ.
ನಾಲ್ಕನೆ ಭಾಗದಲ್ಲಿ ಮ್ಯಾಸಬೇಡರ ಚಾರಿತ್ರಿಕ ಕಾವ್ಯಗಳ ಬಗ್ಗೆ ವಿವರಿಸಿದ್ದಾರೆ. ಅವರ ಸಮುದಾಯದಲ್ಲಿ ಕಥನಗಳು, ಕಾವ್ಯಗಳು ಮತ್ತು ಐತಿಹ್ಯಗಳ ರೂಪದ ಹಾಡುಗಳು ಹೇರಳವಾಗಿವೆ. ಅವುಗಳ ಅಧ್ಯಯನದಿಂದ ಕಾಲಕಾಲಕ್ಕೆ ಈ ಸಮುದಾಯ ಹೇಗೆ ಪ್ರಕೃತಿಯೊಂದಿಗೆ ನಂಬಿಕೆಯನ್ನು ಬೆಳಸಿಕೊಂಡು ತಮ್ಮ ಬದುಕನ್ನು ನಡೆಸುತ್ತಿರುವರೆಂದು ತಿಳಿದು ಬರುತ್ತದೆ. ನಾಟಕ, ಕೋಲಾಟ, ಭಜನೆ, ಲಾವಣಿ, ಕಥನಗೀತೆಗಳು ಮತ್ತು ಗಣೆ ಪದಗಳು ವಿವಿಧ ಕೌಟುಂಬಿಕ ಮತ್ತು ಸಾಮಾಜಿಕ ಆಚರಣೆಗಳ ಸಂದರ್ಭದಲ್ಲಿ ಕಂಡುಬರುತ್ತವೆ. ಪಶುಪಾಲಕರಾದ ಮ್ಯಾಸಬೇಡರ ಚರಿತ್ರೆಯ ಹೆಜ್ಜೆಗಳನ್ನು ಈ ಸಾಹಿತ್ಯದಲ್ಲಿ ಕಾಣಬಹುದು. ಚಿತ್ರದುರ್ಗ ಮತ್ತು ಬಳ್ಳಾರಿ ಪರಿಸರದ ಮ್ಯಾಸಬೇಡರ ಸಾಹಿತ್ಯದಲ್ಲಿ ತೆಲುಗಿನ ಪ್ರಭಾವವೂ ಬೀರಿರುವುದು ಕಾಣುತ್ತದೆ. ಈ ಅಧ್ಯಾಯದಲ್ಲಿ ಸಂಶೋಧಕರು ಗಣೆಯ ಕಾವ್ಯದ ಹಿನ್ನೆಲೆ, ಗಣೆ ಕಾವ್ಯಗಳು, ಕರ್ಲೇ ಮಲ್ಲನಾಯಕನ ಕಾವ್ಯ, ಗಾದ್ರಿ ಪಾಲನಾಯಕನ ಕಾವ್ಯ, ಜಗಳೂರು ಪಾಪಿನಾಯಕನ ಕಾವ್ಯ, ಕಂಪಳ ರಂಗಸ್ವಾಮಿ ಕಾವ್ಯ, ದಾನುಸಾಲುದೇವಿ ಕಾವ್ಯ ಮತ್ತು ದೇವರ ಎತ್ತುಗಳ ಪದಗಳನ್ನು ನೀಡಿರುವರು. ಈ ಎಲ್ಲಾ ಕಾವ್ಯಗಳಲ್ಲಿಯೂ ಸಮುದಾಯದ ಸಂಸ್ಕೃತಿ ಮಡುಗಟ್ಟಿದೆ. ಪ್ರಕೃತಿಯೊಂದಿಗೆ ಪಶುಪಾಲಕರ ಬದುಕು ಹೇಗೆ ಕಷ್ಟವೆಂಬುದನ್ನು ಹುಲಿಯ ಘಟನೆಯೊಂದಿಗೆ ಹೇಳಲಾಗಿದೆ. ಅಲ್ಲಲ್ಲಿ ದೊರೆಯುವ ವೀರಗಲ್ಲು, ಮಹಾಸತಿ ಕಲ್ಲುಗಳನ್ನು ಈ ಸಮುದಾಯ ತಮ್ಮ ಪೂರ್ವಿಕರೆಂದು ಪೂಜಿಸುವ ಆರಾಧಿಸುವ ಮತ್ತು ಭಾವನಾತ್ಮಕ ಸಂಬಂಧ ಹೊಂದಿರುವ ರೀತಿ ಅನನ್ಯವಾದುದು. ಇದು ಅವರ ಮುಗ್ಧತೆಯನ್ನು ಮತ್ತು ಇತಿಹಾಸದೊಂದಿಗೆ ತಮ್ಮನ್ನು ಬೆಸೆದುಕೊಂಡು ಕುಲದ ಹಾಗೂ ಸಮುದಾಯದ ಮಹತ್ವವವನ್ನು ಹೆಚ್ಚಿಸಿಕೊಳ್ಳುವ ಉಮೇದು ಕಂಡುಬರುತ್ತದೆ. ಈ ಕುಲದ ಅಧ್ಯಯನಕ್ಕೆ ಈ ಕೃತಿ ಬಹಳ ಉತ್ತಮ ಆಕರಗಳನ್ನು ನೀಡುತ್ತದೆ. ಕೃತಿಯ ಕೊನೆಯಲ್ಲಿ ನೀಡಿರುವ ಆಕರ ಗ್ರಂಥಗಳು ಮತ್ತು ಛಾಯಚಿತ್ರಗಳು ಕೃತಿಗೆ ಪೂರಕವಾಗಿದ್ದು, ಮುಂದಿನ ಅಧ್ಯಯನಕಾರರಿಗೆ ಉಪಯುಕ್ತವಾಗಿದೆ. ಅಪರೂಪದ ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಆ ಚಿತ್ರಗಳಿಗೆ ನೀಡಿರುವ ವಿವರಗಳು ಉತ್ತಮವಾಗಿವೆ. ಒಟ್ಟಾರೆಯಾಗಿ ಮ್ಯಾಸಬೇಡರ ಚಾರಿತ್ರಿಕ ಕಥನದ ಹೆಸರಿನಲ್ಲಿ ಆಕರಗಳನ್ನು ಒಂದೆಡೆ ಸೇರಿಸಿ ಅಧ್ಯಯನಕಾರರಿಗೆ ಉಪಯುಕ್ತವಾದ ಕೃತಿ ಇದಾಗಿದೆ. ಇದನ್ನು ಸಂಪಾದಿಸಿಕೊಟ್ಟಿರುವ ಡಾ. ಪ್ರಹ್ಲಾದ ಡಿ.ಎಂ. ಅವರ ಶ್ರಮ ಸಾರ್ಥಕವಾಗಿದೆ.”
೩೩೨ ಪುಟಗಳ ಈ ಚಾರಿತ್ರಿಕ ಅಧ್ಯಯನ ಕಥಾನಕವು ಆಸಕ್ತರ ಮನತಣಿಸುವುದರಲ್ಲಿ ಸಂಶಯವಿಲ್ಲ.