ಯುದ್ಧ

ಯುದ್ಧ

ಕವನ

ಯುದ್ಧಗಳು ಹಿಂದೆಯೂ ನಡೆದಿವೆ; ಸಮರಗಳು ಈಗಲೂ  ನಡೆಯುತ್ತಿವೆ; ಕದನಗಳು ಮುಂದುವರಿಯುತ್ತವೆ;

ಎಲ್ಲಿಯೂ ನಿಲ್ಲದೇ ಶಾಂತಿ ಸೂತ್ರಗಳ ಬಲಿಕೊಟ್ಟು!

ಸಂಧಾನ ಮಾತುಕತೆಯ ನಾಟಕಗಳು;

ಪರದೆಯ ಹಿಂದಿನ ಆಟ ಬಲ್ಲವರಿಲ್ಲ!

 

ಕದನ ಬಯಸದವರಿಗೂ ಬಿಡದ ಪ್ರತಿಷ್ಠೆ!

ಸುಳಿವಿಲ್ಲದೇ ಸದ್ದು ಮಾಡುತ್ತವೆ

ಮದ್ದು ಗುಂಡುಗಳು!

ಇರುವುದೆಲ್ಲವನ್ನೂ ನಾಶ ಮಾಡಲು!!

 

ಸಿಡಿದದ್ದು ಹೊಡೆದದ್ದು ಬಡಿದದ್ದು;

ಕೊನೆಗೆ ಸುಟ್ಟು ಕರಕಲಾದದ್ದು!ಹದ್ದು ಮೀರಿದ ಜಿದ್ದುಗಳ ವರಸೆಗೆ

ಗೆದ್ದದ್ದು ವಿನಾಶಿ ಕ್ಷಿಪಣಿಗಳೇ ಹೊರತು..

ಕಿರೀಟ ತೊಟ್ಟ ಮುಖವಾಡದ ಮುಖಂಡರಲ್ಲ!!

 

ಅವರು ಕೆದಕಿದರು ಇವರು ಕುಟುಕಿದರು;

ಹಾಗೇ ನೋಡಿದರೆ ಇಬ್ಬರೂ ಕಟುಕರು;

ನಾಯಕರು ಸೂಚಿಸಿ ಹಾರಿಸಿದ ಸಿಡಿಗುಂಡುಗಳಿಗೆ

ಬಲಿ ಪಶುಗಳಾದವರು ಬದುಕುವ ಹಕ್ಕಿರುವ ಪ್ರಜಾ ಹಕ್ಕಿಗಳು!!

 

ಇವರ ಯುದ್ದದ ದಾಳಿಯ ಚತುರತೆ;

ಕೊಲ್ಲುವುದರಲ್ಲಿರುವ ಪ್ರಖರತೆ;

ಭೂಮಿಯನ್ನೇ ನರಕವಾಗಿಸುವ  ನಿಖರತೆ;

ತುಂಬಿದೆ ಜಗದ ತುಂಬಾ ವ್ಯಾಕುಲತೆ!!

 

ಗಡಿಗಳೆಂದರೆ ಬಾಂಬು ಮುಚ್ಚಿರುವ 

ಸಾವಿನ ಒಳಸುಳಿ!

ನುಸುಳಿದರೆ ವಿಕ್ರಮ

ಗುಂಡಿಕ್ಕಿದರೆ ಪರಾಕ್ರಮ!

ಸಾಯುವುದಕ್ಕೆಂದೇ ನಾವು ಹಂಚಿ ಹೋದವರು!!

 

ಬೂದಿ ಮುಚ್ಚಿದ ಕೆಂಡ ಈ ಲೋಕ!

ರುಂಡ ಚೆಂಡಾಡುವುದನೇ ಕಾಯುವ ದ್ವೇಷ

ಕೊಲ್ಲುವ ಯಂತ್ರಗಳ

ಹುಟ್ಟು ಹಾಕುವ ಕಾರ್ಖಾನೆ!

ಸಿಡಿದರೆ ವಿಶ್ವವೇ ಸಾವಿನ ಕೋಣೆ!

ಸತ್ತವರು ಸೈನಿಕರು; ಪಾಪ ದೇಶ ಪ್ರೇಮ!

ಕಾಯದೇ-ಸಾಯದೇ ವಿಧಿ ಬೇರೇನಿಲ್ಲ!

ದೇಶ ಮತ್ತು ದ್ವೇಷ ಉಳಿಸಬೇಕಲ್ಲ!!

 

 - ಕಾ.ವೀ.ಕೃಷ್ಣದಾಸ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್