ಯಾರು ಇರದ ನಾಡಿನಿಂದ..

ಯಾರು ಇರದ ನಾಡಿನಿಂದ..

ಕವನ

ಯಾರು ಇರದ ನಾಡಿನಿಂದ

ಜನಿಸಿ ಇಳೆಗೆ ಬಂದೆನೊ

ನೆಲದ ಹಸಿರನುಂಡು ಬೆಳೆದೆ

ತಾಯ ಜೊತೆಗೆ ನೆಲೆಸಿದೆ

 

ಕಷ್ಟವಿರಲಿ ನಷ್ಟವಿರಲಿ

ಅಪ್ಪನಿದ್ದ ಸನಿಹದಿ

ನನ್ನ ಕರೆದು ಲಲ್ಲೆ ಮಾಡಿ

ನೋವ ಮರೆವ ಕ್ಷಣದಲಿ

 

ಹರಕು ದಿಂಬು ಹರಿದ ಚಾಪೆ

ನನಗೆ ರಾತ್ರಿ ಗೆಳೆಯರು

ಬೆಳಗು ಆಗೆ ತೋಟದೊಳಗೆ

ಕುಣಿವ ನವಿಲೆ ಮಿತ್ರರು

 

ಬಡತನವೆ ನನ್ನ ಉಸಿರು

ದೇವ ಕೊಟ್ಟ ಉಡುಗೊರೆ

ಅದನೆ ಹೊದ್ದು ನಡೆದಿರುವೆ

ನನ್ನ ಬಾಳ ಪಯಣದಿ

 

ನನ್ನನೆತ್ತಿ ಸಲಹಿದವರ

ಮರೆಯಲಾರೆ ಎಂದಿಗು

ಅವರ ಋಣವು ತೀರುವರೆಗು

ಇರುವೆ ನಾನು ಬುವಿಯಲಿ

 

ನನ್ನ ನೋವು ನನಗೆ ಗೊತ್ತು

ವೇದನೆಯ ಕುಂಭವು

ಹೊರಗೆ ಬರಲು ದಾರಿ ಇಹುದು

ತಾಳ್ಮೆ ಬೇಕು ಎಂದಿಗು

***

ಗಝಲ್

ರೂಪಗಳಿಗೆ ಮರುಳಾದವರ ಬದುಕು ಬೀದಿ ನಾಯಿಯಂತೆ ಕ್ಷಣಿಕ

ಹಣದ ಹಿಂದೆಯೇ ಹೋದವರ ಸೆಡವು ಬೀದಿ ನಾಯಿಯಂತೆ ಕ್ಷಣಿಕ

 

ಎಲ್ಲವೂ ಇದ್ದು ಅಲೆಮಾರಿಯಂತೆ ಬಾಳಬೇಕೆ

ತೀರಕೆ ಬಂದು ಹೊಡೆಯುವ ಅಲೆಯ ಒಡಪು ಬೀದಿ ನಾಯಿಯಂತೆ ಕ್ಷಣಿಕ

 

ಬಂಧನದ ಭೀತಿಗೆ ತಳ್ಳುವ ಕುಹಕದ ಜನ ಇವರು ನನ್ನವರೆ

ಉಂಡಾಡಿಗಳಿಗೆ ದಾರಿಯ ತೋರಿಸಲು ಹಿಡಿದ ಸೊಡರು ಬೀದಿ ನಾಯಿಯಂತೆ ಕ್ಷಣಿಕ

 

ಮದುವೆ ಸಂಸಾರ ಮಡದಿ ಮಕ್ಕಳು ಶಾಶ್ವತವೆಂದು ತಿಳಿದೆಯಾ

ಇಂದೇನಿದ್ದರೂ ಲೋಕದ  ಕಣ್ಣಿಗೆ ಮಣ್ಣೆರಚಲು ಬರಿಯ ಕಾವಲು ಬೀದಿ ನಾಯಿಯಂತೆ ಕ್ಷಣಿಕ

 

ಈಗಾಗಲೇ ಈಶನ ದವಡೆಯ ಹಲ್ಲುಗಳು ಇರುವುದೋ ಇಲ್ಲವೋ ತಿಳಿಯದು

ಹತ್ತೂರಲ್ಲೂ ತಿರುಗಿದರೂ ಸಿಗಲಾರದ ಮನದಾಳದ ಸವಿಯು ಬೀದಿ ನಾಯಿಯಂತೆ ಕ್ಷಣಿಕ

 

-ಹಾ ಮ ಸತೀಶ

 

ಚಿತ್ರ್