ಯಮದ ಫಲ !
ಇದುವರೆಗೂ ಯಮ ಮತ್ತು ನಿಯಮದ ಉಪ ಅಂಗಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರ ಅನುಷ್ಠಾನದಿಂದಾಗುವ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಈ ದಿನ ಯಮದ ಉಪಾಂಗಗಳ ಅನುಷ್ಠಾನದಿಂದ ಆಗುವ ಅಹಿಂಸೆ, ಸತ್ಯ ಮತ್ತು ಅಸ್ತೇಯ ಫಲಗಳ ಬಗ್ಗೆ ತಿಳಿದುಕೊಳ್ಳೋಣ.
ಅಹಿಂಸೆ : ಅಹಿಂಸೆ ಎಂದರೆ ಸುಂದರ, ಮಧುರ ಮನಸ್ಸು ಅಂತ ಈಗಾಗಲೇ ತಿಳಿದಿದ್ದೇವೆ. ವೈರಿಗಳು ನಮ್ಮ ಕಣ್ಣಲ್ಲಿ, ನಮ್ಮ ಮನಸ್ಸಿನಲ್ಲಿ ತುಂಬಿಕೊಂಡಿರುತ್ತಾರೆ. ಅವರನ್ನು ನೆನೆಸಿಕೊಂಡರೆ ನಮ್ಮಲ್ಲಿ ಒಂದು ತರ ಅನಿಸುತ್ತದೆ. ನೆನಪಾದರೆ ನಮಗೆ ತಾಪ ಆಗುತ್ತದೆ. ಎಷ್ಟೋ ಘಟನೆಗಳು ನಡೆದು ಹೋಗಿ ಅನೇಕ ವರ್ಷಗಳಾದರೂ, ಅದು ನೆನಪಿನಲ್ಲಿದ್ದು, ನೆನಪಿಸಿಕೊಂಡಾಗ ತಾಪ ಉಂಟಾಗುತ್ತದೆ. ನಮಗೆ ಎಷ್ಟೊ ಸಂಗತಿಗಳು ಹಿಡಿಸುವುದಿಲ್ಲ. ಅದು ನೆನಪಾದರೆ ತಾಪ ಆಗುತ್ತದೆ. ಅಹಿಂಸೆ ಅನುಷ್ಠಾನವಾದರೇ ವೈರತ್ವ ಕಡಿಮೆಯಾಗುತ್ತದೆ, ಮರೆಯಾಗುತ್ತದೆ. ಮನಸ್ಸು ಮೃದುವಾಗಿರುವುದರಿಂದ, ಮನಸ್ಸಿನಿಂದ ವೈರತ್ವ ಇಲ್ಲದಾಗುತ್ತದೆ. ಜಗತ್ತಿನಲ್ಲಿ ಬದುಕಬೇಕು. ವೈರಿಗಳು ನಮ್ಮ ಮನಸ್ಸಿನಲ್ಲಿ ಇರಬಾರದು. ಒಂದು ವೇಳೆ ವೈರಿಯೇ ಎದುರಿಗೆ ಬಂದರೂ ಸಹ, ನಮ್ಮ ಮನಸ್ಸಿನಲ್ಲಿ ವೈರತ್ವ ಇಲ್ಲ. ಅಹಿಂಸೆ ಇದ್ದರೆ, ವೈರಿಗೆ ವೈರತ್ವ ಮಾಡಲು ಪೋಷಣೆ ಸಿಗುವುದಿಲ್ಲ. ನಮ್ಮ ಮಾತು, ಹಾವ ಭಾವ ಹಾಗಾಗುತ್ತದೆ. ಆದರೂ ಬೈದಾಗ ಪ್ರತಿಕ್ರಿಯೆ ನೀಡದಿದ್ದರೆ, ಬಯ್ಯುವವನಿಗೆ ಉತ್ಸಾಹ ಬರುವುದಿಲ್ಲ. ಆಗವನಿಗೆ ಅಪಮಾನವಾಗುತ್ತದೆ. ಒಳಗೆ ವೈರತ್ವ ಮರೆಯಾದಾಗ, ಹೊರಗಿನ ವೈರಿಗಳು ನಿಶಬ್ದರಾಗುತ್ತಾರೆ. ಏಕೆಂದರೆ ವೈರತ್ವಕ್ಕೆ ಪೋಷಣೆ ಸಿಗುವುದಿಲ್ಲ. ಯಾರಲ್ಲಿ ಅಹಿಂಸೆ ಅನುಷ್ಠಾನವಾಗಿರುತ್ತದೆಯೋ ಅವರಿಂದ ವೈರತ್ವಕ್ಕೆ ಪುಷ್ಟಿ ಬರೋದಿಲ್ಲ. ಪೋಷಣೆ ಸಿಗುವುದಿಲ್ಲ. ಇದಕ್ಕೆ ಉದಾಹರಣೆ, ಏಕನಾಥ ಸಂತ.
ಏಕನಾಥ ಸಂತ ಮಹಾರಾಷ್ಟ್ರದಲ್ಲಿ ವಾಸವಾಗಿದ್ದನು. ಈತ ಶಾಂತ. ಈತನನ್ನು ಸಿಟ್ಟುಗೊಳಿಸಬೇಕೆಂದು ಪಂಥ ಕಟ್ಟಿಕೊಂಡು ಕೆಲವರು. ಒಂದು ದಿನ ಏಕನಾಥ ನೆಲದ ಮೇಲೆ ಊಟಕ್ಕೆ ಕುಳಿತಿರುತ್ತಾನೆ. ಹೆಂಡತಿ ಬಾಗಿ ಊಟ ನೀಡುತ್ತಿರುತ್ತಾಳೆ. ಏಕನಾಥನನ್ನು ದ್ವೇಷ ಮಾಡುತ್ತಿದ್ದವನು ಒಬ್ಬ ನೇರವಾಗಿ ಒಳಗೆ ಬಂದು, ಏಕನಾಥನ ಹೆಂಡತಿ ಬೆನ್ನ ಮೇಲೆ ಕುಳಿತನು. ಆಗ ಏಕನಾಥ ಈ ಘಟನೆಯಿಂದ ಸಿಟ್ಟುಗೊಳ್ಳುತ್ತಾನೆ ಅಂತ ಪ್ರಚಾರ ಮಾಡುವ ಸಲುವಾಗಿ ಈ ರೀತಿ ಮಾಡಿದ್ದನು. ಆತ ಹೆಂಡತಿ ಬಾಗಿ ಊಟ ಬಡಿಸುವಾಗ ಆಕೆ ಬೆನ್ನೆ ಮೇಲೆ ಕುಳಿತಾಗ ಏಕನಾಥನಿಗೆ ಹೇಗಾಗಿರಬೇಡ. ಆಗ ನಾಲ್ಕು ಮಂದಿ ಹೊರಗಡೆ ಕಾಯುತ್ತಾ ಇದ್ದರು. ಈಗ ಜಗಳ ಆಗುತ್ತದೆ ಅಂತ. ಆಗ ಏಕನಾಥ ಹೇಳಿದ, ನೋಡು ಮಗು ಕುಳಿತಿದೆ ಅಂದ. ಆಗ ಹೆಂಡತಿ ಹೇಳಿದಳು. ಆಕೆಯೂ ಶಾಂತಪ್ರಿಯಳೆ, ಆಗ ಆಕೆ ಹೇಳುತ್ತಾಳೆ, ನನಗೆ, ಮಕ್ಕಳು ಬೆನ್ನ ಮೇಲೆ ಕುಳ್ಳಿರಿಸಿ ಕುದುರೆ ಆಟ ಆಡಿಸಿ ಗೊತ್ತಿದೆ ಅಂದಳು. ಆಗ ಮೇಲೆ ಕುಳಿತಿದ್ದವನಿಗೆ ಮುಖಭಂಗವಾಯಿತು. ಕೆಳಗೆ ಇಳಿದು ಅಡ್ಡ ಬಿದ್ದು ಕ್ಷಮೆ ಕೇಳಿದ. ನೀವು ನನ್ನ ತಂದೆ ತಾಯಿ ಇದ್ದಂತೆ. ಏಕನಾಥರ ಅಹಿಂಸೆ ಮುಂದೆ ಹಿಂಸೆಗೆ ಅವಕಾಶ ಸಿಗಲಿಲ್ಲ. ಹೀಗೆ ವೈರತ್ವ ನಿಧಾನವಾಗಿ ನಿಧಾನವಾಗಿ ಕಡಿಮೆಯಾಗುತ್ತದೆ.
ಸತ್ಯ : ಸತ್ಯವನ್ನು ಪ್ರೀತಿಸಬೇಕು, ಸತ್ಯವನ್ನು ತಿಳಿದುಕೊಳ್ಳಬೇಕು, ಸತ್ಯದ ಮಾತುಗಳನ್ನು ಆಡುವುದು. ಆತ ಏನೇ ಮಾಡಿದರು ಯಶಸ್ವಿಯಾಗುತ್ತಾನೆ. ಸತ್ಯವಂತ ಆಗಿರುವುದರಿಂದ ಏನೇ ಮಾಡಿದರು ಚೆಂದಾಗಿ ಮಾಡುತ್ತಾನೆ. ಭಗೀರಥ ಹಿಮಾಲಯದಲ್ಲಿ ಹುಟ್ಟಿ ಎಲ್ಲಿಗೂ ಹೋಗುತ್ತಿದ್ದ ಗಂಗಾನದಿಯನ್ನು ಉತ್ತರ ಭಾರತಕ್ಕೆ ಹರಿಸಿದ. ಅದಕ್ಕೆ ಭಗೀರಥ ಪ್ರಯತ್ನ ಎನ್ನುವರು. ಆತ ತಂದೆಗೆ ಮಾತು ಕೊಟ್ಟಿದ್ದನು. ಅದಕ್ಕಾಗಿ ನೀರು ಬರಲು ಏನೇನು ಅಡ್ಡಿ ಇತ್ತು ಅದನ್ನೆಲ್ಲಾ ಸರಿಪಡಿಸಿ ನೀರು ತಂದಿದ್ದನು. ನೀರನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದ. ಅದೇ ರೀತಿ ಮಾಡಿ ತೀರಿದ. ಆಡೋದೊಂದು ಮಾಡೋದೊಂದು ಮಾಡಿದರೆ ಕೆಲಸ ಆಗುವುದಿಲ್ಲ. ಫಲಿತಾಂಶ ಒಳ್ಳೆಯದು ಬರುವುದಿಲ್ಲ. ಹೇಳಿದ ಮೇಲೆ ಏನೇ ಬರಲಿ ಸತ್ಯವಂತ ಮಾಡುತ್ತಾನೆ. ಸತ್ಯ ನಮ್ಮಲ್ಲಿ ಆಂತರಿಕ ಶಕ್ತಿ ತುಂಬುತ್ತಿದೆ. ಐದು ಬೀಜ ಬಿತ್ತಿ 10 ಬೀಜ ಬಿತ್ತಿದ್ದೀನಿ ಅಂದರೆ ಹೇಗೆ ಚಿಗುರುತ್ತದೆ. ವ್ಯಕ್ತಿ ಪ್ರಾಮಾಣಿಕ ಇದ್ರೆ ಕೆಲಸ ಯಶಸ್ವಿಯಾಗುತ್ತದೆ. ಹಾಗಾಗಿ ಸತ್ಯಕ್ಕೆ ಕಡ್ಡಾಯವಾಗಿ ನ್ಯಾಯ ಫಲ ಸಿಕ್ಕೆ ಸಿಗುತ್ತದೆ. ಸುಳ್ಳಿನಿಂದ ಹಣ ಬರಬಹುದು, ಅಧಿಕಾರ ಬರಬಹುದು, ಬಹುಮಾನ ಸಿಗಬಹುದು, ಕೆಲಸ ಆಗುವುದಿಲ್ಲ. ಜಗತ್ತು ಕಟ್ಟಲು ಆಗುವುದಿಲ್ಲ. ಒಳ್ಳೆಯ ಫಲ ಸಿಗುವುದಿಲ್ಲ, ಕೆಲಸ ಮಾಡದೆ ಹತ್ತು ಬಾರಿ ಸುಳ್ಳು ಹೇಳಿದರೆ ಕೆಲಸ ಆಗುವುದಿಲ್ಲ. ಸತ್ಯಕ್ಕೆ ಕಾರ್ಯಫಲಕ್ಕೆ ಸಂಬಂಧ ಇದೆಯೇ ವಿನಹ ಸುಳ್ಳಿಗಲ್ಲ. ಕಂಪ್ಯೂಟರ್ ಕಲಿಯದೆ ಕಾಪಿ ಮಾಡಿ ಪ್ರಥಮ ದರ್ಜೆಯಲ್ಲಿ ಪಾಸಾದ. ಆತನ ಮುಂದೆ ಕಂಪ್ಯೂಟರ್ ಇಟ್ಟರೆ ಮಾಡಬೇಕಲ್ಲ. ಅದಕ್ಕೆ ಹೇಳಿದರು ಸತ್ಯಕ್ಕೆ ಜಯ. ಸತ್ಯ ಗೆಲ್ಲುತ್ತದೆ. ಕೆಲವರು ಹೇಳುತ್ತಾರೆ ಸತ್ಯ ನುಡಿದರೆ ಸುಖ ಸಿಗುತ್ತಾ ಅಂತ. ಸುಳ್ಳು ಆಡಿದರೆ ಸಮಾಧಾನ ಸಿಗುತ್ತಾ ಇಲ್ಲ. ಸತ್ಯಕ್ಕೂ ಸಮಾಧಾನಕ್ಕೂ ಸಂಬಂಧ ಇದೆ. ನಾವು ಹಣಕ್ಕೆ ಗಂಟು ಬಿದ್ದಿದ್ದೇವೆ. ಹಣ, ಸುಳ್ಳು ಹೇಳಿದರೆ, ಲಾಟರಿ ತೆಗೆದುಕೊಂಡರೆ ಬರುತ್ತದೆ. ಕಾರ್ಯಫಲ ಬರುವುದಿಲ್ಲ. ಹಣ ಅಧಿಕಾರ ಕಾರ್ಯ ಫಲ ಅಲ್ಲ. ಜ್ಞಾನ ಬರಬೇಕಾದ್ರೆ ಓದಲೇಬೇಕು. ಸುಳ್ಳು ಹೇಳಿ ಸಂಗೀತಗಾರನಾಗಲು ಸಾಧ್ಯವಿಲ್ಲ. ಕೆಲಸದ ಕ್ಷೇತ್ರದಲ್ಲಿ ಸುಳ್ಳು ನಡೆಯುವುದಿಲ್ಲ. ಹಣ ಅಧಿಕಾರ ಕ್ಷೇತ್ರದಲ್ಲಿ ನಡೆಯುತ್ತದೆ.
ಆಸ್ತೇಯ : ಆಸ್ತೇಯ ಅಂದರೆ ಈ ವಸ್ತುಗಳೆಲ್ಲ ನನ್ನವಲ್ಲ, ವಿಶ್ವದ್ದು. ನಾನು ಬಳಸುತ್ತೇನೆ. ಬೇರೆಯವರದನ್ನು ಕಸಿದುಕೊಳ್ಳಬಾರದು. ಇಲ್ಲಿರುವ ವಸ್ತುಗಳು ಸಾಮೂಹಿಕವಾದವೇ ವಿನಹ ವೈಯಕ್ತಿಕವಲ್ಲ. ವ್ಯವಹಾರಕ್ಕಾಗಿ ಮಾಲೀಕನೇ ವಿನಹ ನಿಜವಾದ ಮಾಲೀಕರು ಯಾರು ಅಲ್ಲ. ಹಾಗಾಗಿ ವಸ್ತುಗಳನ್ನು ಚೆನ್ನಾಗಿ, ಹಾಳಾಗದಂತೆ ಬಳಸಬೇಕು. ಆನಂದ ಕೊಡಬೇಕು. ಈ ಭಾವ ಇದ್ದರೆ ಆತನೇ ಶ್ರೀಮಂತ. ಅಂತವರಿಗೆ ಸಣ್ಣ ವಸ್ತು ಅದ್ಭುತ ಆಗಿರುತ್ತದೆ. ಸಣ್ಣ ವಸ್ತುವಿಗೆ ಜಗಳ ಶುರುವಾಗುತ್ತದೆ. ದೊಡ್ಡದಕ್ಕೆ ಜಗಳ ಇಲ್ಲ. ಸೂರ್ಯ ನನ್ನದಂದರೆ, ಸಾಗರ ನನ್ನದು ಅಂದರೆ, ಈ ಭೂಮಂಡಲ ನನ್ನದು ಅಂದರೆ ಜಗಳವಿಲ್ಲ. ಅದೇ ಒಂದು ಹೂವಿಗೆ ಜಗಳವಾಗುತ್ತದೆ. ಎಲ್ಲರೂ ನನ್ನವರೇ ಜಗಳವಿಲ್ಲ, ಇವ ನನ್ನವ ಅಂದ್ರೆ ಜಗಳ. ಈ ಭಾವ ಇದ್ರೆ ಎಲ್ಲಾ ಸಂಪತ್ತು ಇರುವ ವಸ್ತುಗಳು ಪ್ರಸಾದ ಎಂದು ತಿಳಿದಿರುತ್ತಾನೆ. ಆಸ್ತೇಯ ವ್ಯಕ್ತಿ ಎಲ್ಲದಕ್ಕೂ ಮಹತ್ವ ಕೊಡುತ್ತಾನೆ. ಆತನೇ ಶ್ರೀಮಂತ. ಹಸಿವಾದಾಗ ಅನ್ನ ಅಮೃತ ಅಲ್ಲವೇನು? ಅದರ ಬೆಲೆ ಎಷ್ಟು?. ದಾಹ ಆದಾಗ ನೀರು ಅಮೃತಾ ಅಲ್ಲವೇ?. ಅದರ ಬೆಲೆ ಎಷ್ಟು..? ಹೀಗೆ ನೋಡಿದರೆ ಜಗತ್ತಿನಲ್ಲಿ ಇರುವವನು ಎಲ್ಲರೂ ಶ್ರೀಮಂತರೆ, ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ