ಯೋಗ ಸಂಗೀತ

ಯೋಗ ಸಂಗೀತ

ಪುಸ್ತಕದ ಲೇಖಕ/ಕವಿಯ ಹೆಸರು
ಐತಿಚಂಡ ರಮೇಶ್ ಉತ್ತಪ್ಪ
ಪ್ರಕಾಶಕರು
ಓದುಗ ಪ್ರಕಾಶನ, ಕುವೆಂಪುನಗರ, ಮೈಸೂರು
ಪುಸ್ತಕದ ಬೆಲೆ
ರೂ. ೨೫೦.೦೦, ಮುದ್ರಣ : ೨೦೨೪

‘ಯೋಗ ಸಂಗೀತ' - ಮೈಸೂರು ಪರಂಪರೆ ಎನ್ನುವ ಮಾಹಿತಿಪೂರ್ಣ ಪುಸ್ತಕವನ್ನು ಬರೆದವರು ಐತಿಚಂಡ ರಮೇಶ್ ಉತ್ತಪ್ಪ. ಈ ಕೃತಿಗೆ ಅಂತರಾಷ್ಟ್ರೀಯ ಖ್ಯಾತಿಯ ಯೋಗ ಪಟುವಾದ ಡಾ. ಗಣೇಶ್ ಕುಮಾರ್ ಮತ್ತು ಮೈಸೂರು ಕಲ್ಚರಲ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಎ ಪಿ ನಾಗೇಶ್ ಇವರು ಬೆನ್ನುಡಿಯನ್ನು ಬರೆದಿದ್ದು, ಮೈಸೂರಿನ ರವಿ ಪಿ. ಇವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಅಭಿಪ್ರಾಯಗಳ ಆಯ್ದ ಭಾಗ ಇಲ್ಲಿದೆ... 

“ಯೋಗ ಹಾಗೂ ಸಂಗೀತದ ತವರು ಮನೆ ಮೈಸೂರು ಎಂದು ಹೇಳಬಹುದು. ಈ ಎರಡೂ ಕ್ಷೇತ್ರಕ್ಕೆ ಮೈಸೂರು ನೀಡಿದ ಕೊಡುಗೆ ಅತ್ಯದ್ಭುತ. ಕರ್ನಾಟಕ ಸಂಗೀತಕ್ಕೆ ಮೈಸೂರಿನ ಶ್ರೇಷ್ಠ ಕಲಾವಿದರು ಅನನ್ಯವಾದ ಸೇವೆ ಸಲ್ಲಿಸಿದ್ದಾರೆ. ಇಂದಿಗೂ ಪ್ರಪಂಚದ ಎಲ್ಲೆಡೆ ಮೈಸೂರಿನ ಮಹಾನ್ ಕಲಾವಿದರನ್ನು ನೆನಪು ಮಾಡಿಕೊಳ್ಳುತ್ತಾರೆ. ಯೋಗ ಕೂಡ ಇದೇ ದಿಕ್ಕಿನಲ್ಲಿ ಸಾಗಿದೆ. ಈ ಎರಡೂ ಕ್ಷೇತ್ರದ ನೆನಪನ್ನು ನಮಗೆ ಕಟ್ಟಿಕೊಡುವ ಅತ್ಯುತ್ತಮವಾದ ಕೃತಿ 'ಯೋಗ ಸಂಗೀತ, ಮೈಸೂರು ಪರಂಪರೆ'. ಯೋಗ ಹಾಗೂ ಸಂಗೀತಕ್ಕೆ ಈ ಕೃತಿ ಮತ್ತೊಂದು ಅದ್ಭುತ ಕೊಡುಗೆ ಎಂದು ಹೇಳಬಹುದು.

ವಿಜಯನಗರ ಅರಸರ ನಂತರ ಸಾಹಿತ್ಯ, ಸಂಗೀತ, ಕಲೆ ಬೆಳವಣಿಗೆಗೆ ಪ್ರೋತ್ಸಾಹ ನೀಡಿದವರು ಮೈಸೂರು ಮಹಾರಾಜರು. ಇಂದಿಗೂ ಇವರ ಕೊಡುಗೆಯ ಫಲ ಕಣ್ಣೆದುರಿಗೆ ಇದೆ. ಹಲವು ಕಲಾವಿದರು, ಸಾಹಿತಿಗಳು, ತಜ್ಞರಿಗೆ ಆಶ್ರಯ ನೀಡಿದರು. ಕೃಷ್ಣಮಾಚಾರ್ಯರನ್ನು ಮೈಸೂರಿಗೆ ನಾಲ್ವಡಿಯವರು ಕರೆತಂದ ನಂತರ ಮೈಸೂರಿನ ಯೋಗ ಪರಂಪರೆಗೆ ಹೊಸದೊಂದು ದಿಕ್ಕು ದೊರೆಯಿತು. ನಂತರ ಯೋಗ ಮೈಸೂರಿನ ಸಂಸ್ಕೃತಿ ಎಂಬಂತೆ ಬೆಳೆಯಿತು. ಕೃಷ್ಣಮಾಚಾರ್ಯರ ನಂತರ ಬಿ.ಕೆ.ಎಸ್. ಅಯ್ಯಂಗಾರ್, ಪಟ್ಟಾಭಿ ಜೋಯಿಸ್, ಇಂದಿರಾದೇವಿ ಮುಂತಾದವರು ಪ್ರಪಂಚದ ಎಲ್ಲೆಡೆಗೆ ಯೋಗದ ಮಹತ್ವವನ್ನು ಸಾರಿದವರು.

ರಮೇಶ್ ಉತ್ತಪ್ಪ ಅವರು ಕೃತಿಯಲ್ಲಿ ಹೇಳಿರುವ ಮಾತು ಇಷ್ಟವಾಯಿತು. 'ರಾಮಕೃಷ್ಣ ಪರಮಹಂಸರ ಸಂದೇಶಗಳನ್ನು ನಂತರ ಸ್ವಾಮಿ ವಿವೇಕಾನಂದ ಅವರು ಸಾರಿದಂತೆ, ಕೃಷ್ಣಮಾಚಾರ್ಯರ ಶಿಷ್ಯರು ಯೋಗವನ್ನು ಜಗತ್ತಿಗೆ ಪರಿಚಯಿಸಿದರು. ಆ ಮೂಲಕ ಮೈಸೂರಿನ ಯೋಗ ಪರಂಪರೆಯ ಮಹತ್ವವನ್ನು, ಶ್ರೇಷ್ಠತೆಯನ್ನು ಹರಡಿದರು' ಎಂದಿರುವುದು ಅರ್ಥಪೂರ್ಣವಾಗಿದೆ. ಯೋಗದ ಬೆಳವಣಿಗೆಯ ಎಲ್ಲಾ ಹಂತಗಳನ್ನು ಕೃತಿಯಲ್ಲಿ ಐತಿಚಂಡ ರಮೇಶ್ ಉತ್ತಪ್ಪ ಅವರು ಮನಮುಟ್ಟುವಂತೆ ತಿಳಿಸಿದ್ದಾರೆ.

ಇಂದು ಹಲವು ಮಹನೀಯರ ಶ್ರಮದ ಫಲವಾಗಿ ವಿದೇಶಗಳಲ್ಲಿ ಯೋಗ ಜನಪ್ರಿಯವಾಗಿವೆ. ಅಲ್ಲಿ ಯೋಗ ಎನ್ನುವುದು ಕಮರ್ಷಿಯಲ್ ಆಗದೆ ಪಾವಿತ್ರ್ಯ ನು ಉಳಿಸಿಕೊಂಡಿದೆ. ನಮ್ಮಲ್ಲಿಯೂ ಅದೇ ರೀತಿ ಆಗಬೇಕಿದೆ. ಇತ್ತೀಚೆಗೆ ಯೋಗವನ್ನು ಜಿಮ್ ಹಂತಕ್ಕೆ ತಂದಿರುವುದು ವಿಷಾದನೀಯ. ಈ ರೀತಿ ಆದರೆ, ಯೋಗದ ಮಹತ್ವ ಹೊರಟುಹೋಗುತ್ತದೆ.

ಮೈಸೂರಿನ ಭವ್ಯ ಯೋಗಪರಂಪರೆಗೆ ಕಳಶವಿಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಗಮಿಸಿ ಮೈಸೂರು ವಿಶ್ವದ ಗಮನ ಸೆಳೆಯುವಂತೆ ಮಾಡಿದರು. ನಂತರ ಅವರ ಆಗಮನದ ಲಾಭವನ್ನು ಪಡೆದುಕೊಳ್ಳುವಲ್ಲಿ ನಮ್ಮ ವ್ಯವಸ್ಥೆ ವಿಫಲವಾಗಿದೆ ಎನ್ನುವುದು ನಿಜ. ಈ ಎಲ್ಲಾ ಅಂಶಗಳನ್ನು ಕಣ್ಣಿಗೆ ಕಟ್ಟುವಂತೆ ಕೃತಿಯಲ್ಲಿ ವಿವರಿಸಲಾಗಿದೆ.

ಸಂಗೀತಕ್ಕೆ ಮೈಸೂರಿನ ಕೊಡುಗೆ ಅಪಾರವಾದುದು. ಮೈಸೂರು ರಾಜನ ಕಾಲದಲ್ಲಿ ದೊರೆತ ಪ್ರೋತ್ಸಾಹದಿಂದ ಮನೆ ಮನೆಗೂ ಸಂಗೀತದ ಅಭಿರುಚಿ ಹರಡಿದೆ. ಮೈಸೂರಿನ ಪ್ರತಿ ಮನೆಯಲ್ಲಿಯೂ ಒಬ್ಬರು ಕಲಾವಿದರು ಇದ್ದಾರೆ ಎನ್ನುವ ಮಾತು ನಿಜ. ಸಂಗೀತಕ್ಕೆ ಕಾಯಿಲೆ ಗುಣಪಡಿಸುವ ಮನಸ್ಥಿತಿಯನ್ನು ಸೃಷ್ಟಿಸುವ ಅದ್ಭುತವಾದ ಗುಣ ಇದೆ. ಸಂಗೀತ ಹಾಗೂ ಯೋಗ ಅವಳಿ ಜವಳಿಯಂತೆ. ಒಂದಕ್ಕೊಂದು ಪೂರಕವಾಗಿ ಬೆಳೆದುಬಂದಿದೆ. ಈ ಕ್ಷೇತ್ರಕ್ಕೆ ಮೈಸೂರು ಹೇಳಿ ಮಾಡಿಸಿದಂತಿದೆ. ಒಟ್ಟಿನಲ್ಲಿ ಮೈಸೂರಿನ ಪರಂಪರೆ, ಯೋಗ ಹಾಗೂ ಸಂಗೀತದ ಹಿರಿಮೆಯನ್ನು ಐತಿಚಂಡ ರಮೇಶ್ ಉತ್ತಪ್ಪ ಕಟ್ಟಿಕೊಟ್ಟ ರೀತ್ಯ ಅನನ್ಯ, ಪ್ರತಿಯೊಬ್ಬರು ಓದಲೇಬೇಕಾದ, ಸಂಗ್ರಹ ಮಾಡಿಕೊಳ್ಳಲೇಬೇಕಾದ ಕೃತಿ ಇದು.”