ಯಾವುದು ಚೆನ್ನ- ಇಂದೋ? ನಾಳೆಯೋ?

ಯಾವುದು ಚೆನ್ನ- ಇಂದೋ? ನಾಳೆಯೋ?

ಬರಹ

ಇದು ಸುಮಾರು ದಿನಗಳ ಹಿಂದೆ ನಾನು ದಿನಪತ್ರಿಕೆಯಲ್ಲಿ ಓದಿದ, ನನ್ನ ನೆನಪಿನ ಭಿತ್ತಿಯಿಂದ ಇನ್ನೂ ಅಳಿಸದಿರುವ ವಿಷಯ.ಅದೇನೆಂದರೆ -- ಡಾ.ಶಿವರಾಮ ಕಾರಂತರು ತಮ್ಮ ಕೊನೆಯ ದಿನಗಳಲ್ಲಿ ಮಣಿಪಾಲ್ ನ ಆಸ್ಪತ್ರೆಯಲ್ಲಿದ್ದಾಗ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರು ಒಂದು ದಿನ ತಪಾಸಣೆಗೆ ಬಂದಾಗ "How are you Mr.Karant?" ಎಂದು ಕೇಳಿದರಂತೆ.ಅದಕ್ಕೆ ಕಾರಂತರು "Better than tomorrow" ಎಂದು ಹೇಳಿದರಂತೆ.ಇದನ್ನು ಕೇಳಿದ ವೈದ್ಯರು ಆಶ್ಛರ್ಯದಿಂದ ಅವರತ್ತ ನೋಡಲು, ಕಾರಂತರು ಮುಗುಳ್ನಗುತ್ತ "When you don't know what is in store for tomorrow, certainly today is better than tomorrow" ಎಂದು ಉತ್ತರಿಸಿದರಂತೆ.ಎಷ್ಟೊಂದು ಭಿನ್ನವಾದ ಉತ್ತರ, ಭಿನ್ನವಾಗಿ ಯೋಚಿಸೋ ರೀತಿ ಅಲ್ವಾ?ಜೀವನದಲ್ಲಿ ಸಾಧನೆ ಮಾಡಿದವರು/ಮಾಡುವವರು ಹೀಗೆ ಎಲ್ಲರಿಗಿಂತ ಭಿನ್ನವಾಗಿಯೇ ಯೋಚಿಸಿದವರು/ಯೋಚಿಸುವವರಲ್ಲವೆ?

ಇಂದು ಹಾಗೇ ಜ್ಞಾಪಕಕ್ಕೆ ಬಂದ ಆ ಘಟನೆಯು ನನ್ನಲ್ಲಿ ಹಲವಾರು ವಿಚಾರತರಂಗಗಳ ಸರಣಿಯನ್ನೇ ನೇಯುತಿದೆ.ಕಾರಂತರು ಹಾಗೇಕೆ ಉತ್ತರಿಸಿರಬಹುದು?ನಾಳಿರುವ ಅಂತ್ಯದ (ಸಾವಿನ) ಆಭಾಸದಿಂದಲೇ...?ನಾಳೆ ನಾನು ಇರುತ್ತೇನೆಯೋ,ಇಲ್ಲವೋ....ಅದಕ್ಕಿಂತ ಇದೇ ದಿನ ಚೆನ್ನ ಎಂಬ ಮರ್ಮವೇ? ಯಾಕೆಂದರೆ ತಾರುಣ್ಯದಲ್ಲಿರುವ, ಜೀವನವೇ ನಮಗಾಗಿ ಮುಂದು ಕಾದಿರುವ (ಅಥವಾ ಹಾಗೆಂದು ತಿಳಿದಿರುವ ) ನಾವು (Tongue out ನಾನು .....ಕಾರಂತರಂತೆ ಭಿನ್ನವಾಗಿ ಯೋಚಿಸುವವರು ನಿಮ್ಮಲ್ಲಿ ಎಷ್ಟೋ ಜನರಿದ್ದಿರಿ..:-)..) ಹಾಗೆ ಯೋಚಿಸಲು ಆಗುವುದೇ ಇಲ್ಲ.ನಮ್ಮನ್ನು ನಾವು ಅವಲೋಕಿಸಿದರೆ, ನಾವು ಬದುಕುತ್ತಿರುವುದೇ ನಾಳೆಗಾಗಿ ಕಾಯುತ್ತ.ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ ...ಅಂತ ಹಾಡಿದರೂ, "ನಾಳೆ ಬಗ್ಗೆ ಯೋಚಿಸದೆ, ಇಂದು, ಈ ಕ್ಷಣ ಸಂತೋಷವಾಗಿರಬೇಕು" ಅಂತ ಹೇಳ್ತಾ/ಕೇಳ್ತಾ ಇದ್ದರೂ,ನಾವು ಮಾತ್ರ ಬದುಕುವುದು ನಾಳೆಯನ್ನು ಎದುರು ನೋಡುತ್ತಲೇ. ಓದುತ್ತಿರುವಾಗ ಓದು ಮುಗಿದು ನೌಕರಿಗೆ ಸೇರುವುದಕ್ಕಾಗಿ ಕಾಯುತ್ತಿರುತ್ತೇವೆ, ನೌಕರಿ ಸಿಕ್ಕಮೇಲೆ..ಮದುವೆಯಾಗುವುದಕ್ಕೆ....ಆಮೇಲೆ...ಹಾಗೇ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. "ಇಂದು" ನಾವು ಜೀವಿಸುತ್ತಿರುವುದು ಏಕೆಂದರೆ, ಬರುವ "ನಾಳೆ"ಯಲ್ಲಿ ಸಂತೋಷದ ನಿಧಿಯೇ ಅಡಗಿದೆ ಎಂಬ ಪ್ರತೀಕ್ಷಣೆಯಲ್ಲಿ. ಕಾರಂತರು ಯೋಚಿಸುವುದಕ್ಕೆ ವ್ಯ್ತತಿರಿಕ್ತವಾಗಿ ನಾವು ನಾಳೆಯಲ್ಲಿ ಒಳ್ಳೆಯದೇ ಇದೆ ಎಂದು ಖಚಿತವಾಗಿ ಭಾವಿಸುತ್ತೇವೆ.ಕೆಟ್ಟದಾಗಬಹುದೆಂಬುದರ ಬಗ್ಗೆ ಯೋಚಿಸುವುದೇ ಇಲ್ಲ.ಮತ್ತೆ ನಾಳೆಯ ಬಗ್ಗೆ ಆಶಾವಾದಿಯಾಗಿರುವುದನ್ನೇ ಸರಿ ಎಂದು (optimism..ಅಂತ) ಸಮರ್ಥಿಸುತ್ತೇವೆ.ಅದು ಅವಶ್ಯಕವೂ ಹೌದೆನಿಸುತ್ತದೆ.ಆಸೆಯೇ ಇಲ್ಲದೆ ಬದುಕುವುದೆಂತು? ನಮಗೆ ತಿಳಿದಿರುವಂತೆ ಸಮಾಧಿ ಸ್ಥಿತಿಗೇರಬಲ್ಲ ಸಾಮರ್ಥ್ಯ ಹೊಂದಿದ್ದ ಕೆಲವು ಮಹಾತ್ಮರು ಕೂಡ ಈ ಭೂಮಿಯ ಮೇಲಿರುವತನಕ..ಭೂಮಿಯಮೇಲಿರುವಂತೆ ಮಾಡಲು ಯಾವುದೋ ವಸ್ತುವಿನಲ್ಲಿ ಆಸಕ್ತಿಯನ್ನು ಉದ್ದೇಶಪೂರ್ವಕವಾಗಿ ಬೆಳೆಸಿಕೊಂಡಿದ್ದರಂತೆ.(ಶ್ರೀ ರಾಮಕೃಷ್ಣ ಪರಮಹಂಸರು ಬೆಲ್ಲದ ಚೂರನ್ನು ಇಷ್ಟಪಟ್ಟು ಅದನ್ನು ತಮ್ಮ ಹತ್ತಿರ ಇರಿಸಿಕೊಳ್ಳುತ್ತಿದ್ದರೆಂದು ಕೇಳಿದ್ದೇನೆ).

ನಾಳೆಯನ್ನು ನಾವು ಹೇಗೆ ನೋಡುತ್ತೇವೆ ಎಂಬುದು, ನಾವು ಜೀವನದ ಯಾವ ಹಂತದಲ್ಲಿದ್ದು ನಾಳೆಯನ್ನು ನೋಡುತ್ತೇವೆ ಎನ್ನುವುದನ್ನು ಅವಲಂಬಿಸಿರುವಂತೆ ತೋರುತ್ತದೆಯಲ್ಲವೇ?ಭವಿಷ್ಯದ ಸಾವಿರ ಹೊಂಗನಸುಗಳನ್ನು ಹೊತ್ತು ಬದುಕುತ್ತಿರುವ ಜೀವವು ನಾಳೆಗಳನ್ನು ತನ್ನ ಕನಸುಗಳನ್ನು ಸಾಕಾರಗೊಳಿಸುವ ನಿಧಿ ಎಂದು ಬಗೆದು "ಇಂದಿಗಿಂತ ನಾಳೆ ಚೆನ್ನ" ಎಂದು ತಿಳಿದರೆ, ಹಲವಾರು ರಂಗಗಳಲ್ಲಿ ಅತ್ಯುನ್ನತ ಸಾಧನೆಯನ್ನು ಗೈದು, ಬಾಳಿನ ಏರು-ಪೇರುಗಳನ್ನೆಲ್ಲ ಕಂಡು, ಅಂತ್ಯ ಕ್ಷಣಗಳನ್ನು ಎದಿರು ನೋಡುತ್ತಿರುವ ಪರಿಪಕ್ವ ಜೀವವೊಂದು, ತನ್ನ ಜೀವನವನ್ನೊಮ್ಮೆ ಮೆಲುಕು ಹಾಕಿ, ಅದನ್ನು ತಾನು ಬಾಳಿದ ರೀತಿಗೆ ಸಂತೃಪ್ತಿಗೊಂಡು, ನಾಳೆಗೆ ಬರಬಹುದಾದ ಸಾವು ಎಂಬ ಅಂತ್ಯವು ಆ ಸಂತೃಪ್ತಿಯನ್ನು ಅನುಭವಿಸಗೊಡದು...ಆ ಸಂತೃಪ್ತಿಯನ್ನು ಸವಿಯಲನುಗೈಯುತ್ತಿರುವ ಈ ಕ್ಷಣ, ಈ ದಿನವೇ ಮಹತ್ವದ್ದೆಂದು "ನಾಳೆಗಿಂತ ಇಂದು ಚೆನ್ನ" ಎನ್ನುತ್ತಿರಬಹುದೆ....?

(ಓದುಗರು ನನ್ನನ್ನು ಮನ್ನಿಸಬೇಕು....ಈ ರೀತಿ ಹೇಳುವಾಗ ಕಾರಂತರ ಮನಸ್ಸಿನಲ್ಲಿ ಏನಿತ್ತೋ ಏನೋ....ನನ್ನ ಅನಿಸಿಕೆಗಳನ್ನು ಮಾತ್ರ ಹಂಚಿಕೊಳ್ಳುತ್ತಿದ್ದೇನಷ್ಟೇ.)