ರಕ್ತದಾನಿಗಳು ಬೇಕೇ?

ರಕ್ತದಾನಿಗಳು ಬೇಕೇ?

ಬರಹ

ರಕ್ತದಾನಿಗಳು ಬೇಕೇ?

http://www.friendstosupport.org ಅಂತರ್ಜಾಲ ತಾಣದಲ್ಲಿ ರಕ್ತದಾನಿಗಳು ನೋಂದಾಯಿಸಿಕೊಳ್ಳುವ ವ್ಯವಸ್ಥೆಯಿದೆ.ಹೆಸರು,ವಿಳಾಸ,ಸಂಪರ್ಕಸಂಖ್ಯೆ ಇತ್ಯಾದಿ ವಿವರಗಳೊಂದಿಗೆ ನೋಂದಾಯಿಸಿಕೊಳ್ಳಬೇಕಾಗುತ್ತದೆ.ರಕ್ತದ ಗುಂಪನ್ನೂ ನೀಡಬೇಕಾಗುತ್ತದೆ.ರಕ್ತ ಬೇಕಾದವರು ತಮ್ಮ ಊರು,ರಕ್ತದ ಗುಂಪು ನೀಡಿ,ದಾನಿಗಳ ವಿವರಗಳನ್ನು ಪಡೆದುಕೊಳ್ಳಬಹುದು.ನಂತರ ದಾನಿಯನ್ನು ನೇರವಾಗಿ ಸಂಪರ್ಕಿಸಿ,ರಕ್ತದಾನದ ವ್ಯವಸ್ಥೆ ಮಾಡಿಕೊಳ್ಳಬಹುದು.ಸಂಪರ್ಕ ವಿಳಾಸಗಳು ತಪ್ಪಿದ್ದರೆ,ಅದನ್ನು ಅಂತರ್ಜಾಲ ತಾಣಕ್ಕೆ ತಿಳಿಸಿದರೆ,ಅಂತಹ ವ್ಯಕ್ತಿಗಳ ವಿವರಗಳನ್ನು ಕಿತ್ತು ಹಾಕಬಹುದು.
------------------------------
ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಆಸ್ತಿ ತೆರಿಗೆಯನ್ನು ಆನ್‌ಲೈನಿನಲ್ಲೇ ಪಾವತಿಸುವ ವ್ಯವಸ್ಥೆಯಿದೆ. http://sasbbmp.com/PalikeOnline.aspx ಅಂತರ್ಜಾಲ ತಾಣದಲ್ಲಿ ಲಭ್ಯವಿರುವ ಈ ವ್ಯವಸ್ಥೆಯಲ್ಲಿ,ಆಸ್ತಿ ತೆರಿಗೆಯನ್ನು ಡೆಬಿಟ್.ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಬಹುದು.ಹಳೆಯ ಪಾವತಿಗಳನ್ನು ಪರಿಶೀಲಿಸಲೂ ಸಾಧ್ಯ.
--------------------------------------------------------
ವರದಿಗಾರಿಕೆಗೆ ಕಂಪ್ಯೂಟರ್?
ಸುದ್ದಿಯನ್ನು ಜಾಲಾಡಿಸಿ,ವರದಿ ತಯಾರಿಸುವ ಕೆಲಸವನ್ನು ಪತ್ರಿಕೆಯ ಸಂಪಾದಕೀಯ ವಿಭಾಗದವರು ಮಾಡುತ್ತಾರಲ್ಲವೇ?ಈ ಕೆಲಸವನ್ನು ಕಂಪ್ಯೂಟರಿನಿಂದ ಮಾಡಿಸುವ ಯತ್ನವನ್ನು ಸಂಶೋಧಕರು ಮಾಡುತ್ತಿದ್ದಾರೆ.ಅಂಕಿ-ಸಂಖ್ಯೆ ಹೆಚ್ಚಾಗಿರುವ ಕ್ರೀಡಾವರದಿಗಳನ್ನು ಕಂಪ್ಯೂಟರ್ ತಂತ್ರಾಂಶದ ಮೂಲಕ ತಯಾರಿಸುವ ಮೂಲಕ ಕ್ರಮವಿಧಿಯ ರಚನೆಯೀಗಲೇ ಆಗಿದೆ.ವರದಿಗಳು ಓದುಗರಿಗೆ ಮನುಷ್ಯ ಬರೆದಂತೆ ಕಾಣಬೇಕೆನ್ನುವ ಉದ್ದೇಶವಿರಿಸಿ ರಚಿಸಲಾಗಿದೆ.ನಾರ್ತ್ ವೆಸ್ಟೆರ್ನ್ ವಿಶ್ವವಿದ್ಯಾಲಯದ ಮೆಕ್ಕೋರ್ಮಿಕ್ ಇಂಜಿನಿಯರಿಂಗ್ ಕಾಲೇಜು ಮತ್ತು ಮೆಡಿಲ್ ಪತ್ರಿಕೋದ್ಯಮ ಕಾಲೇಜುಗಳು ಜತೆಯಾಗಿ ಕ್ರಮವಿಧಿಯನ್ನು ಅಭಿವೃದ್ಧಿ ಪಡಿಸಿವೆ.ವರದಿಗಾರಿಕೆಯನ್ನು ಕಂಪ್ಯೂಟರೀಕರಣಗೊಳಿಸುವ ಈ ವಿಧಾನಗಳು ಆರಂಭಿಕ ಯಶಸ್ಸನ್ನು ಸಾಧಿಸಿವೆ.ಕಾಲೇಜು ಕ್ರೀಡಾ ಪಂದ್ಯಗಳ ವರದಿಯನ್ನು ತಯಾರಿಸಲು ಕ್ರಮವಿಧಿಯನ್ನು ಯಶಸ್ವಿಯಾಗಿ ಬಳಸಲಾಗಿದೆ.ಸ್ಥಳೀಯ ಸುದ್ದಿಗಳ ವರದಿಯನ್ನೂ ಕಂಪ್ಯೂಟರೀಕರಣಗೊಳಿಸುವತ್ತ ಸಂಶೋಧನೆ ಮುಂದುವರಿದಿದೆ.ಜನರನ್ನು ರಂಜಿಸುವ ಗಾಸಿಪ್,ಮಸಾಲಾ ವರದಿ ತಯಾರಿಗೂ ತಂತ್ರಾಂಶದ ಬಳಕೆ ಸಾಧ್ಯವಾಗಿದೆ.ಇದನ್ನು ಮಿಥ್ಯಾವಾರ್ತಾವಾಚಕರು ಪ್ರಸ್ತುತ ಪಡಿಸುವ ಶೈಲಿಯನ್ನು ಬಳಸಿ ಪ್ರಾಯೋಗಿಕವಾಗಿ ಬಳಸಿದಾಗ,ಅದರ ಫಲಿತಾಂಶ ಜನರಿಗೆ ಸಂಪೂರ್ಣವಾಗಿ ಒಪ್ಪಿತವಾಗದಿದ್ದರೂ,ಸಾಕಷ್ಟು ತೃಪ್ತಿ ತಂದಿದೆ.
ಹಾಗೆಂದು ಇಂತಹ ವ್ಯವಸ್ಥೆಗಳು ಸಂಪೂರ್ಣವಾಗಿ ಮನುಷ್ಯರ ಅಗತ್ಯವೇ ಇಲ್ಲದೆ ಕಾರ್ಯನಿರ್ವಹಿಸ ಬಲ್ಲವು ಎಂದಲ್ಲ.ಅಕ್ಷರ ಪರೀಕ್ಷಕ ಸೌಲಭ್ಯ ಪದಸಂಸ್ಕಾರಕ ತಂತ್ರಾಂಶದಲ್ಲಿ ಲಭ್ಯವಿದ್ದರೂ,ಅದನ್ನು ಬಳಸಲು ಟೈಪಿಸ್ಟ್ ಬೇಕಾಗುವಂತೆ,ಇಂತಹ ತಂತ್ರಾಂಶದ ವರದಿಯನ್ನು ತಿದ್ದಲು ಮನುಷ್ಯರು ಬೇಕೇ ಬೇಕು.
-------------------------------------------------------------------------
ಐಫೋನಿಗೆ ಹೊಸ ಕಾರ್ಯನಿರ್ವಹಣಾತಂತ್ರಾಂಶ
ಐಫೋನಿಗೆ ಹೊಸ ಕಾರ್ಯನಿರ್ವಹಣಾ ವ್ಯವಸ್ಥೆ ತಂತ್ರಾಂಶವನ್ನು ಬಿಡುಗಡೆಗೊಳಿಸಲಾಗಿದೆ.ಒಟ್ಟಿಗೆ ಹಲವು ಕಾರ್ಯಗಳನ್ನು ಮಾಡಲು ಅವಕಾಶ ನೀಡುವ ಸೌಕರ್ಯ,ಹೊಸ ತಂತ್ರಾಂಶ ವ್ಯವಸ್ಥೆಯ ಮುಖ್ಯಾಂಶ.ಹಾಡನ್ನು ಕೇಳುತ್ತಿದ್ದಂತೆ ಕರೆಗಳನ್ನು ಸ್ವೀಕರಿಸುವಂತಹ ಸೌಲಭ್ಯ ಇದರಲ್ಲಿದೆ.ಇಂತಹ ಸೌಲಭ್ಯವನ್ನು ಒದಗಿಸುವುದು ಬಹಳ ಕಠಿನಕೆಲಸವೇನಲ್ಲ.ಆದರೆ,ಹೀಗೆ ಮಾಡಿದಾಗ,ಐಫೋನ್ ತುಂಬಾ ನಿಧಾನವಾಗುವುದು ಅಥವಾ ಹೆಚ್ಚು ಬ್ಯಾಟರಿ ಬಳಸದಂತೆ ಮಾಡುವುದು ನಿಜಕ್ಕೂ ಸವಾಲೇ ಸರಿ.ಇದನ್ನು ಹೊಸ ವ್ಯವಸ್ಥೆಯಲ್ಲಿ ಸಾಧಿಸಲು ಸಾಧ್ಯವಾಗಿದೆ ಎಂದು ಆಪಲ್ ಕಂಪೆನಿ ಹೇಳಿಕೊಂಡಿದೆ.ಸ್ಪರ್ಶ ಸಂವೇದಿ ಐಫೋನ್,ಐಫೋನ್ ಮತ್ತು ಹೊಸ ಸಾಧನ ಐಪ್ಯಾಡ್,ಇವೆಲ್ಲವುಗಳಿಗೂ ಸೂಕ್ತವಾದ ಐಫೋನ್-3.0,ಹಳೆಯ ಆವೃತ್ತಿಯಲ್ಲಿದ್ದ ಹಲವು ತಂತ್ರಾಂಶಗಳ ಏಕಕಾಲದ ಬಳಕೆ ಸಾಧ್ಯವಿಲ್ಲವೆಂಬ ಕೊರತೆಯನ್ನು ನಿವಾರಿಸಿದೆ.ಸದ್ಯ ಐಫೋನ್‌ಗಳಿಗೆ ಸುಮಾರು ಒಂದುಮುಕ್ಕಾಲು ಲಕ್ಷ ಅನ್ವಯಿಕ ತಂತ್ರಾಂಶಗಳು ಲಭ್ಯವಿದ್ದು,ಐಪ್ಯಾಡಿಗೆ ಸುಮಾರು ಮೂರೂವರೆ ಸಾವಿರ ತಂತ್ರಾಂಶಗಳನ್ನು ಸಿದ್ಧಗೊಳಿಸಲಾಗಿದೆ.ಈ ತಂತ್ರಾಂಶಗಳನ್ನು ಅನುಸ್ಥಾಪಿಸಿ,ಸಾಧನಗಳಿಂದ ಹೆಚ್ಚಿನ ಸವಲತ್ತುಗಳನ್ನು ಪಡಕೊಳ್ಳುವುದು ಸಾಧ್ಯ.
-----------------------------------------------------------------------------
ಪ್ರಾಚ್ಯವಸ್ತು ಶೋಧನೆಗೂ ಉಪಗ್ರಹ ಬಳಕೆ
ಉತ್ಖತನದ ಮೂಲಕ ಪುರಾತನ ವಸ್ತುಗಳನ್ನು ಭೂಗರ್ಭದಿಂದ ಹೊರತೆಗೆಯುವ ಕಠಿನ ಕೆಲಸವನ್ನು,ಕೃತಕ ಉಪಗ್ರಹಗಳು ತುಸು ಸುಲಭವಾಗಿಸಿವೆ.ಉಪಗ್ರಹ ಚಿತ್ರಗಳನ್ನು ಬಳಸಿ,ದಕ್ಷಿಣಾ ಆಪ್ರಿಕಾದಲ್ಲಿ ಸುಮಾರು ಐನೂರು ಗುಹೆಗಳನ್ನು ಪತ್ತೆ ಹಚ್ಚಲು ಪುರಾತತ್ವ ಸಂಶೋಧಕರು ಸಫಲರಾಗಿದ್ದಾರೆ.ವಿಟ್‌ವಾಟರ್‌ಸ್ಯಾಂಡ್ ವಿಶ್ವವಿದ್ಯಾಲಯದವರು ಪಳೆಯುಳಿಕೆಗಳ ಪತ್ತೆಗೂ ಉಪಗ್ರಹ ಚಿತ್ರಗಳನ್ನು ಬಳಸಿ,ಉತ್ಖತನಕ್ರಿಯೆಯನ್ನು ಸುಲಭಗೊಳಿಸಿದ್ದಾರೆ.ಅಂದ ಹಾಗೆ ಗೂಗಲ್‌ಮ್ಯಾಪ್ ಚಿತ್ರಗಳು ಪುರಾತತ್ವ ಸಂಶೋಧಕರಿಗೆ ನೆರವಾದ ಚಿತ್ರಗಳನ್ನು ಒದಗಿಸಿದೆ.
--------------------------------------------------
ರಶ್ಯಾದ ಜಿಪಿಎಸ್ ವ್ಯವಸ್ಥೆ ಗ್ಲೋನಾಸ್ ಸಿದ್ಧ
ಅಮೆರಿಕಾದ ಸ್ಥಾನಪತ್ತೆ ವ್ಯವಸ್ಥೆ ಜಿಪಿಎಸ್‌ಗೆ ಸ್ಪರ್ಧೆ ನೀಡಬಲ್ಲ ರಶ್ಯಾದ ವ್ಯವಸ್ಥೆ ಗ್ಲೋನಾಸ್ ಈಗ ಬಹುತೇಕ ಸಿದ್ಧಗೊಂಡಿದೆ. ಕಡಿಮೆ ಎತ್ತರದಲ್ಲಿ ಭೂಮಿಯ ಸುತ್ತ ಸುತ್ತುವ ಉಪಗ್ರಹ ಆಧಾರಿತ ಈ ವ್ಯವಸ್ಥೆ,ಅಮೆರಿಕಾದ ಜಿಪಿಎಸ್ ವ್ಯವಸ್ಥೆಯ ಜತೆ ಮಿಳಿತವಾಗಿ ಸೇವೆ ನೀಡುವಂತಾಗಬೇಕೆಂದು ತಂತ್ರಜ್ಞರು ಬಯಸಿದ್ದಾರೆ.ಕೆಬಿ ನಾವಿಸ್ ಎನ್ನುವ ಕಂಪೆನಿಯು,ಹೊಸ ಚಿಪ್ ಒಂದನ್ನು ತಯಾರಿಸಿದ್ದು,ಇದನ್ನು ಬಳಸಿದ ಸಾಧನದಲ್ಲಿ ರಶ್ಯಾದ ಅಥವ ಅಮೆರಿಕಾದ ಇಲ್ಲವೇ ಇತರ ಸಮಾಂತರ ವ್ಯವಸ್ಥೆಗಳ ಉಪಗ್ರಹ ಸಂಕೇತಗಳನ್ನು ಸ್ವೀಕರಿಸಿ,ಸ್ಥಾನಪತ್ತೆ ಮಾಡಲು ಸಾಧ್ಯವಾಗಿಸಲಾಗಿದೆ.

udayavani