ರಕ್ತದೊತ್ತಡದ ಏರಿಳಿತ ಹೃದಯಾಘಾತಕ್ಕೆ ಕಾರಣವಾಗಬಹುದೇ?

ರಕ್ತದೊತ್ತಡದ ಏರಿಳಿತ ಹೃದಯಾಘಾತಕ್ಕೆ ಕಾರಣವಾಗಬಹುದೇ?

ಈಗಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ಯಾವ ವಿಷಯಕ್ಕೂ ಸಮಯವಿಲ್ಲ. ಪ್ರತೀ ದಿನದ ಕೆಲಸದ ಒತ್ತಡ, ಪ್ರಯಾಣದ ಒತ್ತಡ, ಮನೆಯಲ್ಲಿನ ಪರಿಸ್ಥಿತಿಗಳ ಧಾವಂತ ಮುಂತಾದುವುಗಳಿಂದ ಮಾನಸಿಕ ಒತ್ತಡ ಹೆಚ್ಚಾಗಿ ಬಹುತೇಕರಿಗೆ ಈಗ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿದೆ. ತುಂಬಾ ಮಂದಿಗೆ ಕಿರಿಯ ವಯಸ್ಸಿಗೇ ಅಧಿಕ/ಕಡಿಮೆ ರಕ್ತದೊತ್ತಡ (ಹೈ ಬಿಪಿ/ಲೋ ಬಿಪಿ) ಸಮಸ್ಯೆಗಳು ಬರತೊಡಗಿವೆ. ಕೊರೋನಾ ಬಳಿಕ ಬಹಳಷ್ಟು ಮಂದಿ ಹೃದಯಾಘಾತಕ್ಕೊಳಗಾಗಿ ಮರಣವನ್ನಪ್ಪಿದ್ದಾರೆ. ಹಲವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹೃದಯಾಘಾತಕ್ಕೆ ರಕ್ತದೊತ್ತಡದ ಏರಿಳಿತ ಕಾರಣವಾಗುತ್ತದೆಯೇ? 

ನಮ್ಮ ದೇಹದಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿರುವಾಗ ಹೃದಯಾಘಾತವಾಗುವ ಸಾಧ್ಯತೆ ಅಧಿಕ. ಅದೇ ರೀತಿ ಅಧಿಕ/ಕಡಿಮೆ ರಕ್ತದೊತ್ತಡದಿಂದಲೂ ಹೃದಯಾಘಾತವಾಗುತ್ತಿದೆ ಎನ್ನುವ ಆಘಾತಕಾರಿ ವರದಿ ಹೊರಬಂದಿದೆ. ನಮ್ಮಲ್ಲಿ ಹಲವು ಮಂದಿ ರಕ್ತದೊತ್ತಡದ ಸಮಸ್ಯೆಗಳಿಗಾಗಿ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಳ್ಳುತ್ತಾರೆ. ಕೆಲವರು ಅಧಿಕ ರಕ್ತದೊತ್ತಡ ಮಾತ್ರ ಅಪಾಯಕಾರಿ, ಕಡಿಮೆ ರಕ್ತದೊತ್ತಡ ಅಲ್ಲ ಎಂಬ ಭ್ರಮೆಯಲ್ಲಿರುತ್ತಾರೆ. ಅಧಿಕ ರಕ್ತದೊತ್ತಡಕ್ಕಿಂತ ಕಡಿಮೆ ರಕ್ತದೊತ್ತಡ ತುಂಬಾ ಅಪಾಯಕಾರಿ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ನಿಯಂತ್ರಣದಲ್ಲಿ ಇಲ್ಲದೇ ಇದ್ದಲ್ಲಿ ಇವೆರಡೂ ಸಮಾನವಾಗಿ ಹೃದಯಕ್ಕೆ ಹಾನಿಯನ್ನುಂಟು ಮಾಡುತ್ತವೆ. ರಕ್ತದೊತ್ತಡದ ಸಮಸ್ಯೆ ಇರುವವರಲ್ಲಿ ಅನೇಕ ಕಾಯಿಲೆಗಳು ಕಾಣಿಸುವ ಸಾಧ್ಯತೆ ಇದೆ.

ಕಡಿಮೆ ರಕ್ತದೊತ್ತಡ ೯೦/೬೦ mm Hg ಗಿಂತ ಕಡಿಮೆಯಾಗಿರುತ್ತದೆ. ಸಾಮಾನ್ಯ ರಕ್ತದೊತ್ತಡವು ೧೨೦/೮೦ mm Hg ವರೆಗೆ ಇರುತ್ತದೆ. ಕಡಿಮೆ ರಕ್ತದೊತ್ತಡವು ನಿಮ್ಮ ಹೃದಯವನ್ನು ವೇಗವಾಗಿ ಅಥವಾ ಗಟ್ಟಿಯಾಗಿ ಪಂಪ್ ಮಾಡುವ ಮೂಲಕ ಸರಿದೂಗಿಸಲು ಪ್ರಯತ್ನಿಸಬಹುದು. ಕಾಲ ಕ್ರಮೇಣ ಇದು ನಿಮ್ಮ ಹೃದಯಕ್ಕೆ ಶಾಶ್ವತವಾದ ಹಾನಿಯನ್ನು ಉಂಟು ಮಾಡಿ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಇದು ನಂತರದ ದಿನಗಳಲ್ಲಿ ಆಳವಾದ ರಕ್ತನಾಳದ ಥ್ರಂಬೋಸಿಸ್ ಮತ್ತು ಸ್ಟ್ರೋಕ್ ನಂತಹ ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು. ಏಕೆಂದರೆ ಈ ಸಮಯದಲ್ಲಿ ರಕ್ತದ ಹರಿವು ಸರಿಯಾಗಿರುವುದಿಲ್ಲ ಮತ್ತು ಅದು ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ.

ಅಧಿಕ ರಕ್ತದೊತ್ತಡದ ನಿಯಂತ್ರಣ ಹೇಗೆ?: 

* ಆಹಾರದಲ್ಲಿ ಉಪ್ಪಿನ ಅಂಶವನ್ನು ಸಾಧ್ಯವಾದಷ್ಟು ತಗ್ಗಿಸಿ.

* ಹಣ್ಣು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವನೆ ಮಾಡಿ.

* ಅಧಿಕ ಸಕ್ಕರೆಯನ್ನು ನಿಮ್ಮ ಆಹಾರದಲ್ಲಿ ಬಳಕೆ ಮಾಡಬೇಡಿ.

* ಮೈದಾ ಹಾಗೂ ಇನ್ನಿತರ ಸಂಸ್ಕರಿಸಿದ ವಸ್ತುಗಳನ್ನು ಬಳಸಿದ ಆಹಾರವನ್ನು ಬಳಸದೇ ಗೋಧಿ, ರಾಗಿ, ಕಿರುಧಾನ್ಯ ಮುಂತಾದ ವಸ್ತುಗಳನ್ನು ಬಳಸಿ.

*  ಸಿದ್ಧ ಆಹಾರ (ಪ್ಯಾಕ್ ಆಗಿರುವ ರೆಡಿ ಫುಡ್) ವಸ್ತುಗಳ ಸೇವನೆಯನ್ನು ನಿಲ್ಲಿಸಿ.

* ಕುಟುಂಬ ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿರಿ. ಆಗಾಗ ಅವರನ್ನು ಸಂದರ್ಶಿಸಿ ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿ.

* ಪ್ರತೀ ದಿನ ೩೦ ರಿಂದ ೪೫ ನಿಮಿಷಗಳ ವೇಗದ ನಡಿಗೆಯನ್ನು ಮಾಡಿ.

* ರಾತ್ರಿ ಬೇಗನೇ ಮಲಗಿ, ಮುಂಜಾನೆ ಬೇಗನೇ ಏಳುವ ಅಭ್ಯಾಸ ಮಾಡಿ. 

* ಮದ್ಯಪಾನ ಮತ್ತು ಧೂಮಪಾನ ಸೇವನೆಯನ್ನು ತ್ಯಜಿಸಿ. ಮಾದಕ ದ್ರವ್ಯಗಳನ್ನು ದೂರವಿಡಿ.

ಕಡಿಮೆ ರಕ್ತದೊತ್ತಡದ ನಿಯಂತ್ರಣ ಹೇಗೆ?

* ಉಪ್ಪಿನ ಸೇವನೆಯನ್ನು ಸ್ವಲ್ಪ ಜಾಸ್ತಿ ಮಾಡಿ. (ನಿಯಂತ್ರಿತ ಪ್ರಮಾಣ)

* ಮದ್ಯಪಾನ, ಧೂಮಪಾನವನ್ನು ತ್ಯಜಿಸಿ.

* ನಿಯಮಿತವಾಗಿ ನೀರನ್ನು ಕುಡಿಯುತ್ತಿರಿ.

* ಆಗಾಗ ಆಹಾರವನ್ನು ಸೇವಿಸಿ. ಆಹಾರದಲ್ಲಿ ತರಕಾರಿ, ಹಣ್ಣುಗಳಿರಲಿ.

ರತ್ಕದೊತ್ತಡವು ೧೩೦/೮೦ mm Hg ಮತ್ತು ಅದಕ್ಕಿಂತ ಅಧಿಕ ಇದ್ದಾಗ ಅದನ್ನು ಅಧಿಕ ರಕ್ತದೊತ್ತಡ ಎನ್ನಬಹುದು. ನಿಮ್ಮ ರಕ್ತದೊತ್ತಡ ಅಧಿಕವಾಗಿದ್ದಾಗ ನಿಮ್ಮ ಹೃದಯವು ರಕ್ತವನ್ನು ಪಂಪ್ ಮಾಡಲು ಅಧಿಕ ಶ್ರಮ ಪಡಬೇಕಾಗುತ್ತದೆ. ಆಗ ಒತ್ತಡವು ಹೃದಯದ ಪಂಪಿಂಗ್ ಚೇಂಬರ್ ನ ಗೋಡೆಗಳು ದಪ್ಪವಾಗಲು ಕಾರಣವಾಗುತ್ತದೆ. ದಪ್ಪನಾದ ಎಡ ಕವಾಟವು ಹೃದಯಾಘಾತ, ಹೃದಯ ಸ್ಥಂಭನ, ಹೃದಯ ವೈಫಲ್ಯದ ಸಂಭವವನ್ನು ಹೆಚ್ಚಿಸುತ್ತದೆ. ದೇಹದ ಅಗತ್ಯಗಳನ್ನು ಪೂರೈಸುವಷ್ಟು ರಕ್ತ ಸರಿಯಾಗಿ ಪಂಪ್ ಆಗದೇ ಇರುವ ಕಾರಣದಿಂದ ಮುಂದೆ ಹೃದಯಕ್ಕೆ ಸಂಬಂಧಿದ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ರಕ್ತದೊತ್ತಡ ಕಡಿಮೆ ಅಥವಾ ಹೆಚ್ಚು ಯಾವುದೇ ಆದರೂ ಅಪಾಯಕಾರಿಯಾಗಿರುವುದರಿಂದ ಅವುಗಳ ಬಗ್ಗೆ ತೀವ್ರ ನಿಗಾ ಇರಿಸಬೇಕಾಗಿರುವುದು ಅತ್ಯಂತ ಮುಖ್ಯ. ಅದಕ್ಕಾಗಿ ಕಾಲಕ್ಕೆ ಸರಿಯಾಗಿ ವೈದ್ಯರನ್ನು ಸಂದರ್ಶಿಸಿ ತಪಾಸಣೆ ಮಾಡಿಕೊಂಡು, ಅವರ ಸಲಹೆಯನ್ನು ತಪ್ಪದೇ ಪಾಲಿಸಬೇಕು. ಸರಿಯಾದ ಆಹಾರ ಸೇವನೆಯ ಜೊತೆಗೆ ನಿಮ್ಮ ಬದುಕಿನ ಶೈಲಿಯನ್ನೂ ಬದಲಾವಣೆ ಮಾಡಿಕೊಳ್ಳುವುದು ಉತ್ತಮ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ