ಯುದ್ಧದೇಟು
ನಾಮೇಲೆ ನೀಮೇಲೆ ಬೀಗುವ ತಾಲೀಮು
ನಾಮುಂದು ತಾಮುಂದು ಸಾವಿನ ಲಗಾಮು
ಗುರಿಯಿಟ್ಟರೆ ಸುಟ್ಟೇ ಬಿಡುವ ಕ್ಷಿಪಣಿ ಯುದ್ಧ
ಸದ್ದಿಲ್ಲದೆ ಕೊಲುವ ಜೈವಿಕ ಆಯುಧ ಸಿದ್ಧ!
ಅವರವರೇ ಎಳೆದರು ಲಕ್ಷ್ಮಣ ರೇಖೆ ಖುದ್ದು
ಕೋವಿ ಬಂದೂಕು ಫಿರಂಗಿಗಳದೇ ಸದ್ದು!
ಸಮರ ಸನ್ನಿಗೆ ಗಡಿಗಳಾಚೆ ರಕ್ತ ಕಣ್ಣೀರು
ಗೆದ್ದರೂ ಯುದ್ಧದೇಟಿಗೆ ಹೊಟ್ಟೆಗೆ ತಣ್ಣೀರು
ಕದನಕ್ಕೆಂದೇ ಕೂಡಿಟ್ಟ ಕುರುಡು ಕಾಂಚಾಣ
ಕರುಣೆಯಿಲ್ಲದೆ ಕಳೆಯುವುದವರ ಪ್ರಾಣ!
ಕೋಟೆ ಕೊತ್ತಲ ಕಟ್ಟಿ ಬೀಗುವ ಅಧಿಕಾರ
ಸೋಲಿಸದಿದ್ದರೆ ಇವರಿಗಿರದಿಲ್ಲಿ ಪರಿಹಾರ!
ಮಂಜಿನ ಗೋಡೆ ಕರಗಿದಂತಾಗಿ ಆರ್ಥಿಕತೆ
ಸೋಲೊಪ್ಪಿಕೊಳ್ಳದ ನಾಯಕರ ವ್ಯರ್ಥಕತೆ!
ಸುಮ್ಮನಿದ್ದರೆ ಎಲ್ಲರಲಿ ಅರಳುವುದು ಶಾಂತಿ
ಕಾಲ್ಕೆರೆವ ಯುದ್ಧೋನ್ಮಾದರಿಗೆ ಭ್ರಾಂತಿ
ಎತ್ತರಕೆ ಏರಿದಂತೆ ಉಸಿರಾಟಕೆ ಕೃತಕ ಗಾಳಿ
ಎಚ್ಚರಿಸಿ ನೆಮ್ಮದಿ ಕುಸಿದರಿಲ್ಲಿ ಖುಷಿ ಖಾಲಿ!
ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅದು ತಾಕತ್ತು
ಸೋತಾಗಿವೆ ಜಗ ಮಂದಿ ಎತ್ತಲಾಗದೆ ಕತ್ತು!
ಸೈನಿಕರು ಇರಬೇಕು ಯುದ್ಧವಿರದಿದ್ದರೂ
ನಂಬಿಕೆಯಿಲ್ಲ ಯಾರಿಗೂ ವೈರಿ ಬರದಿದ್ದರೂ!
ಭೂಮಿಯಗಲಕೆ ಹಾಕಿಹರು ತನ್ನದೆಂಬ ಗಡಿ
ಈ ನೆಲವು ನಿಮ್ಮದಲ್ಲ ಅವನದು ನೆನಪಿಡಿ!
-ಕಾ.ವೀ.ಕೃಷ್ಣದಾಸ್
ಚಿತ್ರ ಕೃಪೆ: ಇಂಟರ್ನೆಟ್ ತಾಣ