ಯಾದ್ ವಶೇಮ್ (ನೂರು ಸಾವಿರ ಸಾವಿನ ನೆನಪು)

ಯಾದ್ ವಶೇಮ್ (ನೂರು ಸಾವಿರ ಸಾವಿನ ನೆನಪು)

ಪುಸ್ತಕದ ಲೇಖಕ/ಕವಿಯ ಹೆಸರು
ನೇಮಿಚಂದ್ರ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೯೦

ನೇಮಿಚಂದ್ರ ಅವರ “ಯಾದ್ ವಶೇಮ್” ಕಾದಂಬರಿ ಓದಿದ ನಂತರ, ಓದುಗರ ನೆನಪಿನ ಸಾಗರದಲ್ಲಿ ಮತ್ತೆಮತ್ತೆ ಸುನಾಮಿಯಂತೆ ಎದ್ದೇಳುವ ಮಾತು: “ಜಗತ್ತು ನಿಂತು ನೋಡಿತ್ತು ಅರುವತ್ತು ಲಕ್ಷ ಯಹೂದಿಗಳ ಮಾರಣ ಹೋಮವನ್ನು, ನಿಂತು ನೋಡಿತ್ತು ….. ಪ್ರತಿಭಟಿಸದೆ.”
ಅದು, ಈ ಕಾದಂಬರಿಯ ಪ್ರಧಾನ ಪಾತ್ರ ಹ್ಯಾನಾ ಮೋಸೆಸ್ ಕಾದಂಬರಿಯ ಉದ್ದಕ್ಕೂ ಮತ್ತೆಮತ್ತೆ ನೆನೆಯುವ ಮಾತು. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಅವನ ಸೈನ್ಯದ ಹಿಡಿತದಿಂದ ಕೊನೆಯ ಕ್ಷಣದಲ್ಲಿ ಪಾರಾಗಿ, ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನೆಲೆಸಿದ ಡಾ. ಆರನ್ ಮೊಸೆಸ್ ಅವರ ಮಗಳು ಹ್ಯಾನಾ.
ತಂದೆ ತೀರಿಕೊಂಡ ಬಳಿಕ, ಪಕ್ಕದ ಮನೆಯ ತಾಯಿಯ ಮಡಿಲು ಸೇರಿ ಅವಳಾದಳು ಅನಿತಾ. ಅನಂತರ ಆ ಮನೆಯ ವಿವೇಕನನ್ನೇ ಮದುವೆಯಾಗಿ ವಿಶಾಲನ ತಾಯಿಯಾದಳು. ತನ್ನ ತಂದೆ, ತಾಯಿ, ಮನೆ, ಮನೆತನ, ಧರ್ಮ, ದೇವರು, ಗುರುತು ಎಲ್ಲವನ್ನೂ ಹಿನ್ನೆಲೆಗೊತ್ತಿ ಬದುಕಿದಳು – ಹೊರಗೆ ಹಿಮಾಲಯದ ಹಿಮರಾಶಿಯಂತೆ ಮೌನವಾಗಿ ಬಾಳಿದರೂ ಅವಳ ಎದೆಯಾಳದಲ್ಲಿ ಕೊತಕೊತ ಕುದಿಯುತ್ತಿತ್ತು ನೋವು, ಹತಾಶೆ.
ಸುಮಾರು ಆರು ದಶಕಗಳ ನಂತರ ತನ್ನ ಕುಟುಂಬಕ್ಕೆ ಏನಾಯಿತೆಂದು ಪತ್ತೆ ಮಾಡಲು ಪತಿ ವಿವೇಕ್ ಜೊತೆ ಹೊರಡುತ್ತಾಳೆ ಹ್ಯಾನಾ. ಅಂತಿಮವಾಗಿ ಇಸ್ರೇಲಿಗೆ ಹೋಗಿ, ಜೆರುಸಲೇಂಗೂ ಭೇಟಿ ನೀಡುತ್ತಾಳೆ. ಅಷ್ಟು ವರುಷಗಳ ಹ್ಯಾನಾಳ ಹುಡುಕಾಟಕ್ಕೆ ತೆರೆ ಬೀಳುತ್ತದೆ. ಅನಂತರ ಆ ವಿಷಯದಲ್ಲಿ ಹ್ಯಾನಾ ಮೌನವಾಗುತ್ತಾಳೆ.
ಹ್ಯಾನಾ ಇಸ್ರೇಲಿನಿಂದ ಹಿಂತಿರುಗಿ ಒಂದು ವರುಷ ಕಳೆಯಿತು. ಆ ಒಂದು ವರುಷದಲ್ಲಿ ಗೋಧ್ರಾ ದೊಂಬಿ, ಗುಜರಾತ್ ಹತ್ಯಾಕಾಂಡ ಏನೆಲ್ಲ ನಡೆಯಿತು. “ನನ್ನ ಭಾರತ, ನನ್ನ ನೆಲ, ಗಾಂಧೀ, ಬುದ್ಧ, ಜಿನ, ಮಹಾವೀರರ ಅಹಿಂಸೆಯ ನಾಡು” ಎಂದು ತನ್ನ ಕುಟುಂಬದವರಿಗೆ ಸಾರಿ ಬಂದ ಹ್ಯಾನಾಳ ಒಳಗೆ ಕೋಲಾಹಲವೇ ಎದ್ದಿತ್ತು. ಆಗಲೇ, ಯುಎಸ್‍ಎ ದೇಶದ ಅಧ್ಯಕ್ಷ ಬುಷ್ ಆದೇಶದಂತೆ ಇರಾಕಿನ ಸದ್ದಾಂ ಹುಸೇನನ್ನು ಬಗ್ಗು ಬಡಿಯಲು ಅಮೇರಿಕಾದ ಸೈನ್ಯದ ಧಾಳಿ ಶುರು.
ತನ್ನ ವಠಾರದ ಮಹಿಳಾ ಸಂಘಟನೆಯ ಹುಡುಗಿಯರು ಬೀದಿಗಿಳಿದು ಅದನ್ನೆಲ್ಲ ಪ್ರತಿಭಟಿಸುವುದನ್ನು ನೋಡುತ್ತಿದ್ದಳು ಹ್ಯಾನಾ. ಕೊನೆಗೊಮ್ಮೆ, ತಾನೂ ಆ ಪ್ರತಿಭಟನೆಗಳಲ್ಲಿ ಭಾಗವಹಿಸ ತೊಡಗಿದಳು. ತನ್ನ ವಿಷಾದದ ಹೊದಿಕೆಯನ್ನು ಕಿತ್ತೆಸೆದು, ಬೇರೆಬೇರೆ ಸಂಘಸಂಸ್ಥೆಗಳನ್ನು ಸೇರಿ ಉತ್ಸಾಹದಿಂದ ಓಡಾಡ ತೊಡಗಿದಳು. ಪತಿ ವಿವೇಕ್ “ಇದೇನು ಅನಿತಾ ಇದ್ದಕ್ಕಿದ್ದಂತೆ ಸಮಾಜ ಸೇವೆಯ ಕೀಟ ಕಡಿದಿದೆ …..” ಎಂದಾಗ, ಅವಳ ಉತ್ತರ, “ವಿವೇಕ್, ಜಗತ್ತಿನಲ್ಲಿ ಏನೆಲ್ಲ ನಡೆಯುವಾಗ, ನಿಷ್ಕ್ರಿಯವಾಗಿ ನಿಂತು ನೋಡುವ ಜನ ನಾವಾಗಬಾರದಲ್ಲ.”
ಅದೊಂದು ದಿನ, ಸಂಜೆ ಬೆಂಗಳೂರಿನ ಪುರಭವನದ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡ ಅನಿತಾ ಮನೆಗೆ ಮರಳುತ್ತಾಳೆ. ಆಗ ಮಗ ವಿಶಾಲ್ ಕೇಳುತ್ತಾನೆ, “ಏನಮ್ಮ, ಜಾರ್ಜ್ ಬುಷ್‍ನ ಹೆದರಿಸೋಕೆ ಹೋಗಿದ್ದೆಯಂತೆ ….” ಆಗ ಅನಿತಾ ಹೇಳಿದ್ದು: “ನಿಮಗೆಲ್ಲಾ ತಮಾಷೆ ಅಲ್ಲ? ಅನ್ಯಾಯ ಜಗತ್ತಿನ ಯಾವ ಮೂಲೆಯಲ್ಲೇ ಆಗಲಿ, ಪ್ರತಿಭಟಿಸದೆ ಇದ್ದರೆ, ಆ ಪಾಪದಲ್ಲಿ ನಾವೂ ಪಾಲ್ಗೊಂಡಂತೆ. ವಿವೇಕ್, ಜಗತ್ತು ಬದಲಾಗಬಲ್ಲದು, ಅದು ಜನರಿಂದ ಮಾತ್ರ ಸಾಧ್ಯ. ಹಣ, ಅಧಿಕಾರದ ಗದ್ದುಗೆ ಹಿಡಿದು ಕುಳಿತ ಮುಖಂಡರಿಂದ ಅಲ್ಲ ….” ಅನಿತಾಳಲ್ಲಿ ಈಗ ನೋವಿರಲಿಲ್ಲ, ಹತಾಶೆಯಿರಲಿಲ್ಲ. ಬದುಕು ಪ್ರೀತಿಯ ಭರವಸೆಯಿತ್ತು, ಬದುಕು ಬದಲಿಸುವ ಹೋರಾಟದ ಹುಮ್ಮಸ್ಸಿತ್ತು.
೧೨ ಸಪ್ಟಂಬರ್ ೨೦೦೧ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆರಂಭವಾಗುವ ಈ ಕತೆ, ೨೫ ನವಂಬರ್ ೨೦೦೨ರಲ್ಲಿ ಅಲ್ಲೇ ಮುಗಿಯುತ್ತದೆ. ಈ ನಡುವೆ ಹ್ಯಾನಾಳ ಮಾತುಗಳಲ್ಲಿ ಮೂಡಿ ಬರುವ, ಹಿಟ್ಲರ್ ಮತ್ತು ಜರ್ಮನಿಯ ಸೇನೆಯಿಂದ ನಾಜಿ ಶಿಬಿರಗಳಲ್ಲಿ ನಡೆದ ೬೦ ಲಕ್ಷ ಯಹೂದಿಗಳ ಮಾರಣ ಹೋಮದ ವಿವರಗಳು ನಮ್ಮ ಮನ ಕಲಕುತ್ತವೆ. ಆ ಜನಾಂಗೀಯ ಹತ್ಯೆಯನ್ನು ಇಡೀ ಜಗತ್ತು ನಿಂತು ನೋಡಿದ್ದರ ಬಗೆಗಿನ ಆಕೆಯ ರೋಷ ಹಾಗೂ ಆಕ್ರೋಶ ನಮ್ಮ ಎದೆ ತಟ್ಟುತ್ತದೆ. ಆದರೆ, ಅಂತಿಮವಾಗಿ ಉಳಿಯುವ ಅನಿತಾಳ ಹತ್ತಾರು ಪ್ರಶ್ನೆಗಳಿಗೆ ಉತ್ತರವೇ ಇರೋದಿಲ್ಲ.
“ಸುಧಾ” ವಾರಪತ್ರಿಕೆಯಲ್ಲಿ ಈ ಕಾದಂಬರಿ “ನೂರು ಸಾವಿರ ಸಾವಿನ ನೆನಪು” ಹೆಸರಿನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಇದಕ್ಕಾಗಿ ನೇಮಿಚಂದ್ರ ನಡೆಸಿದ ತಯಾರಿ ನಮ್ಮನ್ನು ಬೆರಗಾಗಿಸುತ್ತದೆ. ಬೆಂಗಳೂರಿನ ಗೋರಿಪಾಳ್ಯದ ಯಹೂದಿ ಸಮಾಧಿಗಳಿಂದ ಶುರು ಮಾಡಿ, ಕೇರಳದ ಕೊಚಿನ್ ಬಳಿಯ ಮಟ್ಟನ್‍ಚೆರ್ರಿಯ “ಜ್ಯೂ ಟೌನ್”, ಜರ್ಮನಿಯ ಡಕಾವ್ ನಾಜಿ ಕ್ಯಾಂಪ್, ಆಮಸ್ಟರ್‍ಡ್ಯಾಮಿನ “ಜ್ಯೂಯಿಷ್ ಹಿಸ್ಟಾರಿಕಲ್ ಮ್ಯೂಸಿಯಂ”, ಯುಎಸ್‍ಎ ದೇಶದ ಲಾಸ್ ಏಂಜಲೀಸಿನ “ಮ್ಯೂಸಿಯಂ ಆಫ್ ಟಾಲರೆನ್ಸ್”, ವಾಷಿಂಗ್ಟನಿನ “ಹೊಲೊಕಾಸ್ಟ್ ಮ್ಯೂಸಿಯಂ”, ಇಸ್ರೇಲ್, ಜೆರುಸಲೇಮ್ – ಈ ಎಲ್ಲ ಸ್ಥಳಗಳಿಗೆ ಭೇಟಿಯಿತ್ತು, ಹಲವಾರು ಯಹೂದಿ ಕುಟುಂಬಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಹೊರಲಾಗದಷ್ಟು ಪುಸ್ತಕಗಳನ್ನು ಕೊಂಡು ತಂದು, ಅಧ್ಯಯನ ಮಾಡಿ ನೇಮಿಚಂದ್ರ ಬರೆದ ಕಾದಂಬರಿ ಇದು.
ಈ ಕಾದಂಬರಿಗಾಗಿ ತಾವು ನಡೆಸಿದ ತಯಾರಿಯನ್ನೆಲ್ಲ, “ಕತೆಯ ಬೆನ್ನು ಹತ್ತಿ” ಎಂಬ ಕೊನೆಯ ಅಧ್ಯಾಯದಲ್ಲಿ ದಾಖಲಿಸಿದ್ದಾರೆ ನೇಮಿಚಂದ್ರ. “ನಾನು ಯಾವುದೇ ಉರಿಗೆ ಹೋಗಲಿ, ಅಲ್ಲಿಯ ದೂರವಾಣಿ ಡೈರೆಕ್ಟರಿ ತೆರೆದು “ರೂಬೆನ್”, “ಮೋಸೆಸ್”, “ಬೆಂಜಮೀನ್” ಮುಂತಾದ ಹೆಸರಿನ ದೂರವಾಣಿ ಸಂಖ್ಯೆಯನ್ನು ಪಟ್ಟಿ ಮಾಡಿಕೊಂಡು ಫೋನ್ ಮಾಡುತ್ತಿದ್ದೆ” ಎಂಬ ಮಾತುಗಳೇ ಸಾಕು ಈ ಕತೆಯ ಬೆನ್ನು ಹತ್ತಲು ಅವರು ನಡೆಸಿದ ಅಗಾಧ ಪ್ರಯತ್ನದ ಝಳಕ್ ಕಾಣಲು.
ಈ ಕಾದಂಬರಿಯ “ಬೆನ್ನಿನ ಪುಟ”ದಲ್ಲಿ ನೇಮಿಚಂದ್ರ ಅವರು ಬರೆದ ಮಾತುಗಳಿವು: “ಹನ್ನೆರಡು ವರ್ಷಗಳ ಹಿಂದೆ ಗೋರೀಪಾಳ್ಯದ ಯಹೂದಿ ಸಮಾಧಿಗಳು ನನ್ನೊಳಗೊಂದು ಕತೆಯನ್ನು ಹುಟ್ಟು ಹಾಕಿದ್ದವು. ಹಿಟ್ಲರ್‍ನ ನೆಲದಿಂದ ಗಾಂಧಿಯ ನೆಲಕ್ಕೆ ಬಂದ ಪುಟ್ಟ ಯಹೂದಿ ಬಾಲೆಯ ಕತೆಯದು. ಕತೆಯ ಬೆನ್ನು ಹತ್ತಿ, ಯಹೂದಿಗಳ ಬೆನ್ನು ಹತ್ತಿ ಹೋದೆ. ೬೦ ಲಕ್ಷ ಜನ ಯಹೂದಿಗಳನ್ನು ಕೊಂದು ಮುಗಿಸಿದ ಕರಾಳ ಚರಿತ್ರೆಯನ್ನು “ಕಾಣಲು.”
ಅಂದು ಹೊತ್ತಿ ಉರಿದಿತ್ತು ಜರ್ಮನಿ. ನಿಂತು ನೋಡಿತ್ತು ಜಗತ್ತು. ಇಂದು ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಲ್ಲ, ಅಮೆರಿಕದಲ್ಲಿ, ಜರ್ಮನಿಯಲ್ಲಿ, ಇಸ್ರೇಲಿನಲ್ಲಿ, “ಅಹಿಂಸೆಯೇ ಪರಮಧರ್ಮ” ಎಂದು ಸಾರಿದ ಭಾರತದಲ್ಲೂ ಕೂಡಾ. “ನಮ್ಮ ನಡುವೆ ಎಲ್ಲಿ ಕೂಡಾ ಹುಟ್ಟಿ ಬಿಡಬಲ್ಲ, ನಮ್ಮೊಳಗೇ ಜನಿಸಿ ಬಿಡಬಲ್ಲ ಹಿಟ್ಲರನನ್ನು ತಡೆಹಿಡಿವ ಹೊಣೆ ನಮ್ಮದು” ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಈ ಕಾದಂಬರಿ ಸಿದ್ಧವಾಗಿದೆ” ಅದಕ್ಕಾಗಿಯಾದರೂ ಈ ಕಾದಂಬರಿಯನ್ನು ಎಲ್ಲರೂ ಓದಲೇ ಬೇಕು.