ಯಾನ ಸಂಸ್ಕೃತಿ

ಯಾನ ಸಂಸ್ಕೃತಿ

ಪುಸ್ತಕದ ಲೇಖಕ/ಕವಿಯ ಹೆಸರು
ಶಾಂತಾ ನಾಗರಾಜ್
ಪ್ರಕಾಶಕರು
ಸಾಹಿತ್ಯಲೋಕ ಪಬ್ಲಿಕೇಷನ್ಸ್, ರಾಜಾಜಿ ನಗರ, ಬೆಂಗಳೂರು-೫೬೦೦೧೦, ಮೊ: ೯೯೪೫೯೩೯೪೩೬
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ:೨೦೨೧

ಶಾಂತಾ ನಾಗರಾಜ್ ಅವರು ತಮ್ಮ ಸಿಂಗಪುರ, ಮಲೇಷಿಯಾ ಮತ್ತು ಥಾಯ್ ಲ್ಯಾಂಡ್ ಪ್ರವಾಸದ ಬಗ್ಗೆ ಸೊಗಸಾಗಿ ಕಥನವೊಂದನ್ನು ಬರೆದಿದ್ದಾರೆ. ಡಾ.ಎಂ.ಸಿ.ಪ್ರಕಾಶ್ ಹಾಗೂ ನೇಮಿಚಂದ್ರ ಇವರು ಈ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ. ಡಾ. ಎಂ.ಸಿ.ಪ್ರಕಾಶ್ ಅವರ ಪ್ರಕಾರ “ Travel in the younger sort, is a part of experience, in the elder, a part of experience’ ಎಂದು ಫ್ರಾನ್ಸಿಸ್ ಬಾಕಾನ್ ಹೇಳಿದ ಹಾಗೆ ಈ ಪ್ರವಾಸ ಕಥನದಲ್ಲಿ ಶಿಕ್ಷಣಾಸುಧರ್ಮಗಳು ಹದವಾಗಿ ಮಿಶ್ರಗೊಂಡಿವೆ. ಏಕೆಂದರೆ ಇದರ ಲೇಖಕಿ ಶ್ರೀಮತಿ ಶಾಂತಾ ನಾಗರಾಜ್ ಅವರ ಮನಸ್ಸು ಸಂವೇದನಾ ಶೀಲವಾದದ್ದು. ಸಾಹಿತ್ಯ-ಕಲೆಗಳ ಸತತಾಭ್ಯಾಸದಿಂದ ಸೂಕ್ಷ್ಮಗೊಂಡಿದ್ದು, ಅನುಭವದ ಆಳಕ್ಕಿಳಿಯುವ ಶಕ್ತಿ ಇದ್ದಂತೆಯೇ ಸುತ್ತಲಿನ ಪ್ರಪಂಚವನ್ನು, ಅದರ ಆಗು ಹೋಗುಗಳನ್ನು ಕುತೂಹಲ ಔತ್ತುನ್ನಭರಿತ ಬೆರಗುಗಣ್ಣುಗಳಿಂದ ನೋಡುವ ಮಗುವಿನ ಮುಗ್ಧತೆಯೂ ಅವರಲ್ಲಿ ಇದೆ. ಹಾಗಾಗಿಯೇ ಸಿಂಗಪುರವನ್ನು, ಅಲ್ಲಿಯ ಜನರನ್ನು, ಅಲ್ಲಿಯ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಗ್ರಹಿಸುವ ಸಂದರ್ಭದಲ್ಲಿಯೇ, ಅವುಗಳನ್ನು ಕುರಿತಾದ ಸೋಜಿಗವೂ ಮಿಳಿತವಾಗಿರುತ್ತದೆ. ಇಂತಹ ಮುಗ್ಧತೆ-ಸೂಕ್ಷ್ಮತೆಗಳ ಸಮಪಾಕವೇ ನಿಮ್ಮ ಕೈಯಲ್ಲಿರುವ ‘ಯಾನ ಸಂಸ್ಕೃತಿ' ಭೌತಿಕ ವಿವರಗಳೊಂದಿಗೆ ವೀಕ್ಷಿತ ಸ್ಥಳ-ಸಮಾಜ-ಸಂಸ್ಕೃತಿಗಳ ಸೂಕ್ಸ್ಮ, ನಾಡಿ ಹಿಡಿಯುವ ಕೌಶಲ್ಯ ಇಲ್ಲಿ ಸಿದ್ಧಿಸಿದೆ. ವಿಮರ್ಶಾಪರವಾದ ಒಲವಿದ್ದೂ ಅನ್ಯ ದೇಶೀಯರನ್ನು ಮನುಷ್ಯನನ್ನಾಗಿಯೇ ಕಾಣುವ ನಿಲುವು ಇಲ್ಲಿದೆ. ಅಂತೆಯೇ ಇದು ಬರಿಯ ಪ್ರವಾಸ ಕಥನವಲ್ಲ. ಸಂಸ್ಕೃತಿಯ ಸಹಾನುಭೂತಿ ಪರವಾದ ಅಧ್ಯಯನ. ಈ ಕೃತಿಯ ಶೈಲಿಯೂ ಪ್ರವಾಸ ಸಾಹಿತ್ಯದ ಉದ್ದೇಶಕ್ಕೇ ಸೂಕ್ತವಾದದ್ದು. ದೀರ್ಘಕಾಲದ ಲೇಖನಾಭ್ಯಾಸದಿಂದ ಹದಗೊಂಡ ಅತಿ ಭಾರವೂ, ಹಗುರವೂ ಅಲ್ಲದ ಸುವರ್ಣ ಮಾಧ್ಯಮ ಶೈಲಿ. ಆದುದರಿಂದ ಈ ಪುಸ್ತಕಕ್ಕೆ ರುಚಿಯೂ, ಸುಲಲಿತವಾಗಿ ಓದಿಕೊಂಡು ಹೋಗುವ ಗುಣವೂ ಮತ್ತು ಎಲ್ಲೋ ಆಳದಲ್ಲಿ ಓದುಗರನ್ನು ಚಿಂತನೆಗೆ ಹಚ್ಚುವ ಸುಪ್ತಶಕ್ತಿಯೂ ಲಭಿಸಿದೆ. ಇದರಿಂದ ಹಗುರವಾಗಿದ್ದೂ ಅರಿವನ್ನು ಎತ್ತರಿಸುವ, ಗಹನವಾದ ವಿಷಯವಿದ್ದೂ ರುಚಿ ಹಿಡಿಸುವ, ವಿಶ್ಲೇಷಣೆ ನಡೆಸಿಯೂ ರಸಸ್ಮಂಧಿಯಾಗುವ ಮೌಲಿಕತೆ ಈ ಕಥಾನಕಕ್ಕೆ ಇದೆ. ನಮಗೆ ಇಂತಹ ಆರೋಗ್ಯಪೂರ್ಣ ಬರಹ-ಅಧ್ಯಯನಗಳ ಅಗತ್ಯ ತುಂಬ ಇದೆ"  ಎನ್ನುತ್ತಾರೆ.