ಯಕ್ಷ ಪ್ರಚಾರಗಳ ಆಧುನೀಕರಣ

ಯಕ್ಷ ಪ್ರಚಾರಗಳ ಆಧುನೀಕರಣ

ಬಯಲು ಸೀಮೆಯ ಹಳ್ಳಿಯಲ್ಲಿದ್ದೆ. ಅಲಂಕೃತ ಟ್ರಾಕ್ಟರಿಗೆ ಧ್ವನಿವರ್ಧಕ ಬಿಗಿದು ಸಿನೆಮಾ ಪ್ರಚಾರ ಸಾಗುತ್ತಿತ್ತು.  ಟ್ರಾಕ್ಟರ್ ಹಿಂದೆ ಏನಿಲ್ಲವೆಂದರೂ ಐವತ್ತಕ್ಕೂ ಮಿಕ್ಕಿ ಮಕ್ಕಳು, ಯುವಕರ ಹಿಂಡು ಅನುಸರಿಸುತ್ತಿತ್ತು. ತೆಳುಕಾಗದದ ಸಿನೆಮಾದ ಕರಪತ್ರ ಹಳ್ಳಿ ತುಂಬುವಷ್ಟು ಕೈಯಿಂದ ಕೈಗೆ ಬದಲಾಗುತ್ತಿದ್ದುವು. ಊರು ಹೊಸ ಸಿನೆಮಾವನ್ನು ಸ್ವಾಗತಿಸಲು ಸಜ್ಜಾಗುತ್ತಿತ್ತು.  
ಇದು ಸಿನೆಮಾ ಕತೆ. ಮೂರ್ನಾಲ್ಕು ದಶಕದ ಹಿಂದಿನ ಯಕ್ಷಗಾನ ಪ್ರಚಾರವೂ ಇದಕ್ಕಿಂತ ಹೊರತಿಲ್ಲ. ರಿಕ್ಷಾ, ಜೀಪ್, ಅಂಬಾಸಿಡರ್ ಕಾರಿನಲ್ಲಿ ‘ಬನ್ನಿರಿ, ನೋಡಿರಿ, ಆನಂದಿಸಿರಿ’ ಎನ್ನುವ ಸ್ಲೋಗನ್ ಕೇಳಿದರೆ ಸಾಕು, ಹಳ್ಳಿ ಅಲರ್ಟ್ ಆಗುತ್ತದೆ. ಕರಪತ್ರಗಳನ್ನು ಆಯಲು ಮಕ್ಕಳ ತಂಡ ಸಿದ್ಧವಾಗುತ್ತದೆ. ಒಂದರ್ಧ ಗಂಟೆಯಲ್ಲಿ ಇಡೀ ಹಳ್ಳಿಯಲ್ಲಿ ಯಕ್ಷಗಾನದ್ದೇ ಸುದ್ದಿ.
ಪ್ರಚಾರದ ವೈಖರಿಯೂ ವಿಭಿನ್ನ. ಊರಿನ ಬಸ್‍ನಿಲ್ದಾಣ, ಹೋಟೆಲ್ ಮತ್ತು ಕೆಂಪುಬೋರ್ಡಿನ ಅಂಗಡಿ(!) - ಹೀಗೆ ಮೂರು ಕಡೆ ‘ವಾಲ್‍ಪೋಸ್ಟರ್’ ಅಂಟಿಸಿದರೆ ಸಾಕು, ಊರಿಡೀ ಪ್ರಚಾರವಾಗುತ್ತಿತ್ತು! ಅಂದರೆ ಹೆಚ್ಚು ಜನ ಸೇರುವ ಜಾಗವದು. ಅಲ್ಲಿಂದ ಶುರು ಆಟದ ಚರ್ಚೆ. ಕಲಾವಿದರ ಅಭಿವ್ಯಕ್ತಿಯ ವಿಮರ್ಶೆ. ಮೇಳದ ಆಟದ ಸಾಮಗ್ರಿಗಳನ್ನು ಹೊತ್ತ ಲಾರಿ ಬಂದಾಗ ಅಪಾರ ಸಡಗರ. ಮೇಳದ ಚಿಕ್ಕ ಮೆಟಡೋರ್ ವ್ಯಾನ್‍ನಲ್ಲಿ ಅಳವಡಿಸಿದ ಕ್ಷೀಣ ಧ್ವನಿವರ್ಧಕವು ಹಗಲಿಡೀ ಸದ್ದು ಮಾಡುತ್ತಾ ಪ್ರಚಾರ ಆರಂಭಿಸುತ್ತದೆ. ಪ್ರಚಾರದಲ್ಲಿ ಬಳಸಿದ ಭಾಷೆಯ ವಿನ್ಯಾಸಗುಚ್ಛದಿಂದಲೇ ‘ಯಕ್ಷಗಾನದ ಪ್ರಚಾರ’ ಎಂದು ತಿಳಿಯುತ್ತಿತ್ತು.
ಯಕ್ಷಗಾನದ ಕರಪತ್ರವನ್ನು ಜತನದಿಂದ ಕಾಪಿಡುವ ಕಲಾಭಿಮಾನಿಗಳಿದ್ದರು. ಮೊದಲ ದರ್ಜೆಯ ಆಸನಕ್ಕೆ ಮೂರು ರೂಪಾಯಿ, ಎರಡನೆಯದ್ದಕ್ಕೆ ಎರಡು ರೂಪಾಯಿ, ಮೂರು - ನಾಲ್ಕನೇ ದರ್ಜೆಯ ಆಸನಕ್ಕೆ ಒಂದು ರೂಪಾಯಿ ಮತ್ತು ಎಪ್ಪತ್ತೈದು ಪೈಸೆ ದರ. ನೆಲಕ್ಕೆ ಐವತ್ತು ಪೈಸೆ. ಅವರವರ ಗಳಿಕೆಯ ಸಾಮಥ್ರ್ಯದಂತೆ ಆಸನದ ದರ್ಜೆ ಮೊದಲೇ ನಿಗದಿಪಡಿಸಿಕೊಳ್ಳುತ್ತಿದ್ದರು. ಅಂದಿಗೆ ಹೊಂದುವಂತೆ ಗಳಿಕೆಯಲ್ಲಿ ಒಂದು ಪಾಲನ್ನು ಆಟಕ್ಕಾಗಿಯೇ ಹೊಂದಾಣಿಸಿದ ದಿನಮಾನಗಳ ಫಲಾನುಭವಿ ನಾನು!
ಆಟದ ಟೆಂಟ್ ಮೈದಾನಿನಲ್ಲಿ ತೆರೆದುಕೊಳ್ಳುತ್ತಿದ್ದಂತೆ ಹೋಟೆಲ್, ಮಣಿಸರಕು, ಬೀಡ-ಬೀಡಿ, ಸೋಜಿ (ರವೆಯ ತೆಳು ಪಾಯಸ) .. ಅಂಗಡಿಗಳ ದಿಢೀರ್ ಸೂರು ತಯಾರಾಗಿ ಸಂಜೆ ಎಲ್ಲವೂ ಸಿದ್ಧವಾಗುತ್ತದೆ. ಕೊರೆಯುವ ಚಳಿಯನ್ನು ಶಮನಿಸುವ, ಬಡವರ ಪಾನೀಯ ಎಂದೇ ಬಿಂಬಿತವಾಗಿರುವ ‘ಸೋಜಿ’ಯ ಅಂಗಡಿಯ ಮುಂದೆ ಕ್ಯೂ ನಿಂತ ದೃಶ್ಯ ಕಾಡುತ್ತದೆ. ಈಗ ‘ಸೋಜಿ’ ಪಾನೀಯ ಮಾಯವಾಗಿದೆ. ಆಟಕ್ಕೂ ಭರ್ಜರಿ ಕಲೆಕ್ಷನ್, ಅಂಗಡಿಗಳಿಗೂ ಬರೋಬ್ಬರಿ ವ್ಯಾಪಾರ. ಒಂದು ಜಾತ್ರೆಯನ್ನು ನೆನಪಿಸುವ ಸಂಭ್ರಮ.
ಆಧುನಿಕ ತಂತ್ರಜ್ಞಾನಗಳು ಕಾಲೂರದ ದಿವಸಗಳಲ್ಲಿ ನಾಟಕ, ಯಕ್ಷಗಾನಗಳ ಪ್ರಚಾರ ತಂತ್ರಗಳು ಅಪ್ಪಟ ದೇಸಿ. ಪ್ರಚಾರದಲ್ಲೂ ಕಾಳಜಿ, ಸಡಗರ. ರಸ್ತೆ ಬದಿಯಲ್ಲಿ ಬಿಗಿದ ಬಟ್ಟೆಯ ಬ್ಯಾನರ್‍ಗಳು ರಸ್ತೆಗೆ ಶೋಭೆ. ಓದುವವರಿಗೂ ಕೂಡಾ. ಅದನ್ನು ಹರಿಯುವ, ನಾಶ ಮಾಡುವ ವಿಘ್ನಸಂತೋಷಿಗಳು ಇಲ್ಲವೇ ಇಲ್ಲ. ಆಟ, ನಾಟಕ, ಜಾತ್ರೆ, ಕೋಳಿ ಅಂಕ, ನೇಮೋತ್ಸವ... ಈ ಕಾರ್ಯಕ್ರಮಗಳು ಬಂತೆಂದರೆ ಬ್ಯಾನರ್ ಬರೆಯುವ ಕಲಾವಿದರಿಗೆ ರಾತ್ರಿ ಜಾಗರಣೆ!
ಬರಬರುತ್ತಾ ಕರಪತ್ರಗಳ ವಿನ್ಯಾಸಗಳು ಹಿರಿದಾದುವು. ಹೆಸರಿನೊಂದಿಗೆ ಕಲಾವಿದರ ಚಿತ್ರಗಳು ಅಚ್ಚಾಗುತ್ತಿದ್ದುವು. ಮುದ್ರಣಾಲಯದಲ್ಲಿ ಅದಕ್ಕೆ ಹೆಚ್ಚುವರಿ ಖರ್ಚುಗಳು. ಒಂದೊಂದು ಚಿತ್ರದ ಅಚ್ಚು ತಯಾರಿಸುವುದು ಶ್ರಮ-ಹಣ ಬೇಡುವ ಕೆಲಸ. ಕೆಲವೊಮ್ಮೆ ಚಿತ್ರಗಳು ಪರಿಚಯ ಸಿಗದಷ್ಟು ಕಪ್ಪಗಾಗಿ ‘ಇಂತಹವರ ಚಿತ್ರ’ ಎಂದು ಊಹಿಸಬೇಕಾಗುತ್ತಿತ್ತು! ಆ ಕರಪತ್ರವನ್ನು ಬೇಕಾಬಿಟ್ಟಿ ಹಂಚದೆ ಬೇಕಾದವರಿಗೆ ಮಾತ್ರ ವಿತರಿಸುವ ಪರಿಪಾಠ ಶುರು. ಮುದ್ರಣ ವೆಚ್ಚದ ಹೆಚ್ಚಳದಿಂದಾಗಿ ಈ ಕ್ರಮ.
ತಂತ್ರಜ್ಞಾನಗಳು ಅಭಿವೃದ್ಧಿಗೊಂಡಂತೆ ಮುದ್ರಣಾಯಗಳಿಗೆ ಕಂಪ್ಯೂಟರ್‍ಗಳು ಪ್ರವೇಶವಾದುವು. ಅಕ್ಷರ ಮೊಳೆಗಳು ಬದಿಗೆ ಸರಿದುವು. ಚಿತ್ರಗಳಿಗೆ ಸ್ಪಷ್ಟತೆ ಬಂದುವು. ಎದ್ದು ತೋರುವ ಬಗೆಬಗೆಯ ವಿನ್ಯಾಸಗಳು. ವಾಲ್‍ಪೋಸ್ಟರ್‍ಗಳು ಕೂಡಾ ಹೊಸ ವ್ಯವಸ್ಥೆಗೆ ತೆರೆದುಕೊಂಡುವು. ಈಚೆಗಿನ ಐದಾರು ವರುಷದಿಂದ ಡಿಜಿಟಲ್ ಪರ್ವ. ದಿನಪತ್ರಿಕೆಯ ಆಕಾರದಲ್ಲಿ ಯಕ್ಷಗಾನದ ಕರಪತ್ರಗಳು ಅಚ್ಚಾಗುತ್ತವೆ. ಕಲಾವಿದರ ಚಿತ್ರದೊಂದಿಗೆ ಅವರ ವೇಷದ ಚಿತ್ರಗಳು ಪ್ರಕಟವಾಗುತ್ತವೆ. ಅಭಿಮಾನ ತುಂಬಿ ಹರಿಯುತ್ತದೆ.
ಫ್ಲೆಕ್ಸಿ ತಂತ್ರಜ್ಞಾನದಿಂದಾಗಿ ಚಿತ್ರಗಾರರು ಮರೆಯಾದರು. ಬಟ್ಟೆಯ ಮೇಲೆ ವಿವಿಧ ವಿನ್ಯಾಸದಲ್ಲಿ ಚಿತ್ರಗಳನ್ನು ಮೂಡಿಸುತ್ತಿದ್ದ ಕೈಗಳಿಗೆ ಉದ್ಯೋಗವಿಲ್ಲ. ಕೆಲವರು ಅನಿವಾರ್ಯವಾಗಿ ಡಿಜಿಟಲ್ ತಂತ್ರಗಾರಿಕೆಯನ್ನು ಕಲಿತರು. ಇನ್ನೂ ಕೆಲವರು ಬೇರೆ ಕೆಲಸಕ್ಕೆ ವರ್ಗಾವಣೆಗೊಂಡರು. ಸಣ್ಣ ಆಕಾರದ ಗಾತ್ರದಿಂದ ತೊಡಗಿ ಭೀಮ ಗಾತ್ರದ ಫ್ಲೆಕ್ಸಿಗಳು ಪ್ರಚಾರದ ಸರಕಾದುವು. ರಂಗದ ದೃಶ್ಯವನ್ನು ಸೆರೆ ಹಿಡಿದು ಫ್ಲೆಕ್ಸಿಯಲ್ಲಿ ಮುದ್ರಿಸುವುದು ಅನಿವಾರ್ಯ ಎಂದಾಯಿತು. ಯಕ್ಷಗಾನದಿಂದ ತೊಡಗಿ, ನೇಮ, ನಾಟಕ, ಬ್ರಹ್ಮಕಲಶ, ಜಾತ್ರೆ... ಹೀಗೆ ಸಮಾಜದೊಳಗಿರುವ ಎಲ್ಲಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಫ್ಲೆಕ್ಸಿಗೆ ಮೊದಲ ಮಣೆ.
ಜತೆಜತೆಗೆ ಜಾಲತಾಣಗಳ ಭರಾಟೆ. ವಾಟ್ಸಪ್, ಫೇಸ್‍ಬುಕ್‍ಗಳು, ವೆಬ್‍ಪುಟಗಳು.. ಯಕ್ಷಗಾನ ಪ್ರದರ್ಶನಗಳ ಪ್ರಚಾರಕ್ಕೆ ದೊಡ್ಡ ಕೊಡುಗೆ ನೀಡಿದುವು. ‘ಲೈವ್’ ವರದಿಯ ತುಣುಕುಗಳನ್ನು ಪ್ರಸಾರ ಮಾಡುವ ವಾಟ್ಸ್‍ಪ್ ಬಳಗಗಳಿವೆ. ಪ್ರಶಂಸೆ, ಹೊಗಳಿಕೆ, ತೆಗಳಿಕೆ, ವಿಮರ್ಶೆಗಳು ನಿತ್ಯ ಹರಿದಾಡುತ್ತಿರುತ್ತವೆ. ಕಲೆಯೊಂದರ ಜೀವಂತಿಕೆಗೆ ಆಧುನಿಕ ತಂತ್ರಜ್ಞಾನಗಳು ಪೂರಕವಾಗಿವುದು ಹೆಮ್ಮೆಯ ವಿಚಾರ. ಆದರೆ ‘ಸಮಗ್ರ ಯಕ್ಷಗಾನ’ದ ನೋಟ ಬೀರುವಲ್ಲಿ ಏದುಸಿರು ಬಿಡುವಂತೆ ಭಾಸವಾಗುತ್ತದೆ. ಬೌದ್ಧಿಕ ಪಕ್ವತೆಯನ್ನು ರೂಢಿಸಿಕೊಂಡ ವಿಮರ್ಶೆಗಳಿಂದ ಕಲೆ ಗಟ್ಟಿಯಾಗುತ್ತದೆ. ಕಲಾವಿದ ಪಕ್ವನಾಗುತ್ತಾನೆ. ರಂಗ ಜೀವಂತವಾಗಿರುತ್ತದೆ.
ಕರಪತ್ರಗಳ ವಿನ್ಯಾಸಗಳು ಹೇಗೆ ಬದಲಾಗುತ್ತಾ ಬಂದುವೋ ಅದೇ ರೀತಿ ಯಕ್ಷಗಾನದ ಪ್ರದರ್ಶನಗಳ ವಿನ್ಯಾಸವೂ ಕೂಡಾ ಪರಿಷ್ಕಾರಗೊಂಡಿರುವುದು ಖುಷಿಯ ಸಂಗತಿಯಲ್ಲ.