ಯಾರಾತ? ನನ್ನನು ಮಧ್ಯ ರಾತ್ರಿಯೆಯಲಿ ತೊರೆದು ಹೋದವನು?

ಯಾರಾತ? ನನ್ನನು ಮಧ್ಯ ರಾತ್ರಿಯೆಯಲಿ ತೊರೆದು ಹೋದವನು?

    ಅವನು ನಿಧಾನಕ್ಕೆ ನಡೆಯುತ್ತಿದ್ದ, ರಸ್ತೆಯ ಬದಿಯಲ್ಲಿ, ಗಟ್ಟಿ ಟಾರು ರೋಡಿನ ಹಂಗು ಅವನಿಗೆ ಇರಲಿಲ್ಲ,,, ಅವನು ನಂಬಿದ್ದು ರೋಡನ್ನಲ್ಲ, ಅವನ ಕಾಲುಗಳನ್ನು, ಅವನಿಗೆ ಆಯಾಸ ಅಗುವುದೇ ಇಲ್ಲ, ಆದರೂ ಕೇಳುವವರಿಲ್ಲ, ಸದಾ ನಡೆಯುತ್ತಲೇ ಇರುತ್ತಾನೆ, ಅಕ್ಕ ಪಕ್ಕ ಹಾದುಹೊದ ಯಾವ ಜನರೂ, ವಾಹನಗಳೂ, ಪ್ರಾಣಿಗಳೂ ಅವನಿಗೆ ಕಾಣುವುದಿಲ್ಲ, ಕಂಡರೂ ಅವನಿಗದು ಸತ್ಯವಲ್ಲ, ಆಗಾಗ ಬೊಗಳುವ ನಾಯಿಗಳಿಗೆ ಅವನು ಎಸೆಯುವುದು ಒಂದು ಮುಗುಳ್ನಗು ಮಾತ್ರ. ಮತ್ತದೇ ಪಯಣ, ಎತ್ತ ಹೊರಟಿದ್ದಾನೆ ಅವನು? ಅವನಿಗೇನು ಬೇಕು? ಅವನು ನಿದ್ರಿಸುವುದು ಎಲ್ಲಿ? ಅವನು ಊಟ ಮಾಡುವುದು ಎಲ್ಲಿ? ಅವನಿಗೆ ಬಟ್ಟೆ ಎಲ್ಲಿಂದ ? ಈ ಪ್ರಶ್ನೆಗಳಿಗೆ ಸ್ವತಃ ಉತ್ತರ ಅವನಿಗೆ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳಲು ಅವನು ಇಚ್ಚಿಸುವುದಿಲ್ಲ. 
 
ಹಾಗಾದರೆ ಅವನು ಹೊರಟಿದ್ದು ಎಲ್ಲಿಗೆ? ಇಷ್ಟು ವರ್ಷಗಳು ಎಲ್ಲಿದ್ದ ? ನನಗೆ ಪದೇ ಪದೇ ಕಾಡಿದ ಪ್ರಶ್ನೆಗಳವು. ಅವನ ಹೆತ್ತವರು ಯಾರು? ಅವನ ಮಕ್ಕಳ್ಯಾರು? ಅವನ ಮನದನ್ನೆ ಯಾರು? ಎಲ್ಲವೂ ನನ್ನ ಪ್ರಶ್ನೆಗಳು. ಹೇಗಾದರೂ ಮಾಡಿ ಕಂಡು ಹಿಡಿಯಲೇ ಬೇಕು ಅವನಾರೆಂದು ಎಂದು ಪಣ ತೊಟ್ಟೆ, ಅವನನ್ನೇ ಹಿಂಬಾಲಿಸಿದೆ. ಗಂಟೆಗಟ್ಟಲೆ, ದಿನಗಟ್ಟಲೆ, ವರ್ಷಗಟ್ಟಲೆ, ಅದೊಂದು ದಿನ ನನ್ನೆಡೆಗೆ ನೋಡಿದ, ಇಷ್ಟು ವರ್ಷ ಅವನ ಹಿಂದೆ ಸುತ್ತಿದರೂ, ವರ್ಷಗಳಿಂದ ಆತ ನನ್ನ ನೋಡಿರಲೇ ಇಲ್ಲ, ಈಗ ಎವೆಯಿಕ್ಕದೆ ನೋಡಿದ, ಅವನಂತೆ ನನ್ನ ಕಣ್ಣು ಗುಳಿಬಿದ್ದಿತ್ತು, ಗಡ್ಡ ಉದ್ದ ಬೆಳೆದಿತ್ತು, ಅಲ್ಲಲ್ಲಿ ಬಟ್ಟೆ ಹರಿದಿತ್ತು, ನಾನು ಮಹಾ ಮೇಧಾವಿಯ ಗತ್ತಿನಲ್ಲಿದ್ದೆ, ನನ್ನೆಡೆಗೆ ಬಂದವನೇ ಸೀದಾ ನನ್ನ ಕಾಲಿಗೆ ಬಿದ್ದ. ನಾನು ಎಗರಿ ನಿಂತೆ, 
 
ಅವನು ಮತ್ತೆ ಪಯಣ ಮುಂದುವರೆಸಿದ, ಒಂದಷ್ಟು ವರ್ಷಗಳ ನಂತರ ನಾನು ಸ್ನಾನ ಮಾಡಿದೆ, ಗಡ್ಡವನು ಬೋಳಿಸಿದೆ, ತಲೆ ಕೂದಲಿಗೆ ಕತ್ತರಿ ಹಾಕಿದೆ, ಜಮ್ಮೆನಿಸುವ ಬಟ್ಟೆ ಹಾಕಿ ಅವನ ಎದುರಲ್ಲಿ ಬಂದು ನಿಂತೆ, ನನಗೆ ನಾನೇ ಗುರುತು ಸಿಗದ ಪರಿಸ್ಥಿತಿಯಲ್ಲೂ, ಆತ ನನ್ನ ಗುರುತಿಸಿದ, ಸೀದಾ ಬಂದು ಕಾಲಿಗೆ ಬಿದ್ದ. ತಟಕ್ಕನೆ ಎದ್ದು ಸಮುದ್ರದ ದಂಡೆಗೆ ಓಡಿದ.
 
ಎಡೆ ಬಿಡದೆ ನಡೆದ ಗುರಿಯ ಹಿಂದೆ ಸಾಗಿದ ನಾನು, ಪ್ಯಾಂಟು ಶರ್ಟು ಹಾಕುವ ಮಟ್ಟಕ್ಕೆ ಬೆಳೆದೆ, ಗುರಿ ನನ್ನ ಕಾಲಿಗೆ ಬಿತ್ತು, ಸೀದಾ ಸಮುದ್ರದಲ್ಲಿ ಲೀನವಾಯಿತು. ಆ ಕ್ಷಣವೇ ನನಗೆ ಅನೇಕ ಅಪರಿಚಿತರು ಸಿಕ್ಕಿದರು, ಎಲ್ಲೆಲ್ಲಿಗೋ ಎಳೆದೊಯ್ದರು, ಒಬ್ಬ ಆಚೆಗೆ, ಇನ್ನೊಬ್ಬ ಈಚೆಗೆ,
 
 ಸರಿಯಾದ ಸಮಯಕ್ಕೆ ನನ್ನ ಮದುವೆಯಾಯ್ತು, ಮಕ್ಕಳಾಯ್ತು, ಮೊಮ್ಮಕ್ಕಳೂ ಆಯಿತು. ಈಗ ಕನ್ನಡಿಯಲ್ಲಿ ಎದುರಲ್ಲಿ ನಿಂತಾಗ ನನಗೆ ಮತ್ತೆ ಅವನೇ ಕಾಣಿಸಿದ, ಅವತ್ತು ಕಾಲಿಗೆ ಬಿದ್ದು ಹೋದವನು ಇಷ್ಟು ವರ್ಷಗಳ ನಂತರ ಮತ್ತೆ ಬಂದಿದ್ದಾನೆ, ಅವನ ಹಣೆಯಲ್ಲಿ ಬೆವರಿದೆ, ಗಡ್ಡ ಇನ್ನೂ ಹೊಲಸಾಗಿದೆ, ಆದರೆ ಅವನ ವಯಸ್ಸು ಹಾಗೆಯೇ ಇದೆ, ನಾನು ಮುದುಕನಾದರೂ ಅವನು ಅದೇ ವಯಸ್ಸಿನಲ್ಲಿ ಇರಲು ಹೇಗೆ ಸಾಧ್ಯ? ವಿಚಿತ್ರವೆನಿಸಿತು ನನಗೆ, ಅಷ್ಟರಲ್ಲಿ ನನ್ನ ಹೆಂಡತಿ ಸತ್ತ ಸುದ್ದಿ ಬಂತು, ನಾನು ತರಾತುರಿಯಲ್ಲಿ ಓಡಿದೆ, ಮಕ್ಕಳೆಲ್ಲ, ದೂರದ ದೇಶದಲ್ಲಿ, ಬರುವ ವರೆಗೂ ಹೆಣ ಇಡುವ ಅವಶ್ಯಕತೆಯಿಲ್ಲ. ಅವರಿಗೂ ಇಲ್ಲ.
        ನನ್ನಾಕೆ ನನಗೆ ಅವಳ ನೆನಪನ್ನು ಕಾಣಿಕೆಯಾಗಿ ಕೊಟ್ಟು ಹೊರತು ಹೋದಳು, ನಾನು ಲಕ್ಷಾಂತರ ಜನರ ನಡುವೆ ಏಕಾಂತ ಕಂಡುಕೊಳ್ಳುವ ಮನಸ್ಥಿತಿಗೆ ತಲುಪಿದ್ದೆ. ಆ ದಿನ ನನ್ನ ಮನೆಯ ಜಗುಲಿಯಲ್ಲಿ ಅವನು ಮತ್ತೆ ಪ್ರತ್ಯಕ್ಷನಾದ, ಅವನ ಹಿಂದೆ ಬರುವಂತೆ ಕಣ್ಣಲ್ಲೇ ಕರೆದ,
ಇಲ್ಲ ಈ ಬಾರಿ ನಾನು ಬರುವುದಿಲ್ಲ, ಇಲ್ಲ,, ಬರುವುದಿಲ್ಲ,,,,, ಕೂಗಿ ಹೇಳಬೇಕೆನಿಸಿತು, ಸ್ವರ ಹೊರಬರಲಿಲ್ಲ,
 
ಸುಮ್ಮನೆ ನಡೆದೇ, ಅವನ ಹಿಂದೆ, ಆದರೆ ಈ ಬಾರಿ ನಾನು ಲಕ್ಷ ಮಕ್ಕಳ ಅನಾಥಾಶ್ರಮಕ್ಕೆ ಅವನ ಗಡ್ಡದ ಕೂದಲುಗಳನ್ನು ದಾನ ಕೊಟ್ಟೆ, ನನ್ನ ಎರಡು ಜೊತೆ ಬಟ್ಟೆಯನ್ನು ಬಿಟ್ಟು ಉಳಿದೆಲ್ಲವನು ದಾನಮಾಡಿಬಿಟ್ಟೆ 
 
ಒಂದು ರಾತ್ರಿ, ಅವನು ನನ್ನನ್ನು ಅಲ್ಲಿಯೇ ಬೀದಿ ಬದಿ ಬಿಟ್ಟು, ನನ್ನೆರಡು ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಎಲ್ಲಿಗೋ ಹೊರಟುಹೋದ, ನನಗೆ ಎಚ್ಚರವಿತ್ತು,,,, ಆದರೂ ನಾನು ಅವನನ್ನು ತಡೆಯಲಿಲ್ಲ, ಅವನನ್ನು ಹಿಂಬಾಲಿಸಲೂ ಇಲ್ಲ,,,,,,
 
ಮರುದಿನ ಬೆಳಿಗ್ಗೆ, ಲಕ್ಷ ಮಕ್ಕಳ ಕೈಲಿ ಒಂದೊಂದು ಹಣತೆ,,,,, ಎಲ್ಲರ ಕೆನ್ನೆಯ ಮೇಲೂ ನೀರು, ಎಲ್ಲರ ಮನದ್ಲಲೂ ನನ್ನಾತ್ಮಕ್ಕೆ ಶಾಂತಿಯ ಹಾರೈಕೆ.
 
ನಾನು ನಕ್ಕು, ಸುಮ್ಮನಾದೆ,
 
ಹೌದು,,,, ಯಾರಾತ? ನನ್ನನು ಮಧ್ಯ ರಾತ್ರಿಯೆಯಲಿ ತೊರೆದು ಹೋದವನು?
 
-ಜಿ ಕೆ ನವೀನ್ ಕುಮಾರ್