ಯಕ್ಕೇರಿಯ ರೈತರನ್ನು ಬಿಕ್ಕಿಸಿದ ಬೆಕ್ಕಿಲಿ (ಪುನುಗು).

ಯಕ್ಕೇರಿಯ ರೈತರನ್ನು ಬಿಕ್ಕಿಸಿದ ಬೆಕ್ಕಿಲಿ (ಪುನುಗು).

ಬರಹ

ಈ ಸುದ್ದಿಯನ್ನು ನಾನು BREAKING NEWS ಎನ್ನಲೇ..ಅಥವಾ NEWS THAT BREAKS ಎನ್ನಲೇ?

ಹೀಗಂದು ಬಿಡುತ್ತೇನೆ.."BREAKING NEWS Vs THE NEWS THAT BREAKS!"

ಕಾರಣ ಪುನಗುವಿನ ಬಗ್ಗೆ ನಾನು ನೀಡಿದ ದಿಢೀರ್ ವಾರ್ತೆಯ ಇನ್ನೊಂದು ಮಗ್ಗುಲಿನ ಪರಿಚಯ ಇದು. ಬೆಳಗಾವಿ ಜಿಲ್ಲೆ, ಸೌಂದತ್ತಿ ತಾಲ್ಲೂಕು ಯಕ್ಕೇರಿ ಗ್ರಾಮದ ಬಾಳೆ ತೋಟದ ಪ್ರಗತಿಪರ ಕೃಷಿಕರು, ನನಗೆ ಹಿರಿಯರೂ ಆದ ಈರಪ್ಪನವರು ವೀರಸಂಗಪ್ಪ ಕೋರಿಶೆಟ್ಟಿ ಅವರಿಗೆ ‘ಪುನಗು’ ಬೆಕ್ಕಿಲಿಯ ಬಗ್ಗೆ ನಾನು ಬರೆದ ಲೇಖನ ಕಡಿಮೆ ಸಿಟ್ಟು ತರಿಸಿಲ್ಲ. ಈ ಬೆಕ್ಕಿಲಿಯ ಉಪಟಳ ತಡೆಯಲು ಸಾಕಷ್ಟು ಉಪಾಯಗಳನ್ನು ಮಾಡಿ, ಸೋತ ಅವರು ‘ಮೇಷ್ಟ್ರೇ..ರೈತನ ಒಡಲಾಳದ ನೋವನ್ನು ಸಹ ನೀವು ಸಂಪದಿಗರಿಗೆ ಹೇಳಬೇಕು’ ಅಂದ್ರು. ಹಾಗಾಗಿ ಸಂಭಾವಿತ ಪುನಗುವಿನ ಆಘಾತಕಾರಿ ನಡುವಳಿಕೆಯನ್ನು ಇಲ್ಲಿ ದಾಖಲಿಸುವುದು ಉಚಿತ ಎಂದು ನನಗನ್ನಿಸಿತು.

ಯಜಮಾನ್ ಈರಪ್ಪನವರ ಮಗ ಪ್ರೊ.ಮಹಾಂತೇಶ ಕೋರಿಶೆಟ್ಟಿ ನನ್ನ ಸಹೋದ್ಯೋಗಿ. ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಆದರೆ ಬೇರೆ ಬೇರೆ ವಿಷಯಗಳ ಮಾಸ್ತರು. ಹಾಗಾಗಿ ಈರಪ್ಪನವರು ನನಗೂ ತೀರ್ಥರೂಪರ ಸಮಾನ. ಪುನುಗು ಬೆಕ್ಕಿಲಿಯ ಕುರಿತು ಅವರ ಧೋರಣೆ ಸಹಜವಾಗಿದ್ದನ್ನು ನಾನು ಗುರುತಿಸಿದೆ.

೪ ಎಕರೆ ೩೪ ಗುಂಟೆ ಬಾಳೆಯ ತೋಟವನ್ನು ಹೊಂದಿರುವ ಅವರು ೪,೮೦೦ ಬಾಳೆ ಸಸಿಗಳನ್ನು ನೆಟ್ಟಿದ್ದಾರೆ. ಸ್ಥಳೀಯ ಜವಾರಿ ಜಾತಿಯ ಸುಗಂಧಿ ಹಾಗು ಏಲಕ್ಕಿ ಬಾಳೆಯನ್ನು ಅವರು ಸಾವಯವ ಪದ್ಧತಿಯಲ್ಲಿ ಬೆಳೆಸುತ್ತ ಬಂದ ನೇಗಿಲಯೋಗಿ. ಒಂದೊಂದು ಗಿಡದ ಎತ್ತರ ೧೫ ರಿಂದ ೧೮ ಫೂಟ್ ಗಳ ವರೆಗೆ! ಅತ್ಯುತ್ತಮ ತಳಿಯ ರುಚಿಕಟ್ಟಾದ ಬಾಳೆ ೧ ಕ್ವಿಂಟಾಲ್ ಗೆ ೧,೦೦೦/- ದಿಂದ ೧,೭೦೦/- ರುಪಾಯಿಗಳ ವರೆಗೆ ಮಾರಾಟವಾಗುತ್ತದೆ. ಬೆಳಗಾವಿ, ಗೋವಾ, ಮುಂಬೈ ಮಾರುಕಟ್ಟೆಯಲ್ಲಿ ಈ ಬಾಳೆಗೆ ಅತೀವ ಬೇಡಿಕೆ ಇದ್ದು, ಏಜೆಂಟರು ತೋಟಕ್ಕೆ ಬಂದು ತಮ್ಮ ಕೃಷಿ ಮಾರುಕಟ್ಟೆಗೆ ಸಾಗಿಸಿಕೊಳ್ಳುತ್ತಾರೆ.

ಇದರೊಟ್ಟಿಗೆ ಅವರು ಬಾಳೆಯ ಹೈಬ್ರಿಡ್ ತಳಿಗಳಾದ ರೋಬಸ್ಟ್ ಹಾಗು ಜಿ. ೯ ಗಳನ್ನು ಸಹ ಬೆಳೆಯುತ್ತಿದ್ದಾರೆ. ಆದರೆ ಈ ಜಾತಿಯ ಬಾಳೆಯ ಗಿಡಗಳ ಎತ್ತರ ೬ ರಿಂದ ೮ ಫೂಟ್. ಮಾರಾಟವಾಗುವ ಬೆಲೆ ಕೂಡ ೪೦೦/- ರಿಂದ ೪೫೦/- ರುಪಾಯಿಗಳು ಮಾತ್ರ. ಜೊತೆಗೆ ಕಬ್ಬು, ಪಪ್ಪಾಯಿ, ಮಾವು, ಚಿಕ್ಕು, ಹುಣಿಸೆ ಹಾಗೆಯೇ ಕಾಯಿಪಲ್ಲೆ ಸಹ ಈರಪ್ಪನವರು ಬೆಳೆದು ಮಾರಾಟ ಮಾಡಿದ್ದಾರೆ.

ಆದರೆ ಸಾಕಷ್ಟು ಕಷ್ಟ-ನಷ್ಟಗಳನ್ನು ಸಹ ಅನುಭವಿಸಿದ್ದಾರೆ. "ನನಗ ತ್ವಾಟದಾಗ ಮಂಗ್ಯಾನ ಹಾವಳಿ ದೊಡ್ಡದು ಅಂತ ಅನಿಸಿಲ್ರೀ. ಅದನ್ನ ಕಂಟ್ರೋಲ್ ನ್ಯಾಗ ಹೆಂಗ ತರೋದು ಅಂತ ಗೊತ್ತಐತಿ. ಮೇಲಾಗಿ ಅವು ಲಗ್ಗೆ ಹಾಕೋದು ಬೆಳಿಗಿನ ಹೊತ್ತು, ಅದೂ ಬಾಳೆ ಹಣ್ಣು ತಿನ್ನೋದಕ. ಆದರ ಗುಡ್ಡದ ನಡಕ ಇರೋ ಊರಾಗ ಮಂಗ್ಯಾನ ಮೀರಿಸಿದ ತ್ರಾಸ ಕೊಡೋದು ಅಂದ್ರ ಈ ಬೆಕ್ಕಿಲಿ- ಪುನುಗು. ರಾತ್ರಿ ಹೊತ್ತಿನ್ಯಾಗ ಸಪ್ಪಳ ಮಾಡದ ತೋಟಕ್ಕ ಲಗ್ಗಿ ಹಾಕ್ತೈತಿ. ತಿನ್ನೋದರೆ ಭಾಳ ಅಂದ್ರ ೪ ಹಣ್ಣು. ಆದ್ರ ಹತ್ತಾರು ಗಿಡ ತನ್ನ ಉಗುರಿನಿಂದ ಗೀರಕೋತ ಹತ್ತಿ ಇಳದು, ಬಾಳಿ ಗೊನಿ ಮ್ಯಾಲೆ ತನ್ನ ಉಗುರು ಮೂಡಿಸಿ ಬಿಟ್ತು ಅಂದ್ರ ಅದು ಅಕಾಲಿಕವಾಗಿ ಹಣ್ಣ ಆಗತೈತಿ. ಕಳೆದ ೪ ವರ್ಷದ ಹಿಂದ ೧.೫ ಎಕರೆದಷ್ಟು ತೋಟದೊಳಗಿನ ಹಣ್ಣು ಕೈಗೆ ಬರಲಿಲ್ಲ. ಏನ ಉಪಾಯ ಮಾಡಿದ್ರು ಅದು ತನ್ನ ಕೈ ಇವತ್ತಿಗೂ ತೋರಿಸೋದು ಬಿಟ್ಟಿಲ್ಲ" ಎಂದು ನಿಟ್ಟುಸಿರು ಬಿಟ್ರು.

"ದೇಸಿ ಬಾಳೆ ಗಿಡಗಳು (ಸುಗಂಧಿ ಮತ್ತು ಏಲಕ್ಕಿ ಬಾಳೆ) ಭಾಳ ಎತ್ತರ ಬೆಳೆಯೋದರಿಂದ, ಮತ್ತ ಗೊನಿ ತೂರಾಡೋದರಿಂದ ಅವು ಲಗ್ಗಿ ಹಾಕೋದು ಕಡಿಮೆ. ಆದ್ರ ಹೈಬ್ರಿಡ್ ತಳಿ (ಜಿ. ೯ ಮತ್ತು ರೋಬಸ್ಟ್) ಹಾಕಿದ್ರ ಎತ್ತರ ತೀರ ಕಡಿಮೆ; ಹಾಗಾಗಿ ಬಾಳಿ ಗೊನಿ ಗೀರಿ ಅದು ಪೀಕು ಹಾಳ ಮಾಡತೈತಿ. ಊರಾಗ ಎಣಿಸಿ ಒಂದು ೭-೮ ಈ ಬೆಕ್ಕಿಲಿ ಅದಾವು..ಅವು ಗುಡ್ಡದ ಆತುದಿಯಿಂದ ಈ ತುದಿಯ ವರೆಗಿನ ಎಲ್ಲ ಹಳ್ಳಿ ತೋಟ ಪಟ್ಟಿಗೂ ಭೆಟ್ಟಿ ನೀಡಿ ರೈತರ ಕಣ್ಣೀರು ಕಪಾಳಕ್ಕ ತರಸತಾವು. ನಮ್ಮ ಹಗಲಿ-ರಾತ್ರಿ ಏಕ ಮಾಡಿ ದುಡದ ಶ್ರಮ ಮಣ್ಣು ಪಾಲು. ಒಮ್ಮೆ ಗೊನಿ ಗೀರಿದ್ರ ಮತ್ತ ಹೊಸ ಗೊನಿ ಬರಾಕ ೮ ರಿಂದ ೯ ತಿಂಗಳು ಚಾತಕ ಪಕ್ಷಿ ಕಾಯ್ದಾಂಗ ಕಾಯಬೇಕು. ಹಂಗಾಗಿ ಕೆಲವು ಕಡೆ ರೈತರ ಸಿಟ್ಟಿಗೆ ಅವು ಪ್ರಾಣ ನೀಗತಾವು. ಆದ್ರ ಇಂದಿಗೆ ಅವು ಮೊದಲಿನಷ್ಟು ಹಾವಳಿ ಮಾಡುದುಲ್ಲ." ಅಂತ ತಮ್ಮ ಅನುಭದ ಬುತ್ತಿ ಬಿಚ್ಚಿಇಟ್ರು ಈರಪ್ಪನವರು.

೧೦ ವರ್ಷಗಳ ಕೆಳಗೆ ಅವರು ತಮ್ಮ ಅಣ್ಣವರ ಜೊತೆಗೆ ದೇಸಿ ಹತ್ತಿ ಬೀಜ ತಳಿಯನ್ನು ಬೆಳೆಸಿ, ಸಂಸ್ಕರಿಸಿ, ಸರಕಾರಕ್ಕೆ ಕೊಡುವ ಪ್ಲಾಟ್ (೧೦ ಗುಂಟೆ) ತಯಾರು ಮಾಡಿದ್ರು. ದೇಸಿ ಬೀಜ ಬ್ಯಾಂಕ್ ಹೇಗೆ ರೈತರಿಂದ, ರೈತರೇ..ರೈತರಿಗಾಗಿ ಇಟ್ಟುಕೊಂಡು ಮಿಕ್ಕಿದ್ದನ್ನು ಸರಕಾರಕ್ಕೆ ನೀಡುವ ಪರಿಪಾಠ ಇತ್ತು (ಕೇವಲ ಹತ್ತು ವರ್ಷದ ಕೆಳಗೆ!) ಎಂಬುದನ್ನು ಈ ಪ್ರಯೋಗ ನೆನಪಿಸುತ್ತದೆ. ಈಗ ವಿಪರ್ಯಾಸ ಬೀಜ, ಗೊಬ್ಬರ, ಕರೆಂಟ್, ನೀರು, ಬೆಂಬಲ ಬೆಲೆ ಎಲ್ಲದಕ್ಕೂ ರೈತ ಸರಕಾರದ ಎದುರು ನಿರ್ಗತಿಕ ಎಂಬಂತೆ ಕೈಚಾಚಿ ನಿಂತಿದ್ದಾನೆ!

ಆಗಿನ ಸಂದರ್ಭದಲ್ಲಿ ಪ್ಲಾಟ್ ಗಳಲ್ಲಿ ಸುಮಾರು ೩೫,೦೦೦/- ರುಪಾಯಿ ಖರ್ಚಿಸಿ ಒಳ್ಳೆ ತಳಿಯ ಗಂಡು ಮತ್ತು ಹೆಣ್ಣು ಗಿಡಗಳನ್ನು ಆಯ್ದುಕೊಂಡು, ಪರಾಗ ಸ್ಪರ್ಷ ಮಾಡಿಸಿ ಅತ್ಯುತ್ತಮ ಇಳುವರಿ ನೀಡಬಲ್ಲ ಸದೃಢ ಹತ್ತಿ ಬೀಜಗಳನ್ನು ತಯಾರಿಸಲಾಗುತ್ತಿತ್ತು. ಈ ಪ್ಲಾಟ್ ಗಳಿಗೂ ಏಕಾಏಕಿ ಲಗ್ಗೆ ಇಡುತ್ತಿದ್ದ ಪುನುಗು ಬೆಕ್ಕಿಲಿ ಕಾಯಿ ಬಿಟ್ಟ ಸಂದರ್ಭದಲ್ಲಿ ಹಲ್ಲಿನಿಂದ ಕಚ್ಚಿ, ಉಗುರಿನಿಂದ ಗೀರಿ ಸುಮಾರು ೬೦% ಹಾಳುಗೆಡುವುತ್ತಿತ್ತು ಎಂದು ಸ್ಮರಿಸುತ್ತಾರೆ ಅವರು. ರೈತನ ಶತ್ರು ಎಂದು ಅವರು ಅದನ್ನು ಮೊದಲಿಸುತ್ತಾರೆ ಕೂಡ.

ಆಶ್ಚರ್ಯದ ವಿಷಯ ಎಂದರೆ..ಪಪ್ಪಾಯಿ ಗಿಡಗಳಿಗೆ ಮಾತ್ರ ಈ ಬೆಕ್ಕಿಲಿಯ ಕಾಟವಿಲ್ಲ. ಕಾರಣ ಪಪ್ಪಾಯಿ ಗಿಡ ಮತ್ತು ಅದಕ್ಕೆ ಜೋತು ಬೀಳುವ ಹಣ್ಣಿನಲ್ಲಿ ಆಸಿಡ್ ರೂಪದ ಸ್ರಾವ ಸ್ರವಿಸುತ್ತದೆ. ಹಣ್ಣು ಕೀಳಲು ಹೋದವರು ಸಹ ಮುಂಜಾಗ್ರತೆ ತೆಗೆದುಕೊಳ್ಳದಿದ್ದರೆ ಕೈಗಳಿಗೆ ತೂತು ಬೀಳುವ ಸಾಧ್ಯತೆಗಳಿವೆ. ಹಾಗಾಗಿ ಈ ಬೆಕ್ಕಿಲಿ ಬಹುಶ: ಪಪ್ಪಾಯಿ ಕೀಳುವ ತ್ರಾಸಿನ ಅರಿವಿದ್ದು ಆ ತೋಟಕ್ಕೆ ಮಾತ್ರ ಯಾವತ್ತೂ ಲಗ್ಗೆ ಇಟ್ಟಿಲ್ಲ! ಕಾರಣ ದರ ಕೈ-ಕಾಲುಗಳಿಗೆ ತೂತು ಬೀಳುವ ಸಂಭವ ಜಾಸ್ತಿ.

ಆದರೆ ಯಾವತ್ತೂ ಕೋರಿಶೆಟ್ರು ಆ ಪುನಗಿಗೆ ತ್ರಾಸು ಕೊಟ್ಟಿಲ್ಲ. ಕೊಲ್ಲುವ ಪ್ರಯತ್ನಕ್ಕೆ ಮುಂದಾಗಿಲ್ಲ. "ನಮ್ಮ ಪಾಲಿಂದು, ನಮ್ಮ ನಸೀಬದಾಗ ಇದ್ದಷ್ಟು ದೇವರು ಕೊಟ್ಟ ಕೊಡತಾನ..ಹಂಗ ನಮ್ಮಿಂದ ಅದಕ ಹೋಗಬೇಕಾದ ಪಾಲನ್ನೂ ಅವ ಯಾವುದೋ ರೂಪದೊಳಗ ಇಸಕೊಂಡು ಕೊಡತಾನ. ಅದಕ ಹೊಟ್ಟಿಪಾಡು ನಮಗ ಮಕ್ಲೂ..ಮರಿಮಕ್ಳಿಗೆ ಮಾಡಿಡೋ ಆಸೆ. ಪುನಗಿಂದು NEED ನಮ್ಮದು GREED ಇಷ್ಟ".

"ರೈತನೂ ಬದುಕಬೇಕು..ಪುನಗಿನ ಹೊಟ್ಟಿನೂ ತುಂಬಿರಬೇಕು ಅಂಥಾ ಮಧ್ಯದ ದಾರಿ ಹುಡುಕಿ ನೀವು ಪತ್ರಕರ್ತರು ಹೇಳ್ರಿ..ನಾನು ಹೌದು ಅಂತೇನಿ. ಪುನಗು ಕಂಡ್ರೂ ಸುದ್ದಿ, ಬಡಿಸಿಕೊಂಡ್ರೂ ಸುದ್ದಿ, ಬಡದವರೂ ಸುದ್ಯಾಗ..ಅದರ ಬದಲಿ ಅವು ನಮ್ಮಂಗ ಬದುಕಲಿ, ಮಕ್ಳು ಮರಿ ಕಾಣಲಿ. ಸಮಾಧಾನದಿಂದ ಬುದ್ಧಿವಂತರು ಆ ಮೂಕ ಬುದ್ಧಿಗೇಡಿ ಪ್ರಾಣಿ ಮಾಡೋ ಕೆಲಸಕ್ಕ ಮೂಗುದಾರ ಹೆಂಗ ಹಾಕೋದು ಅಂತ ಬರೀರಿ.." ಬೆಕ್ಕಿಲಿ ಪುನುಗು ಈರಪ್ಪನವರನ್ನು ಬಿಕ್ಕಿಸಿದ್ರೂ ಆ ಮೂಕ ಪ್ರಾಣಿಯ ಪ್ರತಿ ಅವರ ಮಾನವೀಯತೆಯ ಕಾಳಜಿ ನನಗೆ ಬೆರಗು ಮೂಡಿಸಿತು. ಅವರು ಅನುಕೂಲಸ್ಥರು ನಡೆದೀತು..ಅದರೆ ಕಡಿಮೆ ಹಿಡುವಳಿ ಇರುವ ರೈತನಿಗೆ ಇದೇ ಉರುಳಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಅವರ ಮಾತುಗಳಲ್ಲಿತ್ತು.

ಬಹುಶ: ಪಿಕಾಕ್ ಸೇಫ್ ಕಾರಿಡಾರ್, ಎಲಿಫಂಟ್ ಸೇಫ್ ಕಾರಿಡಾರ್, ಟೈಗರ್ ಸೇಫ್ಟಿ ಕಾರಿಡಾರ್ ನಂತೆಯೇ ‘ಸಿವೆಟ್ ಕ್ಯಾಟ್ ಸೇಫ್ಟಿ ಕಾರಿಡಾರ್’ ಯೋಜನೆಗೆ ಅರಣ್ಯ ಇಲಾಖೆ ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ಯೋಜನೆ ರೂಪಿಸಲು ಇದು ಸಕಾಲ. ಕಾರಣ ಈರಪ್ಪನವರು ಹೇಳುವಂತೆ, ಯಕ್ಕೇರಿ ಸುತ್ತಮುತ್ತಲಿನ ಗುಡ್ಡದ ತಪ್ಪಲಿನೊಳಗ ನೂರಾರು ಸಂಖ್ಯೆಯಲ್ಲಿ ಇದ್ದ ಬೆಕ್ಕಿಲಿ ಪುನುಗು ಸಂಖ್ಯೆ ಇಂದು ೪ ರಿಂದ ೭ಕ್ಕೆ ಬಂದು ನಿಂತಿದೆ.